ಮತದಾರರ ಪಟ್ಟಿಯಿಂದ ಬಿಜೆಪಿ ವಿರೋಧಿಗಳ ಹೆಸರನ್ನು ತೆಗೆಯಲು ಎಸ್‌ಐಆರ್ ದುರ್ಬಳಕೆ ಮಾಡಲಾಗುತ್ತಿದೆ: ಕಪಿಲ್ ಸಿಬಲ್ ಗಂಭೀರ ಆರೋಪ

ದೆಹಲಿ: ಚುನಾವಣಾ ಆಯೋಗವು ಕೈಗೊಂಡಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್ – SIR) ಪ್ರಕ್ರಿಯೆಯು ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿ ಬಿಜೆಪಿಗೆ ಚುನಾವಣಾ ಲಾಭ ಮಾಡಿಕೊಡುವ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಗಂಭೀರ ಆರೋಪ ಮಾಡಿದ್ದಾರೆ.

ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರು ಬಂದು ಇವರು ಇಲ್ಲಿ ವಾಸಿಸುತ್ತಿಲ್ಲ ಎಂದು ದೂರು ನೀಡಿದ ತಕ್ಷಣ, ಯಾವುದೇ ದಾಖಲೆಗಳ ಪರಿಶೀಲನೆಯಿಲ್ಲದೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೂಲಕ ಸಾವಿರಾರು ಮತದಾರರ ಹೆಸರುಗಳನ್ನು ಏಕಾಏಕಿ ಕೈಬಿಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಜಾರ್ಖಂಡ್‌ ಸೇರಿದಂತೆ ಹಲವೆಡೆ ಬಿಎಲ್‌ಒಗಳಿಗೆ ಬೃಹತ್ ಪ್ರಮಾಣದಲ್ಲಿ ‘ಫಾರ್ಮ್ 7’ (ಹೆಸರು ತೆಗೆದುಹಾಕುವ ಅರ್ಜಿ) ಗಳನ್ನು ಸಲ್ಲಿಸಿ ಮುಸ್ಲಿಮರು ಮತ್ತು ಬಿಜೆಪಿ ವಿರೋಧಿ ಮತದಾರರನ್ನು ಗುರಿಯಾಗಿಸಲಾಗುತ್ತಿದೆ ಎಂದರು. “ಸೂಕ್ತ ಆಧಾರಗಳಿಲ್ಲದ ಕಾರಣ ಸ್ಥಳೀಯ ಬಿಎಲ್‌ಒಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೇ ಈ ಅಕ್ರಮ ಬೆಳಕಿಗೆ ಬಂದಿದೆ.

ತಲೆತಲಾಂತರಗಳಿಂದ ಅಲ್ಲಿಯೇ ವಾಸಿಸುತ್ತಿರುವವರ ಹೆಸರುಗಳನ್ನೇ ಪಟ್ಟಿಯಿಂದ ಅಳಿಸಿಹಾಕಲಾಗುತ್ತಿದೆ. ಜಾರ್ಖಂಡ್‌ನಲ್ಲಿ ಪ್ರತಿಪಕ್ಷಗಳ ಮೈತ್ರಿ ಸರ್ಕಾರವಿರುವುದರಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಬಿಜೆಪಿಗೆ ಸಾಧ್ಯವಾಗಿಲ್ಲ, ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ರೀತಿಯ ಅತಿಯಾದ ದೌರ್ಜನ್ಯ ಎಗ್ಗಿಲ್ಲದೆ ನಡೆದಿದೆ” ಎಂದು ಆಕ್ರೋಶ ಹೊರಹಾಕಿದರು.

ಬಡ ಜನರ ಹೆಸರುಗಳು ಮತದಾರರ ಪಟ್ಟಿಯಿಂದ ಕಡಿತಗೊಂಡರೆ ಅವರು ಕೇವಲ ಮತದಾನದ ಹಕ್ಕನ್ನಷ್ಟೇ ಅಲ್ಲದೆ ಪಡಿತರ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದಲೂ ವಂಚಿತರಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಸಿಬಲ್, ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಗಮನಕ್ಕೆ ಈ ಸಂಗತಿಗಳಿದ್ದರೂ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಎಂದರು.

ಈ ಬೆಳವಣಿಗೆಗಳ ಕುರಿತು ಮುಖ್ಯವಾಹಿನಿ ಮಾಧ್ಯಮಗಳು ಮತ್ತು ನ್ಯಾಯಾಲಯಗಳು ತಕ್ಷಣವೇ ಗಮನಹರಿಸಿ, ಸಾಂವಿಧಾನಿಕ ಹಕ್ಕುಗಳ ಕಸಿದುಕೊಳ್ಳುವಿಕೆಯನ್ನು ತಡೆಯಲು ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದರು.

Related Articles

ಇತ್ತೀಚಿನ ಸುದ್ದಿಗಳು