ಮಂಗಳೂರು, ಸೆ. 18: ಕೆಲವು ಕಡೆಗಳಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದೆ. ಇದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸಮಯ ಪರಿಪಾಲನೆ ಮಾಡದ ಮದ್ಯದಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಬಕಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಸೂಚನೆ ನೀಡಿದರು.
ಮಂಗಳೂರಿನ ಜಿಲ್ಲಾ ಪಂಚಾಯತ್ ಕಾರ್ಯಾಲಯದ ನೇತ್ರಾವತಿ ಸಂಭಾಂಗಣದಲ್ಲಿ ನಡೆದ ಮಂಗಳೂರು ವಿಭಾಗ ವ್ಯಾಪ್ತಿಯ ಎಲ್ಲ ಅಬಕಾರಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ ಅವರು ಅಬಕಾರಿ ಇಲಾಖೆಗೆ ಪ್ರತ್ಯೇಕ ಅಬಕಾರಿ ಭವನ ನಿರ್ಮಾಣ ಅಗತ್ಯವಿದ್ದು, ಅದರದ್ದೇ ಆದ ನಿರ್ದಿಷ್ಟ ವಿನ್ಯಾಸದಲ್ಲಿ ನಿರ್ಮಾಣವಾಗಬೇಕು. ಇಲಾಖೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಯೋಜನಾ ವರದಿಯನ್ನು ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿ ಎಂದು ಸಲಹೆ ನೀಡಿದರು. ಈ ಸರ್ಕಾರದ ಅವಧಿ ಮುಗಿಯುವುದರೊಳಗೆ ಎಲ್ಲ ಜಿಲ್ಲೆಗಳಲ್ಲಿ ಅಬಕಾರಿ ಭವನಗಳ ಶಂಕುಸ್ಥಾಪನೆ ನೆರವೇರಿಸುವ ಭರವಸೆ ನೀಡಿದರು.
ಮಿಲಿಟರಿ ಕೋಟಾದಡಿ ಸಿಗುವ ಮದ್ಯವು ವ್ಯಾಪಾರಕ್ಕೆ ದುರ್ಬಳಕೆಯಾಗುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಗೋವಾದಿಂದ ಕರ್ನಾಟಕಕ್ಕೆ ಬರುತ್ತಿರುವ ಅಕ್ರಮ ಮದ್ಯ ತಡೆಗೆ ಚೆಕ್ ಪೋಸ್ಟ್ ನಿರ್ಮಿಸಬೇಕು. ಕಳ್ಳಬಟ್ಟಿ ತಯಾರಿಕೆ ಹಾಗೂ ಮಾರಾಟವನ್ನು ನಿಯಂತ್ರಿಸಬೇಕು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲಾಖೆಗೆ ಒಳ್ಳೆಯ ಹೆಸರನ್ನು ತರಬೇಕು. ಈ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಪರ ನಾನಿದ್ದೇನೆ ಎಂದು ಸಚಿವರು ಅಭಯ ನೀಡಿದರು.
ನೂತನ ಸಿಬ್ಬಂದಿಗೆ ಪೂರಕ ತರಬೇತಿ ನೀಡಲು ತರಬೇತಿ ಕೇಂದ್ರ ಆರಂಭಿಸುವ ಬಗ್ಗೆ ಚಿಂತಿಸಲಾಗುವುದು. ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುವುದು ಎಂದರು.
ಸಿಬ್ಬಂದಿ ಕೊರತೆ ಪರಿಹರಿಸಲು ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಒಳಮೀಸಲಾತಿ ಹಿನ್ನೆಲೆ ವಿಳಂಬವಾಗಿತ್ತು. ಇದೀಗ ಒಳಮೀಸಲಾತಿ ಸಮಸ್ಯೆ ಇತ್ಯರ್ಥಗೊಂಡಿರುವುದರಿಂದ ನೇಮಕಾತಿ ಪ್ರಕ್ರಿಯಿಗೆ ವೇಗ ಒದಗಿಸಲಾಗಿದೆ. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಪೂರಕ ನಿರ್ಧಾರಗಳನ್ನು ಕೈಗೊಳ್ಳುವಂತೆ ಅಬಕಾರಿ ಆಯುಕ್ತರಿಗ ಸೂಚಿಸಿದರು.
ಸಭೆಯಲ್ಲಿ ಅಬಕಾರಿ ಆಯುಕ್ತರಾದ ಆರ್. ವೆಂಕಟೇಶ್ ಕುಮಾರ್ ಸೇರಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
