ಪ್ರಯೋಗಾಲಯಗಳ ಜ್ಞಾನವನ್ನು ಸಾಮಾನ್ಯ ಜನರ ಕೈಗೆ ತಲುಪಿಸಿದವರು ಎಂ. ಎಸ್. ಸ್ವಾಮಿನಾಥನ್: ಮಲ್ಲಿಕಾರ್ಜುನ ಖರ್ಗೆ

ಅಭಿವೃದ್ಧಿ ಎಂಬುದು ಕೇವಲ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಷ್ಟೇ ಸೀಮಿತವಾಗಿರದೆ ಗ್ರಾಮೀಣ ಭಾಗದ ಕಟ್ಟಕಡೆಯ ಜನರ ಜೀವನಮಟ್ಟವನ್ನು ಸುಧಾರಿಸುವುದಾಗಿರಬೇಕು ಎಂಬುದು ಡಾ. ಎಂ. ಎಸ್. ಸ್ವಾಮಿನಾಥನ್ ಅವರ ದೃಢ ನಂಬಿಕೆಯಾಗಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದ್ದಾರೆ. ಅಭಿವೃದ್ಧಿಯ ಫಲವು ಹಳ್ಳಿಗಳು, ಬುಡಕಟ್ಟು ಕುಗ್ರಾಮಗಳು, ಮೀನುಗಾರ ಸಮುದಾಯಗಳು ಹಾಗೂ ಸಣ್ಣ ರೈತರನ್ನು ತಲುಪಬೇಕು ಮತ್ತು ಈ ಬೆಳವಣಿಗೆಯು ಭೂಮಿ, ನೀರು, ಜನರ ಜೀವನೋಪಾಯ ಹಾಗೂ ಭವಿಷ್ಯವನ್ನು ಸಂರಕ್ಷಿಸಬೇಕು ಎಂದು ಅವರು ಪ್ರತಿಪಾದಿಸಿದ್ದರು.

ನಮಗೆ ಅನ್ನ ನೀಡುವ ಈ ಭೂಮಿಗೆ ಯಾವುದೇ ಹಾನಿಯಾಗದಂತೆ ಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದಿಸುವುದನ್ನೇ ಸ್ವಾಮಿನಾಥನ್ ಅವರು ‘ಸದಾ ಹಸಿರು ಕ್ರಾಂತಿ’ (ಎವರ್‌ಗ್ರೀನ್ ರೆವಲ್ಯೂಷನ್) ಎಂದು ಕರೆದರು. ಆದರೆ ಅವರ ಈ ದೂರದೃಷ್ಟಿ ಕೇವಲ ಕೃಷಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿರಲಿಲ್ಲ; ಅದು ವಿಜ್ಞಾನ, ಸಾಮಾಜಿಕ ಸಮಾನತೆ, ಪರಿಸರ ಸುಸ್ಥಿರತೆ ಮತ್ತು ಗ್ರಾಮೀಣ ಸಮುದಾಯಗಳ ಘನತೆಯನ್ನು ಬೆಸೆಯುವ ಸಮಗ್ರ ಪರಿಕಲ್ಪನೆಯಾಗಿತ್ತು. 1988ರಲ್ಲಿ ಸ್ಥಾಪನೆಯಾದ ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (MSSRF) ಇದೇ ಆಶಯವನ್ನು ಮುನ್ನಡೆಸಿಕೊಂಡು ಬಂದಿದೆ.

ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯು, ಉತ್ತಮ ಕೃಷಿ ಪದ್ಧತಿಗಳು, ತಂತ್ರಜ್ಞಾನ, ಮಾರುಕಟ್ಟೆ ಸಂಪರ್ಕ ಮತ್ತು ಹೊಸ ಜೀವನೋಪಾಯದ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಪೌಷ್ಟಿಕತೆ, ಮಹಿಳಾ ಸಬಲೀಕರಣ, ಜೀವವೈವಿಧ್ಯತೆ, ಹವಾಮಾನ ಸ್ಥಿತಿಸ್ಥಾಪಕತ್ವ ಹಾಗೂ ಡಿಜಿಟಲ್ ಒಳಗೊಳ್ಳುವಿಕೆಯಂತಹ ಹಲವು ಕ್ಷೇತ್ರಗಳಲ್ಲಿ ಈ ಸಂಸ್ಥೆಯ ಕಾರ್ಯ ವಿಸ್ತರಿಸಿದೆ. ವಿಜ್ಞಾನ ಮತ್ತು ಜ್ಞಾನವನ್ನು ಕೇವಲ ಸಂಶೋಧನಾ ಪ್ರಯೋಗಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಗೋಡೆಗಳ ನಡುವೆ ಕೂಡಿಹಾಕದೆ, ಅದನ್ನು ಸಾಮಾನ್ಯ ಜನರ ಕೈಗೆ ತಲುಪಿಸಿರುವುದು ಈ ಕಾರ್ಯದ ಅತಿ ದೊಡ್ಡ ಶಕ್ತಿ ಎಂದಿರುವ ಖರ್ಗೆ, ಈ ಚಿಂತನೆಯೇ ಇಂದು ಭಾರತವನ್ನು ಆಹಾರ ಸ್ವಾವಲಂಬನೆ ಹಾಗೂ ಹೆಚ್ಚುವರಿ ಆಹಾರ ಉತ್ಪಾದಿಸುವ ರಾಷ್ಟ್ರವನ್ನಾಗಿ ರೂಪಿಸಲು ನೆರವಾಗಿದೆ ಎಂದು ಶ್ಲಾಘಿಸಿದರು.

Related Articles

ಇತ್ತೀಚಿನ ಸುದ್ದಿಗಳು