2006ರಿಂದೀಚೆಗೆ ಐಐಟಿಗಳಲ್ಲಿ 171 ವಿದ್ಯಾರ್ಥಿಗಳ ಸಾವು: ಶೇಕಡಾ 70ರಷ್ಟು ಪ್ರಕರಣಗಳು ಕಳೆದೊಂದು ದಶಕದಲ್ಲೇ ದಾಖಲು; ಆತಂಕಕಾರಿ ವರದಿ ಬಹಿರಂಗ

ದೆಹಲಿ: ದೇಶದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) 2006ರಿಂದ 2026ರ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಬರೋಬ್ಬರಿ 171 ವಿದ್ಯಾರ್ಥಿಗಳು ಆತ್ಮಹತ್ಯೆ ಹಾಗೂ ಅಸ್ವಾಭಾವಿಕ ಕಾರಣಗಳಿಂದ ಸಾವಿಗೀಡಾಗಿದ್ದಾರೆ. ಈ ಪೈಕಿ ಸುಮಾರು ಶೇಕಡಾ 70ರಷ್ಟು ಸಾವುಗಳು ಕಳೆದ ಹತ್ತು ವರ್ಷಗಳಲ್ಲೇ ಸಂಭವಿಸಿವೆ ಎಂದು ಐಐಟಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಸಂಗ್ರಹಿಸಿದ ದತ್ತಾಂಶದಿಂದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಹಾಗೂ ಗ್ಲೋಬಲ್ ಐಐಟಿ ಅಲುಮ್ನಿ ಸಪೋರ್ಟ್ ಗ್ರೂಪ್‌ನ ಸಂಸ್ಥಾಪಕ ಧೀರಜ್ ಸಿಂಗ್ ಅವರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಪಡೆದ ಉತ್ತರಗಳು ಹಾಗೂ ಮಾಧ್ಯಮ ವರದಿಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ. ವರದಿಯ ಪ್ರಕಾರ, 2006 ರಿಂದ 2015 ರ ನಡುವೆ 51 ವಿದ್ಯಾರ್ಥಿಗಳ ಸಾವುಗಳು ದಾಖಲಾಗಿದ್ದರೆ, 2016 ರಿಂದ 2026ರ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಈ ಸಂಖ್ಯೆ ಬರೋಬ್ಬರಿ 120ಕ್ಕೆ ಏರಿಕೆಯಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಹೋಲಿಸಿದರೆ ಸಾವುಗಳ ಸಂಖ್ಯೆಯಲ್ಲಿನ ಈ ಏರಿಕೆ ಅತ್ಯಂತ ತೀವ್ರವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ದಾಖಲಾದ ಒಟ್ಟು ಆತ್ಮಹತ್ಯೆಗಳಲ್ಲಿ ಸುಮಾರು ಶೇಕಡಾ 82ರಷ್ಟು ಘಟನೆಗಳು ಐಐಟಿ ಕ್ಯಾಂಪಸ್‌ಗಳ ಒಳಗೇ ನಡೆದಿವೆ. ಪರೀಕ್ಷೆ ಮತ್ತು ಫಲಿತಾಂಶಗಳ ಪ್ರಕಟಣೆಯ ಅವಧಿಯಲ್ಲಿ ಇಂತಹ ಸಾವುಗಳು ಹೆಚ್ಚಾಗಿದ್ದು, ಸೆಮಿಸ್ಟರ್ ರಜಾದಿನಗಳಲ್ಲಿ ಇಳಿಮುಖವಾಗಿರುವುದು ಕಂಡುಬಂದಿದೆ. ಐಐಟಿಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಕೇವಲ ಬಿಡಿ ಘಟನೆಗಳಲ್ಲ; ಇದು ವ್ಯವಸ್ಥಿತವಾದ ಹಾಗೂ ತಡೆಯಬಹುದಾದ ಗಂಭೀರ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಎಂದು ಧೀರಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಐಐಟಿ ದೆಹಲಿಯಲ್ಲಿ 31 ವರ್ಷದ ಎಂಎಸ್‌ಸಿ ಭೌತಶಾಸ್ತ್ರ ವಿದ್ಯಾರ್ಥಿ ಋಷಿಕೇಶ್ ಕುಮಾರ್ ಹಾಗೂ ಐಐಟಿ ಬಾಂಬೆಯಲ್ಲಿ 20 ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸಾವನ್ನಪ್ಪಿದ ಘಟನೆಗಳು ಭಾರೀ ವಿದ್ಯಾರ್ಥಿ ಪ್ರತಿಭಟನೆ ಹಾಗೂ ತನಿಖೆಗೆ ಕಾರಣವಾಗಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಲ್ಯಾಣ ವ್ಯವಸ್ಥೆಗಳ ಮೇಲಿನ ಪರಿಶೀಲನೆ ತೀವ್ರಗೊಂಡಿರುವ ಬೆನ್ನಲ್ಲೇ ಈ ಅಂಕಿಅಂಶಗಳು ಹೊರಬಿದ್ದಿವೆ.

ವರದಿಯ ವಿಶ್ಲೇಷಣೆಯ ಪ್ರಕಾರ, ಬಿ.ಟೆಕ್ ಪುರುಷ ವಿದ್ಯಾರ್ಥಿಗಳು ಮತ್ತು ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿಯರು ಹೆಚ್ಚು ಸಂಕಷ್ಟಕ್ಕೆ ಸಿಲುಕುವ ಗುಂಪುಗಳಾಗಿದ್ದು, ಕಳೆದ ಎರಡು ದಶಕಗಳ ಆತ್ಮಹತ್ಯೆಗಳಲ್ಲಿ ಇವರದ್ದೇ ಶೇಕಡಾ 60ರಷ್ಟು ಪಾಲಿದೆ. ಜೊತೆಗೆ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳ ವಿದ್ಯಾರ್ಥಿಗಳು ಜನರಲ್ ವಿಭಾಗದ ವಿದ್ಯಾರ್ಥಿಗಳಿಗಿಂತ ದುಪ್ಪಟ್ಟು ದರದಲ್ಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕೋವಿಡ್ ನಂತರದ ದಿನಗಳಲ್ಲಿ ಈ ಅಸಮಾನತೆ ಮತ್ತಷ್ಟು ತೀವ್ರಗೊಂಡಿದ್ದು, ಜನರಲ್ ಕೆಟಗರಿಗೆ ಹೋಲಿಸಿದರೆ ಎಸ್‌ಸಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ 2.6 ಪಟ್ಟು ಹಾಗೂ ಎಸ್‌ಟಿ ವಿದ್ಯಾರ್ಥಿಗಳ ಪ್ರಮಾಣ 4.2 ಪಟ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

ವಿದ್ಯಾರ್ಥಿಗಳ ನೆರವು ಮತ್ತು ಆತ್ಮಹತ್ಯೆ ತಡೆ ವ್ಯವಸ್ಥೆಯನ್ನು ಬಲಪಡಿಸಲು ಸಿಂಗ್ ಅವರು 14 ಅಂಶಗಳ ಮಾರ್ಗಸೂಚಿಯನ್ನು ಪ್ರಸ್ತಾಪಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಮತ್ತು ಅಲುಮ್ನಿಗಳ ಮಾರ್ಗದರ್ಶನ, ಶೈಕ್ಷಣಿಕ ಹಾಜರಾತಿ ಮತ್ತು ನಿರಂತರ ಮೌಲ್ಯಮಾಪನದ ಮೂಲಕ ಖಿನ್ನತೆಗೊಳಗಾದವರನ್ನು ಮುಂಚಿತವಾಗಿ ಗುರುತಿಸುವುದು, ಗೌಪ್ಯ ಮಾನಸಿಕ ಆರೋಗ್ಯ ಸೇವೆ, ಎನ್‌ಐಆರ್‌ಎಫ್ (NIRF) ಶ್ರೇಯಾಂಕದಲ್ಲಿ ಕ್ಯಾಂಪಸ್ ಯೋಗಕ್ಷೇಮ ಸೂಚ್ಯಂಕವನ್ನು ಸೇರಿಸುವುದು ಮತ್ತು ಹಿಂದಿನ ಸಾವುಗಳ ಮರುಪರಿಶೀಲನೆಗೆ ಸ್ವತಂತ್ರ ಸಮಿತಿ ರಚನೆ ಮುಂತಾದ ಸುಧಾರಣೆಗಳನ್ನು ಅವರು ಶಿಫಾರಸು ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು