ನನಗೆ ದಿಶಾ ಸಾಲಿಯನ್ ಪರಿಚಯವೇ ಇಲ್ಲ: ಸಿಬಿಐ ಎಫ್‌ಐಆರ್ ಬಳಿಕ ಆದಿತ್ಯ ಠಾಕ್ರೆ ಸ್ಪಷ್ಟನೆ

ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಸಾವಿನ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಬಗ್ಗೆ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಾವು ದಿಶಾ ಸಾಲಿಯನ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ, ಪರಿಚಯವೂ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ರಾಜಕೀಯ ಮತ್ತು ವೈಯಕ್ತಿಕ ದುರುದ್ದೇಶದಿಂದ ತಮ್ಮ ಚಾರಿತ್ರ್ಯ ವಧೆ ಮಾಡಲು ಆಧಾರರಹಿತ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಗದ್ದಲಗಳನ್ನು ಬದಿಗಿಟ್ಟು ಸತ್ಯದ ಬಗ್ಗೆ ಮಾತನಾಡೋಣ ಎಂದಿರುವ ಆದಿತ್ಯ ಠಾಕ್ರೆ, ಈ ದುರಂತ ಪ್ರಕರಣಕ್ಕೆ ಉದ್ದೇಶಪೂರ್ವಕವಾಗಿ ಯಾವುದೇ ಸಾಕ್ಷ್ಯಗಳಿಲ್ಲದೆ ತಮ್ಮ ಹೆಸರನ್ನು ತಳುಕು ಹಾಕಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ಕಳೆದ ಸುಮಾರು ಆರು ವರ್ಷಗಳಿಂದ ಕೆಲವರು ಈ ಷಡ್ಯಂತ್ರ ನಡೆಸುತ್ತಿದ್ದಾರೆ. ಯಾವುದೇ ಸಾಕ್ಷ್ಯ ಅಥವಾ ಸತ್ಯಾಂಶವಿಲ್ಲದೆ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಈ ಕಳಂಕಿತ ಅಭಿಯಾನ ಅತ್ಯಂತ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ಟೆಲಿವಿಷನ್‌ಗಳಲ್ಲಿ ನಡೆಯುವ ಅಬ್ಬರದ ಚರ್ಚೆಗಳು ಹಾಗೂ ಮಾಧ್ಯಮ ವಿಚಾರಣೆಗಳು (ಮೀಡಿಯಾ ಟ್ರಯಲ್) ನೈಜ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿರುವ ಅವರು, ಈ ಪ್ರಕರಣದ ಅಧಿಕೃತ ಮರುತನಿಖೆಯು ಯಾವುದೇ ದುರುದ್ದೇಶಪೂರಿತ ಗೊಂದಲಗಳು ಅಥವಾ ರಾಜಕೀಯ ಪ್ರೇರಿತ ಚಾರಿತ್ರ್ಯ ವಧೆಗಳಿಲ್ಲದೆ ನಿಷ್ಪಕ್ಷಪಾತವಾಗಿ ಮುಂದುವರಿಯಲಿ ಎಂದು ಆಗ್ರಹಿಸಿದ್ದಾರೆ. ಇಂತಹ ಕೆಟ್ಟ ತಂತ್ರಗಳ ಮೂಲಕ ಸತ್ಯಕ್ಕಾಗಿ ಮತ್ತು ನಾಗರಿಕರ ಹಕ್ಕುಗಳಿಗಾಗಿ ತಾವು ನಡೆಸುತ್ತಿರುವ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ, ಸತ್ಯದ ಪರವಾಗಿ ತಮ್ಮ ಹೋರಾಟ ಸದಾ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಜೂನ್ 8, 2020 ರಂದು ಮುಂಬೈನ ಮಲಾಡ್‌ನಲ್ಲಿರುವ ವಸತಿ ಸಮುಚ್ಚಯದ 12ನೇ ಮಹಡಿಯಿಂದ ಬಿದ್ದು 28 ವರ್ಷದ ದಿಶಾ ಸಾಲಿಯನ್ ಸಾವನ್ನಪ್ಪಿದ್ದರು. ಮುಂಬೈ ಪೊಲೀಸರು ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು (ಎಡಿಆರ್) ಎಂದು ದಾಖಲಿಸಿಕೊಂಡು, ನಂತರ ತನಿಖೆ ನಡೆಸಿ ಆತ್ಮಹತ್ಯೆ ಎಂದು ತೀರ್ಮಾನಿಸಿದ್ದರು. ಆದರೆ, ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್ ಅವರು ತಮ್ಮ ಮಗಳ ಸಾವಿನಲ್ಲಿ ಸಂಶಯವಿದ್ದು, ಕೊಲೆ ಪ್ರಕರಣ ದಾಖಲಿಸಬೇಕೆಂದು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆರು ವರ್ಷಗಳ ಕಾಲ ಎಫ್‌ಐಆರ್ ದಾಖಲಿಸದಿದ್ದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಪ್ರಕರಣದ ಸಮಗ್ರ ಮರುತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿಬಿಐ ಹೊಸದಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ದಿಶಾ ತಂದೆಯ ಹೇಳಿಕೆ ಆಧರಿಸಿ ಆದಿತ್ಯ ಠಾಕ್ರೆ, ನಟರಾದ ಸೂರಜ್ ಪಾಂಚೋಲಿ, ಡಿನೋ ಮೋರಿಯಾ ಸೇರಿದಂತೆ ಹಲವರ ಪಾತ್ರದ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಆದಿತ್ಯ ಠಾಕ್ರೆ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿಹಾಕಿ ಹೇಳಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು