ಬೃಹತ್ ಕಾಲ್ನಡಿಗೆ ಜಾಥಾ ಮೂಲಕ ಸರಕಾರಕ್ಕೆ ಮನವಿ
ಮಂಗಳೂರು: ದಿನಾಂಕ 18-09-2026ರಂದು ಮಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಸರಕಾರದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಉಭಯ ಜಿಲ್ಲೆಗಳ (ದಕ್ಷಿಣ ಕನ್ನಡ ಮತ್ತು ಉಡುಪಿ) ಕೊರಗ ಸಮುದಾಯದ ದೀರ್ಘಕಾಲದ ಬೇಡಿಕೆಗಳಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘ (ರಿ) ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಮಂಗಳೂರಿನ ಹೊರವಲಯದ ಪಡೀಲು ಜಂಕ್ಷನ್ನಿಂದ ಆರಂಭಗೊಂಡ ಈ ಕಾಲ್ನಡಿಗೆ ಜಾಥಾದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನೂರಾರು ಕೊರಗ ಸಮುದಾಯದ ಬಾಂಧವರು ಪಾಲ್ಗೊಂಡು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದರು.
ಪ್ರಮುಖ ಬೇಡಿಕೆಗಳು:
- ನೇರ ನೇಮಕಾತಿ: ಕೊರಗ ಸಮುದಾಯದ ಸುಶಿಕ್ಷಿತ ಯುವಜನರಿಗೆ ಸರಕಾರಿ ಉದ್ಯೋಗಗಳಲ್ಲಿ ಆದ್ಯತೆಯ ಮೇರೆಗೆ ನೇರ ನೇಮಕಾತಿ ಕಲ್ಪಿಸಬೇಕು.
- ಭೂಮಿ ಮತ್ತು ಪುನರ್ವಸತಿ: ಸಮುದಾಯದ ಕುಟುಂಬಗಳಿಗೆ ಕೃಷಿ ಭೂಮಿ, ನಿವೇಶನ ಹಾಗೂ ಸೂಕ್ತ ಪುನರ್ವಸತಿ ಒದಗಿಸಲು ಸ್ಪಷ್ಟ ಹಾಗೂ ಸಕರಾತ್ಮಕ ನೀತಿಯನ್ನು ರೂಪಿಸಬೇಕು.
- ಪೌಷ್ಟಿಕ ಆಹಾರ ಯೋಜನೆ: ಕೊರಗ ಸಮುದಾಯದ ಆರೋಗ್ಯ ಸುಧಾರಣೆಗೆ ಪೂರಕವಾಗಿ ಉಚಿತ ಪೌಷ್ಟಿಕ ಆಹಾರ ಒದಗಿಸುವ ಯೋಜನೆಗೆ ಸಂಬಂಧಿಸಿದಂತೆ ಶಾಶ್ವತ ಮತ್ತು ಸಕರಾತ್ಮಕ ನೀತಿ ಜಾರಿಗೆ ತರಬೇಕು.
ಕರಾವಳಿ ಭಾಗದ ಮೂಲನಿವಾಸಿಗಳಾಗಿರುವ ಕೊರಗರ ಜ್ವಲಂತ ಸಮಸ್ಯೆಗಳಿಗೆ ಮುಂಬರುವ ವಿಶೇಷ ಸಚಿವ ಸಂಪುಟ ಸಭೆಯಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಧನಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಹಾಗೂ ಸಮುದಾಯದ ಬಾಂಧವರು ಒಕ್ಕೊರಲಿನಿಂದ ಒತ್ತಾಯಿಸಿದರು.
