ಕ್ಯಾಲಿಫೋರ್ನಿಯಾದಲ್ಲಿ ಚುನಾವಣಾ ಅಕ್ರಮ: ಇಬ್ಬರು ಭಾರತೀಯರು ಸೇರಿ 28 ಗ್ರೀನ್ ಕಾರ್ಡ್ ಹೊಂದಿರುವವರ ವಿರುದ್ಧ ಪ್ರಕರಣ ದಾಖಲು

ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಚುನಾವಣಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 28 ಗ್ರೀನ್ ಕಾರ್ಡ್ (ಕಾನೂನುಬದ್ಧ ಶಾಶ್ವತ ನಿವಾಸಿ) ಹೊಂದಿರುವವರ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಗಂಭೀರ ಆರೋಪಗಳನ್ನು ದಾಖಲಿಸಿದೆ. 2024ರ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮವಾಗಿ ಮತದಾರರಾಗಿ ನೋಂದಾಯಿಸಿಕೊಂಡು ಮತ ಚಲಾಯಿಸಿದ ಆರೋಪ ಇವರ ಮೇಲಿದೆ.

ಆರೋಪ ಹೊತ್ತಿರುವ ಇಬ್ಬರು ಭಾರತೀಯರನ್ನು 30 ವರ್ಷದ ಅಮನ್‌ದೀಪ್ ಕೌರ್ ಮತ್ತು 67 ವರ್ಷದ ಕಮಲೇಶ್ ಶಾ ಎಂದು ಗುರುತಿಸಲಾಗಿದೆ. ಸ್ಯಾಕ್ರಮೆಂಟೊದಲ್ಲಿ ನೆಲೆಸಿರುವ ಕಮಲೇಶ್ ಶಾ, ನವೆಂಬರ್ 2024ರ ಸಾರ್ವತ್ರಿಕ ಚುನಾವಣೆಯ ದಿನವೇ ಮತದಾರರಾಗಿ ನೋಂದಾಯಿಸಿಕೊಂಡು ಅಂದೇ ಮತ ಚಲಾಯಿಸಿದ್ದರು ಎನ್ನಲಾಗಿದೆ.

ಇನ್ನು ರಾಂಚೋ ಪಾಲೋಸ್ ವರ್ಡೆಸ್‌ನಲ್ಲಿ ವಾಸಿಸುತ್ತಿರುವ ಹಾಗೂ ಅಮೆರಿಕ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಅಮನ್‌ದೀಪ್ ಕೌರ್, ಡಿಸೆಂಬರ್ 2022ರಲ್ಲಿ ಮತದಾರರ ಪಟ್ಟಿಗೆ ನೋಂದಾಯಿಸಿಕೊಂಡು 2024ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ಪಾವಿತ್ರ್ಯತೆ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಜಾರಿಗೊಳಿಸಲಾದ ‘ಆಪರೇಷನ್ ಪ್ರೊಟೆಕ್ಟ್ ದಿ ವೋಟ್’ ಅಡಿಯಲ್ಲಿ ನಡೆಸಲಾದ ಮುಂಜಾನೆಯ ಕಾರ್ಯಾಚರಣೆಯಲ್ಲಿ 28 ಮಂದಿಯ ಪೈಕಿ 11 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.

ಆರೋಪಿಗಳೆಲ್ಲರೂ ಅಮೆರಿಕದಲ್ಲಿ ಕಾನೂನುಬದ್ಧ ಶಾಶ್ವತ ನಿವಾಸಿಗಳಾಗಿದ್ದರೂ, ಅವರು ಅಮೆರಿಕದ ಪೌರತ್ವ ಹೊಂದಿಲ್ಲದ ಕಾರಣ ದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಚಲಾಯಿಸಲು ಕಾನೂನಿನಡಿ ಅವಕಾಶವಿಲ್ಲ ಎಂದು ನ್ಯಾಯಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಪೌರತ್ವ ಪಡೆಯುವ ಅರ್ಜಿಯಲ್ಲಿ ಸುಳ್ಳು ಹೇಳಿಕೆ ನೀಡುವುದು ಮತ್ತು ಅಕ್ರಮ ಮತದಾರ ನೋಂದಣಿ ಮಾಡುವುದು ಫೆಡರಲ್ ಅಪರಾಧಗಳಾಗಿದ್ದು, ಈ ಆರೋಪಗಳು ಸಾಬೀತಾದರೆ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಕ್ಯಾಲಿಫೋರ್ನಿಯಾದ ಚುನಾವಣಾ ಅಧಿಕಾರಿಗಳಿಗೆ ನ್ಯಾಯಾಂಗ ಇಲಾಖೆ ಸಲ್ಲಿಸಿದ 20,000ಕ್ಕೂ ಹೆಚ್ಚು ಶಂಕಿತ ವಿದೇಶಿ ಮತದಾರರ ಪಟ್ಟಿಯ ಆಧಾರದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು