ಹಿಜಾಬ್ ಕುರಿತ ಅಲಹಾಬಾದ್ ಹೈಕೋರ್ಟ್ ತೀರ್ಪು ಇಸ್ಲಾಂ ಮೇಲಿನ ದಾಳಿ:ಅಸಾದುದ್ದೀನ್ ಓವೈಸಿ

ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ಕೋರಿ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿರುವುದಕ್ಕೆ ಎಐಎಂಐಎಂ (AIMIM) ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್‌ನ ಈ ತೀರ್ಪನ್ನು ಬಲವಾಗಿ ವಿರೋಧಿಸಿರುವ ಅವರು, ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಇಸ್ಲಾಂ ಧರ್ಮದ ಮೇಲಿನ ನೇರ ದಾಳಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೈದರಾಬಾದ್‌ನ ದಾರುಸ್ಸಲಾಂನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಓವೈಸಿ, “ಅಲಹಾಬಾದ್ ಹೈಕೋರ್ಟ್ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ತೀರ್ಪು ನೀಡಿದೆ. ನಾನು ಈ ತೀರ್ಪನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಇದು ಭಾರತೀಯ ಸಂವಿಧಾನದ 19 ಮತ್ತು 25ನೇ ವಿಧಿಗಳ (ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯ) ಸ್ಪಷ್ಟ ಉಲ್ಲಂಘನೆಯಾಗಿದೆ. ಇಸ್ಲಾಂ ಧರ್ಮಕ್ಕೆ ಯಾವುದು ಅಗತ್ಯ ಎಂಬುದನ್ನು ನಿರ್ಧರಿಸಲು ನೀವು ಯಾರು? ಇದು ನೇರವಾಗಿ ಇಸ್ಲಾಂ ಮೇಲಿನ ದಾಳಿ” ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಮುಸ್ಲಿಂ ಸಮುದಾಯದ ರಾಜಕೀಯ ನಾಯಕತ್ವದ ಅಗತ್ಯತೆಯನ್ನು ಪ್ರಸ್ತಾಪಿಸಿದ ಅವರು, “ದೇಶದಲ್ಲಿ ಪ್ರತಿಯೊಂದು ಸಮುದಾಯಕ್ಕೂ ತಮ್ಮದೇ ಆದ ನಾಯಕತ್ವವಿರುವಾಗ, 18 ಕೋಟಿಗೂ ಅಧಿಕ ಮುಸ್ಲಿಮರಿಗೆ ಪ್ರತ್ಯೇಕ ರಾಜಕೀಯ ಧ್ವನಿ ಏಕೆ ಇರಬಾರದು? ಸಂಸತ್ತಿನಲ್ಲಿ ಕೇವಲ 24 ಮುಸ್ಲಿಂ ಸಂಸದರಿದ್ದು, ವಂದೇ ಮಾತರಂ ಅಥವಾ ಇತರೆ ಸೂಕ್ಷ್ಮ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಸಮುದಾಯದ ಪರವಾಗಿ ಗಟ್ಟಿಯಾಗಿ ಮಾತನಾಡುವವರಿಲ್ಲದ ಪರಿಸ್ಥಿತಿಯಿದೆ. ಸಮುದಾಯ ಸಂಘಟಿತವಾದಾಗ ಮಾತ್ರ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಬಲಗೊಳ್ಳುತ್ತದೆ” ಎಂದರು. ಬಿಹಾರದಂತೆ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಎಐಎಂಐಎಂ ಪಕ್ಷಕ್ಕೆ ಯಶಸ್ಸು ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತೆಲಂಗಾಣದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಮಾತನಾಡಿದ ಓವೈಸಿ, ಆಯೋಗವು ಬಿಡುಗಡೆ ಮಾಡಿರುವ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 17 ರವರೆಗೆ ಕಾಲಾವಕಾಶವಿದೆ ಎಂದು ತಿಳಿಸಿದರು. ಮತದಾರರ ನೋಂದಣಿ ಅಧಿಕಾರಿಯಿಂದ (ERO) ವಿಚಾರಣೆಗೆ ನೋಟಿಸ್ ಬಂದಾಗ ನಿಗದಿತ ಸಮಯಕ್ಕೆ ತಪ್ಪದೇ ಹಾಜರಾಗಬೇಕು ಅಥವಾ ಪ್ರತಿನಿಧಿಯನ್ನು ಕಳುಹಿಸಬೇಕು ಎಂದರು. ಕರಡು ಪಟ್ಟಿಯಲ್ಲಿ ಹೆಸರಿಲ್ಲದವರು ಅಥವಾ ಸಮೀಕ್ಷಾ ಫಾರ್ಮ್ ಸಲ್ಲಿಸದವರು ಆತಂಕಪಡದೆ ತಕ್ಷಣವೇ ‘ಫಾರ್ಮ್ 6’ ಭರ್ತಿ ಮಾಡಿ ಬಿಎಲ್‌ಒ (BLO) ಅವರಿಗೆ ಸಲ್ಲಿಸಿದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ ಎಂದು ಜನರಿಗೆ ಕಿವಿಮಾತು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು