ದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಚುನಾವಣಾ ಆಯೋಗದ ಇಬ್ಬರು ಸದಸ್ಯರು ಪದೇಪದೇ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಮಾಧ್ಯಮ ವರದಿ ಪ್ರಕಟವಾದ ಬೆನ್ನಲ್ಲೇ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳು ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿವೆ.
ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮ್ಮ ಗಮನಕ್ಕೆ ತಾರದೆ ಹೊರಡಿಸಲಾದ ನಿರ್ಧಾರಗಳು ಮತ್ತು ಆದೇಶಗಳ ವಿರುದ್ಧ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿತ್ತು. ಮತದಾರರ ಹೆಸರು ಸೇರ್ಪಡೆ ಮತ್ತು ಕೈಬಿಡುವಿಕೆ, ನಮೂನೆ 6 ರಲ್ಲಿ ಮಾಡಲಾದ ಬದಲಾವಣೆಗಳು, ಮತದಾರರ ಪಟ್ಟಿಯ ಡೇಟಾಬೇಸ್ ಪ್ರವೇಶ ಮತ್ತು ಆಯೋಗದ ಡಿಜಿಟಲ್ ವ್ಯವಸ್ಥೆಗಳ ಕಾರ್ಯವೈಖರಿಗೆ ಸಂಬಂಧಿಸಿದಂತೆ ಇಬ್ಬರೂ ಆಯುಕ್ತರು ಗಂಭೀರ ಕಳವಳ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.
ಆದರೆ, ಈ ಬೆಳವಣಿಗೆಗಳು ಸಂಸ್ಥೆಯ ಕಾರ್ಯವೈಖರಿಯಲ್ಲಿನ ಬಿರುಕನ್ನು ಸೂಚಿಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಬಹುಸದಸ್ಯ ಸಾಂವಿಧಾನಿಕ ಸಂಸ್ಥೆಯಲ್ಲಿ ಲಿಖಿತ ಅಭಿಪ್ರಾಯಗಳು, ತಾಂತ್ರಿಕ ಸಲಹೆಗಳು ಮತ್ತು ಭಿನ್ನ ದೃಷ್ಟಿಕೋನಗಳು ಸಹಜ ಚರ್ಚೆಯ ಭಾಗವಾಗಿದ್ದು, ಎಸ್ಐಆರ್ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಅಂತಿಮ ನಿರ್ಧಾರಗಳನ್ನು ಒಮ್ಮತದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಕರಡು ಹಂತದಲ್ಲಿನ ಪ್ರಶ್ನೆಗಳು ಮತದಾರರ ಹಕ್ಕುಗಳನ್ನು ರಕ್ಷಿಸುವ ಮತ್ತು ಪ್ರಕ್ರಿಯೆಗಳನ್ನು ಸುಧಾರಿಸುವ ಆಡಳಿತಾತ್ಮಕ ಉದ್ದೇಶವನ್ನು ಹೊಂದಿವೆ ಎಂದು ಆಯೋಗ ಸಮರ್ಥಿಸಿಕೊಂಡಿದೆ.
ಆದಾಗ್ಯೂ, ಆಯೋಗದ ಸ್ಪಷ್ಟನೆಯಿಂದ ರಾಜಕೀಯ ಬಿರುಗಾಳಿ ತಣ್ಣಗಾಗಿಲ್ಲ. ಆಂತರಿಕ ಪತ್ರವ್ಯವಹಾರಗಳನ್ನು ಉಲ್ಲೇಖಿಸಿ ವಿರೋಧ ಪಕ್ಷಗಳ ನಾಯಕರು ಚುನಾವಣಾ ಸಮಿತಿಯ ವಿರುದ್ಧ ಮತ್ತೆ ಮುಗಿಬಿದ್ದಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದು, ಅವರು ಈ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದಿದ್ದಾರೆ. ಚುನಾವಣಾ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಸಿಇಸಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿರುವ ಅವರು, ಇದು ಅಭೂತಪೂರ್ವ ಚುನಾವಣಾ ವಿವಾದ ಎಂದು ಕರೆದಿದ್ದಾರೆ.
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸಿ, ಬ್ಯಾಲೆಟ್ ಪೇಪರ್ ಮೂಲಕ ಮರುಚುನಾವಣೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ವರದಿಯು ಮತದಾರರ ಪಟ್ಟಿ ಮತ್ತು ಆಯೋಗದ ಕಾರ್ಯವೈಖರಿ ಕುರಿತು ತಾವು ವ್ಯಕ್ತಪಡಿಸುತ್ತಿದ್ದ ಆತಂಕಗಳನ್ನು ಬಹಿರಂಗಪಡಿಸಿದೆ ಎಂದಿದ್ದಾರೆ. ಇದು ಪ್ರಜಾಪ್ರಭುತ್ವದ ಜತೆಗಿನ ಚೆಲ್ಲಾಟ ಎಂದು ಬಣ್ಣಿಸಿದ ಅವರು, ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಕೋರಿ 73 ವಿಪಕ್ಷ ಸಂಸದರು ಏಪ್ರಿಲ್ 24 ರಂದು ರಾಜ್ಯಸಭೆಯಲ್ಲಿ ನೀಡಿದ್ದ ನೋಟಿಸ್ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು, ಕುಮಾರ್ ಏಕಪಕ್ಷೀಯವಾಗಿ ಆಯೋಗವನ್ನು ನಡೆಸುತ್ತಿದ್ದಾರೆ ಮತ್ತು ಈ ಚುನಾವಣಾ ಅಕ್ರಮಗಳ ರೂವಾರಿಯಾಗಿದ್ದಾರೆ ಎಂದು ಆರೋಪಿಸಿದರು. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ ಅವರು, ದೆಹಲಿ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಮರುಚುನಾವಣೆ ನಡೆಸಬೇಕು ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಮತದಾರರ ಪಟ್ಟಿಯನ್ನು ಹಿಂದಿನ ಸ್ಥಿತಿಗೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಈ ವರದಿಯನ್ನು ಸಂವೇದನಾಶೀಲ ಎಂದು ಬಣ್ಣಿಸಿ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮರುಚುನಾವಣೆಗೆ ಆಗ್ರಹಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಬದಲಾವಣೆಗಳು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಿವೆ ಎಂದು ಅವರು ದೂರಿದರು.
ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಬಿಜೆಪಿಗೆ ಲಾಭ ಮಾಡಿಕೊಡಲು ಪಶ್ಚಿಮ ಬಂಗಾಳವೊಂದರಲ್ಲೇ ಸುಮಾರು 30 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು. ಕುಮಾರ್ ವಿರುದ್ಧ ಲುಕ್ ಔಟ್ ಸುತ್ತೋಲೆ (ಎಲ್ಒಸಿ) ಹೊರಡಿಸಿ ಅವರನ್ನು ಬಂಧಿಸಬೇಕೆಂದು ಅವರು ಒತ್ತಾಯಿಸಿದರು.
ಇಡೀ ಆಯೋಗದ ಸಮ್ಮತಿಯಿಲ್ಲದೆ ಹೊರಡಿಸಲಾದ ಆದೇಶಗಳು, ಹೊಸ ಮತದಾರರ ನೋಂದಣಿ ನಿಯಮಗಳು ಮತ್ತು ಡೇಟಾಬೇಸ್ ಕೇಂದ್ರೀಕರಣದ ಕುರಿತು ಇಬ್ಬರು ಆಯುಕ್ತರು ಎತ್ತಿದ್ದ ಪ್ರಶ್ನೆಗಳು ಈಗ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಗ್ರಾಸವಾಗಿವೆ.
