ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನಸ್ಸು ಮಾಡಿದರೆ ತಮ್ಮ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರೈತರು ಸಾಲ ಮನ್ನಾ ಆಗಬೇಕು ಎಂದು ಕೇಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳುತ್ತಾರೆ. 2028ರ ಚುನಾವಣೆ ದೃಷ್ಟಿಯಿಂದ ಸಾಲ ಮನ್ನಾ ಮಾಡಲು ಹಣ ಹೊಂದಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಡಿ.ಕೆ. ಶಿವಕುಮಾರ್ ಅವರು ಮನಸ್ಸು ಮಾಡಿದರೆ ಸಾಲ ಮನ್ನಾ ಮಾಡಲು ಆರ್ಥಿಕ ಇಲಾಖೆಯ ಅಗತ್ಯವೇ ಇಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
ಬೆಂಗಳೂರು ಸುತ್ತಮುತ್ತಲಿನ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ‘ನೈಸ್’ ಹೆಸರಿನಲ್ಲಿ ನುಂಗಲು ಹೊರಟಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ ಅವರು, ತಮ್ಮ ಬಳಿ ಇರುವ ಹಣವನ್ನು ರೈತರಿಗಾಗಿ ಬಳಸಿದರೆ ಸಾಲ ಮನ್ನಾ ಮಾಡಬಹುದು ಎಂದು ಹೇಳಿದರು. ಕಸ್ತೂರಿ ರಂಗನ್ ವರದಿ: ಎಲ್ಲ ಪಕ್ಷಗಳ ನಿಲುವು ಒಂದೇ
ಕಸ್ತೂರಿ ರಂಗನ್ ವರದಿ ವಿಚಾರವಾಗಿ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯುವುದಾದರೆ ಸ್ವಾಗತ ಎಂದು ಕುಮಾರಸ್ವಾಮಿ ಹೇಳಿದರು. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಹಾಗೂ ಜನರು ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ಕುರಿತು ಹೋರಾಟ ನಡೆಯುತ್ತಿದೆ. ವರದಿ ಜಾರಿಯಾಗಬಾರದು ಎಂಬ ನಿಲುವು ಎಲ್ಲ ಪಕ್ಷಗಳಲ್ಲೂ ಇದೆ. ಈ ವಿಚಾರದಲ್ಲಿ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು ಎಂದು ಅವರು ಕರೆ ನೀಡಿದರು.
