ಬಿಹಾರ: ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯದ ವಿಡಿಯೋ ವೈರಲ್; 120 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಜಮುಯಿ ಪೊಲೀಸರು

ಜಮುಯಿ (ಬಿಹಾರ): ಬಿಹಾರದ ಜಮುಯಿ ಜಿಲ್ಲೆಯಲ್ಲಿ ಬಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ ಅಪ್ರಾಪ್ತ ಬಾಲಕಿಯ ಮೇಲೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿ ವಿಡಿಯೋ ವೈರಲ್ ಮಾಡಿದ 120 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಮುಯಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಶ್ವಜೀತ್ ದಯಾಳ್, ಸಮಾಜಘಾತುಕ ಶಕ್ತಿಗಳು ನಡೆಸಿದ ಈ ಅಮಾನವೀಯ ಕೃತ್ಯದ ಕುರಿತು ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದ್ದು, ತಂಡವು ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದೆ. ವೈರಲ್ ವಿಡಿಯೋ ಆಧರಿಸಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದ್ದು, ಕೃತ್ಯದಲ್ಲಿ ಭಾಗಿಯಾದ ಉಳಿದ ಇಬ್ಬರನ್ನು ಗುರುತಿಸಲಾಗಿದೆ. ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಮುಖ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಸಂತ್ರಸ್ತ ಬಾಲಕಿಯ ಖಾಸಗಿತನಕ್ಕೆ ಧಕ್ಕೆ ತಂದು ಆಕೆಯ ಗುರುತು ಬಹಿರಂಗವಾಗುವಂತೆ ವಿಡಿಯೋವನ್ನು ಹಂಚಿಕೊಳ್ಳುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ತ ಅಪ್ರಾಪ್ತೆಯ ಗುರುತನ್ನು ರಕ್ಷಿಸುವುದು ಕಡ್ಡಾಯವಾಗಿದ್ದು, ವಿಡಿಯೋ ವೈರಲ್ ಮಾಡುವುದು ಪೋಕ್ಸೋ ಕಾಯ್ದೆಯ ಸೆಕ್ಷನ್ 23(4), ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಹಾಗೂ ಬಾಲನ್ಯಾಯ (ಜೆಜೆ) ಕಾಯ್ದೆಯ ಸೆಕ್ಷನ್ 74 ರ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ ಎಂದು ಎಸ್ಪಿ ಎಚ್ಚರಿಸಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 45/26 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಡಿಯೋ ಹಂಚಿಕೊಂಡ ವಿವಿಧ ಸಾಮಾಜಿಕ ಜಾಲತಾಣಗಳ 120 ಪ್ರೊಫೈಲ್ ಬಳಕೆದಾರರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಯಾರೂ ಇಂತಹ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿಕೊಳ್ಳಬಾರದು ಹಾಗೂ ಸಂತ್ರಸ್ತೆಯ ಖಾಸಗಿತನವನ್ನು ಗೌರವಿಸಬೇಕು ಎಂದು ಮನವಿ ಮಾಡಿದ ಎಸ್ಪಿ, ಕಾನೂನು ಕ್ರಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಪೊಲೀಸರು ಆರಂಭದಲ್ಲೇ ತ್ವರಿತ ಕ್ರಮ ಕೈಗೊಳ್ಳದ ಕಾರಣ ವಿಡಿಯೋ ವೈರಲ್ ಆಗಿದೆ, ಮೊದಲೇ ಎಚ್ಚರಿಕೆ ನೀಡದೆ ಏಕಾಏಕಿ ನೂರಕ್ಕೂ ಹೆಚ್ಚು ಖಾತೆಗಳ ಮೇಲೆ ಎಫ್‌ಐಆರ್ ದಾಖಲಿಸುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು