ಕರ್ನಾಟಕದಲ್ಲಿ ಭ್ರಷ್ಟರ ಬೇಟೆಯಾಡಿದ ಲೋಕಾಯುಕ್ತ: 8 ಅಧಿಕಾರಿಗಳಿಗೆ ಸಂಬಂಧಿಸಿದ 33 ಸ್ಥಳಗಳಲ್ಲಿ ದಾಳಿ; ₹29.61 ಕೋಟಿ ಮೌಲ್ಯದ ಆಸ್ತಿಪಾಸ್ತಿ ಪತ್ತೆ

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ (ಡಿಎ) ಆರೋಪ ಎದುರಿಸುತ್ತಿರುವ ಎಂಟು ಮಂದಿ ಸರ್ಕಾರಿ ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳವಾರ ಬಿಸಿ ಮುಟ್ಟಿಸಿದ್ದಾರೆ. ರಾಜ್ಯಾದ್ಯಂತ ಏಕಕಾಲದಲ್ಲಿ 33ಕ್ಕೂ ಹೆಚ್ಚು ಸ್ಥಳಗಳಲ್ಲಿ ಭರ್ಜರಿ ದಾಳಿ ನಡೆಸಿರುವ ಅಧಿಕಾರಿಗಳು, ಒಟ್ಟು ₹29.61 ಕೋಟಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.

ಬೆಂಗಳೂರು, ಬೆಂಗಳೂರು ದಕ್ಷಿಣ, ಮಂಡ್ಯ, ಕಲಬುರಗಿ, ಕೊಡಗು, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಈ ಶೋಧ ಕಾರ್ಯಾಚರಣೆ ನಡೆದಿದೆ. ಆರೋಪಿ ಅಧಿಕಾರಿಗಳ ಮನೆಗಳು, ಕಚೇರಿಗಳು ಹಾಗೂ ಅವರ ನಿಕಟ ಸಂಬಂಧಿಕರ ನಿವಾಸಗಳ ಮೇಲೆ ಲೋಕಾಯುಕ್ತ ತಂಡಗಳು ದಾಳಿ ನಡೆಸಿವೆ. ಪತ್ತೆಯಾದ ಒಟ್ಟು ಆಸ್ತಿಯಲ್ಲಿ ₹17.98 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಗಳು ಹಾಗೂ ₹11.63 ಕೋಟಿಗೂ ಅಧಿಕ ಮೌಲ್ಯದ ಚರಾಸ್ತಿಗಳು ಸೇರಿವೆ ಎಂದು ಲೋಕಾಯುಕ್ತದ ಅಧಿಕೃತ ಪ್ರಕಟಣೆ ತಿಳಿಸಿದೆ.

ದಾಳಿಗೊಳಗಾದ ಅಧಿಕಾರಿಗಳ ಪೈಕಿ ಬೆಂಗಳೂರು ದಕ್ಷಿಣದ ಬಸವನಗುಡಿ ಜಿಲ್ಲಾ ನೋಂದಣಾಧಿಕಾರಿ (ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್) ಶ್ರೀದೇವಿ ಅವರ ಬಳಿ ಗರಿಷ್ಠ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇವರ ಬಳಿ ಎರಡು ನಿವೇಶನಗಳು, ಎರಡು ಮನೆಗಳು, ₹2.5 ಕೋಟಿ ಮೌಲ್ಯದ ಕೃಷಿ ಜಮೀನು ಹಾಗೂ ₹2.3 ಕೋಟಿ ಮೌಲ್ಯದ ಗಾರ್ಮೆಂಟ್ ಕಾರ್ಖಾನೆ ಸೇರಿದಂತೆ ಒಟ್ಟು ₹5.86 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಇದರ ಜೊತೆಗೆ ₹30.87 ಲಕ್ಷ ನಗದು, ₹35.58 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು ಮತ್ತು ₹23.15 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ₹94.61 ಲಕ್ಷ ಮೌಲ್ಯದ ಚರಾಸ್ತಿ ಜಪ್ತಿಯಾಗಿದ್ದು, ಇವರ ಒಟ್ಟು ಅಕ್ರಮ ಆಸ್ತಿಯ ಮೌಲ್ಯ ₹6.80 ಕೋಟಿಗೆ ತಲುಪಿದೆ.

ಇತ್ತೀಚೆಗೆ ನಿವೃತ್ತರಾದ ಬೆಂಗಳೂರು ಶಿವಾಜಿನಗರ ಜಿಬಿಎ ಸಹಾಯಕ ಎಂಜಿನಿಯರ್ ಎಚ್.ಎಂ. ರಂಗನಾಥ್ ಅವರ ನಾಲ್ಕು ಸ್ಥಳಗಳ ಮೇಲೆ ನಡೆದ ದಾಳಿಯಲ್ಲಿ ₹5.69 ಕೋಟಿ ಮೌಲ್ಯದ ಆಸ್ತಿ ಬಯಲಾಗಿದೆ. ಇವರ ಬಳಿ ಎರಡು ನಿವೇಶನಗಳು, ನಾಲ್ಕು ಮನೆಗಳು ಹಾಗೂ 9 ಎಕರೆ 35 ಗುಂಟೆ ಕೃಷಿ ಜಮೀನು ಪತ್ತೆಯಾಗಿದೆ. ಚರಾಸ್ತಿ ರೂಪದಲ್ಲಿ ₹1.03 ಕೋಟಿ ನಗದು, ಬ್ಯಾಂಕ್‌ಗಳಲ್ಲಿ ₹1.42 ಕೋಟಿ ಸ್ಥಿರ ಠೇವಣಿ ಹಾಗೂ ₹40 ಲಕ್ಷ ಮೌಲ್ಯದ ಚಿನ್ನಾಭರಣಗಳು ಸಿಕ್ಕಿದ್ದು, ಅಕ್ರಮ ಆಸ್ತಿಯ ಮೌಲ್ಯ ₹3.84 ಕೋಟಿ ಎಂದು ಅಂದಾಜಿಸಲಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರಿನ ಬಿಸಿಎಂ ಇಲಾಖೆಯ ಹಾಸ್ಟೆಲ್ ವಾರ್ಡನ್ ಶಿವರಾಜು ಎಂ. ಅವರ ಬಳಿ ₹3.82 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ ಐದು ಸೈಟ್‌ಗಳು, ಐದು ಮನೆಗಳು (ಎರಡು ವಾಣಿಜ್ಯ ಸಂಕೀರ್ಣಗಳು ಮತ್ತು ಒಂದು ಫಾರ್ಮ್‌ಹೌಸ್ ಸೇರಿದಂತೆ) ಹಾಗೂ 6 ಎಕರೆ ಕೃಷಿ ಜಮೀನು ಸೇರಿದೆ. ಇವರ ಒಟ್ಟು ಅಕ್ರಮ ಆಸ್ತಿ ಮೌಲ್ಯ ₹2.71 ಕೋಟಿ ಎಂದು ಲೆಕ್ಕಹಾಕಲಾಗಿದೆ.

ಬೀದರ್‌ನ ನಿವೃತ್ತ ಕೃಷಿ ಅಧಿಕಾರಿ ಮಾಣಿಕ್ ರಾವ್ ಅವರ ಬಳಿ ಆರು ನಿವೇಶನ, ಮೂರು ಮನೆ ಮತ್ತು 14 ಎಕರೆ 20 ಗುಂಟೆ ಕೃಷಿ ಭೂಮಿ ಸೇರಿದಂತೆ ₹2.51 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಧಾರವಾಡದ ಹೆಸ್ಕಾಂ ಎಇಇ ಕಿರಣ್ ಬೈಂದೂರು ಅವರ ಆರು ಕಡೆಗಳಲ್ಲಿ ನಡೆದ ದಾಳಿಯಲ್ಲಿ ಒಂದು ಮನೆ, ವಾಣಿಜ್ಯ ಮಳಿಗೆ, 2 ಎಕರೆ ಜಮೀನು ಹಾಗೂ ₹73.71 ಲಕ್ಷ ಮೌಲ್ಯದ ಚಿನ್ನಾಭರಣಗಳು ಸೇರಿ ₹1.79 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯ ಎಫ್‌ಡಿಎ ದರ್ಶನ್ ಗೌಡ ಜಿ. ಅವರ 8 ಸ್ಥಳಗಳ ಮೇಲೆ ದಾಳಿ ನಡೆದಿದ್ದು, ಮೂರು ನಿವೇಶನಗಳು ಹಾಗೂ ಬರೋಬ್ಬರಿ 16 ಮನೆಗಳು ಸೇರಿ ₹1.86 ಕೋಟಿ ಅಕ್ರಮ ಆಸ್ತಿ ಬೆಳಕಿಗೆ ಬಂದಿದೆ. ಕಲಬುರಗಿಯ ಜೆಸ್ಕಾಂ ಎಇಇ ರಾಜೇಶ್ವರಿ ಬಾಬಲಾದ್ ಅವರ ಬಳಿ ಐದು ನಿವೇಶನ, ಎರಡು ಮನೆಗಳು ಸೇರಿ ₹1.91 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಕೊಡಗಿನ ನಗರಸಭೆ ಆಯುಕ್ತ ಎಚ್.ಆರ್. ರಮೇಶ್ ಅವರ ಬಳಿ ಒಂದು ಮನೆ, 3 ಎಕರೆ ಕೃಷಿ ಭೂಮಿ ಹಾಗೂ ₹46.48 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಸೇರಿದಂತೆ ₹1.78 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಅಪಾರ ಪ್ರಮಾಣದ ಆಸ್ತಿ ದಸ್ತಾವೇಜುಗಳು, ಬ್ಯಾಂಕ್ ಖಾತೆಗಳು ಹಾಗೂ ಇತರೆ ದಾಖಲೆಗಳ ಪರಿಶೀಲನೆಯನ್ನು ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮುಂದುವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು