ಎಐ ಯುಗದಲ್ಲಿ ನಕಲಿ ಚಾಟ್ ಸೃಷ್ಟಿಸಿ ಮಾನಹಾನಿ ಮಾಡುವುದು ಕುಮಾರಸ್ವಾಮಿಯವರಿಗೆ ಶೋಭೆಯಲ್ಲ: ಕೆ. ಎಂ. ಶಿವಲಿಂಗೇಗೌಡ
ಲಿಂಕ್ ನಕಲಿಸಲಾಗಿದೆ ✓
ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರಿಂದ ₹75 ಲಕ್ಷ ಲಂಚ ಪಡೆದಿದ್ದೇನೆಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಆರೋಪಿಸಿರುವುದು ದುರದೃಷ್ಟಕರ. ಎಐ ಯುಗದಲ್ಲಿ ನಕಲಿ ಚಾಟ್ ಸೃಷ್ಟಿಸಿ ಮಾನಹಾನಿ ಮಾಡುವುದು ಕೇಂದ್ರ ಸಚಿವರಿಗೆ ಶೋಭೆಯಲ್ಲ. ಅವರು ಬಿಡುಗಡೆ ಮಾಡಿರುವ ವಾಟ್ಸಾಪ್ ಸಂಭಾಷಣೆಯ ಸತ್ಯಾಸತ್ಯತೆ ವೈಜ್ಞಾನಿಕ ತನಿಖೆಯಿಂದ ಬಹಿರಂಗವಾಗಲಿ. ಲಂಚದ ವ್ಯವಹಾರ ನಡೆದಿರುವುದು ಸಾಬೀತಾದರೆ ಕಾನೂನು ವಿಧಿಸುವ ಯಾವುದೇ ಶಿಕ್ಷೆ ಎದುರಿಸಲು ಸಿದ್ಧ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಲಿಂಗೇಗೌಡ ಅವರು ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಚಾಟ್ನ ಮೂಲ ಯಾವುದು? ಅದನ್ನು ಒದಗಿಸಿದ ವ್ಯಕ್ತಿ ಯಾರು? ಚಾಟ್ನಲ್ಲಿ ಶಿಶಿಕಿರಣ್ ಎಂಬ ಹೆಸರು ಪ್ರಸ್ತಾಪವಾಗಿದೆ. ಆದರೆ ಅವರೊಂದಿಗೆ ಸಂಭಾಷಣೆ ನಡೆಸಿದ ಇನ್ನೊಬ್ಬ ವ್ಯಕ್ತಿ ಯಾರು? ಅದನ್ನು ತಂದುಕೊಟ್ಟವರು ಯಾರು? ಈ ವಿವರಗಳನ್ನು ಬಹಿರಂಗಪಡಿಸದೆ ಸಾರ್ವಜನಿಕವಾಗಿ ಒಬ್ಬರ ಮಾನಮರ್ಯಾದೆಗೆ ಧಕ್ಕೆ ತರುವುದು ಸರಿಯಲ್ಲ. ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನದಿಂದ ನಕಲಿ ಚಿತ್ರಗಳು ಮತ್ತು ಸಂಭಾಷಣೆಗಳನ್ನು ಸೃಷ್ಟಿಸುವ ಸಾಧ್ಯತೆ ಇರುವುದರಿಂದ, ಯಾವುದೇ ಚಾಟ್ ಅನ್ನು ಸಾಕ್ಷ್ಯವೆಂದು ಮಂಡಿಸುವ ಮೊದಲು ಅದರ ನೈಜತೆಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಚಾಟ್ನಲ್ಲಿ ಹೆಸರು ಉಲ್ಲೇಖವಾಗಿರುವ ಜಿಲ್ಲಾ ಕಚೇರಿಯ ಸಿಬ್ಬಂದಿ ಶಿಶಿಕಿರಣ್ ಸ್ವಯಂಪ್ರೇರಿತರಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಮ್ಮ ಮೊಬೈಲ್ ಫೋನ್ ಅನ್ನೂ ತನಿಖೆಗೆ ಹಸ್ತಾಂತರಿಸಿದ್ದಾರೆ. ತಮ್ಮ ಮೊಬೈಲ್ನಿಂದ ಅಂತಹ ಲಂಚದ ಸಂಭಾಷಣೆ ನಡೆದಿಲ್ಲ. ಯಾರೋ ನಕಲಿ ಚಾಟ್ ಸೃಷ್ಟಿಸಿ ಹೆಸರು ದುರ್ಬಳಕೆ ಮಾಡಿದ್ದಾರೆ ಎಂದು ಶಿಶಿಕಿರಣ್ ದೂರಿನಲ್ಲಿ ತಿಳಿಸಿದ್ದಾರೆ. ಮೊಬೈಲ್ನ್ನು ಯಾವುದೇ ತನಿಖೆಗೆ ಒಳಪಡಿಸಲು ಹಾಗೂ ತಪ್ಪು ಸಾಬೀತಾದರೆ ಶಿಕ್ಷೆ ಎದುರಿಸಲು ಸಿದ್ಧವಿರುವುದಾಗಿಯೂ ಅವರು ಹೇಳಿದ್ದಾರೆ ಎಂದು ಶಿವಲಿಂಗೇಗೌಡ ಅವರು ವಿವರಿಸಿದರು.
ಈ ದೂರಿನ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ 335, 336 ಹಾಗೂ 340ನೇ ಕಲಂಗಳಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಸೈಬರ್ ಅಪರಾಧ ತನಿಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಪರಿಶೀಲನೆ ನಡೆಯಲಿದ್ದು, ಮುಂದಿನ 15 ದಿನಗಳೊಳಗೆ ವರದಿ ಬರುವ ನಿರೀಕ್ಷೆಯಿದೆ. ತನಿಖೆಯ ಮೂಲಕ ಚಾಟ್ನ ಮೂಲ ಮತ್ತು ಅದರ ಸೃಷ್ಟಿಯ ಹಿಂದಿರುವವರ ವಿವರಗಳು ಬಹಿರಂಗವಾಗಲಿವೆ ಎಂದರು.
ಕುಮಾರಸ್ವಾಮಿ ಅವರ ಬಳಿ ಆರೋಪವನ್ನು ಸಮರ್ಥಿಸುವ ಸಾಕ್ಷ್ಯಾಧಾರಗಳಿದ್ದರೆ ತಮ್ಮ ವಿರುದ್ಧವಾಗಲಿ, ಜಿಲ್ಲಾಧಿಕಾರಿ ವಿರುದ್ಧವಾಗಲಿ ಅಧಿಕೃತ ದೂರು ನೀಡಿ ತನಿಖೆಗೆ ಒತ್ತಾಯಿಸಲಿ. ₹75 ಲಕ್ಷ ಲಂಚದ ವ್ಯವಹಾರ ನಡೆದಿದೆ ಎಂಬುದು ಸಾಬೀತಾದರೆ ಕಾನೂನು ನೀಡುವ ಯಾವುದೇ ಶಿಕ್ಷೆಗೆ ಸಿದ್ಧನಿದ್ದೇನೆ. ಆದರೆ ಆರೋಪ ಸುಳ್ಳು ಎಂದು ಸಾಬೀತಾದರೆ ನಮ್ಮ ಮಾನಮರ್ಯಾದೆಗೆ ಉಂಟಾದ ಹಾನಿಗೆ ಯಾರು ಹೊಣೆ? ಲಂಚ ನೀಡಿರುವುದಾಗಿ ಯಾರಾದರೂ ನೇರವಾಗಿ ದೂರು ಕೊಟ್ಟಿದ್ದಾರೆಯೇ ಅಥವಾ ನಾನು ಲಂಚ ಪಡೆದಿರುವುದಕ್ಕೆ ನೇರ ಸಾಕ್ಷ್ಯವಿದೆಯೇ? ತಪ್ಪು ಸಾಬೀತಾದರೆ ಸಚಿವ ಸ್ಥಾನದಿಂದ ವಜಾಗೊಳ್ಳಲು ಹಾಗೂ ಕಠಿಣ ಶಿಕ್ಷೆ ಎದುರಿಸಲು ಸಿದ್ಧನಿದ್ದೇನೆ. ಆದರೆ ನನ್ನ ವಿರುದ್ಧದ ಆರೋಪಗಳು ಸುಳ್ಳೆಂದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಆರೋಪಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಕೇವಲ ಆರೋಪ ಮಾಡಿ ಹಿಂದೆ ಸರಿಯುವ ‘ಹಿಟ್ ಆಂಡ್ ರನ್’ ರಾಜಕಾರಣ ಮಾಡಬಾರದು. ಹಣದ ಕಂತೆ ಎಣಿಸುತ್ತಿದ್ದ ದೃಶ್ಯಗಳಿರುವ ವಿಡಿಯೋದಲ್ಲಿ ಕಾಣಿಸಿಕೊಂಡವರನ್ನು ಪಕ್ಕದಲ್ಲಿಟ್ಟುಕೊಂಡು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪೆನ್ ಡ್ರೈವ್ ಇದೆ, ಬಾಂಬ್ ಸಿಡಿಸುತ್ತೇನೆ, ರಾಜ್ಯದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ ಎಂದೆಲ್ಲ ಹೇಳಿಕೊಂಡು ಓಡಾಡುತ್ತಾರೆ. ಆದರೆ ಅದೆಲ್ಲವೂ ಟುಸ್ ಪಟಾಕಿ ಎಂಬುದು ಜಗಜ್ಜಾಹೀರಾಗಿದೆ ಎಂದು ಟೀಕಿಸಿದರು.
ಲಕ್ಷಾಂತರ ಭಕ್ತರು ಭಾಗವಹಿಸಿದ ಹಾಸನಾಂಬ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಲು ಶ್ರಮಿಸಿದ್ದೇನೆ. ಅದರ ಯಶಸ್ಸಿಗೆ ಜನರಿಂದ ವ್ಯಕ್ತವಾಗುತ್ತಿರುವ ಮೆಚ್ಚುಗೆಯನ್ನು ಸಹಿಸಲಾಗದೆ ನನ್ನ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ. ಸುಮಾರು 20 ವರ್ಷಗಳ ಕಾಲ ಕುಮಾರಸ್ವಾಮಿ ಅವರೊಂದಿಗೆ ರಾಜಕೀಯದಲ್ಲಿ ಇದ್ದೇನೆ. ಆ ಅವಧಿಯಲ್ಲಿ ನನ್ನ ವಿರುದ್ಧ ಲಂಚ ಪಡೆದಿರುವುದಕ್ಕೆ ಸಾಕ್ಷ್ಯವಿತ್ತೇ ಅಥವಾ ಯಾರಾದರೂ ದೂರು ನೀಡಿದ್ದರೇ? ನಾವು ಬಡವರ ಮಕ್ಕಳು. ಕಷ್ಟಪಟ್ಟು ರಾಜಕೀಯದಲ್ಲಿ ಒಂದು ಹಂತಕ್ಕೆ ಬಂದಿದ್ದೇವೆ.
ನಿಮಗೆ ತೊಂದರೆ ಕೊಡದ ನಮ್ಮ ಮೇಲೆ ಇಂತಹ ಬ್ರಹ್ಮಾಸ್ತ್ರ ಪ್ರಯೋಗಿಸುವುದೇಕೆ? ಹಿಂದೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದ ಕುಮಾರಸ್ವಾಮಿ ಈಗ ಮೈತ್ರಿ ಮಾಡಿಕೊಂಡಿರುವುದು ಅವರ ರಾಜಕೀಯ ನಿರ್ಧಾರ. ಅದನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ಆಧಾರವಿಲ್ಲದೆ ಇತರರ ಗೌರವಕ್ಕೆ ಧಕ್ಕೆ ತರಬಾರದು. ಹಾಸನಾಂಬ ದೇವಿಯು ಅವರಿಗೆ ಸದ್ಬುದ್ಧಿ ನೀಡಲಿ ಎಂದರು.
ಅಧಿಕಾರಿಗಳ ಕೈಗೊಂಬೆಯಾಗಿ ಕೆಲಸ ಮಾಡಿಲ್ಲ
ಅಧಿಕಾರಿಗಳು ಸಚಿವರನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಆಪಾದನೆಯನ್ನು ತಳ್ಳಿಹಾಕಿದ ಶಿವಲಿಂಗೇಗೌಡ ಅವರು ಜಿಲ್ಲೆಯ ಜನ ನನ್ನ 25 ವರ್ಷಗಳ ರಾಜಕಾರಣವನ್ನು ನೋಡಿದ್ದಾರೆ. ಅಧಿಕಾರಿಗಳಿಗೆ ಹೆದರಿಕೊಂಡು ಅಥವಾ ಅವರ ಕೈಗೊಂಬೆಯಾಗಿ ಕೆಲಸ ಮಾಡಿದವನಲ್ಲ. ಕಳೆದ ನಾಲ್ಕು ತಿಂಗಳಲ್ಲಿಯೂ ಅಧಿಕಾರಿಗಳ ಮಾತಿನಂತೆ ನಡೆದುಕೊಂಡಿಲ್ಲ. ಹಾಸನಾಂಬ ಜಾತ್ರೆಯನ್ನು ಹಗಲಿರುಳು ಸ್ಥಳದಲ್ಲಿದ್ದು ಯಶಸ್ವಿಗೊಳಿಸಲು ಶ್ರಮಿಸಿದ್ದೇನೆ,. ಕೆಲಸವಾಗದ ಕೆಲವರು ಹತಾಶೆಯಿಂದ ಇಂತಹ ಮಾತುಗಳನ್ನಾಡಿರಬಹುದು. ಪಟ್ಟಭದ್ರ ಹಿತಾಸಕ್ತಿಗಳ ಸುಳ್ಳು ಪ್ರಚಾರಕ್ಕೆ ಮಣಿಯುವುದಿಲ್ಲ ಎಂದರು.
ಇದನ್ನೂ ಓದಿ: 44,250 ಸಜೀವ ಗುಂಡುಗಳ ವಶ: ಆರ್ಎಸ್ಎಸ್–ಬಿಜೆಪಿಗೆ 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ್ ಖರ್ಗೆ
Peepal Media
Peepal Media · ರಾಜ್ಯ ವಿಭಾಗ