ಪ್ರಧಾನಿ ಮೋದಿ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಗೈರಾದ ವಿದ್ಯಾರ್ಥಿಗಳಿಗೆ ₹500 ದಂಡ ವಿಧಿಸಿದ ಐಐಎಂ ಜಮ್ಮು ಆಡಳಿತ

ಶ್ರೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಗೈರುಹಾಜರಾದ ಕಾರಣಕ್ಕೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)-ಜಮ್ಮು ಹಲವು ವಿದ್ಯಾರ್ಥಿಗಳಿಗೆ ದಂಡ ವಿಧಿಸಿದೆ. ಈ ವಿಷಯವನ್ನು ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಸೈಯದ್ ನಾಸಿರ್ ಹುಸೇನ್ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.

ಮೋದಿ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಹಾಜರಾಗದ ವಿದ್ಯಾರ್ಥಿಗಳು ಲಿಖಿತ ವಿವರಣೆ ನೀಡಬೇಕು, ಇಲ್ಲವೇ ₹500 ದಂಡ ಪಾವತಿಸಬೇಕು ಎಂದು ಐಐಎಂ ಜಮ್ಮು ವಿದ್ಯಾರ್ಥಿ ಮಂಡಳಿಯು ನೋಟಿಸ್ ಜಾರಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಶುಕ್ರವಾರದ ಗಡುವು ವಿಧಿಸಿ ನೀಡಲಾದ ನೋಟಿಸ್ ಪ್ರತಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಸಲಿಗೆ ಪ್ರಧಾನಿಯವರ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಏಕೆ ಹಾಜರಾಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ. “ಇದು ಐಐಎಂನಲ್ಲಿ ಏರ್ಪಡಿಸಲಾದ ಶೈಕ್ಷಣಿಕ ಜವಾಬ್ದಾರಿಯೇ? ಅಥವಾ ಕ್ಯಾಂಪಸ್‌ನಲ್ಲಿ ಮೋದಿಯವರ ಪ್ರಚಾರ ನಡೆಸುವುದು ಕಡ್ಡಾಯ ಕಾರ್ಯಕ್ರಮವೇ? ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಆಲೋಚನೆಗಳನ್ನು ಬೆಳೆಸಬೇಕೇ ಹೊರತು, ಅವರನ್ನು ರಾಜಕೀಯ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಆದೇಶಿಸುವುದು ಹಾಗೂ ಇಲ್ಲದಿದ್ದರೆ ದಂಡ ವಿಧಿಸುವುದಾಗಿ ಬೆದರಿಸುವುದು ಸರಿಯಲ್ಲ. ಬಿಜೆಪಿಯ ಪ್ರಚಾರದ ಕಸರತ್ತುಗಳನ್ನು ನಮ್ಮ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ದೂರವಿಡಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ವಿವರಣೆ ನೀಡಿರುವ ಐಐಎಂ ಜಮ್ಮು ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಅಧ್ಯಕ್ಷ ಬ್ರಿಗೇಡಿಯರ್ ನೀರಜ್ ಸೋನಿ, ಯಾವುದೇ ವಿದ್ಯಾರ್ಥಿಗೂ ದಂಡ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಅನುಸರಿಸುವಂತೆಯೇ ಇದು ಕೂಡ ಶಿಸ್ತು ಪಾಲನೆಗಾಗಿ ಕೈಗೊಳ್ಳಲಾದ ಸಾಮಾನ್ಯ ಕ್ರಮವಷ್ಟೇ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು