ಅನಧಿಕೃತವಾಗಿ ಮನೆಗಳನ್ನು ನೆಲಸಮಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರದ ‘ಬುಲ್ಡೋಜರ್ ಕ್ರಮ’ವನ್ನು ಕಲ್ಕತ್ತಾ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪೂರ್ವ ಮಿಡ್ನಾಪುರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಮನೆಗಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವಂತೆ ಹಾಗೂ ಸರ್ಕಾರದ ವೆಚ್ಚದಲ್ಲೇ ಎರಡು ಹೊಸ ಮನೆಗಳನ್ನು ನಿರ್ಮಿಸಿಕೊಡುವಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. 2024ರಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ವಶಕ್ಕೆ ಪಡೆಯಲು ನಡೆಸಲಾದ ಸಮೀಕ್ಷೆಯ ವೇಳೆ, ಈ ಎರಡು ಮನೆಗಳು ಸರ್ಕಾರಿ ಜಾಗದಲ್ಲಿವೆ ಎಂದು ಸ್ಥಳೀಯ ಪುರಸಭೆ ಹಾಗೂ ಕಂದಾಯ ಅಧಿಕಾರಿಗಳು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದರು. ಆದರೆ, ಅಧಿಕಾರಿಗಳು ಒತ್ತುವರಿ ತೆರವಿಗೆ ಗುರುತಿಸಲಾದ ಗಡಿಯನ್ನು ಮೀರಿ, ತಮ್ಮ ಖಾಸಗಿ ಸ್ವತ್ತನ್ನು ಧ್ವಂಸಗೊಳಿಸಿ ಸೂರಿಲ್ಲದಂತೆ ಮಾಡಿದ್ದಾರೆ ಎಂದು ಸಂತ್ರಸ್ತ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ವೇಳೆ ಭೂ ದಾಖಲೆಗಳು ಮತ್ತು ನಕ್ಷೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅಧಿಕಾರಿಗಳು ತಮ್ಮ ಕಾನೂನುಬದ್ಧ ಅಧಿಕಾರದ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಪತ್ತೆಹಚ್ಚಿದೆ. ಆಡಳಿತಾತ್ಮಕ ಅಧಿಕಾರವನ್ನು ಸಾಮಾನ್ಯ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವ ರೀತಿಯಲ್ಲಿ ಚಲಾಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮುಂದಿನ ಎರಡು ವರ್ಷಗಳ ಒಳಗೆ ನೆಲಸಮಗೊಳಿಸಲಾದ ಎರಡು ಮನೆಗಳನ್ನು ಸರ್ಕಾರವೇ ತನ್ನ ಸ್ವಂತ ಖರ್ಚಿನಲ್ಲಿ ಪುನರ್ ನಿರ್ಮಿಸಿಕೊಡಬೇಕು ಹಾಗೂ ನಿರ್ಮಾಣ ಪೂರ್ಣಗೊಳ್ಳುವವರೆಗೆ ಸಂತ್ರಸ್ತರಿಗೆ ಉಚಿತವಾಗಿ ಸೂಕ್ತ ಪರ್ಯಾಯ ವಸತಿ ಸೌಲಭ್ಯ ಒದಗಿಸಬೇಕು ಎಂದು ಆದೇಶಿಸಲಾಗಿದೆ. ಇದರೊಂದಿಗೆ, ಸಂತ್ರಸ್ತ ಕುಟುಂಬಕ್ಕೆ ₹10 ಲಕ್ಷ ನಷ್ಟ ಪರಿಹಾರವನ್ನು ಎರಡು ಕಂತುಗಳಲ್ಲಿ (ಅಕ್ಟೋಬರ್ 2026ರೊಳಗೆ ₹5 ಲಕ್ಷ ಮತ್ತು ಫೆಬ್ರವರಿ 2027ರೊಳಗೆ ಉಳಿದ ₹5 ಲಕ್ಷ) ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
