ರಾಯ್ಪುರ: ಮತಾಂತರದ ಆರೋಪಗಳು ಹಾಗೂ ಹಿಂದುತ್ವ ಸಂಘಟನೆಗಳ ತೀವ್ರ ವಿರೋಧ, ಗಲಾಟೆಯ ಭೀತಿಯ ಹಿನ್ನೆಲೆಯಲ್ಲಿ ಛತ್ತೀಸ್ಗಢದ ಧಮ್ತರಿ ಜಿಲ್ಲೆಯ ಹತ್ತಕ್ಕೂ ಹೆಚ್ಚು ಚರ್ಚ್ಗಳು ತಮ್ಮ ಆವರಣದ ಹೊರಗೆ ಅಸಾಮಾನ್ಯ ಸೂಚನಾ ಫಲಕಗಳನ್ನು ಅಳವಡಿಸಿವೆ. ಪ್ರಾರ್ಥನೆಗೆ ಬರುವ ಕ್ರೈಸ್ತೇತರರು ತಮ್ಮ ಸ್ವಂತ ಹೊಣೆಗಾರಿಕೆ ಮೇಲೆಯೇ ಪ್ರವೇಶಿಸಬೇಕು ಎಂದು ಈ ಬೋರ್ಡ್ಗಳಲ್ಲಿ ಸ್ಪಷ್ಟಪಡಿಸಲಾಗಿದೆ.
125 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಸುಂದರ್ಗಂಜ್ ಮೆನೋನೈಟ್ ಚರ್ಚ್ನ ಹೊರಗೆ ಹಾಕಲಾಗಿರುವ ಬೋರ್ಡ್ನಲ್ಲಿ, “ನಿಯಮಗಳ ಪ್ರಕಾರ, ಈ ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಲು ಕ್ರಿಶ್ಚಿಯನ್ನರಿಗೆ ಮಾತ್ರ ಅನುಮತಿ ಇದೆ. ಇತರರು ತಮ್ಮ ಸ್ವಂತ ಇಷ್ಟದ ಮೇರೆಗೆ ಬಂದರೆ, ಅವರ ನಿರ್ಧಾರಕ್ಕೆ ಅವರೇ ಹೊಣೆಗಾರರಾಗಿರುತ್ತಾರೆ” ಎಂದು ಹಿಂದಿಯಲ್ಲಿ ಬರೆಯಲಾಗಿದೆ.ಧಮ್ತರಿ ಜಿಲ್ಲೆಯ ಇತರ ಎಂಟು ಚರ್ಚ್ಗಳು ಮತ್ತು ಪ್ರಾರ್ಥನಾ ಮಂದಿರಗಳ ಹೊರಗೂ ಇಂತಹದೇ ಬ್ಯಾನರ್ಗಳನ್ನು ಹಾಕಲಾಗಿದೆ.
ಈ ಕುರಿತು ವಿವರಣೆ ನೀಡಿರುವ ಧಮ್ತರಿ ಜಿಲ್ಲಾ ಕ್ರಿಶ್ಚಿಯನ್ ಫೋರಂನ ಪ್ರಧಾನ ಕಾರ್ಯದರ್ಶಿ ಡಾ. ಡೈಮಂಡ್ ಫಿಲಸ್, “ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ರೈಸ್ತೇತರ ವ್ಯಕ್ತಿಗಳು ತಾವು ತಮ್ಮ ಸ್ವಂತ ಇಷ್ಟದಿಂದಲೇ ಪ್ರಾರ್ಥನೆಗೆ ಹೋಗುತ್ತಿದ್ದೇವೆ ಎಂದು ಜಿಲ್ಲಾಡಳಿತಕ್ಕೆ ಸ್ವಯಂ ಘೋಷಣಾ ಪತ್ರಗಳನ್ನು ಸಲ್ಲಿಸಿದ ನಂತರ ಈ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಈಗಾಗಲೇ 1,000ಕ್ಕೂ ಹೆಚ್ಚು ಜನರು ಅಂತಹ ಸ್ವಯಂ ಘೋಷಣಾ ಪತ್ರಗಳನ್ನು ನೀಡಿದ್ದಾರೆ.
2023 ರಲ್ಲಿ ಹೊಸ ಸರ್ಕಾರ ಬಂದ ನಂತರ ಬಲಪಂಥೀಯ ಕಾರ್ಯಕರ್ತರಿಗೆ ಮುಕ್ತ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಅವರು ಪ್ರಾರ್ಥನಾ ಕೂಟಗಳನ್ನು ಅಡ್ಡಿಪಡಿಸುತ್ತಿದ್ದು, ಅನಗತ್ಯ ಕಾನೂನು ತೊಡಕುಗಳು ಮತ್ತು ಕಿರುಕುಳವನ್ನು ತಪ್ಪಿಸಲು ಈ ಬೋರ್ಡ್ಗಳನ್ನು ಹಾಕಲಾಗಿದೆ,” ಎಂದು ತಿಳಿಸಿದ್ದಾರೆ.ಮನೆಗಳಲ್ಲಿ ನಡೆಯುವ ಸಣ್ಣಪುಟ್ಟ ಪ್ರಾರ್ಥನಾ ಕೂಟಗಳ ಹೊರಗೂ ಇಂತಹ ಸೂಚನೆ ಪ್ರದರ್ಶಿಸಲು ಸಮುದಾಯಕ್ಕೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಜಾರಿಗೆ ಬಂದಿರುವ ಕಠಿಣ ಮತಾಂತರ ವಿರೋಧಿ ಕಾಯ್ದೆಯು ಈ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.ಈ ಕಾನೂನಿನ ಪ್ರಕಾರ ಧರ್ಮ ಬದಲಾಯಿಸಲು ಬಯಸುವ ವ್ಯಕ್ತಿಯು ಸಕ್ಷಮ ಪ್ರಾಧಿಕಾರಕ್ಕೆ ಮುಂಚಿತವಾಗಿ ಘೋಷಣೆ ಸಲ್ಲಿಸುವುದು ಕಡ್ಡಾಯವಾಗಿದೆ.ಪ್ರಾರ್ಥನಾ ಕೂಟಗಳಿಗೆ ಹೋಗುವುದನ್ನೇ ಮತಾಂತರ ಎಂದು ಬಿಂಬಿಸಿ ಸುಳ್ಳು ದೂರುಗಳು ಮತ್ತು ದಾಳಿಗಳು ನಡೆಯುವ ಆತಂಕ ಸಮುದಾಯದಲ್ಲಿದೆ.
ಆದರೆ ಈ ವಿವಾದವನ್ನು ಬಲಪಂಥೀಯ ಮತ್ತು ಎಡಪಂಥೀಯರ ನಡುವಿನ ಸಂಘರ್ಷವಾಗಿ ನೋಡುವುದನ್ನು ಆಡಳಿತಾರೂಢ ಬಿಜೆಪಿ ವಕ್ತಾರ ಶಿವನಾರಾಯಣ್ ಪಾಂಡೆ ತಳ್ಳಿಹಾಕಿದ್ದಾರೆ.“ಇದು ರಾಜಕೀಯ ವಿಷಯವಲ್ಲ, ಸಾಮಾಜಿಕ ಸಮಸ್ಯೆ. ಮತಾಂತರವು ಸಮಾಜವನ್ನು ವಿಭಜಿಸುತ್ತದೆ ಎಂಬ ಕಾರಣಕ್ಕೆ ಆದಿವಾಸಿ ಸಮುದಾಯಗಳು ಅದನ್ನು ವಿರೋಧಿಸುತ್ತಿವೆ; ಅದಕ್ಕಾಗಿಯೇ ಸರ್ಕಾರ ಕಠಿಣ ಕಾನೂನು ತಂದಿದೆ,” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.ಇತ್ತ, ಧಮ್ತರಿ ಜಿಲ್ಲಾಧಿಕಾರಿ ಅಭಿನಾಶ್ ಮಿಶ್ರಾ ಪ್ರತಿಕ್ರಿಯಿಸಿ, ಹಬ್ಬಗಳು ಮತ್ತು ಸೂಕ್ಷ್ಮ ಸಂದರ್ಭಗಳಲ್ಲಿ ಶಾಂತಿ ಸಭೆಗಳನ್ನು ನಡೆಸುವುದು ನಿಯಮಿತ ಪ್ರಕ್ರಿಯೆಯಾಗಿದ್ದು, ಬೋರ್ಡ್ ಅಳವಡಿಸುವ ನಿರ್ಧಾರವನ್ನು ಕ್ರಿಶ್ಚಿಯನ್ ಫೋರಂ ಸ್ವತಂತ್ರವಾಗಿ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
