ಇನ್ನು ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸುವುದಕ್ಕೂ ಮೊದಲು ಜೇಬಲ್ಲಿ ಕಾಸಿದೆಯೇ ನೋಡಿಕೊಳ್ಳಿ: ಪಾರ್ಕಿಂಗ್‌ ನೀತಿ ಕರಡು ಪ್ರಕಟಿಸಿದ ಸರ್ಕಾರ

ಬೆಂಗಳೂರು: ನಗರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಸಂಚಾರ ದಟ್ಟಣೆ ಹಾಗೂ ರಸ್ತೆಬದಿಯ ಅವ್ಯವಸ್ಥಿತ ವಾಹನ ನಿಲುಗಡೆ ಸಮಸ್ಯೆಯನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಮಗ್ರ ಪಾರ್ಕಿಂಗ್ ನೀತಿಯ ಕರಡು ನಿಯಮಗಳನ್ನು ರೂಪಿಸಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಲಹೆಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಪ್ರಸ್ತುತ 1.28 ಕೋಟಿಗೂ ಅಧಿಕ ನೋಂದಾಯಿತ ವಾಹನಗಳಿದ್ದು, ಹೊರಗಡೆಯಿಂದ ಬರುವ ವಾಹನಗಳೂ ಸೇರಿದಂತೆ ಸುಮಾರು 1.5 ಕೋಟಿ ವಾಹನಗಳು ಸಂಚರಿಸುತ್ತಿವೆ. ಈ ವಾಹನಗಳು ತಮ್ಮ ಒಟ್ಟು ಅವಧಿಯ ಸುಮಾರು ಶೇಕಡಾ 95 ರಷ್ಟು ಸಮಯ ರಸ್ತೆಬದಿ, ಮನೆ ಅಥವಾ ಕಚೇರಿಗಳ ಬಳಿ ನಿಲುಗಡೆಗೊಂಡಿರುವುದರಿಂದ ಪಾರ್ಕಿಂಗ್ ನಿರ್ವಹಣೆ ನಗರದ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸಂಚಾರ ದಟ್ಟಣೆಯ ವೇಳೆಯಲ್ಲಿ (Peak hour) ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 15 ಕಿ.ಮೀ. ಹಾಗೂ ಬಿಎಂಟಿಸಿ ಬಸ್‌ಗಳ ಸರಾಸರಿ ವೇಗ ಕೇವಲ 10 ಕಿ.ಮೀ.ಗೆ ಕುಸಿದಿದೆ. ರಸ್ತೆಗಳಲ್ಲಿನ ಅಸಮರ್ಪಕ ನಿಲುಗಡೆಯು ರಸ್ತೆಯ ಸಂಚಾರ ಸಾಮರ್ಥ್ಯವನ್ನು ಅರ್ಧದಷ್ಟು ಕುಂಠಿತಗೊಳಿಸುತ್ತಿದ್ದು, ಪಾದಚಾರಿಗಳು, ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಸುರಕ್ಷಿತ ಓಡಾಟಕ್ಕೆ ಭಾರೀ ಅಡ್ಡಿಯುಂಟುಮಾಡುತ್ತಿದೆ. ರಸ್ತೆಗಳು ಸಾರ್ವಜನಿಕ ಆಸ್ತಿಯಾಗಿದ್ದು, ಖಾಸಗಿ ವಾಹನಗಳಿಗೆ ಪಾರ್ಕಿಂಗ್ ಒದಗಿಸುವ ಹೊಣೆಗಾರಿಕೆ ಪ್ರಾಥಮಿಕವಾಗಿ ಆಯಾ ವಾಹನ ಮಾಲೀಕರದ್ದಾಗಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ನಿಟ್ಟಿನಲ್ಲಿ ರಸ್ತೆ ಮೇಲಿನ ಅನಿಯಂತ್ರಿತ ಪಾರ್ಕಿಂಗ್ ಅನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ನಿರ್ದಿಷ್ಟ ಪಾರ್ಕಿಂಗ್ ದರ ವಿಧಿಸುವುದು, ಬಹುಹಂತದ ಪಾರ್ಕಿಂಗ್ ಸೌಲಭ್ಯಗಳನ್ನು ಹೆಚ್ಚಿಸುವುದು, ಖಾಲಿ ನಿವೇಶನಗಳನ್ನು ಪಾರ್ಕಿಂಗ್ ತಾಣಗಳಾಗಿ ಪರಿವರ್ತಿಸಲು ಪ್ರೋತ್ಸಾಹ ನೀಡುವುದು ಹಾಗೂ ಕಟ್ಟಡ ನಿಯಮಾವಳಿಗಳ ಉಲ್ಲಂಘನೆಯನ್ನು ತಡೆದು ನಿಗದಿತ ಪಾರ್ಕಿಂಗ್ ಸ್ಥಳಗಳ ದುರ್ಬಳಕೆಗೆ ಕಡಿವಾಣ ಹಾಕುವ ಪ್ರಮುಖ ಗುರಿಗಳನ್ನು ಈ ಹೊಸ ನೀತಿಯಲ್ಲಿ ಒಳಗೊಳ್ಳಲಾಗಿದೆ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ನಗರದ ಸುಸ್ಥಿರತೆ ಹಾಗೂ ವಾಸಯೋಗ್ಯತೆ ತೀವ್ರವಾಗಿ ಹದಗೆಡಲಿದೆ ಎಂದು ಪ್ರಾಧಿಕಾರ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು