ಶಿಶುನಾಳ ಶರೀಫರ ತತ್ವಪದಗಳ ಭಾಷಾ ವೈಶಿಷ್ಟ್ಯತೆ
ಲಿಂಕ್ ನಕಲಿಸಲಾಗಿದೆ ✓
“..ಕನ್ನಡ ಭಾಷಾ ಚರಿತ್ರೆಯಲ್ಲಿ ‘ಮಾರ್ಗ’ ಮತ್ತು ‘ದೇಸೀ’ ಎಂದು ವಿಭಾಗಿಸಿ ಅಧ್ಯಯನ ಮಾಡುವ ಕ್ರಮ ರೂಢಿಯಲ್ಲಿದೆ. ಶರೀಫರ ಸಾಹಿತ್ಯದಲ್ಲಿ ಇವು ಎರಡೂ ಬಳಕೆಯಾಗಿರುವುದನ್ನು ಕಾಣುತ್ತೇವೆ. ಶರೀಫರ ತತ್ವಪದಗಳಲ್ಲಿ ಭಾಷೆ ಮತ್ತು ಶೈಲಿಯ ಸ್ವರೂಪವನ್ನು ಈ ಲೇಖನದಲ್ಲಿ ವಿವೇಚಿಸಲಾಗಿದೆ..” ಸಾಹಿತಿಗಳಾದ ಸಂಗಮೇಶ ಎಸ್ ಗಣಿ ಅವರ ಬರಹದಲ್ಲಿ
ಪ್ರತಿಯೊಬ್ಬ ಕವಿಗೂ ತನ್ನದೆಯಾದ ಭಾಷೆ ಮತ್ತು ಶೈಲಿ ಇದ್ದೇ ಇರುತ್ತದೆ. ಅವನ ಅಭಿವ್ಯಕ್ತಿಯಲ್ಲಿ ಅದು ಸ್ಪಷ್ಟವಾಗಿ ಕಂಡುಬರುತ್ತದೆ. ಭಾಷೆಯ ಮೂಲಕವೇ ಸಾಹಿತ್ಯಕ್ಕೊಂದು ಸ್ವರೂಪ ದಕ್ಕುತ್ತದೆ. “ಕವಿಗೆ ಇರುವ ಸಾಧನ-ಸಾಮಗ್ರಿಯೆಲ್ಲವೂ ಭಾಷೆಯೇ. ಈ ಭಾಷೆ ಬದುಕುವ ಪರಿಸರದ ಒಂದು ಸಾಮಾಜಿಕ ಸಂಪರ್ಕ ಮಾಧ್ಯಮ. ಅದು ಸಮಾಜದ ವ್ಯಕ್ತಿಗಳ ವ್ಯಾವಹಾರದ ಮಾಧ್ಯಮವಾದುದರಿಂದಲೇ, ಕವಿ ತಾನು ಬದುಕುವ ಸಮಾಜದೊಂದಿಗೆ, ತನ್ನ ಭಾವನೆಗಳನ್ನು ತಿಳಿಯಪಡಿಸಲು ಅಥವಾ ಹಂಚಿಕೊಳ್ಳಲು, ಆ ಸಮಾಜದ ಸಂಪರ್ಕ ಮಾಧ್ಯಮವಾದ ಭಾಷೆಯನ್ನೇ ಬಳಸಬೇಕಾಗುತ್ತದೆ. ಕವಿಯ ಮೂಲಭೂತವಾದ ಉದ್ದೇಶ ಭಾಷೆಯನ್ನು ತನ್ನ ಅನುಭವದ ಅಭಿವ್ಯಕ್ತಿಗೆ ದುಡಿಸಿಕೊಳ್ಳುವುದು. ಹೀಗೆ ಮಾಡಬೇಕಾದರೆ ಕವಿ ಅದನ್ನು ಯಥಾವತ್ತಾಗಿ ಬಳಸದೆ ಅದನ್ನು ತನ್ನ ಭಾವದ ಭಾಷೆಯನ್ನಾಗಿ ಮಾಡಿಕೊಳ್ಳುತ್ತಾನೆ ಅಥವಾ ಯಥಾವತ್ತಾದ ಭಾಷೆಯನ್ನು ಒಂದಷ್ಟು ಪರಿಷ್ಕರಿಸಿ ತನ್ನ ವ್ಯಕ್ತಿ ವಿಶಿಷ್ಟವಾದ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುತ್ತಾನೆ.’೧ ಕವಿಗೆ ತನ್ನ ನೆಲದ ಭಾಷೆ ಒಂದು ಅಸ್ತçವಾಗಿ ಬಳಕೆಯಾಗುವುದರ ಜೊತೆಗೆ ಕವಿಯ ಸಾಹಿತ್ಯಿಕ ಲಕ್ಷಣವನ್ನೂ ಸ್ಪಷ್ಟಪಡಿಸುತ್ತದೆ.
ಭಾಷೆ ಎಂಬುದು ‘ಭಾಷ್’ ಸಂಸ್ಕೃತದ ಪದದಿಂದ ನಿಷ್ಪತ್ತಿಯಾಗಿದೆ. ಮಾತನಾಡುವ ಕ್ರಿಯೆಯನ್ನು ಹೊಂದಿರುವ ಭಾಷೆಗೆ ಸಾಮಾಜಿಕ ಆಯಾಮವೂ ಇದೆ. ಮಾನವ ಜೀವನ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ಭಾಷೆ ಇರುವುದು ಕಂಡುಬರುತ್ತದೆ. ಕಾಲ ಪರಿವರ್ತನಾಶೀಲವಾದಂತೆ ಭಾಷೆಯೂ ನಿರಂತರವಾಗಿ ಬದಲಾಗುತ್ತಿರುತ್ತದೆ. ಭಾಷೆಯು ನಿತ್ಯವೂ ಬದಲಾಗುವುದು ಅದರ ಜೀವಂತಿಕೆಯ ಲಕ್ಷಣವಾಗಿದೆ. ಭಾಷೆಯನ್ನು ಬಳಸುತ್ತ ಕವಿಯಾದವನು ಬೆಳೆಯುತ್ತಾನೆ. ಕವಿಯ ಬರವಣಿಗೆಯ ಮೂಲಕ ಭಾಷೆ ಬೆಳೆಯುತ್ತಿರುತ್ತದೆ. ಭಾಷಾ ಪ್ರಕ್ರಿಯೆಯು ಸಾಂಸ್ಕೃತಿಕವಾಗಿ ಮಹತ್ವದ್ದಾಗಿರುವುದರ ಜೊತೆಗೆ ಕವಿಯನ್ನು ಜೀವಂತವಾಗಿಡುತ್ತದೆ. ಭಾಷೆ ಆಯಾಯ ಕಾಲ, ಧರ್ಮ, ಪ್ರದೇಶದ ಪ್ರತಿರೂಪವಾಗಿರುತ್ತದೆ.
ಕನ್ನಡ ಭಾಷಾ ಚರಿತ್ರೆಯಲ್ಲಿ ‘ಮಾರ್ಗ’ ಮತ್ತು ‘ದೇಸೀ’ ಎಂದು ವಿಭಾಗಿಸಿ ಅಧ್ಯಯನ ಮಾಡುವ ಕ್ರಮ ರೂಢಿಯಲ್ಲಿದೆ. ಭಾಷೆಯ ಅವಸ್ಥಾಂತರಗಳನ್ನು ಕುರಿತು ಚರ್ಚೆ ಬಹುಕಾಲದಿಂದಲೂ ಜಾರಿಯಲ್ಲಿದೆ. ‘ಮಾರ್ಗ’ ಎಂದರೆ ಬರವಣಿಗೆ ಅತ್ಯಂತ ಪ್ರೌಢವೂ, ಗಂಭೀರವೂ ಆಗಿರುವ ಭಾಷೆ. ‘ದೇಸಿ’ ಎಂದರೆ ಸರಳವೂ, ಜನರ ಆಡುಮಾತಿಗೆ ಸಮೀಪವಾಗಿರುವ ಭಾಷೆಯಾಗಿದೆ. ಸಂಸ್ಕೃತ ಭಾಷೆಯ ಪ್ರಭಾವದಿಂದ ಬರವಣಿಗೆ ಕ್ಲಿಷ್ಟವೂ, ಗಂಭೀರವೂ ಆಗಿರುವುದರಿಂದ ‘ಮಾರ್ಗ’ ಪಂಥ ರೂಪಗೊಂಡಿತು. ಸಂಸ್ಕೃತದ ಪ್ರಭಾವದಿಂದ ತಪ್ಪಿಸಿಕೊಂಡು ದೈನಂದಿನ ಸರಳವಾದ ಆಡುಮಾತುಗಳನ್ನೇ ಕಾವ್ಯದಲ್ಲಿ ಬಳಸಿರುವುದನ್ನು ‘ದೇಸಿ’ ಎಂದು ಕರೆಯಲಾಯಿತು. ಹೀಗೇ ಭಾಷೆ ಎರಡೂ ರೀತಿಯಲ್ಲಿ ಬಳಕೆಯಾಗಿರುವುದನ್ನು ಕಾಣುತ್ತೇವೆ. ಶರೀಫರ ತತ್ವಪದಗಳಲ್ಲಿ ಭಾಷೆ ಮತ್ತು ಶೈಲಿಯ ಸ್ವರೂಪವನ್ನು ಈ ಲೇಖನದಲ್ಲಿ ವಿವೇಚಿಸಲಾಗಿದೆ.
ಶರೀಫರ ತತ್ವಪದಗಳ ಭಾಷೆ ಮತ್ತು ಶೈಲಿ
ಶಿಶುನಾಳ ಶರೀಫರು ತಮ್ಮ ತತ್ವಪದಗಳಲ್ಲಿ ಬಳಸುವ ಭಾಷೆ ಆಡುನುಡಿಯಲ್ಲಿರುವುದನ್ನು ಗಮನಿಸಬಹುದು. ಇದು ಹೀಗೆ ರೂಪಗೊಂಡಿರುವುದು ಅಸಹಜವೇನಲ್ಲ. ಶರೀಫರು ಜನರ ಮಧ್ಯೆಯೇ ಬೆಳೆದು ಬಾಳಿದರು. ಅವರ ತತ್ವಪದಗಳಲ್ಲಿ ಜನಪದರ ನುಡಿಬಳಕೆಯನ್ನು ಕಾಣಬಹುದು. ವಸಾಹತುಶಾಹಿ ಪ್ರಭಾವ ದಟ್ಟವಾಗಿದ್ದರೂ ಭಾಷೆಯನ್ನು ಬದಲಿಸಿಕೊಳ್ಳದೇ ತಮ್ಮದೇ ದೇಸಿ ಭಾಷೆಯನ್ನು ಬಳಸಿದ್ದು ತತ್ವಪದಕಾರರ ವಿಶೇಷತೆಯಾಗಿದೆ. ಅದರಲ್ಲೂ ಶರೀಫರು ಅಚ್ಚಗನ್ನಡದ ಪದಗಳನ್ನು ತತ್ವಪದಗಳಲ್ಲಿ ಬಳಸಿರುವುದು ಅವರ ಅನನ್ಯತೆಗೆ ಸಾಕ್ಷಿಯಾಗಿದೆ.
ಶರೀಫರು ಸಂಸ್ಕೃತ, ಉರ್ದು ಭಾಷೆಗಳ ಬಗ್ಗೆ ತಿಳಿದಿದ್ದರೂ ಉತ್ತರ ಕರ್ನಾಟಕ ಭಾಗದ ಅಪ್ಪಟ ಕನ್ನಡ ಆಡುನುಡಿಯನ್ನೇ ತಮ್ಮ ತತ್ವಪದಗಳಿಗೆ ಬಳಸಿಕೊಂಡಿರುವುದು ವಿಶೇಷವಾಗಿದೆ. ಅಲ್ಲಮಪ್ರಭುಗಳ ಪ್ರಭಾವ, ವೀರಶೈವ ಪುರಾಣಗಳ ಅಧ್ಯಯನ, ಗುರು ಗೋವಿಂದ ಭಟ್ಟರ ಸಂಪರ್ಕದಿಂದ, ಸಂಸ್ಕೃತ ಭಾಷೆಗಳ ಪರಿಚಯ ಇರುವುದರಿಂದ ತತ್ವಪದಗಳಲ್ಲಿ ಬೆಡಗಿನ ಭಾಷೆಯನ್ನೂ ಬಳಸುತ್ತಾರೆ. ಹೇಳಬೇಕಾದುದನ್ನು ನೇರವಾಗಿ ಹೇಳಿದರೂ ಅದನ್ನು ನುಡಿಬೆಡಗಿನ ಮೂಲಕ ತಿಳಿಸುತ್ತಾರೆ. ಶರೀಫರ ಕಾವ್ಯಕ್ಕೆ ಭಾಷೆಯ ಬೆಡಗು ಕಾರಣವಾಗಿದೆ. ಮಾತಿನ ಲಯ ದಕ್ಕಿಸಿಕೊಂಡ ಶರೀಫರ ಭಾಷೆಗೆ ಜನಸಾಮಾನ್ಯರ ಆಡುನುಡಿಯ ಸೋಂಕಿದೆ. ಅನುಭವಗಳನ್ನು ಅನೇಕ ಪ್ರತಿಮೆಗಳ ಮೂಲಕ ಹೇಳುವ ಅವರಿಗೆ ಭಾಷಾಕಲೆ ಸಿದ್ಧಿಸಿದೆ. ಭಾಷೆಯು ಬೆರಗು ಅಲ್ಲದೆ ಅದೊಂದು ಸಹಜ, ಸ್ವಾಭಾವಿಕ ಅನ್ನುವಷ್ಟು ಸರಳವಾಗಿ ಅವರ ಕಾವ್ಯದಲ್ಲಿ ನುಸುಳುತ್ತದೆ. ಅಮೂರ್ತವಾದುದನ್ನು ಮೂರ್ತಗೊಳಿಸುವ ಶಕ್ತಿ ಶರೀಫರ ಭಾಷೆಗಿರುವುದು ವಿಶೇಷ. ಅಲಂಕಾರಗಳನ್ನು ಬಳಸಿಕೊಳ್ಳುವ ಮೂಲಕ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಂಡ ಶರೀಫರ ತತ್ವಪದಗಳು ಜನಪ್ರಿಯಗೊಂಡಿದ್ದು ಅವರ ಭಾಷಾ ಲಾಲಿತ್ಯದಿಂದಾಗಿ. ಅವರ ಭಾಷೆಗೆ ಘಟನೆಗಳನ್ನು ಕಣ್ಣಿಗೆ ಕಟ್ಟುವ ಹಾಗೇ ವರ್ಣಿಸುವ ಚಿತ್ರಕಶಕ್ತಿ ಇದೆ. ನಿಷ್ಠುರವಾಗಿದ್ದುದರಿಂದ ಮಾತಿಗೆ ಒಂದು ರೀತಿಯ ಮೊಣಚು, ವ್ಯಂಗ್ಯ, ವಿಡಂಬನೆ, ಎಲ್ಲವನ್ನೂ ಅವರ ಭಾಷೆಯಲ್ಲಿ ಕಾಣುಬಹುದಾಗಿದೆ. ಪಂಡಿತ ವರ್ಗದಿಂದ ದೂರ ನಿಂತು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೇ ಭಾಷೆಯನ್ನು ಬಳಸಿದ್ದು ಶರೀಫರ ಹೆಚ್ಚುಗಾರಿಕೆಯಾಗಿದೆ.
ಶರೀಫರ ಭಾಷಾ ಬಳಕೆ : ನಾಲ್ಕು ಹಂತಗಳು
‘ಆಶುಕವಿಗಳಾದ ಶರೀಫರ ಕಾವ್ಯಶಕ್ತಿಯು ಒಮ್ಮೆಲೆ ಬೆಳೆದು ಸಿದ್ಧಿಶೈಲಿಯನ್ನು ಹೊಂದಿದAತೆ ತೋರುವುದಿಲ್ಲ. ಅವರ ಕಾವ್ಯಶಕ್ತಿಯು ಮೊಗ್ಗೆಯಿಂದ ಹಿಡಿದು ಫಲವಾಗಿ ಕಳಿಯುವಂತೆ ಹಂತ ಹಂತವಾಗಿ ಸಿದ್ಧಿ ಹೊಂದಿದAತೆ ಕಾಣುತ್ತದೆ. ಶರೀಫರ ಕಾವ್ಯದ ಬೆಳವಣಿಗೆಯಲ್ಲಿ ನಾಲ್ಕು ಘಟ್ಟಗಳನ್ನು ಗುರುತಿಸಬಹುದಾಗಿದೆ’ ಎಂಬುದನ್ನು ಎಂ.ಎನ್. ಸಿಂದಗಿಯವರು ಗುರುತಿಸುವುದನ್ನು ಶಿವಾನಂದ ಗುಬ್ಬಣ್ಣನವರು ಉಲ್ಲೇಖಿಸುತ್ತಾರೆ.
ಶರೀಫರು ಬರೆಯುವ ಆರಂಭದ ಘಟ್ಟದಲ್ಲಿ ಅವರ ಭಾಷೆಗೆ ಕಾವ್ಯದ ಬನಿ, ಬಂಧುರತೆ ಇದ್ದಂತೆ ಕಾಣಿಸುವುದಿಲ್ಲ. ಉದಾ;
“ಆಶಾಮಾಡಿ ಪಾಶಕ ಬಿದ್ದಿತೋ ಚಿಗರಿ
ದೇಶಕ ತುಂಬ ಜಾಲ ಹಾಕಿದ ಕ್ಷತ್ರಿ
ಮೇಯಲಿಕ್ಕೆ ಬಿಟ್ಟು ಬಂದಿತು ತನ್ನ ಮರಿ
ಮೋಸದಿ ಸಿಲುಕಿತು ಅರಸನ ಕೈಸೇರಿ
ಬಿಡಿರಿ ಸ್ವಲ್ಪ ಕುಡಿಸಿ ಬರುವೆನು ಹಾಲ
ಅಗಲಿದಿಯೋ ಅಯ್ಯೋ ಬಾಲ ಗೋಪಾಲ
ಅರಸನಿಗೆ ಕರುಣ ಬರಲಿಲ್ಲರಿ
ಮುಖಭಂಗವಾಗಿತ್ತು ದುಃಖದೊಳು ಚಿಗರಿ
ಮನಿಗೆ ಹೋಗಿ ಮಕ್ಕಳ ನೋಡಿಬರುವೆನ್ರಿ
ಬೇಕಾದವ್ರನ ಬೇಡ್ರಿ ಕೊಡುವೆನು ಜಾಮೀನ್ರಿ
ಮೃಗಜಾತಿ ನಿನ್ನ ನಂಬಿಗೆಯೇನು
ಅಡವಿಯಲಿ ಮೇಯುತ್ತಿದ್ದ ಬೆದರಿ…’೨ ಇಲ್ಲಿ ವರದಿ ರೂಪದ ಭಾಷೆಯನ್ನು ಬಳಸಿರುವುದು ಕಂಡುಬರುತ್ತದೆ. ಯಾವುದೇ ವಿಶೇಷಣಗಳಾಗಲಿ, ಪ್ರತಿಮೆಗಳಾಗಲಿ ಇಲ್ಲದೇ ಭಾಷೆ ಸೊಗಯಿಸಿಲ್ಲ. ಶರೀಫರು ಆರಂಭದಲ್ಲಿ ಕಂಡದ್ದನ್ನು ಕಂಡ ಹಾಗೇ ಹೇಳುವ ಮಾತಿನ ಶೈಲಿಯಲ್ಲಿ ತತ್ವಪದಗಳನ್ನು ರಚಿಸಿದ್ದಾರೆ. ಮುಂದಿನ ತತ್ವಪದ ರಚನೆಯಲ್ಲಿ ಭಾಷೆ ಒಂದು ಬಿಗು, ಬಿನ್ನಾಣಗಳನ್ನು ಪಡೆದುಕೊಂಡಿರುವುದನ್ನು ಗುರುತಿಸಬಹುದು. ಶಿಶುನಾಳ ಊರಿನ ಹೆಸರಿನಲ್ಲಿ ಪದಗಳನ್ನು ಕಟ್ಟಿ ಹಾಡಿದ್ದಾರೆ ;
“ಶಿಶುನಾಳ ಎಂಬುದು ಜಾಹಿರಾ
ಶರೀಫಸಾಹೇಬ ಮಾಡ್ಯಾನೋ ಕವಿಚತುರಾ’ ಎಂಬ ತತ್ವಪದದಲ್ಲಿ ಶಿಶುನಾಳದ ಹೆಸರಿನಲ್ಲಿ ಪದಕಟ್ಟಿ ಹಾಡಿರುವುದಾಗಿ ಕಂಡುಬರುತ್ತದೆ. ಅದರಲ್ಲಿ ಅವರಿಗೆ ಸ್ವಲ್ಪ ಅಹಂಭಾವವೂ ಇರುವಂತೆ ತೋರುತ್ತದೆ.
“ಹಾಕಿದ ಜನಿವಾರವಾ ಸದ್ಗುರು ನಾಥಾ
ಹಾಕಿದ ಜನಿವಾರವಾ…
ಶಿಶುನಾಳಧೀಶನಲ್ಲೇ ಹುಣ್ಣಿವಿನೂಲು
ಹೊಸತಾಗಿ ಹೊಸೆಯುತಲಿ
ಮುಸುಕಿರ್ದ ವ್ಯಸನದ ಕಸರನು ಕಳಿಯೆಂದು
ಹಸನಾಗಿ ಮೂಲಮಂತ್ರದ ಮನಿಯೊಳು” ೩ ಎಂಬಲ್ಲಿಯೂ ‘ಶಿಶುನಾಳಧೀಶ’ ಅಂಕಿತದಲ್ಲಿಯೇ ಪದಕಟ್ಟಿ ಹಾಡಿದ್ದಾರೆ. ಇನ್ನೂ ಕೆಲವು ಪದಗಳನ್ನು ಉದಾಹರಿಸುವುದಾದರೆ;
“ನೋಡು ಬಾ ಗುರುನಾಥನ ಸಖಿ
ನೋಡುವೆನು ಬಾ ಮುಕ್ತಿ ಬೇಡುವೆನು ಬಾರೆ…
…………………………………………..
ವಸುಧೆಗೆ ಶಿಶುನಾಳಧೀಶನೆನಸಿದ
ಎಸವೆನ್ನಿ ನೇತ್ರನ ವಂದಿಸಿಯಾತನ ಸಖಿ ನೋಡುನು ಬಾ’೪
“ಶ್ರೀಗುರುನಾಥನ ಆಲಯದೊಳು ನಾ-
ವರ್ವರು ನಲಿದಾಡುನು ಬಾಬಾ………………
ನಡಿನಡಿ ಶಿಶುನಾಳಧೀಶನ ಗುಡಿಯೊಳು
ಅಡಗಿದ ಪ್ರಮಾಣವ ನೋಡುನು ಬಾ ಬಾ’೫ ಈ ಎಲ್ಲ ಪದಗಳಲ್ಲಿ ಶರೀಫರು ಶಿಶುನಾಳ ಎಂಬ ಅಂಕಿತದಿಂದ ಬರೆದಿದ್ದಾರೆ. ಅನಂತರ ಶರೀಫರು ತತ್ವಪದಗಳನ್ನು ಬರೆಯುವ ಸಂದರ್ಭದಲ್ಲಿ ಪ್ರಯೋಗಿಸಿದ ಭಾಷೆಯ ಬಳಕೆಯಲ್ಲಿ ಅಲ್ಪ ಸ್ವರೂಪದ ಬದಲಾವಣೆ ಕಂಡುಬರುತ್ತದೆ.
ಅವರ ಬರವಣಿಗೆಯ ಎರಡನೇ ಘಟ್ಟದಲ್ಲಿ ತಮ್ಮ ಗುರು ಗೋವಿಂದಭಟ್ಟರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ. ಇಲ್ಲಿ ಸತೀಭಾವ ಪ್ರಕಟಿಸಿದ್ದಾರೆ. ಗುರು ಗೋವಿಂದರ ಅಂಕಿತದಲ್ಲಿಯೇ ಕಾವ್ಯವನ್ನು ರಚಿಸಿರುವುದು ತಿಳಿಯುತ್ತದೆ.
“ನಂಬಿದೆನಯ್ಯಾ ನಿನ್ನ ಸದ್ಗುರು ರಾಯಾ
ರಕ್ಷಿಸು ಎನ್ನ ಪ್ರಿಯಾ
………………………….
ಪೊಡವಿಪ ಶಿಶುನಾಳ ಒಡಿಯನೆ ಕರುಣಿಸೊ
ಕೊಡುಮತಿ ಸದ್ಗುರು ಗೋವಿಂದನಾಥನೆ” ೬
“ಸದ್ಗುರುನಾಥನ್ಹೊರತು
ಮುಕ್ತಿದಾತನೆನ್ನುತ ತಾ ಶ್ರುತಿ ಸಾರುತಿದೆ…….
ಏನು ಹೇಳಲಿ ಆತನ ದಯದಿಂದಾ
ಶಿಶುನಾಳೇಶನ ವರದಿಂದಾ
ತಾನು ನಾನೇ ಆದನು ಗುರುಗೋವಿಂದಾ” ೭
‘ಗುರುಧ್ಯಾನವ ಮಾಡಿದಿ
ಭಕ್ತಿಯ ನೀಡಿದಿ……………………….
ಸದಾ ಶಿಶುನಾಳ ಸಾಧುಸಂತ ಮೇಳಾ
ಗುರುಗೋವಿಂದ್ಹೌದೇಳಾ” ೮ ಇಲ್ಲಿನ ಪದಗಳಲ್ಲಿ ‘ಗುರು ಗೋವಿಂದನ’ ಹೆಸರಿನ ಅಂಕಿತವನ್ನು ಪ್ರಯೋಗಿಸಿರುವುದನ್ನು ಕಾಣಬಹುದು.
“ನನ್ನೊಳಗ ನಾ ತಿಳಕೊಂಡೆ
ನನಗ ಬೇಕಾದ ಗಂಡನ ಮಾಡಿಕೊಂಡೆ
………………………………………………….
ಶಿವಶವಯೆಂಬ ಹಾದಿ ಬೇಡಿಕೊಂಡೆ
ಗುರೂಪದೇಶವ ಪಡಕೊಂಡೆ
ಈ ಭವಕೆ ಬಾರದಂತೆ ಮಾಡಿಕೊಂಡೆ
ಗುರುಗೋವಿಂದನಾ ಪಾದಾ ಹಿಡಕೊಂಡೆ…” ೯
“ಕೋಡಗನ ಕೋಳಿ ನುಂಗಿತ್ತ
ನೋಡವ್ವ ತಂಗಿ
……………………………………..
ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರುವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ್ತ!” ೧೦
“ಎಲ್ಲರಂಥವನಲ್ಲ ನನಗಂಡ
ಬಲ್ಲಿದನು ಪುಂಡ
………………………………………
ಕಾಂತೆ ಕೇಳೆಲೆ ಕರುಣ ಗುಣದಿಂದಾ
ಬಂದು ದೊರಕಿದಾ ಪುಣ್ಯಫಲದಿಂದಾ
ಎನ್ನಂತರಂಗದ ಕಾಂತ ಶ್ರೀಗುರುಗೋವಿಂದಾ…..” ೧೧ ಹೀಗೇ ಶರೀಫರು ಗುರುವನ್ನು ತನ್ನ ಇಷ್ಟದ ದೇವರನ್ನಾಗಿ ಮಾಡಿಕೊಳ್ಳುವ ಜೊತೆಗೆ ‘ಕಾಂತೆ’ಯ ರೀತಿಯಲಿಯ್ಲೂ ಪರಿಭಾವಿಸಿರುವುದು ಅವರ ಕಾವ್ಯದ ವಿಶಿಷ್ಟ ಶೈಲಿಗೊಂದು ನಿದರ್ಶನವಾಗಿದೆ.
ಗುರುಕೃಪೆ ಎನ್ನುವುದು ಸಖೀಯ ರೀತಿಯಲ್ಲಿ ಪೊರೆಯಬೇಕೆಂಬ ಇಚ್ಛೆ ಶರೀಫರಿಗಿರುವುದರಿಂದ ಮುಕ್ತಿಮಾರ್ಗ ಸುಲಭಸಾಧ್ಯ ಎಂದು ಬಗೆದಿದ್ದಾರೆ. ಗುರುವನ್ನು ಕಾಂತೆಯ ರೂಪದಲ್ಲಿ ಕಾಣುವುದೇ ವಿಶೇಷವಾಗಿದೆ. ಪಾರಮಾರ್ಥದ ಗಿರಿಶಿಖರದ ತುತ್ತತುದಿಗೇರಿದ ಗುರುಗೋವಿಂದ ಭಟ್ಟರ ಮಾರ್ಗದರ್ಶನದಲ್ಲಿ ಸಿದ್ಧಿ ಸಾಧಿಸಿಕೊಳ್ಳಬೇಕೆಂಬ ಪ್ರಯತ್ನದಲ್ಲಿ ತೊಡಗಿಕೊಂಡರು.
ಅನಂತರದಲ್ಲಿ ಅವರು ಶಿಶುನಾಳಧೀಶ ಮತ್ತು ಗುರುಗೋವಿಂದರನ್ನೂ ಅಂಕಿತವನ್ನಾಗಿ ಪದಗಳನ್ನು ಕಟ್ಟಿದ್ದು ಮೂರನೇ ಘಟ್ಟದಲ್ಲಿ. ಅವರಿಗೆ ಈರ್ವರೂ ಮುಖ್ಯವೆನಿಸಿರಬೇಕು. ಕಾವ್ಯವೂ ಅವರಿಬ್ಬರ ಅಂಕಿತದಲ್ಲಿಯೇ ಮೂಡಿಬಂದಿರುವುದನ್ನು ಗಮನಿಸಬೇಕು.
“ಶ್ರೀಗುರು ನಿತ್ಯನಿರಾಲಂಬ ನಿಜಪದ
ಈ ಆತ್ಮಾಶಿವಯೋಗಿ
……………………………………………….
ವಸುಧೆಯೊಳು ಶಿಶುನಾಳಧೀಶನ ಸೇವಕ
ಉಸುರಿದ ನುಡಿಕೇಳಿ ಪಸರಿಸುವ
ಶಶಿಕಿರಣದೊಳು ಗುರುಗೋವಿಂದನಾಥನ…..”
“ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ
ಕರಪಿಡಿದೆಳೆದನ್ನ ಕರಣದೊಳೂದಲು
……………………………………………………
ಅಸಮ ಸದ್ಗುರು ಗೋವಿಂದನ ಸೇವಕ
ಶಿಶುನಾಳಧೀಶನ ಶೃತಿ ಸಾರಿದೆನೋ” ೧೨ ಇಲ್ಲಿ ಈರ್ವರನ್ನೂ ಅಂಕಿತವನ್ನಾಗಿ ಪದಗಳನ್ನು ರಚಿಸಿರುವುದು ತಿಳಿಯುತ್ತದೆ.
“ಜಡದೇಹಿ ಜಗದಿ ನಾನು ಪರಂಜ್ಯೋತಿ
ಮೃಡರೂಪ ಮೂರ್ತಿ ನೀನು
ಪೊಡವಿಪ ಶಿಶುನಾಳ ಒಡೆಯನೆ ಕರುಣಿಸು
ಕೊಡುಮತಿ ಸದ್ಗುರು ಗೋವಿಂದನಾಥನೆ”
ಇದೇ ಮನಿ ಇದೇ ಮನಿ
ಹೃದಯದೊಳ ನಲಿದ್ಯಾಡುವಾತ್ಮಗೆ
…………………………………………..
ಶಿಶುನಾಳಧೀಶ ಗುರುಗೋವಿಂದನು
ಹಸನಾಗಿ ವಾಸಿಸಿ ಎಸೆಯುವ ಸುಂದರ’ ೧೩ ಇಲ್ಲಿನ ಪದಗಳಲ್ಲಿ ಶರೀಫರು ಇಷ್ಟದೈವ ಶಿಶುನಾಳಧೀಶ, ಪಡೆದ ಗುರು ಗೋವಿಂದ ಭಟ್ಟರನ್ನು ಕುರಿತು ಶ್ರದ್ಧೆ, ಭಕ್ತಿಯನ್ನು ಪ್ರಕಟಿಸಿದ್ದಾರೆ. ಗುರು ಶಿಷ್ಯರ ನಡುವಿನ ಸಂಬಂಧ ಇನ್ನೂ ಗಾಢವಾಗಿರುವುದು ಸ್ಪಷ್ಟವಾಗುತ್ತದೆ.
ಶರೀಫರ ಕಾವ್ಯದ ಬೆಳವಣಿಗೆಯ ನಾಲ್ಕನೆ ಘಟ್ಟದಲ್ಲಿ ಅವರು ಶಿಶುನಾಳಧೀಶನ ಅಂಕಿತದಲ್ಲಿಯೇ ಪದಗಳನ್ನು ಕಟ್ಟಿದರು. ಆರಂಭದ ಗೊಂದಲಗಳಾಗಲಿ, ದ್ವಂದ್ವಗಳಾಗಲಿ ಇರದೇ ಈ ಭೂಮಿಯೊಡೆಯನಾದ ಶಿಶುನಾಳಧೀಶನನ್ನೇ ತನ್ನ ಆತ್ಮದ ನಿಜದ ನೆಲೆಯೆಂದು ಭಾವಿಸಿದರು. ಜೀವನದ ಪಾವನತೆಗೆ ಶಿಶುನಾಳಧೀಶನೇ ಸಾಕು ಎಂಬ ನಿಲುವು ಶರೀಫರಿಗಿತ್ತು.
“ಶರೀಫರು ದೇಹತ್ಯಾಗ ಮಾಡುವುದಕ್ಕಿಂತ ಕೆಲ ವರ್ಷಗಳ ಪೂರ್ವದಲ್ಲಿಯೇ ಗುರುಗೋವಿಂದ ಭಟ್ಟರು ದೇಹತ್ಯಾಗ ಮಾಡಿದಂತೆ ತೋರುತ್ತದೆ. ತದನಂತರ, ಸ್ವಸ್ವರೂಪ ದರ್ಶನವೆನಿಸಿದ ಶಿಶುನಾಳಧೀಶನ ಬೆಳಕನ್ನೇ ಅವರು ನಂಬಿದಂತೆ ಕಾಣುತ್ತದೆ” 14 ಶರೀಫರು ತಮ್ಮದೇಯಾದ ವಿಶಿಷ್ಟ ಶೈಲಿಯನ್ನು ಅನುಸರಿಸಿದರು. ವಸ್ತುವನ್ನು ಭಾಷೆಯಲ್ಲಿ ಹಿಡಿದು ಕಟ್ಟುವಾಗ ಅವರು ಬಳಸಿದ ಕ್ರಮ ಮುಖ್ಯವಾದುದು. ಅವರ ಶೈಲಿ ಕನ್ನಡ ಕಾವ್ಯಜಗತ್ತಿಗೆ ಮಾದರಿಯಾಗಿದೆ.
ಅಡಿ ಟಿಪ್ಪಣಿಗಳು
ಜಿ.ಎಸ್. ಶಿವರುದ್ರಪ್ಪ, ಕನ್ನಡ ಸಾಹಿತ್ಯ ಸಮೀಕ್ಷೆ, ೨೦೦೮, ಪು ೧೦೮
ಶಿವಾನಂದ ಗುಬ್ಬಣ್ಣವರ(ಸಂ), ಶಿಶುನಾಳ ಶರೀಫರ ಗೀತೆಗಳು, ೧೯೮೫, ಪು ೪೧೨
ಅದೇ, ಪು ೪೦
ಅದೇ, ಪು ೪೦
ಅದೇ, ಪು ೪೦ & ೪೧
ಅದೇ, ಪು ೩೭ & ೩೮
ಅದೇ, ಪು ೪೦
ಅದೇ, ಪು ೪೧
ಅದೇ, ಪು ೪೧
ಅದೇ, ಪು ೨೨೩
ಅದೇ, ಪು ೧೦೮
ಅದೇ, ಪು ೩೭
ಅದೇ, ಪು ೪೨
ಅಂತರ್ಜಾಲ ಲೇಖನ
ಆಕರ ಗ್ರಂಥಗಳು
ಜಿ.ಎಸ್. ಶಿವರುದ್ರಪ್ಪ, ಕನ್ನಡ ಸಾಹಿತ್ಯ ಸಮೀಕ್ಷೆ, (೨೦೦೮)
ಶಿವಾನಂದ ಗುಬ್ಬಣ್ಣವರ(ಸಂ), ಶಿಶುನಾಳ ಶರೀಫರ ಗೀತೆಗಳು, (೧೯೮೫)
Peepal Media Desk
Peepal Media · ಅಂಕಣ ವಿಭಾಗ