ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿ, ಚಾಕುವಿನಿಂದ ಇರಿದು ಕೊಂದು ಮೃತದೇಹವನ್ನು ಬಯಲು ಜಮೀನಿನಲ್ಲಿ ಎಸೆದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಮೃತದೇಹ ಕೊಳೆತು ನಾರುತ್ತಿದ್ದಲ್ಲದೆ, ನಾಯಿಗಳು ದೇಹದ ಅಂಗಾಂಗಗಳನ್ನು ತಿಂದ ಸ್ಥಿತಿಯಲ್ಲಿದ್ದ ಕಾರಣ ಆರಂಭದಲ್ಲಿ ಮೃತ ವ್ಯಕ್ತಿಯ ಲಿಂಗವನ್ನು ಗುರುತಿಸುವುದೂ ಪೊಲೀಸರಿಗೆ ಕಷ್ಟಕರವಾಗಿತ್ತು.
ವಾಯವ್ಯ ದೆಹಲಿಯ ಸ್ವರೂಪ್ ನಗರ ವ್ಯಾಪ್ತಿಯ ಕುಶಕ್ ರಸ್ತೆಯಲ್ಲಿರುವ ಜೈಪಾಲ್ ರಾಣಾ ಅವರ ಕೃಷಿ ಜಮೀನಿನ ಬಳಿ ಸೆಪ್ಟೆಂಬರ್ 13ರಂದು ಅರೆಬರೆ ಕೊಳೆತ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಕೊಳೆತ ಕಾರಣ ಆಕೆಯ ಒಂದು ಕೈ ದೇಹದಿಂದ ಬೇರ್ಪಟ್ಟಿತ್ತು. ಬಾಲಕಿ ಆಗಾಗ ಮನೆ ಬಿಟ್ಟು ಹೋಗಿ ಕೆಲ ದಿನಗಳ ನಂತರ ಮರಳುತ್ತಿದ್ದ ಕಾರಣ ಆಕೆಯ ಕುಟುಂಬಸ್ಥರು ಯಾವುದೇ ನಾಪತ್ತೆ ದೂರು ದಾಖಲಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಸಂತ್ರಸ್ತೆ ಹಾಗೂ ಆರೋಪಿಗಳು ಪರಸ್ಪರ ಪರಿಚಿತರಾಗಿದ್ದರು. ಘಟನೆ ನಡೆದ ರಾತ್ರಿ ಟೆಂಪೋ ಒಂದರಲ್ಲಿ ಒಟ್ಟಿಗೆ ಮದ್ಯಪಾನ ಮಾಡಿದ್ದು, ನಂತರ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಬಳಿಕ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಶವವನ್ನು ಜಮೀನಿನಲ್ಲಿ ಎಸೆದು ಪರಾರಿಯಾಗಿದ್ದರು. ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಘಟನಾ ಸ್ಥಳದ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಟೆಂಪೋವನ್ನು ಬೆನ್ನತ್ತಿ ಸ್ವರೂಪ್ ನಗರದ ಖಡ್ಡಾ ಕಾಲೋನಿಯಲ್ಲಿ ಪತ್ತೆಹಚ್ಚಿದರು. ಕಾರ್ಯಾಚರಣೆ ವೇಳೆ ಖಡ್ಡಾ ಕಾಲೋನಿ ನಿವಾಸಿ ಶಿವಂ ಅಲಿಯಾಸ್ ಸುಧಾಮಾ ಅಲಿಯಾಸ್ ಚುಚು ಎಂಬಾತನನ್ನು ಹಾಗೂ 16 ಮತ್ತು 17 ವರ್ಷದ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಗೆ ಬಳಸಲಾದ ಎರಡು ಚಾಕುಗಳು, ಆರೋಪಿಗಳ ರಕ್ತಸಿಕ್ತ ಬಟ್ಟೆಗಳು ಹಾಗೂ ಟೆಂಪೋವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
