ಕಸ್ತೂರಿ ರಂಗನ್ ವರದಿ ಜಾರಿಗೆ ಮಲೆನಾಡಿಗರ ತೀವ್ರ ವಿರೋಧ ; ಸಿಎಂ ಡಿಕೆ ಶಿವಕುಮಾರ್ ಕಡೆಯಿಂದ ಮಹತ್ವದ ಭರವಸೆ

ಭೂಹಕ್ಕು, ಬಗರ್‌ಹುಕುಂ, ಅರಣ್ಯ ನೋಟಿಸ್‌ಗಳ ಆತಂಕ; ಜನರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ವರದಿ: ಡಿ.ಕೆ. ಶಿವಕುಮಾರ್

ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ಜಾರಿಗೆ ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ವರದಿ ಅನುಷ್ಠಾನಗೊಂಡರೆ ರೈತರ ಭೂಹಕ್ಕು, ಬಗರ್‌ಹುಕುಂ ಸಾಗುವಳಿ, ಮನೆಗಳು ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಯ ಮೇಲೆ ಪರಿಣಾಮ ಬೀರುವ ಆತಂಕವನ್ನು ರೈತ ಮುಖಂಡರು, ಪರಿಸರ ತಜ್ಞರು ಹಾಗೂ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದರು.

ತೀರ್ಥಹಳ್ಳಿಯಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಹಾಗೂ ಮಲೆನಾಡಿನ ಭೂ ಸಮಸ್ಯೆಗಳ ಕುರಿತ ಜನಪ್ರತಿನಿಧಿಗಳು, ರೈತರು ಮತ್ತು ವಿವಿಧ ಸಂಘಟನೆಗಳ ಸಂವಾದ ಸಭೆಯಲ್ಲಿ ಮಲೆನಾಡಿನ ಹಲವು ವರ್ಷಗಳ ಸಮಸ್ಯೆಗಳು ಒಂದೊಂದಾಗಿ ತೆರೆದುಕೊಂಡವು. ಕಸ್ತೂರಿ ರಂಗನ್ ವರದಿಯಷ್ಟೇ ಅಲ್ಲದೆ ಬಗರ್‌ಹುಕುಂ ಸಾಗುವಳಿ, 94ಸಿ ಹಕ್ಕುಪತ್ರ, ಅರಣ್ಯ ಇಲಾಖೆಯ ನೋಟಿಸ್, ಅಡಿಕೆ ಬೆಳೆಗಾರರ ಸಮಸ್ಯೆ, ಶರಾವತಿ ಹಾಗೂ ಇತರ ಜಲಾಶಯಗಳ ನಿರಾಶ್ರಿತರ ಸಮಸ್ಯೆ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಸೇರಿದಂತೆ ಹಲವು ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದವು.

‘ಮಲೆನಾಡಿನಲ್ಲಿ ಇರೋದೇ ಶಾಪದಂತಾಗಿದೆ’
ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಮಲೆನಾಡಿನ ಜನರ ತೀವ್ರ ವಿರೋಧವಿದೆ ಎಂದು ಹೇಳಿದರು.

ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಪರಿಸರ ಸೂಕ್ಷ್ಮ ಪ್ರದೇಶದ ನಿಯಮಗಳು ಬದುಕಿನ ಮೇಲೆ ನಿರ್ಬಂಧ ಹೇರುವ ಆತಂಕ ಸೃಷ್ಟಿಸಿವೆ. “ಮಲೆನಾಡು ಮತ್ತು ಪಶ್ಚಿಮ ಘಟ್ಟದ ಪ್ರದೇಶದಲ್ಲಿ ನಾವು ಇದ್ದೇವೆ ಎಂಬುದೇ ದೊಡ್ಡ ಶಾಪದಂತಾಗಿದೆ” ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಹೇಳಿದರು.

ಪರಿಸರ ಸೂಕ್ಷ್ಮ ಪ್ರದೇಶ ಎಂಬ ಪರಿಕಲ್ಪನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದನ್ನು ವಾಪಸ್ ಪಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸ್ಯಾಟಲೈಟ್ ಮೂಲಕ ವರದಿ ಸಿದ್ಧಪಡಿಸುವುದು ವೈಜ್ಞಾನಿಕವಾಗಿ ಸಮರ್ಪಕ ವಿಧಾನವಲ್ಲ. ಸ್ಥಳೀಯ ವಾಸ್ತವಾಂಶ, ಜನವಸತಿ ಹಾಗೂ ಕೃಷಿ ಚಟುವಟಿಕೆಗಳನ್ನು ಪರಿಗಣಿಸದೆ ಸಿದ್ಧಪಡಿಸಿರುವ ವರದಿಯ ಮೇಲೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಸ್ತೂರಿ ರಂಗನ್ ವರದಿ ಜಾರಿಯಾದರೆ ಆಸ್ತಿಯ ಹಕ್ಕಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಅದರಲ್ಲೂ ಬಗರ್‌ಹುಕುಂ ಸಾಗುವಳಿದಾರರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

“ಮಲೆನಾಡಿನ ಪರಿಸರವನ್ನು ಉಳಿಸುವ ಕಾನೂನು ನಮಗೆ ಬೇಕು. ಆದರೆ ಮಲೆನಾಡಿನ ಜನರ ಬದುಕನ್ನೇ ಕಸಿದುಕೊಳ್ಳುವ ಕಾನೂನು ನಮಗೆ ಬೇಡ” ಎಂಬ ನಿಲುವಿನೊಂದಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

‘ವರದಿಗಳ ಹಿಂದೆ ಬಂಡವಾಳಶಾಹಿಗಳ ಕೈವಾಡ’
ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ ಮಾತನಾಡಿ, ಕಸ್ತೂರಿ ರಂಗನ್ ಮತ್ತು ಮಾಧವ ಗಾಡ್ಗೀಳ್ ವರದಿಗಳ ಹಿಂದೆ ಅಂತರರಾಷ್ಟ್ರೀಯ ಎನ್‌ಜಿಒಗಳ ಪಿತೂರಿ ಇದೆ ಎಂದು ಆರೋಪಿಸಿದರು.

ಈ ವರದಿಗಳ ಹಿಂದಿರುವ ಉದ್ದೇಶ ಮತ್ತು ಹಿತಾಸಕ್ತಿಗಳ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಇದರ ಹಿಂದೆ ಬಂಡವಾಳಶಾಹಿಗಳ ಕೈವಾಡವಿದೆ ಎಂಬ ಅನುಮಾನಗಳಿದ್ದು, ಸೂಕ್ತ ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು ಎಂದು ಆಗ್ರಹಿಸಿದರು.

ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ಮುಕ್ಕಾಲು ಭಾಗ ಖಾಲಿಯಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

“ಇಲ್ಲಿ ಕಾಡನ್ನು ಬೆಳೆಸಿದ್ದು ಅರಣ್ಯ ಇಲಾಖೆ ಮಾತ್ರವಲ್ಲ. ಇಲ್ಲಿನ ರೈತರು ಮತ್ತು ಕೂಲಿ ಕಾರ್ಮಿಕರು ಕೂಡ ತಲೆತಲಾಂತರಗಳಿಂದ ಕಾಡು ಮತ್ತು ಪರಿಸರವನ್ನು ಉಳಿಸಿಕೊಂಡು ಬಂದಿದ್ದಾರೆ” ಎಂದರು.

ಮುಖ್ಯಮಂತ್ರಿಗಳು ಬೆಂಗಳೂರಿನ ಮಟ್ಟದಲ್ಲಿ ಮಾತ್ರವಲ್ಲದೆ ತಳಮಟ್ಟಕ್ಕೆ ಇಳಿದು ಮಲೆನಾಡಿನ ಜನರ ಸಮಸ್ಯೆಗಳನ್ನು ಅರಿತು, ಅವರ ಕೂಗಿಗೆ ದನಿಯಾಗಬೇಕು ಎಂದು ಮನವಿ ಮಾಡಿದರು.

‘ಕರ್ನಾಟಕದ ಸ್ವಿಟ್ಜರ್ಲೆಂಡ್‌ ಬರದ ನಾಡಾಗುತ್ತಿದೆ’
ಪರಿಸರ ತಜ್ಞ ಕಮ್ಮರಡಿ ಪ್ರಕಾಶ್ ಮಾತನಾಡಿ, ಕರ್ನಾಟಕದ ಸ್ವಿಟ್ಜರ್ಲೆಂಡ್ ಎಂದು ಕರೆಯಲಾಗುತ್ತಿದ್ದ ಮಲೆನಾಡಿನ ಪ್ರದೇಶಗಳು ಇಂದು ಬರದ ನಾಡಾಗಿ ಪರಿವರ್ತನೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಒಮ್ಮೆ ವರ್ಷಪೂರ್ತಿ ಮಳೆ ಪಡೆಯುತ್ತಿದ್ದ ಆಗುಂಬೆಯಂತಹ ಪ್ರದೇಶಗಳಲ್ಲಿಯೂ ಇಂದು ಬರದ ಬೇಗೆ ಕಾಣಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಲೆನಾಡಿನ ಜನರ ಬದುಕು ಎರಡನ್ನೂ ಸಮತೋಲನದಲ್ಲಿ ಕಾಪಾಡುವ ಅಗತ್ಯವಿದೆ ಎಂದು ಹೇಳಿದರು.

ಪಶ್ಚಿಮ ಘಟ್ಟ ವ್ಯಾಪ್ತಿಗೆ ಒಳಪಡುವ ಆರು ರಾಜ್ಯಗಳ ಪರಿಸರ ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡು ಸಮಗ್ರ ಚರ್ಚೆ ನಡೆಸಿದ ಬಳಿಕವೇ ಯಾವುದೇ ವರದಿ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.

ಕಸ್ತೂರಿ ರಂಗನ್ ವರದಿಯಿಂದ ರೈತರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸುವ ಆತಂಕವಿದೆ. ಕೇಂದ್ರ ಸರ್ಕಾರ ಇಂತಹ ಕಾನೂನುಗಳನ್ನು ರೂಪಿಸುವ ಸಂದರ್ಭದಲ್ಲಿ ಮಲೆನಾಡಿನ ಜನರ ಬದುಕನ್ನು ಪರಿಗಣಿಸಬೇಕು. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.

‘ಭರವಸೆ ನೀಡಿದ್ದೀರಿ, ಈಗ ಈಡೇರಿಸುವ ಕಾಲ’
ಸಮಾಜವಾದಿ ಮುಖಂಡ ಬಿ.ಆರ್. ಜಯಂತ್ ಮಾತನಾಡಿ, ಮಲೆನಾಡಿನ ಸಮಸ್ಯೆಗಳು ಹತ್ತಾರು ಇದ್ದು, ಕಸ್ತೂರಿ ರಂಗನ್ ವರದಿ ಅವುಗಳ ಪೈಕಿ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ ಎಂದರು.

“ಸರ್ಕಾರ ಬಂದರೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದೀರಿ. ಈಗ ಆ ಭರವಸೆ ಈಡೇರಿಸುವ ಕಾಲ ಬಂದಿದೆ. ಅದಕ್ಕಾಗಿ ನೀವು ಸೂಕ್ತ ಸ್ಥಳಕ್ಕೆ ಬಂದಿದ್ದೀರಿ. ನಿಮ್ಮ ಬಗ್ಗೆ ನಮಗೆ ವಿಶ್ವಾಸವಿದೆ” ಎಂದು ಹೇಳಿದರು.

ಮುಖ್ಯಮಂತ್ರಿಗಳ ಕಡೆಯಿಂದ ಮಲೆನಾಡಿನ ಜನರ ಬೇಡಿಕೆಗಳು ಎರಡು ದಿನದೊಳಗೆ ದೆಹಲಿಗೆ ತಲುಪಬೇಕು. ಕೇಂದ್ರ ಸರ್ಕಾರದ ಮುಂದೆ ಮಲೆನಾಡಿನ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ಮಂಡಿಸಬೇಕು ಎಂದು ಒತ್ತಾಯಿಸಿದರು.

ಸಾಗರ ತಾಲ್ಲೂಕಿನಲ್ಲಿಯೇ ಇಂದಿಗೂ ವಿದ್ಯುತ್ ಸಂಪರ್ಕ ತಲುಪದ ಮನೆಗಳು ಹಾಗೂ ಗ್ರಾಮಗಳಿವೆ. ಜನವಿರೋಧಿ ಕಾಯ್ದೆ ಮತ್ತು ಕಾನೂನುಗಳ ಕಾರಣದಿಂದ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಮಲೆನಾಡಿನಲ್ಲಿ ವಿವಿಧ ಇಲಾಖೆಗಳ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿದ್ದು, ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

‘ಪಕ್ಷಾತೀತವಾಗಿ ಕೇಂದ್ರದೊಂದಿಗೆ ಹೋರಾಡೋಣ’
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಮಲೆನಾಡಿನ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ ತೀರ್ಥಹಳ್ಳಿಗೆ ಆಗಮಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿದರು.

ಕಸ್ತೂರಿ ರಂಗನ್ ಹಾಗೂ ಮಾಧವ ಗಾಡ್ಗೀಳ್ ವರದಿಗಳ ಹಿನ್ನೆಲೆಯನ್ನು ವಿವರಿಸಿದ ಅವರು, ಪರಿಸರವಾದಿಗಳ ತಂಡವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೇರಿದಂತೆ ವಿವಿಧ ಹಂತಗಳಲ್ಲಿ ಮನವಿ ಸಲ್ಲಿಸಿ ವರದಿ ಸಿದ್ಧಪಡಿಸುವಂತೆ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿತ್ತು ಎಂದು ಹೇಳಿದರು.

ಅದಾದ ಬಳಿಕ ಕಸ್ತೂರಿ ರಂಗನ್ ವರದಿ ರಚನೆಯಾಯಿತು. ಈ ಎರಡೂ ವರದಿಗಳು ಯುಪಿಎ ಸರ್ಕಾರದ ಅವಧಿಯಲ್ಲಿ ರೂಪುಗೊಂಡವು ಎಂದು ಅವರು ತಿಳಿಸಿದರು.

ಆದರೆ ಪ್ರಸ್ತುತ ಕೇಂದ್ರ ಸರ್ಕಾರದ ಅವಧಿಯಲ್ಲೂ ವರದಿ ಜಾರಿಗೆ ಮಲೆನಾಡಿನ ಜನರಿಂದ ವಿರೋಧವಿದೆ. ಮಲೆನಾಡಿಗೆ ದ್ರೋಹ ಮಾಡುವ ಕೆಲಸವನ್ನು ಯಾವುದೇ ಸರ್ಕಾರ ಮಾಡಿಲ್ಲ; ಮುಂದೆಯೂ ಮಾಡಬಾರದು ಎಂಬ ನಿಲುವು ತಮ್ಮದಾಗಿದೆ ಎಂದು ಹೇಳಿದರು.

ಕೇಂದ್ರಕ್ಕೆ ಈಗಾಗಲೇ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಮುಂದಿನ ಹಂತದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು ಎಂದರು.

“ಕಸ್ತೂರಿ ರಂಗನ್ ವರದಿಗೆ ನಮ್ಮ ತೀವ್ರ ವಿರೋಧವಿದೆ. ಸರ್ಕಾರಕ್ಕಿಂತ ರೈತರು ಉತ್ತಮವಾಗಿ ಕಾಡು ಮತ್ತು ಪರಿಸರವನ್ನು ಉಳಿಸಿಕೊಂಡು ಬಂದಿದ್ದಾರೆ. ವರದಿ ವಿರೋಧದ ವಿಚಾರದಲ್ಲಿ ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ಮಾಡೋಣ” ಎಂದು ಕರೆ ನೀಡಿದರು.

‘ಹೊಸದಾಗಿ ಸರ್ವೇ ನಡೆಸಬೇಕು’
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗೋವಾ ಫೌಂಡೇಶನ್ ಒತ್ತಾಯ ಸೇರಿದಂತೆ ವಿವಿಧ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಿವೆ ಎಂದು ಹೇಳಿದರು.

ಸೆಪ್ಟೆಂಬರ್ 21ರಿಂದ 23ರವರೆಗೆ ನಡೆಯಲಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ತಿಳಿಸಿದರು. ಕಸ್ತೂರಿ ರಂಗನ್ ವರದಿಯಲ್ಲಿರುವ ಲೋಪಗಳ ಕುರಿತು ಈಗಾಗಲೇ ಮಾತನಾಡಿದ್ದೇನೆ. ವರದಿಯ ಆಧಾರದ ಮೇಲೆ ಹೊಸದಾಗಿ ಸರ್ವೇ ನಡೆಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು. ಸಾವಿರಾರು ಜನವಸತಿ ಪ್ರದೇಶಗಳನ್ನು ಒಕ್ಕಲೆಬ್ಬಿಸುವಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

“1935ರಲ್ಲಿ ಹಕ್ಕುಪತ್ರ ನೀಡಿರುವ ಜಾಗಗಳಿಗೂ ಇಂದು ನೋಟಿಸ್ ಜಾರಿ ಮಾಡುವ ವ್ಯವಸ್ಥೆ ಸೃಷ್ಟಿಯಾಗಿದೆ. ಇದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಮಲೆನಾಡಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಮನ್ವಯ ಅಗತ್ಯವಾಗಿದೆ ಎಂದರು.

ಇದೇ ವೇಳೆ ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದ ಕಾನೂನು ಹಿಂಪಡೆಯಬೇಕು, ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು. ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.70ರಷ್ಟಿದೆ ಎಂದು ಉಲ್ಲೇಖಿಸಿದ ಅವರು, ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಬೇಕು. ತೀರ್ಥಹಳ್ಳಿಯ ಕಲುಷಿತ ನೀರು ತುಂಗಾ ನದಿಗೆ ಸೇರುವುದನ್ನು ತಡೆಯಬೇಕು ಎಂದು ಮುಖ್ಯಮಂತ್ರಿ ಗಮನಕ್ಕೆ ತಂದರು.

“ಕಸ್ತೂರಿ ರಂಗನ್ ವರದಿ ಎಂಬ ದುಃಸ್ವಪ್ನ ಮಲೆನಾಡಿನಿಂದ ಮರೆಯಾಗಬೇಕು” ಎಂದು ಅವರು ಹೇಳಿದರು.

‘ಅರಣ್ಯ ಇಲಾಖೆ ಹೆಣ ಸುಡಲೂ ಬಿಡುವುದಿಲ್ಲ’
ಮಲೆನಾಡಿನ ಭೂ ಸಮಸ್ಯೆಗಳ ಕುರಿತು ಮಾತನಾಡಿದ MADB ಅಧ್ಯಕ್ಷ ಮಂಜುನಾಥ್ ಗೌಡ, ಅರಣ್ಯ ಇಲಾಖೆಯ ನಿಯಮಗಳಿಂದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳ ತೀವ್ರತೆಯನ್ನು ವಿವರಿಸಿದರು.

“ಇಲ್ಲಿ ಹೆಣ ಸುಡಲೂ ಅರಣ್ಯ ಇಲಾಖೆ ಬಿಡುವುದಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಡಿಕೆ ನಿಷೇಧದ ಕುರಿತ ಆತಂಕಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಮಲೆನಾಡಿನಲ್ಲಿ ಖಾತೆದಾರರಿಗಿಂತ ಸುಮಾರು ಮೂರು ಪಟ್ಟು ಬಗರ್‌ಹುಕುಂ ಸಾಗುವಳಿದಾರರಿದ್ದಾರೆ. ಅವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶರಾವತಿ, ಮಾಣಿ, ಚಕ್ರಾ ಹಾಗೂ ಸಾವೇಹಕ್ಲು ಜಲಾಶಯ ಯೋಜನೆಗಳ ನಿರಾಶ್ರಿತರಿಗೂ ಇನ್ನೂ ನ್ಯಾಯ ದೊರೆತಿಲ್ಲ. ಅವರ ಸಮಸ್ಯೆಗಳಿಗೂ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

‘ಹೊಸ ನೋಟಿಸ್ ನೀಡಬಾರದು’: ಸಿಎಂ ಸೂಚನೆ
ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಲೆನಾಡಿನಲ್ಲಿ ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಹೊಸದಾಗಿ ಅರಣ್ಯ ಇಲಾಖೆಯಿಂದ ನೋಟಿಸ್ ನೀಡಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ತಲೆತಲಾಂತರಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದಿರುವ ಜಮೀನುಗಳು ಹಾಗೂ ಅಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಹೇಳಿದರು. ಸಭೆಯಲ್ಲಿದ್ದ ಅರಣ್ಯ ಸಚಿವರು ಹಾಗೂ ಹಿರಿಯ ಅರಣ್ಯಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದರು.

ಆದರೆ ರೈತರು ಕೂಡ ಹೊಸದಾಗಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಬಾರದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

“ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಲು ನಾನು ಬಂದಿಲ್ಲ. ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಂದಿದ್ದೇನೆ. ರೈತರ ಸಮಸ್ಯೆಗಳನ್ನು ಆಲಿಸಿ ಅವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಸರ್ಕಾರವೇ ಜನರ ಬಳಿಗೆ ಬಂದಿದೆ” ಎಂದು ಅವರು ಹೇಳಿದರು.

ರೈತರ ಅಭಿಪ್ರಾಯ ಪಡೆದು ಕೇಂದ್ರಕ್ಕೆ ವರದಿ
ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರ ರಾಜ್ಯದ ಅಭಿಪ್ರಾಯ ಕೇಳಿರುವ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷಗಳ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮಗ್ರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆದೇಶ ಹೊರಡಿಸುವುದರಿಂದ ಮಾತ್ರ ಮಲೆನಾಡಿನ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ. ಸ್ಥಳೀಯ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಬೇಕಿದೆ ಎಂದು ಹೇಳಿದರು.

ಬಗರ್‌ಹುಕುಂ ಅರ್ಜಿಗಳು, 94ಸಿ ಹಕ್ಕುಪತ್ರ ವಿತರಣೆ ಹಾಗೂ ಪರಿಸರ ಸೂಕ್ಷ್ಮ ವಲಯದ ನಿಯಮಗಳಿಂದ ಎದುರಾಗಿರುವ ಸಮಸ್ಯೆಗಳ ಕುರಿತು ಶಾಸಕರ ಸಮಿತಿ ಸಭೆ ನಡೆಸಲಾಗುವುದು. ಅಗತ್ಯವಿದ್ದಲ್ಲಿ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಕಾನೂನಿನ ಚೌಕಟ್ಟಿನಲ್ಲಿ ರೈತರಿಗೆ ರಕ್ಷಣೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಡಿಕೆ ಸಮಸ್ಯೆ ದೆಹಲಿಗೆ
ಅಡಿಕೆ ಆಮದು, ತೆರಿಗೆ ಹಾಗೂ ಮಾರುಕಟ್ಟೆ ದರಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಸಭೆಯಲ್ಲಿ ಚರ್ಚೆಗೆ ಬಂದವು.

ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಗಮನಕ್ಕೆ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ತರುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ರೈತರಿಗೆ ‘ತೇಗದ ಸಿರಿ’
ರೈತರ ಜಮೀನುಗಳಿಗೆ ಹೊಂದಿಕೊಂಡಿರುವ ಸರ್ಕಾರಿ ರಸ್ತೆ ಬದಿಗಳಲ್ಲಿ ತೇಗದ ಸಸಿಗಳನ್ನು ನೆಡುವ ‘ತೇಗದ ಸಿರಿ’ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು.

ಅರಣ್ಯ ಇಲಾಖೆ ರೈತರಿಗೆ ಉಚಿತವಾಗಿ ತೇಗದ ಸಸಿಗಳನ್ನು ಒದಗಿಸಲಿದೆ. ಸಸಿಗಳ ಸಂರಕ್ಷಣೆಯ ಜವಾಬ್ದಾರಿ ರೈತರದ್ದಾಗಿರಲಿದೆ. ಸುಮಾರು 20ರಿಂದ 25 ವರ್ಷಗಳ ಬಳಿಕ ಮರಗಳು ಕಟಾವಿಗೆ ಬಂದಾಗ ದೊರೆಯುವ ಆದಾಯದಲ್ಲಿ ಶೇ.70ರಷ್ಟು ರೈತರಿಗೆ ಹಾಗೂ ಶೇ.30ರಷ್ಟು ಸರ್ಕಾರಕ್ಕೆ ನೀಡುವ ರೀತಿಯಲ್ಲಿ ಅಧಿಕೃತ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಲೆನಾಡಿಗೂ ಪ್ರವಾಸೋದ್ಯಮ ನೀತಿಯ ಪ್ರಯೋಜನ
ಕರಾವಳಿ ಪ್ರದೇಶಗಳ ಜತೆಗೆ ಮಲೆನಾಡು ಮತ್ತು ಕಾಫಿನಾಡು ಪ್ರದೇಶಗಳನ್ನೂ ಹೊಸ ಪ್ರವಾಸೋದ್ಯಮ ನೀತಿಯ ವ್ಯಾಪ್ತಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪರಿಸರ ಸಂರಕ್ಷಣೆಯೊಂದಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ, ಸ್ಥಳೀಯರಿಗೆ ಉದ್ಯೋಗ ಹಾಗೂ ಹೂಡಿಕೆಯ ಅವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಸಾರ್ವಜನಿಕರ ಅಹವಾಲುಗಳಿಗೆ ವ್ಯವಸ್ಥಿತ ಪರಿಹಾರ ಒದಗಿಸಲು ‘ಪ್ರಜಾಸೇವಾ ಇಲಾಖೆ’ ಆರಂಭಿಸಲಾಗಿದ್ದು, ಸಚಿವರು ಪ್ರತಿ ತಿಂಗಳು ಎರಡು ದಿನ ತಾಲೂಕು ಮತ್ತು ಹೋಬಳಿ ಮಟ್ಟಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸೂಚಿಸಿದರು. ಸ್ವೀಕರಿಸುವ ಪ್ರತಿಯೊಂದು ಅರ್ಜಿಯನ್ನು ಗಣಕೀಕರಿಸಿ, ಅದರ ಪರಿಹಾರದ ಪ್ರಗತಿಯನ್ನು ದಾಖಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ರೈತ ಮುಖಂಡರು, ಪರಿಸರ ತಜ್ಞರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು