ಪ್ರಧಾನಿ ಮೋದಿಯನ್ನು ಕಮಾಂಡರ್-ಇನ್-ಥೀಫ್ ಎಂದು ಕರೆದ ಪ್ರಕರಣ: ರಾಹುಲ್ ಗಾಂಧಿಗೆ ನೀಡಿದ್ದ 2019ರ ಸಮನ್ಸ್ ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಕಾರ

ಪ್ರಧಾನಿ ನರೇಂದ್ರ ಮೋದಿ ಅವರನ್ನು “ಕಮಾಂಡರ್-ಇನ್-ಥೀಫ್” (ಕಳ್ಳರ ಕಮಾಂಡರ್) ಎಂದು ಕರೆದಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ, 2019 ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಆರ್. ಬೋರ್ಕರ್ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ. ಆದರೆ, ರಾಹುಲ್ ಗಾಂಧಿ ಅವರು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅನುವಾಗುವಂತೆ, ದೂರಿನ ಮೇಲಿನ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡುವಂತೆ ಮ್ಯಾಜಿಸ್ಟ್ರೇಟ್‌ಗೆ ನೀಡಿದ್ದ 2021ರ ನಿರ್ದೇಶನವನ್ನು ಹೈಕೋರ್ಟ್ ಮುಂದುವರಿಸಿದೆ.

ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ಯಾವುದೇ ಕಾನೂನುಬಾಹಿರತೆ ಅಥವಾ ಲೋಪಗಳು ಕಂಡುಬಂದಿಲ್ಲವಾದ್ದರಿಂದ ಹೈಕೋರ್ಟ್ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಮೂರ್ತಿ ಬೋರ್ಕರ್ ಸ್ಪಷ್ಟಪಡಿಸಿದರು. “ಕೆಳ ನ್ಯಾಯಾಲಯದ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗಿದೆ,” ಎಂದು ಪೀಠ ತಿಳಿಸಿದೆ.

ಆಡಳಿತಾರೂಢ ಬಿಜೆಪಿಯ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಎಂ.ಎಚ್. ಶ್ರೀಶ್ರೀಮಾಲ್ ಎಂಬುವವರು ಸಲ್ಲಿಸಿದ್ದ ದೂರಿನ ಮೇರೆಗೆ, ಗಿರ್‌ಗಾಂವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2019 ರ ಆಗಸ್ಟ್ 28 ರಂದು ರಾಹುಲ್ ಗಾಂಧಿ ವಿರುದ್ಧ ಪ್ರಕ್ರಿಯೆ ಆರಂಭಿಸಿ ಸಮನ್ಸ್ ಜಾರಿ ಮಾಡಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಗಾಂಧಿ ಅವರು ಈ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ 2018 ರಲ್ಲಿ ರಾಜಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ಮೋದಿ ವಿರುದ್ಧ “ಕಮಾಂಡರ್-ಇನ್-ಥೀಫ್” ಎಂದು ಹೇಳಿಕೆ ನೀಡಿದ್ದಕ್ಕಾಗಿ ರಾಹುಲ್ ವಿರುದ್ಧ ಈ ಮಾನನಷ್ಟ ದೂರು ದಾಖಲಾಗಿತ್ತು. ನಂತರ 2021 ರ ನವೆಂಬರ್‌ನಲ್ಲಿ ಹೈಕೋರ್ಟ್ ಈ ದೂರಿನ ಮೇಲಿನ ವಿಚಾರಣೆಯನ್ನು ಮುಂದೂಡುವಂತೆ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶನ ನೀಡಿತ್ತು; ಇದರಿಂದಾಗಿ ರಾಹುಲ್ ಗಾಂಧಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದರು.

ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ವಾದ ಮಂಡಿಸಿದ ವಕೀಲರಾದ ಸುದೀಪ್ ಪಾಸ್ಬೋಲಾ ಮತ್ತು ಕುಶಾಲ್ ಮೋರ್, ಈ ದೂರು ಕ್ಷುಲ್ಲಕವಾಗಿದ್ದು, ಇದನ್ನು ದಾಖಲಿಸಲು ದೂರುದಾರರಿಗೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ (locus standi) ಎಂದು ಪ್ರತಿಪಾದಿಸಿದರು. ದೂರುದಾರರು ಸ್ವತಃ ಸಂತ್ರಸ್ತ ವ್ಯಕ್ತಿಯಲ್ಲದ ಕಾರಣ ಇಂತಹ ದೂರು ಸಲ್ಲಿಸಲು ಅರ್ಹರಲ್ಲ ಎಂದು ವಾದಿಸಿದರು.

ಆದರೆ ದೂರುದಾರ ಶ್ರೀಶ್ರೀಮಾಲ್ ತಮ್ಮ ಅರ್ಜಿಯಲ್ಲಿ, ಸಾರ್ವಜನಿಕ ಸಭೆಯ ಭಾಷಣದ ಹೊರತಾಗಿ ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಪ್ರಧಾನಿಯನ್ನು “ಕಮಾಂಡರ್-ಇನ್-ಥೀಫ್” ಎಂದು ಕರೆದಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಯು ಪ್ರಧಾನಿ ಮೋದಿಯವರೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿಯ ಎಲ್ಲಾ ಸದಸ್ಯರು ಮತ್ತು ಭಾರತೀಯ ನಾಗರಿಕರ ಮೇಲಿನ ನೇರ ಕಳ್ಳತನದ ಆರೋಪಕ್ಕೆ ಸಮನಾಗಿದೆ ಎಂದು ಅವರು ವಾದಿಸಿ, ರಾಹುಲ್ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು