ರಾಮಾಯಣ ಮತ್ತು ಕರುನಾಡಿನ ಭೌಗೋಳಿಕ ನಂಟು
ಲಿಂಕ್ ನಕಲಿಸಲಾಗಿದೆ ✓
“..ರಾಮಾಯಣ ಭಾರತೀಯ ಉಪಖಂಡದ ಅತಿ ದೊಡ್ಡ ಮಹಾಕಾವ್ಯಗಳಲ್ಲಿ ಒಂದು. ಈ ಮಹಾಕಾವ್ಯದ ಕಥಾನಕಕ್ಕೆ ಅತಿ ದೊಡ್ಡ ತಿರುವು ಸಿಗುವುದು ನಮ್ಮ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ಎಂಬುದು ನಾವೆಲ್ಲರೂ ಗಮನಿಸಬೇಕಾದ ಅಂಶ..” ವಿಮರ್ಶಕ ವಿ.ಆರ್.ಕಾರ್ಪೆಂಟರ್ ಅವರ ಬರಹದಲ್ಲಿ
“ರಾಮನ ಬರುವಿಕೆಗೆ ಕಾಯುವ ಶಬರಿ ತಾನು ರುಚಿ ನೋಡಿದ ಹಣ್ಣುಗಳನ್ನು ರಾಮನಿಗೆ ನೀಡುವುದು ಮತ್ತು ಆತ ಅದನ್ನು ಸ್ವೀಕರಿಸುವುದು ಸಾಂಕೇತಿಕವಾಗಿ ಬಹಳ ದೊಡ್ಡ ಅರ್ಥವನ್ನು ಕೊಡುತ್ತದೆ. ಅಧಿಕಾರದ ಉತ್ತುಂಗದಲ್ಲಿದ್ದ ಚಕ್ರವರ್ತಿಯೊಬ್ಬ, ಅರಣ್ಯವಾಸಿ ಮಹಿಳೆಯೊಬ್ಬಳು ನೀಡಿದ ಎಂಜಲು ಹಣ್ಣನ್ನು ಸವಿಯುವ ಮೂಲಕ ತಾರತಮ್ಯವನ್ನು ಅಳಿಸಿಹಾಕುವ ಸಂದೇಶ ಇಲ್ಲಿದೆ. ಇದು ಅಂದಿನ ಸಮಾಜದಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ಪ್ರಯೋಗಿಸಿದ ಅತ್ಯಂತ ಪ್ರಬಲವಾದ ಸಾಹಿತ್ಯಕ ಅಸ್ತ್ರ”
ರಾಮಾಯಣ ಭಾರತೀಯ ಉಪಖಂಡದ ಅತಿ ದೊಡ್ಡ ಮಹಾಕಾವ್ಯಗಳಲ್ಲಿ ಒಂದು. ಇದನ್ನು ಕೇವಲ ಒಂದು ಧಾರ್ಮಿಕ ಪಠ್ಯವಾಗಿ ಅಥವಾ ದೈವಿಕ ಕಥೆಯಾಗಿ ನೋಡುವ ಬದಲು, ಒಂದು ಸಾಂಸ್ಕೃತಿಕ, ಭೌಗೋಳಿಕ ಹಾಗೂ ಮಾನವಶಾಸ್ತ್ರೀಯ ದಾಖಲೆಯಾಗಿ ನೋಡಿದಾಗ ನಮಗೆ ಅನೇಕ ಅಚ್ಚರಿಯ ಸತ್ಯಗಳು ತೆರೆದುಕೊಳ್ಳುತ್ತವೆ. ಅದರಲ್ಲಿಯೂ ಮುಖ್ಯವಾಗಿ, ಈ ಮಹಾಕಾವ್ಯದ ಕಥಾನಕಕ್ಕೆ ಅತಿ ದೊಡ್ಡ ತಿರುವು ಸಿಗುವುದು ನಮ್ಮ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ಎಂಬುದು ನಾವೆಲ್ಲರೂ ಗಮನಿಸಬೇಕಾದ ಅಂಶ.
ಪುರಾಣವನ್ನು ನಾವು ಅಕ್ಷರಶಃ ಇತಿಹಾಸ ಎಂದು ಕರೆಯಲಾಗದಿದ್ದರೂ, ಆ ಪುರಾಣದ ಕಥೆಗಳನ್ನು ಹೆಣೆಯಲು ಕವಿ ಬಳಸಿಕೊಂಡ ಭೌಗೋಳಿಕ ಕ್ಯಾನ್ವಾಸ್ ಸಂಪೂರ್ಣವಾಗಿ ನೈಜವಾದದ್ದು. ಈ ನಿಟ್ಟಿನಲ್ಲಿ, ರಾಮಾಯಣದ ಬೆನ್ನೇರಿ ಹೋದರೆ, ಕರುನಾಡಿನ ಭೂಪಟ ಮತ್ತು ಸಾಹಿತ್ಯ ಈ ಮಹಾಕಾವ್ಯವನ್ನು ಹೇಗೆ ಶ್ರೀಮಂತಗೊಳಿಸಿದೆ ಎಂಬ ವೈಚಾರಿಕ ವಿಶ್ಲೇಷಣೆ ಇಲ್ಲಿದೆ.
ವಾಲ್ಮೀಕಿ ರಾಮಾಯಣದ ಅತಿ ಪ್ರಮುಖ ಘಟ್ಟ ‘ಕಿಕ್ಕಿಂಧಾ ಕಾಂಡ’ ಅಯೋಧ್ಯೆಯಿಂದ ಹೊರಟ ಕಥಾನಾಯಕ ರಾಮ ದಕ್ಷಿಣದತ್ತ ಸಾಗುತ್ತಾ ಪ್ರವೇಶಿಸುವ ದಂಡಕಾರಣ್ಯದ ಬಹುದೊಡ್ಡ ಭಾಗ ಇಂದಿನ ಕರ್ನಾಟಕದಲ್ಲೇ ಇದೆ. ಸೀತೆಯನ್ನು ಕಳೆದುಕೊಂಡು ಹತಾಶನಾಗಿದ್ದ ರಾಮನಿಗೆ ™ ಎದುರಾಗುವುದು ‘ಪಂಪಾ ಸರೋವರ’. ಇಂದಿನ ನಮ್ಮ ತುಂಗಭದ್ರಾ ನದಿಯ ಪ್ರಾಚೀನ ಹೆಸರೇ ಪಂಪಾ.ಕವಿ ವಾಲ್ಮೀಕಿ ಪಂಪಾ ಸರೋವರದ ಪ್ರಾಕೃತಿಕ ಸೌಂದರ್ಯವನ್ನು ವಿವರಿಸಲು ಇಡೀ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ.
ಇಂದಿಗೂ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಹಂಪಿ, ಆನೆಗೊಂದಿ ಪ್ರದೇಶಗಳನ್ನು ಗಮನಿಸಿದರೆ, ವಾಲ್ಮೀಕಿ ವರ್ಣಿಸಿದ ಋಷ್ಯಮೂಕ ಪರ್ವತ, ಮಾತಂಗ ಬೆಟ್ಟಗಳ ಸಾಲುಗಳು ಯಥಾವತ್ತಾಗಿ ಕಣ್ಣಿಗೆ ರಾಚುತ್ತವೆ. ಆ ಬೆಟ್ಟಗುಡ್ಡಗಳ ನಡುವೆ ಹರಿಯುವ ನದಿ, ಕಲ್ಲಿನ ಬಂಡೆಗಳ ರಚನೆಗಳು ಕವಿಯ ಕಲ್ಪನೆಗೆ ಅತ್ಯುತ್ತಮವಾದ ಭೌಗೋಳಿಕ ಹಿನ್ನೆಲೆಯನ್ನು ಒದಗಿಸಿವೆ. ಒಂದು ಮಹಾಕಾವ್ಯದ ನಾಯಕನಿಗೆ ಆಶ್ರಯ ಮತ್ತು ಹೊಸ ಭರವಸೆಯನ್ನು ನೀಡಲು ಕವಿ ಆರಿಸಿಕೊಂಡದ್ದು ನಮ್ಮ ಮಣ್ಣಿನ ಭೌಗೋಳಿಕ ಪರಿಸರವನ್ನು ಎಂಬುದು ಕನ್ನಡಿಗರ ಪಾಲಿಗೆ ಸಾಹಿತ್ಯಕ ಹೆಮ್ಮೆ.
ವಾನರರೆಂದರೆ ಯಾರು? ಮಾನವಶಾಸ್ತ್ರೀಯ ದೃಷ್ಟಿಕೋನ
ರಾಮಾಯಣವನ್ನು ವೈಜ್ಞಾನಿಕವಾಗಿ ಮತ್ತು ಮಾನವಶಾಸ್ತ್ರೀಯವಾಗಿ ವಿಶ್ಲೇಷಿಸಿದಾಗ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗುವುದು ‘ವಾನರ’ರ ಪರಿಕಲ್ಪನೆ. ವಾನರ ಎಂದರೆ ನಿಜಕ್ಕೂ ಬಾಲವಿದ್ದ, ಜಿಗಿಯುತ್ತಿದ್ದ ಮಂಗಗಳೇ? ಖಂಡಿತ ಅಲ್ಲ. ಮಾನವಶಾಸ್ತ್ರಜ್ಞರ ಪ್ರಕಾರ ‘ವಾನರ’ (ವಾ + ನರ) ಎಂದರೆ ‘ಇವನು ಮನುಷ್ಯನೇ?’ ಎಂದು ಅಚ್ಚರಿಪಡುವಂತಹ ವಿಶಿಷ್ಟ ದೈಹಿಕ ಲಕ್ಷಣಗಳಿದ್ದ ಮನುಷ್ಯರು. ಅಂದರೆ, ತುಂಗಭದ್ರಾ ಕಣಿವೆಯಲ್ಲಿ, ಇಂದಿನ ಕೊಪ್ಪಳ-ಬಳ್ಳಾರಿ ಭಾಗದ ಕಾಡುಗಳಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳು ಅಥವಾ ಬುಡಕಟ್ಟು ಜನಾಂಗವೇ ಕಾವ್ಯದಲ್ಲಿ ವಾನರರಾಗಿ ಚಿತ್ರಿತವಾಗಿದ್ದಾರೆ.
ಪ್ರಾಚೀನ ಕಾಲದಲ್ಲಿ ಬುಡಕಟ್ಟು ಸಮುದಾಯಗಳು ತಮ್ಮ ಗುಂಪಿಗೆ ಪ್ರಾಣಿ ಅಥವಾ ಪಕ್ಷಿಗಳನ್ನು ‘ಲಾಂಛನ’ವಾಗಿ ಇಟ್ಟುಕೊಳ್ಳುವುದು ಸಹಜವಾಗಿತ್ತು. ಮಂಗನನ್ನು ತಮ್ಮ ಕುಲಲಾಂಛನವಾಗಿ ಹೊಂದಿದ್ದ ಈ ಬುಡಕಟ್ಟು ಸಮುದಾಯವನ್ನೇ ಕವಿ ವಾನರರು ಎಂದು ಕರೆದಿದ್ದಾನೆ. ಇವರ ಅಸ್ತಿತ್ವಕ್ಕೆ ಪುಷ್ಟಿ ನೀಡುವಂತೆ, ಅಂಜನಾದ್ರಿ ಬೆಟ್ಟ ಮತ್ತು ಕಿಷ್ಕಂಧೆಯ ಸುತ್ತಮುತ್ತಲ ಗುಹೆಗಳಲ್ಲಿ ಇಂದಿಗೂ ಪ್ರಾಚೀನ ಕಾಲದ ಶಿಲಾಯುಗದ ಮಾನವ ಬಿಡಿಸಿದ ಚಿತ್ರಗಳು ಪತ್ತೆಯಾಗಿವೆ.
ಹನುಮಂತ: ಅಪ್ರತಿಮ ಭೌದ್ಧಿಕ ನಾಯಕನ ಪರಿಕಲ್ಪನೆ
ರಾಮಾಯಣದಲ್ಲಿ ರಾಮನಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿ ಮೂಡಿಬರುವ ಪಾತ್ರ ಹನುಮಂತನದ್ದು. ಕೊಪ್ಪಳದ ಆನೆಗೊಂದಿ ಬಳಿಯ ಅಂಜನಾದ್ರಿ ಬೆಟ್ಟದ ಪರಿಸರದಲ್ಲಿ ಜನಿಸಿದ ಹನುಮಂತನನ್ನು ಕಾವ್ಯವು ಕೇವಲ ತೋಳ್ಳಲದ ವ್ಯಕ್ತಿಯಾಗಿ ಚಿತ್ರಿಸಿಲ್ಲ. ಆತ ರಾಮನನ್ನು ಮೊದಲ ಬಾರಿಗೆ ಭೇಟಿಯಾದಾಗ ಮಾತನಾಡುವ ಶೈಲಿಯನ್ನು ನೋಡಿ, ಈತ ನವವ್ಯಾಕರಣ ಪಂಡಿತ, ಈತನಿಗೆ ಭಾಷೆಯ ಮೇಲೆ ಅಗಾಧ ಹಿಡಿತವಿದೆ ಎಂದು ಕಾವ್ಯ ವರ್ಣಿಸುತ್ತದೆ. ಅಂದರೆ, ಕರುನಾಡಿನ ಭೂಭಾಗದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಸಮುದಾಯದ ನಾಯಕನೊಬ್ಬನ ಬೌದ್ಧಿಕ ಮಟ್ಟ, ಆತನ ರಾಜತಾಂತ್ರಿಕ ಕೌಶಲ್ಯ ಮತ್ತು ಯುದ್ಧತಂತ್ರಗಳು ಜಗತ್ತಿನ ಯಾವುದೇ ಮುಂದುವರಿದ ಸಾಮ್ರಾಜ್ಯಕ್ಕೂ ಕಮ್ಮಿಯಿರಲಿಲ್ಲ ಎಂಬುದನ್ನು ಈ ಪಾತ್ರ ಸಾಬೀತುಪಡಿಸುತ್ತದೆ.
ಶಬರಿ ಪ್ರಸಂಗ: ಸಾಮಾಜಿಕ ಅಸಮಾನತೆಯ ವಿರುದ್ಧದ ಸಾಹಿತ್ಯಕ ಅಸ್ತ್ರ
ರಾಮಾಯಣದ ಕಥಾನಕದಲ್ಲಿ ಬರುವ ಶಬರಿಯ ಪ್ರಸಂಗ ಕೇವಲ ಆಕಸ್ಮಿಕವಲ್ಲ. ಹಂಪಿಯ ಪಂಪಾ ಸರೋವರದ ತೀರದ ಮಾತಂಗ ಮಹರ್ಷಿಗಳ ಆಶ್ರಮದಲ್ಲಿ ವಾಸಿಸುತ್ತಿದ್ದ ಶಬರಿ, ಸಮಾಜದ ಕಟ್ಟಕಡೆಯ ಅಂಚಿಗೆ ಸೇರಿದ ಮಹಿಳೆ. ಆ ಕಾಲದ ವರ್ಗ ಮತ್ತು ವರ್ಣಭೇದ ನೀತಿಯನ್ನು ಮುರಿಯಲೆಂದೇ ಕವಿ ಈ ಪ್ರಸಂಗವನ್ನು ಸೃಷ್ಟಿಸಿದಂತಿದೆ.
ಮಾತಂಗ ಮಹರ್ಷಿಗಳು ಸ್ವರ್ಗಾರೋಹಣ ಮಾಡುವುದಕ್ಕೂ ಮುನ್ನ ಶಬರಿಗೆ ‘ರಾಮ ಬರುವ’ನೆಂದು ಹೇಳುವ ಭವಿಷ್ಯ ಅಚ್ಚರಿ ಹುಟ್ಟಿಸುತ್ತದೆ. ಹೀಗೆ ಭವಿಷ್ಯ ಹೇಳುವ ಶಕ್ತಿಯನ್ನು ಮಾತಂಗ ಮಹರ್ಷಿಗಳು ಸಂಪಾದಿಸಿದ್ದನ್ನು ಅಥವಾ ನಿಖರವಾಗಿ ಊಹಿಸಿದ್ದಿರ ಕುರಿತು ಯಾರೂ ಅಷ್ಟಾಗಿ ಉಲ್ಲೇಖಿಸಿದಂತಿಲ್ಲ.
ಹಾಗೆಯೇ ಮಾತಂಗ ಮಹರ್ಷಿಗಳ ಭವಿಷ್ಯವಾಣಿಯನ್ನು ನಂಬಿ, ರಾಮನ ಬರುವಿಕೆಗೆ ಕಾಯುವ ಶಬರಿ ತಾನು ರುಚಿ ನೋಡಿದ ಹಣ್ಣುಗಳನ್ನು ರಾಮನಿಗೆ ನೀಡುವುದು ಮತ್ತು ಆತ ಅದನ್ನು ಸ್ವೀಕರಿಸುವುದು ಸಾಂಕೇತಿಕವಾಗಿ ಬಹಳ ದೊಡ್ಡ ಅರ್ಥವನ್ನು ಕೊಡುತ್ತದೆ. ಅಧಿಕಾರದ
ಉತ್ತುಂಗದಲ್ಲಿದ್ದ ಚಕ್ರವರ್ತಿಯೊಬ್ಬ, ಅರಣ್ಯವಾಸಿ ಮಹಿಳೆಯೊಬ್ಬಳು ನೀಡಿದ ಎಂಜಲು ಹಣ್ಣನ್ನು ಸವಿಯುವ ಮೂಲಕ ತಾರತಮ್ಯವನ್ನು ಅಳಿಸಿಹಾಕುವ ಸಂದೇಶ ಇಲ್ಲಿದೆ. ಇದು ಅಂದಿನ ಸಮಾಜದಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ಪ್ರಯೋಗಿಸಿದ ಅತ್ಯಂತ ಪ್ರಬಲವಾದ ಸಾಹಿತ್ಯಕ ಅಸ್ತ್ರ
ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’
ರಾಮಾಯಣದ ಕುರಿತು ಮಾತನಾಡುವಾಗ ವಾಗ ಕನ್ನಡ ಸಾಹಿತ್ಯವನ್ನು ಮತ್ತು ರಾಷ್ಟ್ರಕವಿ ಕುವೆಂಪು ಅವರನ್ನು ನೆನೆಯದೆ ಇರಲು ಸಾಧ್ಯವಿಲ್ಲ. ಕನ್ನಡ ಭಾಷೆ ರಾಮಾಯಣವನ್ನು ಯಥಾವತ್ತಾಗಿ ಒಪ್ಪಿಕೊಳ್ಳದೆ, ಅದನ್ನು ತರ್ಕದ, ವೈಚಾರಿಕತೆಯ ಒರೆಗಲ್ಲಿಗೆ ಹಚ್ಚಿ ನೋಡಿದೆ. ವಾಲ್ಮೀಕಿಯ ಕಾವ್ಯವನ್ನು ಹೊಸಗನ್ನಡಕ್ಕೆ ತಂದೆ ಕುವೆಂಪು ಅವರು ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಅಮಾನುಷ ಮತ್ತು ಅವೈಜ್ಞಾನಿಕ ಅಂಶಗಳನ್ನು ಸಾರಾಸಗಟಾಗಿ ತಿರಸ್ಕರಿಸಿದರು.
ಉದಾಹರಣೆಗೆ, ಮೂಲ ರಾಮಾಯಣದಲ್ಲಿ ಸೀತೆಯನ್ನು ಅಗ್ನಿಪರೀಕ್ಷೆಗೆ ದೂಡುವ ಪ್ರಸಂಗವನ್ನು ವೈಚಾರಿಕವಾಗಿ ಒಪ್ಪಲಾಗದ ಕುವೆಂಪು ಅವರು, ತಮ್ಮ ಕಾವ್ಯದಲ್ಲಿ ಸೀತೆಯ ಜೊತೆಗೆ ಸ್ವತಃ ರಾಮನು ಕೂಡ ಅಗ್ನಿಯನ್ನು ಪ್ರವೇಶಿಸುವಂತೆ ಚಿತ್ರಿಸಿದ್ದಾರೆ. ಇದು ಸ್ತ್ರೀಸಮಾನತೆಯ ಪರವಾಗಿ ಕನ್ನಡ ಸಾಹಿತ್ಯ ಎತ್ತಿದ ಬಹುದೊಡ್ಡ ಧ್ವನಿ.
ಅಷ್ಟೇ ಅಲ್ಲ, ರಾವಣನನ್ನು ಕೇವಲ ದುಷ್ಟನಾಗಿ, ಕಪ್ಪು-ಬಿಳುಪಿನ ಚೌಕಟ್ಟಿನಲ್ಲಿ ನೋಡದೆ, ಆತನೊಳಗಿನ ಆಂತರಿಕ ತುಮುಲಗಳನ್ನು, ಆತನ ವಿದ್ವತ್ತನ್ನು ಕುವೆಂಪು ಅನಾವರಣಗೊಳಿಸಿದ್ದಾರೆ ಪುರಾಣದ ಕಥೆಯೊಂದನ್ನು ಈ ಪರಿ ಮಾನವೀಯವಾಗಿ, ತಾರ್ಕಿಕವಾಗಿ ಮತ್ತು ವೈಚಾರಿಕವಾಗಿ ಮರುಸೃಷ್ಟಿಸಿದ ಕೀರ್ತಿ ನಮ್ಮಕರುನಾಡಿನ ಮಣ್ಣಿಗೆ ಮತ್ತು ಭಾಷೆಗೆ ಸಲ್ಲುತ್ತದೆ.
ಕಡೆಯದಾಗಿ, ರಾಮಾಯಣ ಕೇವಲ ಒಂದು ಧರ್ಮಕ್ಕೆ ಅಥವಾ ಪ್ರದೇಶಕ್ಕೆ ಸೀಮಿತವಾದ ಗ್ರಂಥವಲ್ಲ. ಅದನ್ನು ಒಂದು ಸಾಹಿತ್ಯಕ ದೃಷ್ಟಿಕೋನದಿಂದ ನೋಡಿದಾಗ, ಆ ಮಹಾಕಾವ್ಯಕ್ಕೆ ಭೌಗೋಳಿಕ ಅಸ್ತಿತ್ವವನ್ನು, ಹೋರಾಟದ ಪಡೆಯನ್ನು ಒದಗಿಸಿಕೊಟ್ಟಿದ್ದು ನಮ್ಮ ಕರುನಾಡಿನ ನೆಲ. ಬುಡಕಟ್ಟು ಜನಾಂಗದ ರಾಜಕೀಯ ತಂತ್ರಗಳು, ಸಮಾನತೆಯ ಮೌಲ್ಯಗಳು ಮತ್ತು ಪ್ರಕೃತಿಯ ಬೆರಗು ಎಲ್ಲವನ್ನೂ ಈ ನೆಲವು ಲವು ಮಹಾಕಾವ್ಯಕ್ಕೆ ಧಾರೆಯೆರೆದಿದೆ. ಇಂದಿನ ಯುವಜನರು ಇಂತಹ ಪುರಾಣ ಕಾವ್ಯಗಳನ್ನು ಕೇವಲ ನಂಬಿಕೆಯ ಆಧಾರದ ಮೇಲೆ ಕುರುಡಾಗಿ ಓದುವ ಬದಲು, ಭೌಗೋಳಿಕತೆ, ಮಾನವಶಾಸ್ತ್ರಮತ್ತು ವೈಚಾರಿಕತೆಯ ಕನ್ನಡಕವನ್ನು ಧರಿಸಿ ಓದಿದಾಗ ಮಾತ್ರ ನಮ್ಮನೆಲದ ನೈಜ ಇತಿಹಾಸ ಮತ್ತು ಪರಂಪರೆಯ ಅರಿವಾಗುತ್ತದೆ.
Peepal Media Desk
Peepal Media · ಅಂಕಣ ವಿಭಾಗ