ಕೇಂದ್ರದ ಮೇಲಿನ ಅಪನಂಬಿಕೆ ಇನ್ನಷ್ಟು ಹೆಚ್ಚಾಗಿದೆ: ಇಂದು ಲಡಾಖ್‌ನಲ್ಲಿ ಸೋನಮ್ ವಾಂಗ್ಚುಕ್ ಪಾದಯಾತ್ರೆ

ಲಡಾಖ್‌ನ ಜನರಿಗೆ ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರಕ್ಕೆ ನೆನಪಿಸಲು ಮತ್ತು ಕಳೆದ ವರ್ಷ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ಸೆಪ್ಟೆಂಬರ್ 23 ರಂದು 20 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ.

ಲೆಹ್‌ನ ಖಾರೂ ಗ್ರಾಮಸ್ಥರೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಪಾದಯಾತ್ರೆಯನ್ನು ಆರಂಭದಲ್ಲಿ ಕಾರ್ಗಿಲ್‌ನಿಂದ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಮಾರ್ಗವನ್ನು 20 ಕಿಲೋಮೀಟರ್‌ಗೆ ಸೀಮಿತಗೊಳಿಸಲಾಗಿದೆ. 2025ರ ಸೆಪ್ಟೆಂಬರ್ 24ರಂದು ಲೆಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಚ್ ಆಯೋಜಿಸಲಾಗಿದೆ. ಲಡಾಖ್‌ನ ಪರಿಸರ, ಸಂಸ್ಕೃತಿಯ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಒತ್ತಾಯಿಸಿ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡ ನಾಲ್ವರು ಅಮಾಯಕರಿಗೆ, ಗಾಯಗೊಂಡವರಿಗೆ ಮತ್ತು ಜೈಲು ಸೇರಿದವರಿಗೆ ಗೌರವ ಸಲ್ಲಿಸಲು ಸೆಪ್ಟೆಂಬರ್ ತಿಂಗಳನ್ನು ‘ಹುತಾತ್ಮರ ತಿಂಗಳು’ ಎಂದು ಹಾಗೂ ಸೆಪ್ಟೆಂಬರ್ 24 ಅನ್ನು ‘ಹುತಾತ್ಮರ ದಿನ’ವಾಗಿ ಆಚರಿಸಲಾಗುತ್ತಿದೆ ಎಂದು ವಾಂಗ್ಚುಕ್ ತಿಳಿಸಿದ್ದಾರೆ.

ಕಳೆದ ವರ್ಷದ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆಯ ವರದಿಯನ್ನು ಬಹಿರಂಗಪಡಿಸಬೇಕೆಂದು ವಾಂಗ್ಚುಕ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಯಾವುದೇ ಗುಂಡಿನ ದಾಳಿಯ ಆದೇಶವಿಲ್ಲದಿದ್ದರೂ ಭದ್ರತಾ ಪಡೆಗಳು ತಮ್ಮದೇ ನಾಗರಿಕರ ಮೇಲೆ ಎಕೆ-47 ನಿಂದ ಗುಂಡು ಹಾರಿಸಿವೆ ಎಂದು ಆರೋಪಿಸಿದ ಅವರು, ತಪ್ಪಿತಸ್ಥರು ಯಾರು ಎಂಬುದನ್ನು ತಿಳಿಯಲು ತನಿಖಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದಿದ್ದಾರೆ. ಅಲ್ಲದೆ ಮೃತರಿಗೆ ನೀಡಲಾದ ₹15 ಲಕ್ಷ ಮತ್ತು ಅಂಗವಿಕಲರಿಗೆ ನೀಡಲಾದ ₹1-3 ಲಕ್ಷ ಪರಿಹಾರ ಅತ್ಯಂತ ಅವಮಾನಕರವಾಗಿದ್ದು, ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಲಡಾಖ್‌ನ ರಾಜಕೀಯ ಬೇಡಿಕೆಗಳ ಕುರಿತು ಮಾತನಾಡಿದ ವಾಂಗ್ಚುಕ್, ಪೂರ್ಣ ರಾಜ್ಯದ ಸ್ಥಾನಮಾನ ಮತ್ತು 6ನೇ ಶೆಡ್ಯೂಲ್ ವ್ಯಾಪ್ತಿಗೆ ಸೇರಿಸುವುದು ನಮ್ಮ ಮೂಲ ಬೇಡಿಕೆಗಳಾಗಿದ್ದವು. ಆದರೆ ಈಗ ಸಂವಿಧಾನದ 371ನೇ ವಿಧಿಯಡಿ ಚುನಾಯಿತ ವಿಧಾನಸಭೆಯನ್ನು ಹೊಂದಿರುವ ವಿಶೇಷ ವ್ಯವಸ್ಥೆಯ ಚರ್ಚೆಗಳು ಮುನ್ನೆಲೆಗೆ ಬಂದಿವೆ ಎಂದರು. ಲಡಾಖ್‌ನ ಪರಿಸರ ಅತ್ಯಂತ ಸೂಕ್ಷ್ಮವಾಗಿದ್ದು, ಕಾರ್ಪೊರೇಟ್ ಮತ್ತು ಅತಿಯಾದ ನಗರೀಕರಣದಿಂದ ಇದನ್ನು ರಕ್ಷಿಸಲು ಸ್ಥಳೀಯರ ಕೈಯಲ್ಲೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿರಬೇಕು. ಹಿಮಾಲಯದಿಂದಲೇ ಇಡೀ ಉತ್ತರ ಭಾರತಕ್ಕೆ ನೀರು ಹರಿಯುವುದರಿಂದ ಇಲ್ಲಿನ ಜನರ ಧ್ವನಿಗೆ ಆದ್ಯತೆ ಸಿಗಬೇಕು ಎಂದು ಪ್ರತಿಪಾದಿಸಿದರು.

ಅಲ್ಲದೆ, ಪಾದಯಾತ್ರೆಯನ್ನು ತಡೆಯುವ ದುರುದ್ದೇಶದಿಂದಲೇ ದೆಹಲಿಯಲ್ಲಿ ಕೇಂದ್ರ ಸರ್ಕಾರ ಸಭೆ ಕರೆದಿತ್ತು ಎಂದು ದೂರಿದ ವಾಂಗ್ಚುಕ್, ಕೇಂದ್ರದ ಈ ನಡೆಗಳಿಂದ ಅಪನಂಬಿಕೆ ಮತ್ತಷ್ಟು ಹೆಚ್ಚಾಗಿದೆ ಎಂದರು. ಲಡಾಖ್ ಗಡಿ ಪ್ರದೇಶವಾದ ಕಾರಣ ಪೂರ್ಣ ರಾಜ್ಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂಬ ಕೇಂದ್ರದ ವಾದವನ್ನು ತಳ್ಳಿಹಾಕಿದ ಅವರು, ಸಂವೇದನಾಶೀಲ ಗಡಿ ರಾಜ್ಯವಾದ ಅರುಣಾಚಲ ಪ್ರದೇಶಕ್ಕೆ ಪೂರ್ಣ ರಾಜ್ಯ ಸ್ಥಾನಮಾನ ನೀಡಬಹುದಾದರೆ ಶಾಂತಿಯುತ ಲಡಾಖ್‌ಗೆ ಏಕೆ ನೀಡಬಾರದು ಎಂದು ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು