ರೈತರ ವಿಮೆ ಹಣ ವಿಳಂಬ ಹನ್ನೆಲೆ ಸತಾಯಿಸುತ್ತಿದ್ದ ಅಧಿಕಾರಿ ವಜಾ – ಡಿಕೆಶಿ ಆದೇಶ

ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ ಅನ್ನದಾತರು ಎದುರಿಸುತ್ತಿರುವ ಸಂಕಷ್ಟಗಳನ್ನು ನೇರವಾಗಿ ಮನಗಾಣುವ ಮತ್ತು ಸ್ಥಳದಲ್ಲೇ ಸೂಕ್ತ ಪರಿಹಾರ ಕಲ್ಪಿಸುವ ಮಹತ್ವದ ಉದ್ದೇಶದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಂಗಳವಾರ ಮುಂಜಾನೆ ಬೆಂಗಳೂರಿನ  (Bengaluru) ಪ್ರಮುಖ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ (APMC Market) ಅನಿರೀಕ್ಷಿತ ಭೇಟಿ ನೀಡಿ ಕೃಷಿ ಉತ್ಪನ್ನಗಳ ವಹಿವಾಟು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು.

ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ಆಗಮಿಸಿದ ಸಿಎಂ ಅವರು, ವಿವಿಧ ಜಿಲ್ಲೆಗಳಿಂದ ತರಕಾರಿ, ಹಣ್ಣು ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಟ್ರಕ್‌ಗಳಲ್ಲಿ ತಂದಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಹಾಗೂ ತೆಂಗು ಬೆಳೆಗಾರರು, ಸ್ಥಳೀಯ ವರ್ತಕರು ಮತ್ತು ಮಂಡಿ ಮಾಲೀಕರೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿ ಅವರ ಕಷ್ಟ-ನಷ್ಟಗಳನ್ನು ಆಲಿಸಿದರು. ಈ ವೇಳೆ ರೈತರು ತಮ್ಮ ಅಳಲನ್ನು ಮುಕ್ತವಾಗಿ ತೋಡಿಕೊಂಡಿದ್ದು, ಸರ್ಕಾರದ ಆಡಳಿತ ಯಂತ್ರದ ಗಮನಕ್ಕೆ ಬಾರದ ಹಲವು ಮಹತ್ವದ ಸಂಗತಿಗಳು ಮುನ್ನೆಲೆಗೆ ಬಂದವು.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟ್ಟನಹಳ್ಳಿ ಗ್ರಾಮದಿಂದ ತಮ್ಮ ಉತ್ಪನ್ನಗಳೊಂದಿಗೆ ಬಂದಿದ್ದ ರೈತರೊಬ್ಬರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಗಂಭೀರ ಸಮಸ್ಯೆಯೊಂದನ್ನು ಬಿಚ್ಚಿಟ್ಟರು. ತಾವು ಬೆಳೆ ವಿಮೆಗಾಗಿ ಸ್ವಸಹಾಯ ಸೊಸೈಟಿಗೆ ನಿಗದಿತ ಸಮಯಕ್ಕೆ ಹಣ ಪಾವತಿಸಿದ್ದರೂ, ಆ ಸೊಸೈಟಿಯ ಕಾರ್ಯದರ್ಶಿಯು ಆ ಹಣವನ್ನು ಡಿಸಿಸಿ ಬ್ಯಾಂಕ್‌ಗೆ ಜಮೆ ಮಾಡದೆ ಬೇಜವಾಬ್ದಾರಿ ಹಾಗೂ ಗಂಭೀರ ನಿರ್ಲಕ್ಷ್ಯ ತೋರಿದ್ದಾರೆ. ಪರಿಣಾಮವಾಗಿ ಒಟ್ಟು 93 ರೈತರ ಬೆಳೆ ವಿಮೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂಬ ಮೊಬೈಲ್ ಸಂದೇಶ ಬಂದಿದೆ ಎಂದು ತಮ್ಮ ಅಳಲು ತೋಡಿಕೊಂಡರು. ರೈತರು ಸಲ್ಲಿಸಿದ ಹಣ ಪಾವತಿಯ ದಾಖಲೆಗಳನ್ನು ಸ್ಥಳದಲ್ಲೇ ಪರಿಶೀಲಿಸಿದ ಮುಖ್ಯಮಂತ್ರಿಗಳು, ಬಡ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿ ಕರ್ತವ್ಯ ಲೋಪ ಎಸಗಿರುವ ಸಂಬಂಧಪಟ್ಟ ಸ್ವಸಹಾಯ ಸೊಸೈಟಿಯ ಕಾರ್ಯದರ್ಶಿಯನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದರು.

Related Articles

ಇತ್ತೀಚಿನ ಸುದ್ದಿಗಳು