ಮೈಸೂರು:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಮಾರೋಪ ಅಂಗವಾಗಿ ಬನ್ನಿಮಂಟಪ ಮೈದಾನದಲ್ಲಿ ನಡೆಯಲಿರುವ ಪಂಜಿನ ಕವಾಯತಿನ (ಟಾರ್ಚ್ಲೈಟ್ ಪೆರೇಡ್) ತಾಲೀಮಿನ ವೇಳೆ ಅವಘಡ ಸಂಭವಿಸಿದ್ದು, ಆರ್ಮಿ ಸರ್ವಿಸ್ ಕಾರ್ಪ್ಸ್ನ (ASC) ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ಬನ್ನಿಮಂಟಪ ಮೈದಾನದಲ್ಲಿ ಭಾರತೀಯ ಸೇನೆಯ ಡೇರ್ಡೆವಿಲ್ ಮೋಟಾರ್ಸೈಕಲ್ ಪ್ರದರ್ಶನ ತಂಡವಾದ ‘ಟೋರ್ನಾಡೋಸ್’ ತಾಲೀಮು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ವೇಗವಾಗಿ ಬೈಕ್ ಚಲಾಯಿಸುತ್ತಾ ‘ಎಕ್ಸ್’ (X) ಆಕಾರದಲ್ಲಿ ಪರಸ್ಪರ ಅಡ್ಡಲಾಗಿ ಕ್ರಾಸಿಂಗ್ ಸಾಹಸ ಪ್ರದರ್ಶನ ನಡೆಸುವ ವೇಳೆ ನಿಯಂತ್ರಣ ತಪ್ಪಿ ಎರಡು ಮೋಟಾರ್ಸೈಕಲ್ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಪರಿಣಾಮವಾಗಿ, ಇಬ್ಬರೂ ಸವಾರರು ಬೈಕ್ನಿಂದ ಕೆಳಗೆ ಬಿದ್ದಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯೋಧರಿಗೆ ಯಾವುದೇ ಪ್ರಾಣಾಪಾಯವಿಲ್ಲದೆ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಜಂಬೂಸವಾರಿಯ ನಂತರ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿದೆ.
