ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ಗೆ ₹1,322 ಕೋಟಿ ವಂಚನೆ: ಎಸ್ಸೆಲ್ ಗ್ರೂಪ್ ಮುಖ್ಯಸ್ಥ ಸುಭಾಷ್ ಚಂದ್ರ ವಿರುದ್ಧ ಸಿಬಿಐ ಎಫ್‌ಐಆರ್

ದೆಹಲಿ: ಸುಳ್ಳು ಆಸ್ತಿ ಪ್ರಮಾಣಪತ್ರಗಳನ್ನು ನೀಡಿ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ಗೆ (LICHFL) ಬರೋಬ್ಬರಿ ₹1,322 ಕೋಟಿ ವಂಚಿಸಿರುವ ಆರೋಪದ ಮೇಲೆ ಎಸ್ಸೆಲ್ ಗ್ರೂಪ್ (Essel Group) ಸಂಸ್ಥಾಪಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸುಭಾಷ್ ಚಂದ್ರ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಎಫ್‌ಐಆರ್ ದಾಖಲಿಸಿದೆ. 2018 ರಿಂದ 2026ರ ಅವಧಿಯಲ್ಲಿ ನಡೆದ ಈ ವಂಚನೆ ಪ್ರಕರಣದಲ್ಲಿ ಸುಭಾಷ್ ಚಂದ್ರ ಅವರ ಜತೆಗೆ ಪಂಕಜ್ ಸುರೋಲಿಯಾ, ಅಮಿಶ್ ಪಾಂಡ್ಯ ಮತ್ತು ರಾಜೀವ್ ಧೋಲಾಕಿಯಾ ಎಂಬುವರ ವಿರುದ್ಧ ಕ್ರಿಮಿನಲ್ ಪಿತೂರಿ, ನಂಬಿಕೆ ದ್ರೋಹ ಹಾಗೂ ವಂಚನೆ ಪ್ರಕರಣ ದಾಖಲಿಸಿ ಸಿಬಿಐ ತನಿಖೆ ಚುರುಕುಗೊಳಿಸಿದೆ.

ಎಲ್‌ಐಸಿ ಹೌಸಿಂಗ್ ಫೈನಾನ್ಸ್ ದಾಖಲಿಸಿರುವ ದೂರಿನ ಪ್ರಕಾರ, 2018ರಲ್ಲಿ ಸುಭಾಷ್ ಚಂದ್ರ ನೀಡಿದ ನಿರಂತರ ಖಾತರಿ (Letter of Continuing Guarantee) ಮತ್ತು ಸಲ್ಲಿಸಿದ ನಿವ್ವಳ ಆಸ್ತಿ ಪ್ರಮಾಣಪತ್ರಗಳನ್ನು ಆಧರಿಸಿ ₹500 ಕೋಟಿ (ವಸಂತ್ ಸಾಗರ್ ಪ್ರಾಪರ್ಟೀಸ್) ಹಾಗೂ ₹480 ಕೋಟಿ (ಡಿಜಿಟಲ್ ಸಬ್‌ಸ್ಕ್ರೈಬರ್ ಮ್ಯಾನೇಜ್‌ಮೆಂಟ್) ಸಾಲ ಸೌಲಭ್ಯಗಳನ್ನು ಮಂಜೂರು ಮಾಡಲಾಗಿತ್ತು. 2018ರ ಮಾರ್ಚ್‌ನಲ್ಲಿ ಸಾಲ ಪಡೆಯುವ ವೇಳೆ ಸಿಎ ಸಂಸ್ಥೆಯೊಂದು ನೀಡಿದ ಪ್ರಮಾಣಪತ್ರವನ್ನು ಸಲ್ಲಿಸಿದ್ದ ಚಂದ್ರ, ತಮ್ಮ ನಿವ್ವಳ ಆಸ್ತಿ ಮೌಲ್ಯ ಬರೋಬ್ಬರಿ ₹59,113.21 ಕೋಟಿ (6,197.62 ಮಿಲಿಯನ್ ಡಾಲರ್) ಎಂದು ಘೋಷಿಸಿದ್ದರು. ನಂತರ ಜುಲೈ 2018ರಲ್ಲೂ ಮತ್ತೊಂದು ಪ್ರಮಾಣಪತ್ರ ನೀಡಿ ತಮ್ಮ ಆಸ್ತಿ ₹40,562 ಕೋಟಿ ಎಂದು ತೋರಿಸಿದ್ದರು.

ಆದರೆ ಸಾಲ ಪಡೆದ ಬಳಿಕ ಎರಡೂ ಖಾತೆಗಳಲ್ಲಿ ಭಾರೀ ಸುಸ್ತಿ (Default) ಉಂಟಾಯಿತು. ಆಘಾತಕಾರಿ ಸಂಗತಿಯೆಂದರೆ, ದಿವಾಳಿತನ ಮತ್ತು ದಿವಾಳಿ ಸಂಹಿತೆ (IBC) ಅಡಿಯಲ್ಲಿ ಸುಭಾಷ್ ಚಂದ್ರ ಅವರ ವಿರುದ್ಧ ವೈಯಕ್ತಿಕ ದಿವಾಳಿತನ ಪ್ರಕ್ರಿಯೆಗಳು ಆರಂಭವಾದಾಗ, ತಾನು ಈ ಹಿಂದೆ ಸಾಲ ಪಡೆಯಲು ಸಲ್ಲಿಸಿದ್ದ ಪ್ರಮಾಣಪತ್ರಗಳಲ್ಲಿದ್ದ ಆಸ್ತಿ ಮೌಲ್ಯವನ್ನು ಅವರೇ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. 2024ರಲ್ಲಿ ತಮ್ಮ ನಿಜವಾದ ಆಸ್ತಿ ಮೌಲ್ಯ ಕೇವಲ ₹31.79 ಕೋಟಿ ಮಾತ್ರ ಎಂದು ಹೇಳಿಕೆ ನೀಡಿರುವ ಅವರು, 2017-18ರಲ್ಲೂ ತಮ್ಮ ಆಸ್ತಿ ಎಂದಿಗೂ ₹40,000 ಕೋಟಿಗಿಂತ ಹೆಚ್ಚಿರಲಿಲ್ಲ ಎಂದು ತಿಳಿಸಿದ್ದಾರೆ.

ಸಾಲ ಪಡೆಯುವಾಗ ₹59,000 ಕೋಟಿಗೂ ಅಧಿಕ ಆಸ್ತಿ ತೋರಿಸಿ, ನಂತರ ದಿವಾಳಿತನದ ವೇಳೆ ಕೇವಲ ₹31 ಕೋಟಿ ಎಂದು ಹೇಳಿ ಬ್ಯಾಂಕ್‌ಗೆ ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳ ಮೂಲಕ ಸಾವಿರಾರು ಕೋಟಿ ವಂಚಿಸಲಾಗಿದೆ ಎಂದು ಎಲ್‌ಐಸಿಎಚ್‌ಎಫ್‌ಎಲ್ ದೂರು ನೀಡಿದ್ದು, ಸಿಬಿಐ ಈಗ ವಿಸ್ತೃತ ತನಿಖೆ ಕೈಗೆತ್ತಿಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು