66,360 ಉದ್ಯೋಗ ಸೃಷ್ಟಿಯ ₹29,679 ಕೋಟಿ ಹೂಡಿಕೆಯ 17 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಒಟ್ಟು ₹29,679 ಕೋಟಿ ಬಂಡವಾಳ ಹೂಡಿಕೆಯ 9 ಹೊಸ ಹಾಗೂ 8 ಹೆಚ್ಚುವರಿ ಹೂಡಿಕೆ ಯೋಜನೆಗಳಿಗೆ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಹಸಿರು ನಿಶಾನೆ ತೋರಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಯೋಜನೆಗಳ ಅನುಷ್ಠಾನದಿಂದ ಒಟ್ಟಾರೆ 66,360 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಹೊಸ ಹೂಡಿಕೆ ಯೋಜನೆಗಳ ಪೈಕಿ ವೈಬ್ರನ್ಸಿ ರೆನ್ಯೂವಬಲ್ ಎನರ್ಜೀಸ್ ₹2,194.94 ಕೋಟಿ ಹೂಡಿಕೆ ಮಾಡಿ ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಸುವ ಯೋಜನೆ ಹೊಂದಿದೆ. ಮಹೀಂದ್ರ ಏರೋಸ್ಟ್ರಕ್ಚರ್ಸ್ ₹2,300 ಕೋಟಿ, ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ ₹1,104 ಕೋಟಿ, ಹೀರೋ ಫ್ಯೂಚರ್ ಎನರ್ಜೀಸ್ ₹9,760 ಕೋಟಿ, ಎಪ್ಸಿಲಾನ್ ₹1,500 ಕೋಟಿ, ಟೊಯೋಟಾ ಕಿರ್ಲೋಸ್ಕರ್ ₹1,200 ಕೋಟಿ, ನಿರಾಣಿ ಶುಗರ್ಸ್ ₹4,062 ಕೋಟಿ, ಟ್ರೂಆಲ್ಟ್ ಬಯೋ ಎನರ್ಜಿ ₹2,988 ಕೋಟಿ ಹಾಗೂ ಲೈಟ್ವಹೌಸ್ ಆಲ್ಟರ್ನೇಟಿವ್ ಅಸೆಟ್ಸ್ ₹600 ಕೋಟಿ ಬಂಡವಾಳ ಹೂಡಿಕೆ ಮಾಡಲಿವೆ.

ಇದರ ಜೊತೆಗೆ ಕೈಗಾರಿಕೆಗಳ ವಿಸ್ತರಣೆ ಹಾಗೂ ಹೆಚ್ಚುವರಿ ಹೂಡಿಕೆ ಯೋಜನೆಗಳ ಅಡಿಯಲ್ಲಿ ಎಂಎಸ್ಪಿಎಲ್ ₹884.25 ಕೋಟಿ, ಎನ್ಶೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ ₹250 ಕೋಟಿ, ಹೋಂಡಾ ಕಾರ್ಸ್ ₹437 ಕೋಟಿ, ಭೀಮಾ ಫೈನ್ ಕೆಮಿಕಲ್ಸ್ ₹605 ಕೋಟಿ, ಸನ್ಸೇರಾ ₹492.24 ಕೋಟಿ, ಟಿವಿಎಸ್ ಮೋಟಾರ್ಸ್ ₹1,050 ಕೋಟಿ ಹಾಗೂ ಹ್ಯಾವೆಲ್ಸ್ ಇಂಡಿಯಾ ₹250 ಕೋಟಿ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿವೆ.

ಅನುಮತಿಗೂ ಮುನ್ನ ಆಡಿಟ್ ಕಡ್ಡಾಯ
ಕೈಗಾರಿಕಾ ಯೋಜನೆಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಯೋಜನಾ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಯೋಜನೆಗೆ ಅನುಮತಿ ನೀಡುವ ಮೊದಲು ಕಡ್ಡಾಯವಾಗಿ ಆಡಿಟ್ ನಡೆಸಬೇಕು ಎಂದು ಅವರು ನಿರ್ದೇಶನ ನೀಡಿದ್ದು, ಈ ಉದ್ದೇಶಕ್ಕಾಗಿ ಪ್ರತ್ಯೇಕ ಹೊಸ ಆಡಿಟ್ ತಂಡ ರಚಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೈಗಾರಿಕಾ ನೀತಿಯಲ್ಲಿ ನಿಗದಿಪಡಿಸಿರುವ ಎಲ್ಲ ಅಂಶಗಳನ್ನು ಸಮರ್ಪಕವಾಗಿ ಪಾಲಿಸಬೇಕು. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಈಗಿರುವ ಕೈಗಾರಿಕೆಗಳ ವಿಸ್ತರಣೆಗೆ ಅಗತ್ಯವಿರುವ ಎಲ್ಲ ರೀತಿಯ ಉತ್ತೇಜನ ಮತ್ತು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಪಿ.ಎಂ. ನರೇಂದ್ರ ಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು