ದೆಹಲಿ ಗಲಭೆಯ ಪಿತೂರಿ ಪ್ರಕರಣದಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರವನ್ನು ಪ್ರಮಾಣಪತ್ರವಿಲ್ಲದೆ ಪ್ರದರ್ಶಿಸುವುದು ಕಾನೂನುಬಾಹಿರ ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಹೈದರಾಬಾದ್‌ನ ‘ಟ್ರಿಪಲ್ ಐಟಿ’ (IIIT Hyderabad) ಸಂಸ್ಥೆಗೆ ಎಚ್ಚರಿಕೆ ನೀಡಿದೆ. ಮಂಡಳಿಯ ಈ ಆಕ್ಷೇಪದ ಬೆನ್ನಲ್ಲೇ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ.
ನಿರ್ದೇಶಕ ಲಲಿತ್ ವಾಚಾನಿ ನಿರ್ದೇಶಿಸಿರುವ ‘ಪ್ರಿಸನರ್ ನಂ. 626710 ಈಸ್ ಪ್ರೆಸೆಂಟ್’ (Prisoner No. 626710 is Present) ಎಂಬ ಸಾಕ್ಷ್ಯಚಿತ್ರವನ್ನು ಸೆಪ್ಟೆಂಬರ್ 18ರ ಶುಕ್ರವಾರ ರಾತ್ರಿ ಸಂಸ್ಥೆಯ ಕೆಆರ್‌ಬಿ ಸಭಾಂಗಣದಲ್ಲಿ ಪ್ರದರ್ಶಿಸಲು ವಿದ್ಯಾರ್ಥಿಗಳ ಗುಂಪೊಂದು ಯೋಜಿಸಿತ್ತು. ಈ ಕುರಿತು ‘ಎಕ್ಸ್’ ತಾಣದಲ್ಲಿ ಪೋಸ್ಟ್ ಮಾಡಿರುವ ಸಿಬಿಎಫ್‌ಸಿ, ಸಿನಿಮಾಟೋಗ್ರಾಫ್ ಕಾಯ್ದೆಯಡಿ ವಿನಾಯಿತಿ ಪಡೆಯದೆ ಪ್ರಮಾಣಪತ್ರವಿಲ್ಲದ ಚಲನಚಿತ್ರ ಅಥವಾ ಸಾಕ್ಷ್ಯಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸ್ಥೆಯ ಆಡಳಿತ ಮಂಡಳಿಗೆ ಸೂಚಿಸಿದೆ.
ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (NLSIU) ಇದೇ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಕ್ಯಾಂಪಸ್ ಅನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಎಬಿವಿಪಿ (ABVP) ವಿರೋಧ ವ್ಯಕ್ತಪಡಿಸಿದ ಕಾರಣ, ಭದ್ರತೆ ಮತ್ತು ತಾಂತ್ರಿಕ ಕಾರಣಗಳನ್ನು ನೀಡಿ ಆಯೋಜಕರು ಪ್ರದರ್ಶನವನ್ನು ಮುಂದೂಡಿದ್ದರು.
2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (UAPA) ಬಂಧನಕ್ಕೊಳಗಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಕಳೆದ ಆರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕ್ರಾಂತಿಕಾರಿ ಜತೀಂದ್ರ ನಾಥ್ ದಾಸ್ ಅವರ ಸ್ಮರಣಾರ್ಥ ಮತ್ತು ‘ರಾಜಕೀಯ ಕೈದಿಗಳ ದಿನ’ದ ಅಂಗವಾಗಿ ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ಆಯೋಜಿಸಿದ್ದರು.
