ಮಹಿಳೆಯರು ಏನು ಧರಿಸಬೇಕೆನ್ನುವುದು ಅವರ ಆಯ್ಕೆ: ರಾಖಿ ಜಾಹೀರಾತು ವಿವಾದದಲ್ಲಿ ಕೃತಿ ಸನೋನ್‌ಗೆ ರಾಹುಲ್ ಗಾಂಧಿ ಬೆಂಬಲ

ರಕ್ಷಾಬಂಧನದ ಸಂದರ್ಭದಲ್ಲಿ ಆಭರಣ ಬ್ರ್ಯಾಂಡ್‌ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡು ವಿವಾದಕ್ಕೊಳಗಾಗಿದ್ದ ಬಾಲಿವುಡ್ ನಟಿ ಕೃತಿ ಸನೋನ್ ಅವರಿಗೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ. ಈ ಜಾಹೀರಾತಿನಲ್ಲಿ ಅವರು ಧರಿಸಿದ್ದ ಉಡುಪು ಮತ್ತು ತಮ್ಮ ನಾಯಿಗೆ ರಾಖಿ ಕಟ್ಟಿದ್ದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ನಟಿ ನೀಡಿದ ಸ್ಪಷ್ಟನೆಯನ್ನು ರಾಹುಲ್ ಗಾಂಧಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮರುಹಂಚಿಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೃತಿ ಸನೋನ್ ಅವರ ಪೋಸ್ಟ್‌ ಅನ್ನು ಹಂಚಿಕೊಂಡ ರಾಹುಲ್ ಗಾಂಧಿ, “ಮಹಿಳೆಯರು ಏನು ಧರಿಸಬೇಕು ಎಂಬುದು ಅವರ ಸ್ವಂತ ಆಯ್ಕೆ. ಮಹಿಳೆಯರು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವುದನ್ನು ನೋಡಿ ಟ್ರೋಲ್ ಮಾಡುವುದನ್ನು ನಿಲ್ಲಿಸಿ” ಎಂದು ಬರೆದುಕೊಂಡಿದ್ದು, ‘#SmashThePatriarchy’ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.

ಇದಕ್ಕೂ ಮುನ್ನ ಟ್ರೋಲಿಗರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಕೃತಿ ಸನೋನ್, “ಹಬ್ಬಗಳ ನೈಜ ಅರ್ಥವು ನಾವು ಧರಿಸುವ ಬಟ್ಟೆಯಲ್ಲಿಲ್ಲ, ಬದಲಿಗೆ ಸಂಪ್ರದಾಯಗಳ ಹಿಂದಿರುವ ಭಾವನೆ ಮತ್ತು ಅರ್ಥದಲ್ಲಿದೆ. ರಕ್ಷಾಬಂಧನವು ರಕ್ಷಣೆಯ ಸಂಕೇತ. ನಾನು ಮತ್ತು ನನ್ನ ಸಹೋದರಿ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ; ಒಬ್ಬ ಸಹೋದರನಂತೆಯೇ ನಾವು ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಬಲ್ಲೆವು ಎಂಬುದು ನಮಗೆ ತಿಳಿದಿದೆ. ಸಾಕುಪ್ರಾಣಿಗಳು ನಮ್ಮ ಕುಟುಂಬದ ಭಾಗವಾಗಿರುವುದರಿಂದ ನಮ್ಮ ನಾಯಿಗಳಿಗೂ ಈ ಪ್ರೀತಿ ಅನ್ವಯಿಸುತ್ತದೆ. ಮಹಿಳೆಯರು ಏನು ಧರಿಸಬೇಕೆಂದು ನಿರ್ದೇಶಿಸುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ಸಂಸ್ಕೃತಿ ಮತ್ತು ಸಂಪ್ರದಾಯಗಳು ಮನಸ್ಸಿನಲ್ಲಿರುತ್ತವೆ ಹೊರತು ಧರಿಸುವ ಬಟ್ಟೆಯ ನೆಕ್‌ಲೈನ್‌ನಲ್ಲಿ ಅಲ್ಲ” ಎಂದು ತಿರುಗೇಟು ನೀಡಿದ್ದರು.

ಇದೇ ಜಾಹೀರಾತಿನ ಕುರಿತು ಈ ಹಿಂದೆ ಪೋಸ್ಟ್ ಮಾಡಿದ್ದ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್, “ಇಂದಿನ ಮಹಿಳೆಗೆ ಲೆಹೆಂಗಾ, ಸೀರೆಯಿಂದ ಹಿಡಿದು ಬಿಕಿನಿಯವರೆಗೆ ನೂರಾರು ಬಟ್ಟೆಗಳ ಆಯ್ಕೆಗಳಿವೆ. ಅಷ್ಟೆಲ್ಲಾ ಆಯ್ಕೆಗಳಿರುವಾಗ ಒಳಉಡುಪಿನಂತಹ ಬಟ್ಟೆ ಧರಿಸಿ ಸಹೋದರನಿಗೆ ಯಾರಾದರೂ ರಾಖಿ ಕಟ್ಟುತ್ತಾರೆಯೇ? ಈ ಜಾಹೀರಾತು ಉದ್ದೇಶಪೂರ್ವಕವಾಗಿ ವಿಚಿತ್ರವಾಗಿ ಕಾಣುವಂತೆ ಮಾಡಲಾಗಿದೆ” ಎಂದು ವ್ಯಂಗ್ಯವಾಡಿದ್ದರು.

ಆಭರಣ ಜಾಹೀರಾತಿನಲ್ಲಿ ಕೃತಿ ಸನೋನ್ ಅವರು ಆಫ್-ವೈಟ್ ಬಣ್ಣದ ಬ್ರಾಲೆಟ್-ಶೈಲಿಯ ಬ್ಲೌಸ್, ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿ ಕಾಣಿಸಿಕೊಂಡಿದ್ದರು. ಸಾಂಪ್ರದಾಯಿಕ ಹಬ್ಬದಲ್ಲಿ ಅಂತಹ ಉಡುಪು ಧರಿಸಿದ್ದು ಹಾಗೂ ನಾಯಿಗೆ ರಾಖಿ ಕಟ್ಟಿ ಹಿಂದೂ ಹಬ್ಬದ ಮಹತ್ವವನ್ನು ಕಡೆಗಣಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ವಿವಾದ ಸೃಷ್ಟಿಯಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು