‘ನಾನು ಈ ದೇಶದ ಪ್ರಜೆಯಲ್ಲವೇ?’: ಚುನಾವಣಾ ಆಯೋಗದ ‘ಎಸ್‌ಐಆರ್’ ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಎಂದ ಕಪಿಲ್ ಸಿಬಲ್

ದೆಹಲಿ: ಚುನಾವಣಾ ಆಯೋಗವು ಪ್ರಸ್ತುತ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್ – Special Intensive Revision) ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಎಂದು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಗಂಭೀರ ಆರೋಪ ಮಾಡಿದ್ದಾರೆ.

‘ಎಸ್‌ಐಆರ್’ ಪ್ರಕ್ರಿಯೆಯಲ್ಲಿ ತಮಗೆ ನೋಟಿಸ್ ಜಾರಿಯಾಗಿರುವುದನ್ನು ಪ್ರಶ್ನಿಸಿರುವ ಅವರು, “ನಾನು ನೋಂದಾಯಿತ ಮತದಾರನಾಗಿದ್ದು, ಸಂಸದನಾಗಿದ್ದರೂ ನನ್ನ ಪೌರತ್ವದ ಬಗ್ಗೆ ಅನುಮಾನವಿರುವ ವ್ಯಕ್ತಿ ಎಂದು ಹೇಗೆ ಪರಿಗಣಿಸಲಾಯಿತು?” ಎಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು.

ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ತಮ್ಮ ಮತ ಪಾಟ್ನಾದಲ್ಲಿತ್ತು ಎಂದರು. 2004ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ತಮ್ಮ ಹೆಸರು ಅಲ್ಲಿನ ಮತದಾರರ ಪಟ್ಟಿಯಲ್ಲಿತ್ತು ಎಂದು ತಿಳಿಸಿದರು. ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಬಂದಾಗ ಅಗತ್ಯವಿರುವ ಎಲ್ಲಾ ವಿವರಗಳನ್ನು ಒದಗಿಸಲಾಗಿತ್ತು. ನಮೂನೆಯಲ್ಲಿ ತಮ್ಮ ಭಾವಚಿತ್ರದೊಂದಿಗೆ ಬಿಎಲ್‌ಒ ಸಹಿಯೂ ಇತ್ತು. ಚುನಾವಣಾ ಅಧಿಕಾರಿಗಳ ಬಳಿ ತಮ್ಮ ಫೋನ್ ನಂಬರ್ ಇರುವಾಗ ನೇರವಾಗಿ ಸಂಪರ್ಕಿಸಬಹುದಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿಯ ಸುಮಾರು 1.45 ಕೋಟಿ ಮತದಾರರಲ್ಲಿ ಬರೋಬ್ಬರಿ 63 ಲಕ್ಷ ಜನರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಮತ್ತು ಸುಮಾರು 32 ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಆರೋಪಿಸಿದರು. 13.40 ಲಕ್ಷ ಜನರು ‘ಹಿಂದಿನ ಎಸ್‌ಐಆರ್‌ನೊಂದಿಗೆ ಮ್ಯಾಪ್ ಆಗಿಲ್ಲ’ ಎಂಬ ವರ್ಗದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ತಂದೆ-ತಾಯಿಯ ಹೆಸರಿನಲ್ಲಿನ ವ್ಯತ್ಯಾಸ ಶೇ. 23 ರಷ್ಟು ಮತ್ತು ವಯಸ್ಸಿನ ವ್ಯತ್ಯಾಸ ಶೇ. 6 ರಷ್ಟು ಪ್ರಕರಣಗಳಿಗೆ ಕಾರಣವೆಂದು ತೋರಿಸಲಾಗಿದೆ ಎಂದು ಅವರು ವಿವರಿಸಿದರು.

ಚುನಾವಣಾ ಆಯೋಗವು ತನ್ನ ಸಮಸ್ಯೆಯನ್ನು ಸರಿಪಡಿಸಬಹುದೇನೋ ಎಂದ ಸಿಬಲ್, “ಆದರೆ ಈ ಬಾರಿ ನಾನು ಮತ ಚಲಾಯಿಸುವುದಿಲ್ಲ. ಚುನಾವಣಾ ಆಯೋಗವು ತನ್ನನ್ನು ಈ ದೇಶದ ಪ್ರಜೆಯೆಂದು ಪರಿಗಣಿಸುತ್ತಿಲ್ಲ ಎಂಬುದು ಜನರಿಗೆ ತಿಳಿಯಬೇಕು” ಎಂದು ಆಕ್ರೋಶ ಹೊರಹಾಕಿದರು.

Related Articles

ಇತ್ತೀಚಿನ ಸುದ್ದಿಗಳು