ಬೆಂಗಳೂರಿನಲ್ಲಿ ಮಧ್ಯಪ್ರದೇಶ ಮೂಲದವರಿಂದ ಅಕ್ರಮ ಪಿಸ್ತೂಲ್ ಜಾಲ ; ರೈಲಿನಲ್ಲಿ ಗನ್ ಪೂರೈಕೆ, ಏಳು ಮಂದಿ ಬಂಧನ

ಬೆಂಗಳೂರು: ನಗರದ ಹೊರವಲಯದ ಆನೇಕಲ್‌ನಲ್ಲಿ ಅಕ್ರಮವಾಗಿ ಕಂಟ್ರಿ ಮೇಡ್ ಪಿಸ್ತೂಲ್‌ಗಳ ಖರೀದಿ–ಮಾರಾಟ ನಡೆಸುತ್ತಿದ್ದ ಜಾಲವನ್ನು ಭೇದಿಸಿರುವುದಾಗಿ ಆನೇಕಲ್ ಉಪವಿಭಾಗದ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ ವ್ಯಕ್ತಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದ್ದು, ಐದು ಕಂಟ್ರಿ ಮೇಡ್ ಪಿಸ್ತೂಲ್‌ಗಳು ಹಾಗೂ ಹತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಮಧ್ಯಪ್ರದೇಶ ಮೂಲದ ಪ್ರದೀಪ್ ರಮೇಶ್ ಮೇಶ್ ರಾಮ್ (30), ಬೆಂಗಳೂರಿನ ಕೆ.ಜಿ. ನಗರ ನಿವಾಸಿ ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್ (36) ಹಾಗೂ ಆನೇಕಲ್ ಸಮೀಪದ ಗೆರಟಿಗನಬೆಲೆ ನಿವಾಸಿಗಳಾದ ಮನೋಜ್ (28), ವೆಂಕಟರಾಜ (26), ಶಿವರಾಜ (30), ಗೋಪಿ (28) ಮತ್ತು ನಂಜಪ್ಪ (30) ಎಂದು ಗುರುತಿಸಲಾಗಿದೆ.

ರೈಲ್ವೆ ಗೇಟ್ ಬಳಿ ಸಿಕ್ಕಿಬಿದ್ದ ಶಂಕಿತ
ಪೊಲೀಸರ ಪ್ರಕಾರ, ಕಳೆದ ತಿಂಗಳು 14ರಂದು ಆನೇಕಲ್ ಸಮೀಪದ ಹಾಲ್ದೇನಹಳ್ಳಿ ರೈಲ್ವೆ ಗೇಟ್ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ತಡೆದು ಪರಿಶೀಲನೆ ನಡೆಸಿದ್ದರು.

ಈ ವೇಳೆ ಆತನ ಬಳಿಯಿಂದ ಮೂರು ಕಂಟ್ರಿ ಮೇಡ್ ಪಿಸ್ತೂಲ್‌ಗಳು ಹಾಗೂ ಹತ್ತು ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಶಸ್ತ್ರಾಸ್ತ್ರಗಳ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಅಕ್ರಮ ಪಿಸ್ತೂಲ್‌ಗಳ ಪೂರೈಕೆ ಮತ್ತು ಮಾರಾಟದ ಜಾಲದ ಕುರಿತು ಮಾಹಿತಿ ದೊರೆತಿದೆ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶದಿಂದ ರೈಲಿನಲ್ಲಿ ಶಸ್ತ್ರಾಸ್ತ್ರ
ತನಿಖೆಯಲ್ಲಿ ಮಧ್ಯಪ್ರದೇಶದ ಬೇಡಘಾಟ್ ಗ್ರಾಮದ ದಾವೂದ್ ಎಂಬಾತ ಈ ಜಾಲದ ಪ್ರಮುಖ ಸಂಪರ್ಕ ವ್ಯಕ್ತಿ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ದಾವೂದ್‌ನ ಸೂಚನೆಯಂತೆ ಪ್ರದೀಪ್ ರಮೇಶ್ ಮಧ್ಯಪ್ರದೇಶದಿಂದ ರೈಲಿನ ಮೂಲಕ ಕಂಟ್ರಿ ಮೇಡ್ ಪಿಸ್ತೂಲ್‌ಗಳನ್ನು ಆನೇಕಲ್‌ಗೆ ತರುತ್ತಿದ್ದ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಲ್ದೇನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಪಿಸ್ತೂಲ್‌ಗಳ ಡೆಲಿವರಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ಇಬ್ಬರು ಗ್ರಾಹಕರಿಗೂ ತಲುಪಿದ್ದ ಗನ್
ವಿಚಾರಣೆ ಮುಂದುವರಿಸಿದಾಗ ಬಂಧಿತ ಪ್ರದೀಪ್ ಈಗಾಗಲೇ ಎರಡು ಪಿಸ್ತೂಲ್‌ಗಳನ್ನು ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ ಎನ್ನಲಾಗಿದೆ.

ಈ ಪಿಸ್ತೂಲ್‌ಗಳನ್ನು ಬೆಂಗಳೂರಿನ ಕೆ.ಜಿ. ಹಳ್ಳಿಯ ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್ ಹಾಗೂ ಗೆರಟಿಗನಬೆಲೆಯ ಮನೋಜ್ ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಇಬ್ಬರನ್ನೂ ಬಂಧಿಸಿ, ಅವರ ಬಳಿಯಿದ್ದ ಅಕ್ರಮ ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದರೊಂದಿಗೆ ಪ್ರಕರಣದಲ್ಲಿ ಜಪ್ತಿಯಾದ ಕಂಟ್ರಿ ಮೇಡ್ ಪಿಸ್ತೂಲ್‌ಗಳ ಸಂಖ್ಯೆ ಐದಕ್ಕೆ ಏರಿದ್ದು, ಹತ್ತು ಜೀವಂತ ಗುಂಡುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋಕಾ ಕಾಯ್ದೆಯಡಿ ಪ್ರಕರಣ
ಆನೇಕಲ್ ಉಪವಿಭಾಗದ ಡಿವೈಎಸ್ಪಿ ಗೋಪಾಲ್ ನಾಯಕ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಬಂಧಿತ ಏಳು ಮಂದಿಯ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KOCA) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಶಸ್ತ್ರಾಸ್ತ್ರ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದ್ದು, ಆರೋಪಿಗಳೊಂದಿಗೆ ಸಂಪರ್ಕ ಹೊಂದಿರುವ ಹತ್ತಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು