ಶಿಶು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ: ನೆಸ್ಲೆ ಇಂಡಿಯಾ ವಿರುದ್ಧ ಎಫ್‌ಎಸ್‌ಎಸ್‌ಎಐ ಕಾನೂನು ಕ್ರಮ

ಶಿಶುಗಳ ಪೌಷ್ಟಿಕಾಂಶ ಉತ್ಪನ್ನಗಳ ಮಾರಾಟದಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಹಾಗೂ ನಿಗದಿತ ಬಯೋಟಿನ್ (Biotin) ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಪ್ರಮುಖ ಎಫ್‌ಎಂಸಿಜಿ ಸಂಸ್ಥೆ ನೆಸ್ಲೆ ಇಂಡಿಯಾ ಲಿಮಿಟೆಡ್ (Nestle India Ltd) ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಸಂಸ್ಥೆಯ ವಿರುದ್ಧ ಮೂರು ಪ್ರತ್ಯೇಕ ತೀರ್ಪು ಪ್ರಕರಣಗಳನ್ನು (Adjudication cases) ದಾಖಲಿಸಲಾಗಿದೆ.

ಇ-ಕಾಮರ್ಸ್ ವೇದಿಕೆಗಳಲ್ಲಿ ಲಭ್ಯವಿರುವ ನೆಸ್ಲೆಯ ಶಿಶು ಆಹಾರ ಉತ್ಪನ್ನಗಳು ಹಾಗೂ ಅವುಗಳ ಪ್ರಚಾರ ಸಾಮಗ್ರಿಗಳನ್ನು ಎಫ್‌ಎಸ್‌ಎಸ್‌ಎಐ ಪರಿಶೀಲಿಸಿದೆ. ಈ ವೇಳೆ ಸಂಸ್ಥೆಯ ‘ನ್ಯಾನ್ ಎಕ್ಸೆಲ್ಲಾ ಪ್ರೋ ಸ್ಟೇಜ್ 1’ (NAN Excella Pro Stage 1) ಉತ್ಪನ್ನಕ್ಕೆ ಸಂಬಂಧಿಸಿದಂತೆ ‘5 HMOs’ ಮತ್ತು ‘ವೇ ಪ್ರೋಟೀನ್’ (Whey Protein) ಹಾಗೂ ‘ಲ್ಯಾಕ್ಟೋಜೆನ್ ಪ್ರೋ 1’ (Lactogen Pro 1) ಉತ್ಪನ್ನದಲ್ಲಿ ‘ವೇ ಪ್ರೋಟೀನ್ ಜೀರ್ಣಿಸಿಕೊಳ್ಳಲು ಸುಲಭ’ ಎಂದು ಪ್ರಚಾರ ಮಾಡಿರುವುದು ನಿಯಮಬಾಹಿರ ಎಂದು ಪ್ರಾಧಿಕಾರ ಆಕ್ಷೇಪಿಸಿದೆ. ಶಿಶು ಆಹಾರಗಳ ಮಾರಾಟ ಹೆಚ್ಚಿಸಲು ಇಂತಹ ಪ್ರಚಾರದ ಕ್ಲೇಮ್‌ಗಳನ್ನು ಮಾಡುವುದನ್ನು ನಿಷೇಧಿಸುವ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಾವಳಿ 2020’ ಹಾಗೂ 1992ರ ‘ಶಿಶು ಹಾಲಿನ ಪರ್ಯಾಯಗಳು ಮತ್ತು ಆಹಾರ ಕಾಯ್ದೆ’ಯ ನಿಯಮಗಳನ್ನು ನೆಸ್ಲೆ ಉಲ್ಲಂಘಿಸಿದೆ ಎಂದು ತಿಳಿಸಲಾಗಿದೆ.

ಜೊತೆಗೆ, ನೆಸ್ಲೆ ಇಂಡಿಯಾ ತಯಾರಿಸಿದ ‘ಫಾಲೋ-ಅಪ್ ಫಾರ್ಮುಲಾ’ ಉತ್ಪನ್ನದ ಮಾದರಿಯನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಿಸಿದಾಗ, ಅದರಲ್ಲಿನ ಬಯೋಟಿನ್ (ವಿಟಮಿನ್ ಬಿ7) ಅಂಶವು ನಿಗದಿತ ಮಾನದಂಡಕ್ಕಿಂತ ಕಳಪೆಯಾಗಿರುವುದು ಪತ್ತೆಯಾಗಿದೆ. ಪುನರ್ ಪರಿಶೀಲನೆಗೆ ಕಳುಹಿಸಿದಾಗಲೂ ರೆಫರಲ್ ಪ್ರಯೋಗಾಲಯವು ಉತ್ಪನ್ನವು ನಿಗದಿತ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ದೃಢಪಡಿಸಿದೆ. ಆಹಾರ ಸುರಕ್ಷತಾ ಕಾಯ್ದೆಯ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‌ಎಸ್‌ಎಸ್‌ಎಐ, ನೆಸ್ಲೆ ಇಂಡಿಯಾದ ಎರಡು ಪ್ರಮುಖ ಘಟಕಗಳ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದೆ.

Related Articles

ಇತ್ತೀಚಿನ ಸುದ್ದಿಗಳು