ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕರ್ನಾಟಕದ 64 ಕ್ಷೇತ್ರಗಳಲ್ಲಿ 8.80 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರ ಹೆಸರು ಅಳಿಸಲಾಗಿದೆ: ಮುಸ್ಲಿಂ ಒಕ್ಕೂಟ ಆರೋಪಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಪ್ರಕರಣ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೇಜಸ್ವಿ ಸೂರ್ಯ ತಿರುಗೇಟು; ಮೂರು ದಿನಗಳಲ್ಲಿ ಸಾಕ್ಷ್ಯ ನೀಡುವಂತೆ ಸವಾಲುಭಾವಪುಂಜ – 3 : ಅಡುಗೆಮನೆ ಅಂದು ಇಂದುಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ವಿಜಯನಗರ ನಿಲ್ದಾಣದಲ್ಲಿ ಹಳಿಗೆ ಹಾರಿದ ಪ್ರಯಾಣಿಕನಾಟಕಕ್ಕೂ ಬೇಕಾ ಪೋಲೀಸ್ ಕಣ್ಗಾವಲು?ರಾಮಾಯಣ ಮತ್ತು ಕರುನಾಡಿನ ಭೌಗೋಳಿಕ ನಂಟುಕಲಬುರಗಿ ಸಮೀಪ ಶರಣರ ವಚನ ಪರಂಪರೆಗೆ ಹೊಸ ಸ್ಪರ್ಶ; ವಚನ ಮಂಟಪ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಿಂತನೆರಾಜ್ಯ ಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ: 35 ತಹಶೀಲ್ದಾರ್‌ಗಳಿಗೆ ಹೊಸ ಜವಾಬ್ದಾರಿಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಶಿರಾಡಿಘಾಟ್ ಕಂದಕದಲ್ಲಿ – ಬೆಚ್ಚಿ ಬೀಳಿಸುವ ಸಂಗತಿE20 ಪೆಟ್ರೋಲ್ ವಿವಾದಕ್ಕೆ ಮತ್ತೊಂದು ತಿರುವು: 20% ಎಥನಾಲ್ ಎಂದ BPCL ಪೋಸ್ಟ್‌ನಲ್ಲಿ ಕಂಡಿದ್ದು 33%; ತಕ್ಷಣವೇ ಟ್ವಿಟ್ ಡಿಲೀಟ್ಟರ್ಕಿಯ ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 16 ಕಾರ್ಮಿಕರು ಸಾವು, ಹಲವರಿಗೆ ಗಾಯಐಫೋನ್ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ದುರಂತ; ವಿಷಕಾರಿ ಅನಿಲ ಸೇವಿಸಿ ಮೂವರು ಕಾರ್ಮಿಕರು ಸಾವು!ಹಾಸನ DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ – ತನಿಖೆಗೆ HDK ಒತ್ತಾಯದೀಪಾವಳಿ ಪಟಾಕಿ ಹಾವಳಿ; ದೆಹಲಿ ವಾಯುಮಾಲಿನ್ಯದ ನಂತರ ಬೆಂಗಳೂರಿನ ಗಾಳಿ ಕಲುಷಿತ!ಮಾಲಿನ್ಯದಲ್ಲಿ ಶೇ.25ರಷ್ಟು ಏರಿಕೆLPG ಕೆ.ಜಿಗೆ 11 ರೂ ಹೆಚ್ಚಳ ಆಟೋ ಚಾಲಕರಿಗೆ – ಗಾಯದ ಮೇಲೆ ಬರೆಐದು ದಶಕಗಳ ಭಾರತದ ಇತಿಹಾಸಕ್ಕೆ ಸಾಕ್ಷಿಯಾದ ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ; ಪುಸ್ತಕ ಮಳಿಗೆಗಳಲ್ಲಿ ಓದುಗರ ಆಸಕ್ತಿ!ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ – ಹೈಕೋರ್ಟ್ ಗರಂಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಂಘ ಪರಿವಾರ ಕೈವಾಡ – ಪ್ರಿಯಾಂಕ್ ಖರ್ಗೆಎಐ ಯುಗದಲ್ಲಿ ನಕಲಿ ಚಾಟ್ ಸೃಷ್ಟಿಸಿ ಮಾನಹಾನಿ ಮಾಡುವುದು ಕುಮಾರಸ್ವಾಮಿಯವರಿಗೆ ಶೋಭೆಯಲ್ಲ: ಕೆ. ಎಂ. ಶಿವಲಿಂಗೇಗೌಡ44,250 ಸಜೀವ ಗುಂಡುಗಳ ವಶ: ಆರ್‌ಎಸ್‌ಎಸ್‌–ಬಿಜೆಪಿಗೆ 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ್ ಖರ್ಗೆ

ಭಾವಪುಂಜ – 3 : ಅಡುಗೆಮನೆ ಅಂದು ಇಂದು

PPeepal Media Desk

Peepal Media Desk ಅಂಕಣ

• 5 ನಿಮಿಷದ ಓದು

ಭಾವಪುಂಜ – 3 : ಅಡುಗೆಮನೆ ಅಂದು ಇಂದು

“..ಈಗಿನ recycling ಆಗಲೇ ಬಳಕೆಯಲ್ಲಿತ್ತು. ಪಾತ್ರೆ ತೊಳೆಯುವುದು ಎನ್ನುತ್ತಿರಲಿಲ್ಲ ಪಾತ್ರೆ ಬೆಳಗುವುದು ಎನ್ನುತ್ತಿದ್ದರು. ತೊಳೆಯುವುದು ಎಂದಾಗ ಇದ್ದ ಒತ್ತಡ ಬೆಳಗುವುದು ಎಂದಾದಾಗ ದೈವಿಕ ಭಾವ ಮೂಡುತ್ತಿತ್ತು..” ಲೇಖಕಿ ಅಶ್ವಿನಿ ಎಸ್.ಟಿ ಅವರ ಬರಹದಲ್ಲಿ

ಶಿಲಾಯುಗದ ಕಾಲ ಮುಗಿದು ಕುಟುಂಬ ವ್ಯವಸ್ಥೆ ಜಾರಿಗೆ ಬಂದ ಕಾಲದಿಂದಲೂ ಅಡುಗೆಮನೆ ಮನುಷ್ಯನ ಹಸಿವು ತಣಿಸುವ ತಾಣವಾಗಿದೆ. ವಿಶಾಲವಾದ ಕೋಣೆ, ನಸು ಕತ್ತಲೆಯಿಂದ ಕೂಡಿದ ಅಡುಗೆಮನೆ ಹೊರಬೀದಿಯಿಂದ ಸ್ವಲ್ಪ ದೂರವೇ ಇರುತ್ತಿತ್ತು. ಮೂಲೆಯಲ್ಲಿ ಬೃಹದಾಕಾರದ ಒಲೆ, ಪಕ್ಕದಲ್ಲೇ ಹದಿದ ತಾಮ್ರದ ಹಂಡೆ ಮಾರು ದೂರದಲ್ಲಿ ಕೈ ಬಚ್ಚಲು ಇರುತ್ತಿತ್ತು. ಧಾನ್ಯಗಳ ಶೇಖರಣೆಗೆ ಸ್ವಾರೆಗಳನ್ನು ಒಂದರ ಮೇಲೊಂದು ಜೋಡಿಸಿ ಇಡಲಾಗುತ್ತಿತ್ತು. ವಾರ ಒಪ್ಪೊತ್ತು ಮಾಡುವಾಗ ಅವನ್ನು ಶುಭ್ರವಾಗಿ ಒರೆಸಿ ವಿಭೂತಿ ಕುಂಕುಮ ಏರಿಸಲಾಗುತ್ತಿತ್ತು. ಅಕ್ಕಿ,ರಾಗಿ,ಜೋಳ ಶೇಖರಣೆಗೆ ವಾಡೇವು ಇರುತ್ತಿದ್ದವು.

ದಿನದ ಆರಂಭ ಒಲೆಯ ಬೂದಿಯನ್ನು ತೆಗೆಯುವುದರಿಂದಲೇ ಶುರು. ಒಲೆಯ ಸುತ್ತಮುತ್ತ ಗುಡಿಸಲೆಂದೇ ಇದ್ದ ಮೋಟು ಪರಕೆಯಲ್ಲಿ ಕಸ ತೆಗೆದು ಬೂದಿಯ ಜೊತೆಯಲ್ಲೇ ತಿಪ್ಪೆಗೆ ಹಾಕಿ ಬಂದು, ಒಲೆಗೆ ಸ್ವಲ್ಪವೇ ನೀರು ಹನಿಸಿ ಅರಿಶಿನ ಕುಂಕುಮ ಹಚ್ಚಿ, ರಂಗೋಲಿ ಬಿಟ್ಟು, ಕೈ ಮುಗಿದು, ಒಣಗಿದ ಕಡ್ಡಿಪುಳ್ಳೆಗಳನ್ನು ದೂಡಿ ಬೆಂಕಿ ಹಚ್ಚಿದರೆ ಅಗ್ನಿದೇವ ಮನೆಗೆ ಬಂದಂತೆ. ಕೊಟ್ಟಿಗೆಯಿಂದ ನೇರವಾಗಿ ಬಂದಂತಹ ಹಾಲು ಒಲೆಯ ಮೇಲಿಟ್ಟು ಅದನ್ನು ಕಾಯಿಸುವ ಕಾಯಕ. ರಾತ್ರಿಯೇ ಹೆಪ್ಪಾಕಿ ನೆಲುವಿನಲ್ಲಿ ತೂಗುತ್ತಿದ್ದ ಮೊಸರಿನ ಗಡಿಗೆಯನ್ನು ಕೆಳಕ್ಕೆ ಇಳುಕಿ ಬಾಗಿಲ ಪಕ್ಕದಲ್ಲೇ ಇದ್ದ ಕಡೆಗೋಲಿನಲ್ಲಿ ಬೆಣ್ಣೆ ತೆಗೆಯುವ ಕೆಲಸ. ಮಕ್ಕಳೆಲ್ಲಾ ಬೆಣ್ಣೆ ತಿನ್ನುವ ಆಸೆಯಿಂದ ಸುಳಿದಾಡಿದರೆ ಕೈಯಲ್ಲಿಷ್ಟು ಬೆಣ್ಣೆ ಮುದ್ದೆ ಸಿಕ್ಕಿದ ಕೂಡಲೇ ಓಟ. ದೊಡ್ಡ ಪಾತ್ರೆಯಲ್ಲಿ ಶೇಖರವಾದ ಮಜ್ಜಿಗೆ ಮನೆ ಬಳಕೆಗೆ ತೆಗೆದಿಟ್ಟು ಉಳಿದದ್ದು ಊರ ಜನಕ್ಕೆ ಎಂದು ಹೊರಗಡೆ ಇಡುತ್ತಿದ್ದರು. ಮಕ್ಕಳಿಗೆ ಹಾಲು ದೊಡ್ಡವರಿಗೆ ಕಾಪಿ ಮುಗಿದ ಕೂಡಲೇ ಮುದ್ದೆಗೆ ಎಸರಿಡುವುದು. ಪಕ್ಕದಲ್ಲೇ ಇದ್ದ ಸಣ್ಣ ಒಲೆಯಲ್ಲಿ ನವಣಕ್ಕಿ ಅನ್ನ ಬೇಯುತ್ತಾ ಇರುತ್ತಿತ್ತು. ದೊಡ್ಡ ಒಲೆಯ ಪಕ್ಕಕ್ಕೆ ತಾಗಿ ಇದ್ದ ತಾಮ್ರದ ಹಂಡೆಯಲ್ಲಿ ನೀರು ಬಿಸಿ ಬಿಸಿಯಾಗಿ ಕಾದು ಹೊಗೆಯೇಳುತ್ತಿತ್ತು. ಸ್ನಾನಕ್ಕೆ ಬೇಕಾದಷ್ಟು ನೀರು ತೋಡಿ ಮತ್ತೆ ತಣ್ಣೀರು ತುಂಬಿಸುವುದು. ಅನ್ನದ ತಪ್ಪಲೆ ಇಳಿಯುವುದರ ಜೊತೆಗೆ ಸಾರಿನ ಪಾತ್ರೆ ಏರುತ್ತಿತ್ತು. ಅಡುಗೆ ಮನೆ ಮೂಲೆಯಲ್ಲೇ ಹದಿದ ರುಬ್ಬೋಗುಂಡಿನಿಂದ ಮಸಾಲೆ ರುಬ್ಬಿ ಸಾರಿನ ಪಾತ್ರೆಗೆ ಸೇರಿಸಿ ಒಗ್ಗರಣೆಯ ಘಮಲಿನೊಂದಿಗೆ ಮುದ್ದೆ ಅನ್ನ ಸಾರು ತಯಾರಾಗುತ್ತಿತ್ತು. ಈಗ ಎಲ್ಲರೂ ಉಣ್ಣುವ ಸರದಿ. ಮನೆಯ ಹಿರಿಯರಿಗೆಂದೇ ಮೀಸಲಾದ ಅಡ್ಡಣಿಗೆಗಳನ್ನು ಮುಂದಿರಿಸಿ ಮಣೆ ಹಾಕಿ ನೀರಿಟ್ಟು ಎಲ್ಲರನ್ನೂ ಊಟಕ್ಕೆ ಕೂಗಿ ಕರೆಯುವುದು.ಇನ್ನು ಎಲ್ಲರೂ ಉಣ್ಣುವಾಗ ಬಡಿಸುವವರು ಸರಬರ ಎಂದು ಓಡಾಡಿ ನೀಡಬೇಕು. ಮನೆಯಲ್ಲಿ ಮಕ್ಕಳಿದ್ದರೆ ಅವರನ್ನೂ ಜೊತೆಯಲ್ಲೇ ಕೂರಿಸಿಕೊಂಡು ತಮ್ಮ ತಟ್ಟೆಯಲ್ಲೇ ಉಣ್ಣಿಸುತ್ತಿದ್ದರು. ಮನಸ್ತಾಪ ದೊಡ್ಡವರೆಡೆಗೆ ಇದ್ದರೂ ಮಕ್ಕಳು ಚಿಕ್ಕಪ್ಪ ದೊಡ್ಡಪ್ಪ ರ ತಟ್ಟೆಯಲ್ಲಿ ಊಟ ,ಪ್ರೀತಿಗಳೆರಡನ್ನು ಉಂಡು ಮೇಲೆಳುತ್ತಿದ್ದವು.ನಂತರ ಹೆಣ್ಣುಮಕ್ಕಳ ಸರದಿ. ಕೂಡು ಕುಟುಂಬಗಳಲ್ಲಿ ಇದ್ದ ಜಗಳ ಮುನಿಸುಗಳು ಮರೆತು ಜೊತೆಯಲ್ಲೇ ಊಟಕ್ಕೆ ಕೂರುತಿದ್ದರು.

ಉಂಡು ಎಲ್ಲರೂ ಅವರವರ ಕೆಲಸಕ್ಕೆ ಹೋಗುತ್ತಿದ್ದರು. ಇದೀಗ ಅಗ್ನಿರಾಯನಿಗೆ ರೆಸ್ಟ್. ಆರಿದ ಕೆಂಡದ ಕಾವು ಅಲ್ಲಿದ್ದ ಪಾತ್ರೆಗಳನ್ನು ಇನ್ನೂ ಒಂದೆರಡು ಗಂಟೆಗಳ ಕಾಲ ಬೆಚ್ಚಗೆ ಇರಿಸುತ್ತಿತ್ತು.

ಪಾತ್ರೆಗಳನ್ನು ತೊಳೆಯಲು ಆರಿದ ಬೂದಿಯನ್ನೇ ಬಳಸುತ್ತಿದ್ದರು. ಈಗಿನ recycling ಆಗಲೇ ಬಳಕೆಯಲ್ಲಿತ್ತು. ಪಾತ್ರೆ ತೊಳೆಯುವುದು ಎನ್ನುತ್ತಿರಲಿಲ್ಲ ಪಾತ್ರೆ ಬೆಳಗುವುದು ಎನ್ನುತ್ತಿದ್ದರು. ತೊಳೆಯುವುದು ಎಂದಾಗ ಇದ್ದ ಒತ್ತಡ ಬೆಳಗುವುದು ಎಂದಾದಾಗ ದೈವಿಕ ಭಾವ ಮೂಡುತ್ತಿತ್ತು.

ಚಳಿಗಾಲದಲ್ಲಿ ಮಳೆಗಾಲದಲ್ಲಿ ಕಟ್ಟಿಗೆ ಸರಿಯಾಗಿ ಉರಿಯದಿದ್ದಾಗ ಊದಗೊಳವೆ ಬಳಸುತ್ತಿದ್ದರು. ಊದಿ ಊದಿ ಕಣ್ಣು ಕೆಂಪಗಾಗಿ ಕೆಮ್ಮು ದಮ್ಮು ಹತ್ತುತ್ತಿತ್ತು. ಇನ್ನು ಜೋರು ಮಳೆ ಬಂದರಂತೂ ಮೇಲಿನ ಹೊಗೆ ಗೂಡಿನಿಂದ ಮಳೆ ನೀರು ತೊಟ್ಟಿಕ್ಕುತ್ತಿತ್ತು. ಆಗ ಇದ್ದಿಲೊಲೆಯೇ ಗತಿ.

ಒಗ್ಗರಣೆಯ ಘಾಟು, ಮಸಾಲೆಯ ಘಮಲು ಎಲ್ಲವೂ ಹೊಗೆಯಾಗಿ ಹೊರಗೆ ಹೋಗುತ್ತಿತ್ತು. ಯಾರ ಮನೆಯಲ್ಲಿ ದಿನವೂ ಎರಡು ಹೊತ್ತು ಹೊಗೆಮಾಡಿನಿಂದ ಹೊಗೆ ಹೋಗುತ್ತಿತ್ತೋ ಆ ಮನೆಯಲ್ಲಿ ತಿಂದುಣ್ಣಲು ಯಾವುದೇ ಕೊರತೆ ಇಲ್ಲ ತಕ್ಕ ಮಟ್ಟಿನ ಶ್ರೀಮಂತಿಕೆ ಇದೆ ಎಂಬ ಭಾವನೆ. ಅಡುಗೆ ಮಾಡುವ ಹೆಂಗಸರ ನೋವು ನಲಿವು ಕಣ್ಣೀರು ಅಡುಗೆ ಮನೆಯಲ್ಲೇ ವ್ಯಕ್ತವಾಗುತ್ತಿದ್ದವು ಹೆಚ್ಚಾಗಿ. ಅತ್ತೆ ಮನೆಯ ತನ್ನ ಕಡು ಕಷ್ಟಗಳನ್ನು ಒಲೆಯ ಬೆಂಕಿಯ ಮುಂದೆ ಕೂತು ತಾನೂ ನಿಗಿ ನಿಗಿ ಉರಿಯುತ್ತಾ ತನ್ನ ಕಷ್ಟಗಳೂ ಹೀಗೆ ಉರಿದುರಿದು ಹೋಗಲಿ ಎಂದು ಮತ್ತಷ್ಟು ಕಟ್ಟಿಗೆ ದೂಡುತಿದ್ದಳು. ಕೆಲವೊಮ್ಮೆ ಕಣ್ಣೀರಾಗುತ್ತಾ ಆ ನೀರು ಆವಿಯಾಗಿ ಹೊಗೆ ಗೂಡಲ್ಲಿ ತೇಲಿ ಹೋಗುತ್ತಿದ್ದವು. ಹೊಗೆಗೆ ಮಾತಾಡುವ, ಎಲ್ಲವನ್ನೂ ಬಿಚ್ಚಿಡುವ ಶಕ್ತಿ ಇದ್ದಿದ್ದರೆ ಅದೆಷ್ಟು ಮನೆಗಳ ರಹಸ್ಯಗಳನ್ನು ಹೊರಹಾಕುತ್ತಿತ್ತು. ಆದರೆ ಅದರದು ಹಗುರಾಗಿ ತೇಲುವ, ತೇಲಿ ವಿಶಾಲ ನಭದಲ್ಲಿ ಲೀನವಾಗುವ ಕೆಲಸ. ಪ್ರತಿ ಹೆಣ್ಣಿನ ದುಃಖ ದುಮ್ಮಾನ ಗಳನ್ನು ಕಳೆಯುವ ಗೆಳತಿಯಾಗಿರುತ್ತಿತ್ತು ಒಲೆ.

ಅನೇಕ ಗುಟ್ಟಿನ ಮಾತುಕತೆಗಳು ಅಡುಗೆಮನೆಯಲ್ಲೇ ನಡೆಯುತ್ತಿದ್ದವು. ಹೊಸದಾಗಿ ಬಂದ ಸೊಸೆ ಬೇರೆ ಎಲ್ಲದಕ್ಕಿಂತ ಅಡುಗೆಮನೆ ಕಡೆ ಆಸ್ಥೆ ತೋರಿದರೆ ಸಂಸಾರ ನಡೆಸಬಲ್ಲಳು ಎಂದರ್ಥ. ಮನೆಯ ಎಲ್ಲಾ ಚರ್ಚೆಗಳು ಪೈಸಲ್ ಆಗುತ್ತಿದ್ದುದೇ ಅಡುಗೆಮನೆಯಲ್ಲಿ. ಕೂಡು ಕುಟುಂಬಗಳ ಜಗಳ ಶುರುವಾಗುತ್ತಿದ್ದುದೇ ಅಡುಗೆ ಮನೆಯಿಂದ. ಬೇರೆ ಸಂಸಾರ ಹೂಡುವ ಅಭಿಲಾಷೆ ಇದ್ದ ಸೊಸೆ ಬೇರೆ ಅಡುಗೆ ಮಾಡುವ ಮೂಲಕವೇ ಅದನ್ನು ವ್ಯಕ್ತಪಡಿಸುತ್ತಿದ್ದಳು.

ಇಂತಿಪ್ಪ ಅಡುಗೆಮನೆ ಅದೆಷ್ಟು ಸಲೀಸಾಗಿ ಬದಲಾಯಿತೆಂದರೆ ಈಗ ಎಲ್ಲವೂ ಖುಲ್ಲಂಖುಲ್ಲಾ. ಅಷ್ಟು ದಿನ ಹಳಸಿದ ಕತ್ತಲು ಇಲ್ಲವಾಗಿತ್ತು. ಮನೆಯ ಹಾಲ್ ಗೆ ನೇರವಾಗಿ ಓಪನ್ ಕಿಚನ್ concept. ಬಂದವರು ನೋಡಿ ಕಾಲು ಧೂಳು ಆದೀತೆಂಬ ಎಗ್ಗೂ ಇಲ್ಲ. ಎಲ್ಲವನ್ನೂ ಒಳಗೇ ಸೆಳೆದಿಟ್ಟುಕೊಳ್ಳುವ rack ಗಳು. ಗಂಟೆಗಟ್ಟಲೇ ಅಡುಗೆ ಮಾಡಿದರೂ ನಿಮಿಷಗಳಲ್ಲೇ ಕ್ಲೀನಾಗಿ ಕಂಗೊಳಿಸುವ ಅಡುಗೆ ಕಟ್ಟೆ. ಎಲ್ಲವೂ ನಿಂತು ಕೈಯಾಡಿಸಿ ಕಾಲಾಡಿಸಿ ಓಡಾಡಿ ಮಾಡುವ ಅಡುಗೆಗಳೇ ಇಲ್ಲಿ. ಜಗಮಗಿಸುವ ಲೈಟ್ ಗಳು, ಫಳಗುಟ್ಟುವ ಬಣ್ಣ ಬಣ್ಣದ rack ಗಳು, ಮಿಕ್ಸರ್, ಓವನ್, ಡಿಶ್ ವಾಶರ್ ಫ್ರಿಡ್ಜ್. ಅಡುಗೆ ಮನೆ ಹೊಗೆ ಹೊರಗೆ ಹೋಗಲು ಚಿಮಣಿ. ಆ ಚಿಮಣಿಗಳಲ್ಲೋ ತರಹೇವಾರಿ. ಅವು ಹೊಗೆಯನ್ನಷ್ಟೇ ಹೀರದೆ ಬೇಕಾದಾಗ ರೇಡಿಯೋ, ಟಿವಿ, ವಾಚ್ ಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ವರ್ಷಾನುಗಟ್ಟಲೆ ಯಿಂದ ದದ್ದಾಗಿ ಮೂಲೆ ಸೇರಿದ್ದ ಅಡುಗೆಮನೆ ಈಗ ಚೆಲುವಿನಿಂದ ಆಕರ್ಷಿಸತೊಡಗಿದೆ. ಕೈಗೆ ಸ್ವಲ್ಪವೂ ಮಸಿ, ಎಣ್ಣೆ ಅಂಟದಂತೆ, ಗಂಟೆಗಟ್ಟಲೇ ಅಡುಗೆ ಮಾಡಿದರೂ ಶ್ರಮವೇ ಎನಿಸದಂತೆ design ಮಾಡಿರುವುದರ ಹಿಂದೆ ಪಾಶ್ಚಾತ್ಯರ ಅನುಕರಣೆ ಇದೆ. ಅವರ ಅಡುಗೆಗಳು ನಿಂತು ಬೇಯಿಸುವುದಷ್ಟೇ ಆಗಿದ್ದು ನಮ್ಮ ಕುಟ್ಟುವ, ರುಬ್ಬುವ, ಬೀಸುವ, ಕೇರುವ, ಕಡೆಯುವ ಪ್ರಕ್ರಿಯೆಗಳಿಗೆ ಒಗ್ಗುವುದಿಲ್ಲ. ಐದಾರು ಜನ ಒಟ್ಟಿಗೆ ಕುಳಿತು ಊಟ ಮಾಡುವಷ್ಟು ವಿಶಾಲವಾಗಿದ್ದ ಅಡುಗೆಮನೆ ಈಗ ಕಿರಿದಾಗಿ ಅಡುಗೆ ಮಾಡಲಷ್ಟೇ ಜಾಗ ಸೀಮಿತವಾಗಿದೆ. ಈಗ ಇಲ್ಲಿ ಕೂತು ಧ್ಯಾನಿಸುವ, ತನ್ನ ಒಳಬೇಗುದಿಯನ್ನು ಹೊರ ಹಾಕುವ ಯಾವ ಅವಕಾಶವೂ ಇಲ್ಲ. ಮತ್ತೂ ಬಹಳ ಹೊತ್ತು ನಿಂತರೆ ಕಾಲು ನೋಯುವ ಕಾಯಿಲೆ ಎಲ್ಲರ ಪಾಲಿಗಿದೆ. ಧ್ಯಾನಸ್ಥ ಸ್ಥಿತಿಯಲ್ಲಿ ಕೂರುವ ವ್ಯವಧಾನ ಇಲ್ಲಿ ಯಾರಿಗೂ ಇಲ್ಲ.ಅವಸರವೂ ಅವಸರದ ಕೈ ಹಿಡಿದಿದೆ.

ಹೀಗೇ ಮಾಡಿಟ್ಟಿದ್ದನ್ನು ಉಣ್ಣುವ ಸಮಯ.ಡೈನಿಂಗ್ ಟೇಬಲ್ ನ ಮೇಲೆ ಮಾಡಿಟ್ಟ ಅಡುಗೆಯನ್ನು ಜೋಡಿಸುವ ಕಲೆಗೆ ಎಂಥವರೂ ಮರುಳಾಗಬೇಕು. ಅಡುಗೆ ಮಾಡಿದ ಪಾತ್ರೇಗಳೇ ನೇರವಾಗಿ ಇಲ್ಲಿ ಬಂದು ಕೂರುವುದಿಲ್ಲ. ಅವಕ್ಕೆ ಅಷ್ಟು ಅದೃಷ್ಟವಿಲ್ಲ ಹಾಗಾಗಿ serving bowl, ಬಿಸಿ ಆರದಂತೆ ಇರಲು casserole, ನಾಜೂಕಾಗಿ ತಿನ್ನಲು spoon fork ಗಳು. ಕಂಡು ಕೇಳರಿಯದ ಅಡುಗೆಗಳು ಹಣ್ಣುಗಳು ಭಾರತೀಯತೆ ಹೊಂದಿ ತಟ್ಟೆಗೆ ಬಂದು ಬೀಳುತ್ತವೆ. ಶಬ್ಧವಾಗದಂತೆ ನಿಧಾನಕ್ಕೆ ಬಡಿಸಿಕೊಂಡು ನಿಶ್ಯಬ್ಧ ದಿಂದ ಉಣ್ಣುವುದು. ಹಿಂದಿನಂತೆ ಬೀಡುಬೀಸಾಗಿ ತಿನ್ನದಂತೆ ನಾಜೂಕಾಗಿ ತಿನ್ನುವುದು ಆ ಶಿಸ್ತನ್ನೇ table manners ಎನ್ನುವುದು. ಈಗ ಮಕ್ಕಳನ್ನು ಜೊತೆಯಲ್ಲೇ ಕರೆದುಕೊಂಡು ಉಣ್ಣುವ ಸೌಭಾಗ್ಯ ಇಲ್ಲ. ಅವರಿಗೂ ಒಂದು ಪುಟ್ಟದಾದ ಕುರ್ಚಿ ಟೇಬಲ್ ಹಾಕಿ ಅವರೇ ತಿನ್ನುವಂತೆ ಮಾಡುವುದು. ನಮ್ಮದಲ್ಲದ ರೀತಿಯನ್ನು ಬಲವಂತವಾಗಿ ಯಾದರೂ ಆಚರಣೆಗೆ ತರುವ ಪರಿ.

ಹಾಗೋ ಹೀಗೋ ಇದ್ದ ಈ ಪದ್ದತಿ ಮತ್ತೊಂದಿಷ್ಟು ವರ್ಷಗಳ ನಂತರ ಇದೂ ಕಣ್ಮರೆಯಾಯಿತು.

ಈಗ ಅಡುಗೆಮನೆ ತೊಳೆದ ಮನೆಯಾಗಿ, ನೀಟಾಗಿ, ಮಾಡಲೇನೂ ಕೆಲಸವಿಲ್ಲದೆ ಸುಮ್ಮನೆ ಕೂತ ಮದುವಣಗಿತ್ತಿಯಂತೆ ಇರುತ್ತದೆ. Swiggy, Zomato ಗಳ ದೆಸೆಯಿಂದ ಬಂದ ಪದಾರ್ಥಗಳನ್ನು ಅಡುಗೆಮನೆಯಲ್ಲಿದ್ದ ತಟ್ಟೆಗಳಿಗೆ ಹಾಕಿಕೊಂಡು ಬಂದು ಸೀದಾ ಟಿವಿ ಯ ಮುಂದೆ ಪ್ರತಿಷ್ಟಾನಗೊಳ್ಳುವುದು. ತಿನ್ನುವುದು ನೋಡುವುದು ಏಕ ಕಾಲಕ್ಕೆ ಆಗುತ್ತಲಿರಬೇಕು. ಶನಿವಾರ ಭಾನುವಾರ ಬಂದರೆ ಮನೆಯಲ್ಲಿ ಒಲೆ ಹೊತ್ತಿಸಬಾರದೆಂಬ ಅಲಿಖಿತ ನಿಯಮವಿದೆ. ವಾರಾಂತ್ಯದಲ್ಲಿ ಹೊಟೆಲ್ಗಳ ಮುಂದೆ ಕ್ಯೂ ನಿಂತು ಗಂಟೆಗಟ್ಟಲೆ ಕಾದು ಊಟ ಮಾಡುವ ವರ್ಗವಿದೆ. ನೂರಾರು ಕಿಮೀ ಕ್ರಮಿಸಿ ತಿಂದು ಬರುವವರೂ ಇದ್ದಾರೆ. ಅಡುಗೆ ಮಾಡುವ ಗೋಜಿಲ್ಲ, ಮಾಡುವಷ್ಟು ವ್ಯವಧಾನ,ಸಮಯ ಯಾರಿಗೂ ಇಲ್ಲ. ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವಂತೆ ಮಾಡಿದ ಅಡುಗೆಮನೆಗೆ ಈಗ ವಿರಾಮ. ಮಸಿ, ಹೊಗೆಗಳಿಂದ ವಿಮುಕ್ತಿಗೊಂಡಿದ್ದರೂ ತನ್ನ ಬಳಿಗೆ ಯಾರೂ ಬರದಿರುವುದು ಕಂಡು ಬೆಕ್ಕಸ ಬೆರಗಾಗಿದೆ.

“ಏನ್ ಕೆಲಸ ಮಾಡ್ತಾರೆ ಏನಿಲ್ಲ ಮೂರೊತ್ತು ಅಡುಗೆಮನೆಯಲ್ಲಿರ್ತಾಳೆ” ಇವೇ ಮಾತುಗಳು,ಅಡುಗೆ ಮನೆಯನ್ನು ತುಚ್ಛೀಕರಿಸುವ, ಅಡುಗೆ ಮಾಡುವ ಹೆಣ್ಣುಮಕ್ಕಳನ್ನು ತಿರಸ್ಕಾರದಿಂದ ನೋಡಿದ ಪರಿಣಾಮವೇ ಈ ದಿನ ಮನೆಗಳಲ್ಲಿ ಅಡುಗೆ ಮಾಡುವವರು ಇಲ್ಲದೆ ಇರುವುದು. ದಶಕಗಳಿಂದ ಅಡುಗೆ ಮನೆಯೇ ದೈವ ಎಂದವರೂ ಅವರ ಮಕ್ಕಳ ಈ ನಡೆಗೆ ಪ್ರೋತ್ಸಾಹಿಸುವರು.

ಅಡುಗೆಮನೆ ನಡೆಸುವುದೆಂದರೆ ಕಾರ್ಖಾನೆ ನಡೆಸಿದಂತೆ. ಒಪ್ಪ ಓರಣವಾಗಿ ಪಾತ್ರೆಗಳು ಜೋಡಿಸಿರಬೇಕು ಕೈಯಳತೆಯಲ್ಲೇ ಸಿಗುವಂತೆ ಮನೆ ಮದ್ದುಗಳಿರಬೇಕು. ಋತುಮಾನಕ್ಕೆ ತಕ್ಕಂತೆ ಅಡುಗೆ ಮಾಡುತ್ತಿರಬೇಕು. ಅಡುಗೆಮನೆ ಯಜಮಾನಿಗೆ ತಾಯ್ತನ ಇರಬೇಕು. ಹೊರಗಿಂದ ದಣಿದು ಬಂದವರನ್ನು ಆದರಿಸಿ ಹೊಟ್ಟೆ ತುಂಬಾ ಉಣ್ಣಿಸುವ ಉದಾರ ಮನಸ್ಸಿರಬೇಕು. ರುಚಿಯಾದ ಅಡುಗೆ ಮನಸ್ಸುಗಳ ಸೇತುಬಂಧ. ಅಕ್ಕರೆ ಆಸ್ಥೆ ಯಿಂದ ಅಡುಗೆ ಮಾಡಿದರೆ ತಿನ್ನುವವರ ಮನಸು ಹೊಟ್ಟೆ ತಂಪಾಗಿರುತ್ತದೆ.

ಅಡುಗೆಮನೆ ಶಕ್ತಿ ಕೇಂದ್ರ,ಇಲ್ಲಿ ತಯಾರಾದ ಅಡುಗೆ ಉಂಡು ಗಟ್ಟಿಯಾಗಿ ಅದು ಜೀವನಾಡಿಯಾಗಿ ರಕ್ತ, ಶಕ್ತಿಗಳ ಮೂಲಕ ದೇಹದಲ್ಲಿ ಪ್ರವಹಿಸಬೇಕು. ದೇಹ ಉಕ್ಕಾಗಬೇಕು. ಹಿರಿಯರ ನೇತೃತ್ವ ಇಲ್ಲದೇ ಎಷ್ಟೋ ಅಡುಗೆಗಳು ಈಗಾಗಲೇ ಮರೆತುಹೋಗಿದೆ. ಇರುವ ಕೆಲವೇ ಅಡುಗೆಗಳನ್ನು ಮಾಡಿಕೊಂಡು ಉಂಡರೆ ಆರೋಗ್ಯ. ಪೀಳಿಗೆಯಿಂದ ಪೀಳಿಗೆಗೆ ರವಾನೆಯಾಗುವ ಅದೆಷ್ಟೋ ಅಡುಗೆಗಳು, ಮಾಹಿತಿಗಳು, tips ಗಳನ್ನು ರಕ್ಷಿಸಬೇಕಿದೆ.

ಅಡುಗೆಮನೆ ವಿಶೇಷ ಇರುವುದರಲ್ಲೇ ಅಣಿಗೊಳಿಸುವುದು, ಸೀಮಿತ ಪದಾರ್ಥಗಳಲ್ಲೇ ಹೊಸದನ್ನು ಸೃಷ್ಟಿಸುವ, ಹಾಗೆ ಸೃಷ್ಟಿಸಿದ್ದು ಹಿತವೆನಿಸುವ ಹಾಗೇ ಮಾಡುವ ಜಾಣ್ಮೆ ಹೆಣ್ಣುಮಕ್ಕಳಿಗಿದೆ. ಉಂಡವರ ಹೊಟ್ಟೆಯಲ್ಲಿರುವ ಶಿವ ತೃಪ್ತನಾದ ಮೇಲೆ ಬೇರೆ ಪೂಜೆಗೆಂದು ತಾವು. ಇಂದಿನ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮೂಲ ನಾವು ಸೇವಿಸುವ ಆಹಾರ. ಅಪರೂಪಕ್ಕೊಮ್ಮೆ ತಿನ್ನುವ ತಿನಿಸುಗಳು ವಾರಕ್ಕೆರಡು ಬಾರಿ ಆಗಿವೆ. ಎಗ್ಗಿಲ್ಲದೇ ತಿಂದು ಹೊಟ್ಟೆಬಾಕರು ಆಗುತ್ತಿರುವ ನಾವು ಶಾಂತಚಿತ್ತರಾಗಿ ಯೋಚಿಸಿದಾಗ ಸಣ್ಣ ಬದಲಾವಣೆ ಕಾಣಬಹುದೇನೋ. ಜಾಗತೀಕರಣ ಬರು ಬರುವುದರ ಜೊತೆಗೆ ನಮ್ಮ ಬದುಕಿನಿಂದ ಸಂಯಮವನ್ನು, ಸಮಯವನ್ನು ಕಿತ್ತುಕೊಂಡಿದೆ. ಹಿರಿಯರು ಅಳವಡಿಸಿಕೊಂಡಿದ್ದ ಜೀವನ ಪದ್ಧತಿಯಲ್ಲಿ ಅಡುಗೆಮನೆ ಸಂಸ್ಕೃತಿಯಾಗಿತ್ತು, ಪಾರಂಪರಿಕ ಜ್ಞಾನ ಅಡಗಿತ್ತು. ಅಡುಗೆಮನೆ ಸಂಸ್ಕೃತಿ ಉಳಿಸೋಣ. ಆರೋಗ್ಯದ ಆಶಯ, ಬಂಧುತ್ವ ಬೆಸೆಯುವ, ಪರಂಪರೆ ಉಳಿಸುವ ಕಾರ್ಯಕ್ಕೆ ಮುಂದಾಗೋಣ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು