ರೈತರಿಗೆ ನೀರಿನ ಸಮಸ್ಯೆ ಹೇಮಾವತಿ ಜಲಾಶಯದಿಂದ ನೀರು ಯಾಕೆ ಬಿಡ್ತಿದ್ದೀರ – ಎಚ್.ಡಿ. ರೇವಣ್ಣ ಆಕ್ರೋಶ

ಹಾಸನ: ರೈತರಿಗೆ ನೀರಿನ ಅಗತ್ಯವಿರುವ ಸಂದರ್ಭದಲ್ಲಿ ಹೇಮಾವತಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀರಾಮದೇವರ ಕಟ್ಟೆ ಮೂಲಕ ಹೇಮಾವತಿ ಜಲಾಶಯದ ನೀರನ್ನು ಕಳೆದ ಒಂದು ತಿಂಗಳಿಂದ ಪ್ರತಿದಿನ ಸುಮಾರು 5,000 ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ಹರಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ರೇವಣ್ಣ ಅವರು ನೀರು ಹರಿವಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ನೀರಿನ ಬಳಕೆ ಹಾಗೂ ಹಂಚಿಕೆಯಲ್ಲಿ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿದರು.

ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2,922 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ 2,898.48 ಅಡಿ ಇದೆ. ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 37.103 ಟಿಎಂಸಿ ಆಗಿದ್ದು, ಇಂದಿನ ಒಟ್ಟು ಸಂಗ್ರಹ 18.827 ಟಿಎಂಸಿ ಹಾಗೂ ಜೀವಂತ ನೀರಿನ ಸಂಗ್ರಹ 14.455 ಟಿಎಂಸಿ ಇದೆ. ಜಲಾಶಯಕ್ಕೆ ಪ್ರಸ್ತುತ 1,661 ಕ್ಯೂಸೆಕ್ ಒಳಹರಿವು ಇದ್ದರೆ, ವಿವಿಧ ಮಾರ್ಗಗಳ ಮೂಲಕ ಒಟ್ಟು 9,300 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಮುಖ್ಯ ನದಿಗೆ 4,000 ಕ್ಯೂಸೆಕ್, ಎಡದಂಡೆ ಕಾಲುವೆಗೆ (LBC) 4,000 ಕ್ಯೂಸೆಕ್, ಬಲದಂಡೆ ಕಾಲುವೆಗೆ (RBC) 400 ಕ್ಯೂಸೆಕ್ ಹಾಗೂ HRBHLCಗೆ 900 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. LIS ಮೂಲಕ ಯಾವುದೇ ನೀರು ಹೊರಬಿಡುತ್ತಿಲ್ಲ.

ಕಳೆದ ವರ್ಷದ ಇದೇ ದಿನದ ಅಂಕಿಅಂಶಗಳಿಗೆ ಹೋಲಿಸಿದರೆ, ಈ ಬಾರಿ ಜಲಾಶಯದ ನೀರಿನ ಸಂಗ್ರಹದಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು ಸಂಗ್ರಹ 35.731 ಟಿಎಂಸಿ ಹಾಗೂ ಜೀವಂತ ಸಂಗ್ರಹ 31.359 ಟಿಎಂಸಿ ಇತ್ತು. ಆದರೆ ಪ್ರಸಕ್ತ ವರ್ಷ ಒಟ್ಟು ಸಂಗ್ರಹ 18.827 ಟಿಎಂಸಿ ಮತ್ತು ಜೀವಂತ ಸಂಗ್ರಹ 14.455 ಟಿಎಂಸಿಗೆ ಇಳಿದಿದೆ. ಜಲಾಶಯಕ್ಕೆ ಒಳಹರಿವು ಕೇವಲ 1,661 ಕ್ಯೂಸೆಕ್ ಇರುವ ಸಂದರ್ಭದಲ್ಲಿ ಒಟ್ಟು 9,300 ಕ್ಯೂಸೆಕ್ ನೀರು ಹೊರಹರಿಯುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಅಗತ್ಯವಿರುವ ಸಮಯದಲ್ಲಿ ಜಲಾಶಯದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಬಿಡುವುದು ಸರಿಯಲ್ಲ ಎಂದು ಹೇಳಿದರು. ಈಗಾಗಲೇ ನೀರಿನ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಮೇಲೆ ಮತ್ತಷ್ಟು ಹೊರೆ ಹಾಕಿದಂತಾಗುತ್ತಿದೆ. “ರೈತರ ಕಣ್ಣೀರಿನ ಮೇಲೆ ಇನ್ನಷ್ಟು ಬರೆ ಎಳೆಯುವ ಕೆಲಸವಾಗಬಾರದು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು