ಹಾಸನಾಂಬ – 2026, 30 ಲಕ್ಷಕ್ಕೂ ಅಧಿಕ ಭಕ್ತರು; ₹29.55 ಕೋಟಿ ಆದಾಯ ಸಂಗ್ರಹ
ಲಿಂಕ್ ನಕಲಿಸಲಾಗಿದೆ ✓
ಹಾಸನ: ಐತಿಹಾಸಿಕ ಹಾಸನಾಂಬ ದೇವಿಯ ದರ್ಶನಕ್ಕೆ ಈ ಬಾರಿ ಭಕ್ತಸಾಗರವೇ ಹರಿದುಬಂದಿದ್ದು, 12 ದಿನಗಳ ಅವಧಿಯಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಭಕ್ತರಿಂದ ಟಿಕೆಟ್ ಮಾರಾಟ, ಲಾಡು ಪ್ರಸಾದ, ಹುಂಡಿ ಕಾಣಿಕೆ ಸೇರಿದಂತೆ ಒಟ್ಟು ₹29.55 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2026ರ ಅಕ್ಟೋಬರ್ 29ರಂದು ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಂದು ಸಾರ್ವಜನಿಕ ದರ್ಶನಕ್ಕೆ ಅಧಿಕೃತ ಅವಕಾಶವಿಲ್ಲದಿದ್ದರೂ ಆಗಮಿಸಿದ್ದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂದು 5,600 ಮಂದಿ ದೇವಿಯ ದರ್ಶನ ಪಡೆದಿದ್ದರು. ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ 12 ದಿನಗಳಲ್ಲಿ ದೇಶದ ವಿವಿಧ ಭಾಗಗಳು, ಹೊರರಾಜ್ಯಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 30 ಲಕ್ಷದ 6 ಸಾವಿರ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದರು.
2025ರಲ್ಲಿ 13 ದಿನಗಳ ಜಾತ್ರಾ ಅವಧಿಯಲ್ಲಿ 25 ಲಕ್ಷದ 36 ಸಾವಿರ ಭಕ್ತರು ದರ್ಶನ ಪಡೆದಿದ್ದರು. ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ತಿಳಿಸಿದರು.
₹29.55 ಕೋಟಿ ಆದಾಯ ಸಂಗ್ರಹ
ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಈ ಬಾರಿ ಒಟ್ಟು ₹29,55,27,852 ಆದಾಯ ಸಂಗ್ರಹವಾಗಿದೆ.
ಕಳೆದ ವರ್ಷ ₹25.59 ಕೋಟಿ ಆದಾಯ ಬಂದಿದ್ದು
ಈ ಬಾರಿ ಸುಮಾರು ₹4 ಕೋಟಿ ಹೆಚ್ಚುವರಿ ಆದಾಯ ಬಂದಿದೆ
- ₹1,000 ವಿಶೇಷ ದರ್ಶನ ಟಿಕೆಟ್ ಮಾರಾಟ: ₹16,98,11,257
- ₹300 ವಿಶೇಷ ದರ್ಶನ ಟಿಕೆಟ್ ಮಾರಾಟ: ₹7,24,14,000
- ಲಾಡು ಪ್ರಸಾದ ಮಾರಾಟ: ₹1,35,99,156
- ದೇಣಿಗೆ ರೂಪದಲ್ಲಿ: ₹5,91,228
- ಇ-ಹುಂಡಿ ಮೂಲಕ: ₹13,13,264
- ಜಾಹೀರಾತುಗಳಿಂದ: ₹5,74,000
- ಈ ಮೂಲಗಳಿಂದ ಸಂಗ್ರಹವಾದ ಒಟ್ಟು ಮೊತ್ತ: ₹25,82,88,199
- ಹುಂಡಿ ಕಾಣಿಕೆ: ₹3,71,63,933
- ಒಟ್ಟು ಆದಾಯ: ₹29,55,27,852 ಎಂದು ವಿವರಿಸಿದರು.
ಚಿನ್ನ, ಬೆಳ್ಳಿ ಕಾಣಿಕೆ:
ಭಕ್ತರು ದೇವಿಗೆ ಕಾಣಿಕೆಯಾಗಿ 43 ಗ್ರಾಂ 170 ಮಿಲಿಗ್ರಾಂ ಚಿನ್ನ ಹಾಗೂ 1 ಕೆ.ಜಿ. 255 ಗ್ರಾಂ 300 ಮಿಲಿಗ್ರಾಂ ಬೆಳ್ಳಿಯನ್ನು ಅರ್ಪಿಸಿದ್ದಾರೆ. ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ ₹18,99,100 ಸಂಗ್ರಹವಾಗಿದೆ ಎಂದು ಜಗದೀಶ್ ಗಂಗಣ್ಣನವರ್ ಮಾಹಿತಿ ನೀಡಿದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ