ಬೆಂಗಳೂರು ಪೂರ್ವ ವಿಭಾಗದಲ್ಲಿ ಪೊಲೀಸರ ತಡ ರಾತ್ರಿ ಕಾರ್ಯಾಚರಣೆ: 60 ಬೈಕ್‌ಗಳ ಜಪ್ತಿ, 340ಕ್ಕೂ ಹೆಚ್ಚು ಜನರ ವಿರುದ್ಧ ಕೇಸ್

ಬೆಂಗಳೂರು: ಅಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೂರ್ವ ವಿಭಾಗದ ಪೊಲೀಸರು ರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ 9:00 ರಿಂದ 11:30 ರವರೆಗೆ ಕೇವಲ ಎರಡೂವರೆ ಗಂಟೆಗಳ ಕಾಲ ಏಕಕಾಲಕ್ಕೆ ನಡೆದ ಈ ವಿಶೇಷ ತಪಾಸಣೆಯಲ್ಲಿ ಬರೋಬ್ಬರಿ 60 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 340ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ನಡೆದ ಈ ಹೈ-ಅಲರ್ಟ್ ಕಾರ್ಯಾಚರಣೆಯಲ್ಲಿ 365 ಪೊಲೀಸ್ ಸಿಬ್ಬಂದಿಯನ್ನೊಳಗೊಂಡ 62 ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿತ್ತು. ವಾಹನ ಸವಾರರ ಪರಿಶೀಲನೆ ಹಾಗೂ ಅಪರಾಧ ಕೃತ್ಯಗಳ ನಿಯಂತ್ರಣಕ್ಕಾಗಿ ವಿಭಾಗದ ಪ್ರಮುಖ ರಸ್ತೆಗಳು ಹಾಗೂ ಸೂಕ್ಷ್ಮ ಜಂಕ್ಷನ್‌ಗಳು ಸೇರಿದಂತೆ 35 ಆಯಕಟ್ಟಿನ ಸ್ಥಳಗಳಲ್ಲಿ ಏಕಕಾಲಕ್ಕೆ ನಾಕಾಬಂದಿ ಹಾಕಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು.

ಈ ಕಾರ್ಯಾಚರಣೆಯ ವೇಳೆ 900 ಬೈಕ್‌ಗಳು, 150 ಆಟೋಗಳು ಹಾಗೂ 75 ಕಾರುಗಳು ಸೇರಿದಂತೆ ಒಟ್ಟು 1,125 ವಾಹನಗಳನ್ನು ಪರಿಶೀಲಿಸಲಾಯಿತು. ಸರಿಯಾದ ದಾಖಲೆಗಳಿಲ್ಲದ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ 60 ಬೈಕ್‌ಗಳನ್ನು ಸ್ಥಳದಲ್ಲೇ ಜಪ್ತಿ ಮಾಡಲಾಯಿತು. ಮಾದಕವಸ್ತು ನಿಯಂತ್ರಣದ ಭಾಗವಾಗಿ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27(ಬಿ) ಅಡಿಯಲ್ಲಿ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ 4 ಪ್ರಕರಣಗಳನ್ನು ದಾಖಲಿಸಿ 11 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಸಾರ್ವಜನಿಕ ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ 188 ಸಣ್ಣಪುಟ್ಟ (ಪೆಟ್ಟಿ) ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೋಟ್ಪಾ (COTPA) ಕಾಯ್ದೆಯಡಿ 154 ಮಂದಿಗೆ ದಂಡ ವಿಧಿಸಲಾಯಿತು.

ಅಪರಾಧ ತಡೆ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ವಿಭಾಗದ 210 ರೌಡಿಶೀಟರ್‌ಗಳ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಲ್ಲದೆ, ಎಂಒಬಿ (MOB) ರಿಜಿಸ್ಟರ್‌ನಲ್ಲಿರುವ 75 ಹಳೇ ಅಪರಾಧಿಗಳ ಪ್ರಸ್ತುತ ಚಟುವಟಿಕೆಗಳ ಬಗ್ಗೆ ಖಾತರಿಪಡಿಸಿಕೊಂಡರು. ನಿಗದಿತ ಸಮಯಕ್ಕೆ ಸರಿಯಾಗಿ ವ್ಯಾಪಾರ ಮುಚ್ಚುವಂತೆ ಹಾಗೂ ಅಬಕಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಲು 125 ಬಾರ್ ಮತ್ತು ವೈನ್ ಶಾಪ್‌ಗಳ ಮೇಲೂ ಪೊಲೀಸರು ತಪಾಸಣೆ ನಡೆಸಿದರು.

Related Articles

ಇತ್ತೀಚಿನ ಸುದ್ದಿಗಳು