ಅನಂತನ ಅಂಧಭಕ್ತಿಗೆ ಒಲಿದ ಪಾಲ್ಕೆ ಪ್ರಶಸ್ತಿ

“..ಅನಂತನಾಗರವರ ಅಂಧಭಕ್ತಿಗೆ ಇತಿಹಾಸವೇ ಇದೆ. ಈ ಹಿಂದೆ ರಾಮಕೃಷ್ಣ ಹೆಗ್ಗಡೆಯವರ ಕೃಪೆಯಿಂದ ಎಂಎಲ್ಸಿ ಆಗಿದ್ದ ಅನಂತನಾಗ್ 80 ರ ದಶಕದಲ್ಲಿ “ಹೆಗಡೆಯವರು ಹೇಳಿದರೆ ಹಾಳು ಭಾವಿಗೆ ಹಾರಲೂ ಸಿದ್ಧ” ಎಂದು ಹೇಳಿ ತಮ್ಮ ಅಂಧಾಭಿಮಾನ ಮೆರೆದಿದ್ದರು..” ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

ಕನ್ನಡದ ಚಲನಚಿತ್ರ ರಂಗದ ಹಿರಿಯ ಕಲಾವಿದ ಅನಂತನಾಗ್ ರವರಿಗೆ 2024 ನೇ ಸಾಲಿನ ಭಾರತೀಯ ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ದಕ್ಕಿರುವುದು ಅವರ ಸಾಧನೆಗಿಂತಲೂ ಅವರು ತೋರಿದ ಮೋದಿ ಅಂಧಭಕ್ತಿಗೆ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಅನಂತನಾಗರವರ ಅಭಿನಯ ಶಕ್ತಿಗಿಂತಲೂ ಅವರ ಮೋದಿ ಭಕ್ತಿ ಈ ಪ್ರಶಸ್ತಿ ದಕ್ಕಲು ಪ್ರಮುಖ ಕಾರಣ ಎಂಬುದು ಬಹಿರಂಗ ಸತ್ಯ.

2022 ನವೆಂಬರ್ 16ರಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅನಂತನಾಗರವರು “ಪ್ರಧಾನಿ ನರೇಂದ್ರ ಮೋದಿ 8.5 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಗಳಿಗೆ ನಾನು ಮನಸೋತಿದ್ದೇನೆ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದರು.​ ಇಂತಿಪ್ಪ ಮೋದಿ ಅಂದಾಭಿಮಾನಿಗೆ ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ದಕ್ಕಿರುವುದರಲ್ಲಿ ಅಚ್ಚರಿ ಏನಿಲ್ಲ. ಅನಂತನಾಗರವರ ಅನಂತಾಭಿಮಾನ ಎಷ್ಟಿದೆ ಎಂದರೆ ಪ್ರಶಸ್ತಿ ಬಂದಿರುವುದಕ್ಕಿಂತಲೂ ಮೋದಿಯವರು ಎಕ್ಸ್ ಖಾತೆಯಲ್ಲಿ ಅಭಿನಂದಿಸಿರುವುದೇ ಅನಂತನಾಗರವರ ಸರ್ವಾಂಗಗಳಲ್ಲೂ ರೋಮಾಂಚನವನ್ನುಂಟು ಮಾಡಿದೆಯಂತೆ.

ಇಂತಹುದೊಂದು ಅತ್ಯುನ್ನತ ಪ್ರಶಸ್ತಿಗೆ ಅನಂತನಾಗರವರು ಅರ್ಹರಾಗಿದ್ದಾರೋ ಇಲ್ಲವೋ ಎನ್ನುವುದು ಅವರವರ ಭಾವ ಭಕ್ತಿಗೆ ಬಿಟ್ಟಿದ್ದು. ಆದರೆ ಅವರ ಸಾಧನೆಗಿಂತಲೂ ಮೋದಿಯವರ ಮೇಲಿರುವ ಅಂಧಾಭಿಮಾನವೇ ಈ ಪ್ರಶಸ್ತಿಗೆ ಕಾರಣ ಎನ್ನುವುದೇ ವಿವಾದಕ್ಕೆ ಕಾರಣವಾಗಿದೆ.

ಇಲ್ಲಿವರೆಗೂ ಈ ಅತ್ಯುನ್ನತ ಪ್ರಶಸ್ತಿ 1995 ರಲ್ಲಿ ವರನಟ ಡಾ.ರಾಜಕುಮಾರ ರವರಿಗೆ ಒಲಿದಿತ್ತು. ಆಗ ಕನ್ನಡಿಗರೆಲ್ಲಾ ಸಂಭ್ರಮಿಸಿದ್ದರು. ನಂತರ 2008 ರಲ್ಲಿ ಸಿನೆಮಾಟೋಗ್ರಾಫರ್ ವಿ.ಕೆ.ಮೂರ್ತಿಯವರಿಗೆ ಪಾಲ್ಕೆ ಪ್ರಶಸ್ತಿ ದಕ್ಕಿದ್ದಕ್ಕೆ ಕನ್ನಡ ಸಿನೆಮಾ ರಂಗ ಸಂಭ್ರಮಿಸಿತ್ತು. ಈಗ ನಟ ಅನಂತನಾಗರವರಿಗೆ ಪಾಲ್ಕೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಂಧಭಕ್ತರು ಮಾತ್ರ ಸಂಭ್ರಮಿಸುತ್ತಿದ್ದಾರೆ.

ಅನಂತನಾಗರವರ ಅಂಧಭಕ್ತಿಗೆ ಇತಿಹಾಸವೇ ಇದೆ. ಈ ಹಿಂದೆ ರಾಮಕೃಷ್ಣ ಹೆಗ್ಗಡೆಯವರ ಕೃಪೆಯಿಂದ 1988 ರಿಂದ 1994 ರ ವರೆಗೆ ಎಂಎಲ್ಸಿ ಆಗಿದ್ದ ಅನಂತನಾಗರವರು 1980 ರ ದಶಕದಲ್ಲಿ “ಹೆಗಡೆಯವರು ಹೇಳಿದರೆ ಹಾಳು ಭಾವಿಗೆ ಹಾರಲೂ ಸಿದ್ಧ” ಎಂದು ಹೇಳಿ ತಮ್ಮ ಅಂಧಾಭಿಮಾನ ಮೆರೆದಿದ್ದರು. 1994 ರಲ್ಲಿ ಮಲ್ಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಜೆ.ಹೆಚ್.ಪಾಟೇಲರವರ ಸಂಪುಟದಲ್ಲಿ ಬೆಂಗಳೂರು ಅಭಿವೃದ್ದಿ ಸಚಿವರಾಗಿದ್ದರು. ಹೆಗಡೆಯವರ ಕೃಪಾಕಟಾಕ್ಷದಲ್ಲಿ ರಾಜಕೀಯ ಫಲಾನುಭವಿಯಾಗಿದ್ದ ಅನಂತರವರು ಹೆಗಡೆಯವರನ್ನು ಜನತಾದಳದಿಂದ ಹೊರಗೆ ಹಾಕಿದಾಗ ಪಕ್ಷದಲ್ಲೇ ಉಳಿದುಕೊಂಡು ತಮ್ಮ ನಿಷ್ಟೆ ಬದಲಿಸಿದ್ದರು.

ಈಗ ಮೋದಿಯವರು ಪ್ರಧಾನಿಯಾದ ಮೇಲೆ ಮೋದಿಯವರ ಅಂಧಾಭಿಮಾನಿಯಾಗಿರುವ ಅನಂತನಾಗರವರು 2022 ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ
“ ನಾನು ಮೋದಿಜೀಯ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ.” ಎಂದು ಬಹಿರಂಗವಾಗಿಯೇ ಹೇಳಿ ತಮ್ಮ ಅಂಧಭಕ್ತಿಯನ್ನು ಸಾರ್ವತ್ರಿಕರಣ ಗೊಳಿಸಿದ್ದರು.

ಮೋದಿಯವರನ್ನು ಆಗಾಗ ಹೊಗಳುತ್ತಲೇ ಇದ್ದ ಅನಂತರವರಿಗೆ 2025 ರಲ್ಲಿ ಪದ್ಮಭೂಷಣ ಪ್ರಶಸ್ತಿ ದಕ್ಕಿತ್ತು. ಅಗಲೂ ಸಹ ಮೋದಿಯವರ “ಪೀಪಲ್ಸ್ ಪದ್ಮ” ಉಪಕ್ರಮದಿಂದಾಗಿ ತಮ್ಮ ಹೆಸರನ್ನು ನಾಮನಿರ್ದೇಶನ ಮಾಡಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ ಮೋದಿಯವರನ್ನು ಬೇಟಿಯಾಗಿದ್ದರು.

ಈಗ ಪಾಲ್ಕೆ ಪ್ರಶಸ್ತಿ ಘೋಷಣೆಯಾದಾಗ
“ಪ್ರಧಾನಿಯವರೇ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದು ನನಗೆ ಎರಡು ಫಾಲ್ಕೆ ಪ್ರಶಸ್ತಿ ಸಿಕ್ಕಂತೆ ಅನಿಸುತ್ತಿದೆ. ನಾನು ಡಬಲ್‌ ಹಾನರ್ಡ್ ಆಗಿದ್ದೇನೆ” ಎಂದು ಅನಂತನಾಗರವರು ತಮ್ಮ ಅಂಧಭಕ್ತಿಯ ಪರಮಾನಂದವನ್ನು ಪ್ರದರ್ಶಿಸಿದರು.

ಮೋದಿಯವರ ಆಡಳಿತದ ವೈಪಲ್ಯಗಳ ವಿರುದ್ಧ ಎಂದೂ ಚಕಾರ ಎತ್ತದ ಈ ಬಹುಪರಾಕ್ ಅನಂತರವರು 2019ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (CAA)ಗೆ ಬೆಂಬಲ ವ್ಯಕ್ತಪಡಿಸಿದ್ದರು.

ಮೋದಿಯವರ ನಾಯಕತ್ವವನ್ನು ಹಲವು ಸಂದರ್ಭಗಳಲ್ಲಿ ಪ್ರಶಂಸಿಸುತ್ತಲೇ ಬಂದರು. ಅನಂತರನಾಗರವರು ಹಾಕಿಕೊಂಡ ಮೋದಿ ಎಂಬ ಪೀತ ಕನ್ನಡಕದಲ್ಲಿ ಎಂದೂ ದೇಶದ ಜನರ ನಿರುದ್ಯೋಗ, ಏರಿದ ಹಸಿವಿನ ಸೂಚ್ಯಂಕ, ದೇಶದ ಮೇಲೆ ಹೊರೆಸಲಾದ ಅತೀ ಹೆಚ್ಚು ಸಾಲದ ಹೊರೆ ಮುಂತಾದ ಸಮಸ್ಯೆಗಳು ಅವರ ಕಣ್ಣಿಗೆ ಬೀಳಲಿಲ್ಲ. ಬಿದ್ದರೂ ಬಾಯಿ ಬಿಡಲಿಲ್ಲ.

ಅನಂತನಾಗರವರನ್ನು ಕಲಾವಿದರನ್ನಾಗಿ ಮೆಚ್ಚಬಹುದಾಗಿದೆ, ಸಿನೆಮಾ ಕ್ಷೇತ್ರದಲ್ಲಿ ಅವರ ಐದು ದಶಕಗಳ ಅಭಿನಯ ಪಯಣವನ್ನು ಸ್ಮರಿಸಿಕೊಳ್ಳಬಹುದಾಗಿದೆ. ಆದರೆ ಪದವಿ ಪ್ರಶಸ್ತಿಗಳಿಗಾಗಿ ಪ್ರಭುಗಳನ್ನು ಹೊಗಳುವ ಅವರ ಬಟ್ಟಂಗಿತನವನ್ನು ಪ್ರಶ್ನಿಸಲೇ ಬೇಕಿದೆ. ಎಂದೂ ಶೋಷಿತರ ಪರ, ನೊಂದವರ ಪರ, ಅನ್ಯಾಯದ ವಿರುದ್ಧ ತಮ್ಮ ದ್ವನಿಯನ್ನು ಎತ್ತದ ಅನಂತನಾಗರಂತವರ ಅವಕಾಶವಾದಿ ನಟರನ್ನು ವಿಮರ್ಶಿಸಬೇಕಿದೆ.

ಅನಂತನಾಗರವರ ನಟನೆಯ ಸಿನೆಮಾಗಳನ್ನು ಹಣ ಕೊಟ್ಟು ನೋಡಿ ಅವರಿಗೆ ಹಣ, ಗೌರವ, ಸ್ಟಾರಗಿರಿ ಮತ್ತು ಖ್ಯಾತಿಯನ್ನು ತಂದುಕೊಟ್ಟವರು ಕನ್ನಡದ ಸಿನಿ ಪ್ರೇಕ್ಷಕರು. ಅಂತಹ ಕನ್ನಡಿಗರ ನೋವು ಸಂಕಟ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಆಳುವ ದೊರೆಗೆ ಅಂಧಾಭಿಮಾನವನ್ನು ತೋರುವ ಅನಂತನಾಗರಂತವರನ್ನು ಕನ್ನಡಿಗರು ಹೇಗೆ ಕ್ಷಮಿಸಲು ಸಾಧ್ಯ?

ಇಂತಿಪ್ಪ ಬಹುಪರಾಕಿ ವಂದಿಮಾದಿಗ ಅವಕಾಶವಾದಿ ಅನಂತನಾಗರವರನ್ನು ಸರಿದಾರಿಗೆ ತರಲು ಶಂಕರನಾಗ್ ರವರು ಬದುಕಿರಬೇಕಾಗಿತ್ತು. ನೆಲ ಜಲ ಜನ ಭಾಷೆಗಾಗಿ ಜನರ ಪರ ನಿಂತು ಬೀದಿಗಿಳಿದು ಹೋರಾಟ ಮಾಡಿದ ವರನಟ ಡಾ.ರಾಜಕುಮಾರರವರು ಅನಂತನಾಗರವರಿಗೆ ಮಾದರಿ ಆಗಬಹುದಾಗಿತ್ತು. ವ್ಯಕ್ತಿಪೂಜೆಯ ಅಂಧಭಕ್ತಿ ತೋರದೇ ಇದ್ದಲ್ಲಿ ಅನಂತನಾಗರವರಿಗೆ ದೊರಕಿದ ಪಾಲ್ಕೆ ಪ್ರಶಸ್ತಿಯನ್ನು ಕನ್ನಡಿಗರೆಲ್ಲರೂ ಸಂಭ್ರಮಿಸಬಹುದಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು