ಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಶಿರಾಡಿಘಾಟ್ ಕಂದಕದಲ್ಲಿ – ಬೆಚ್ಚಿ ಬೀಳಿಸುವ ಸಂಗತಿ
ಲಿಂಕ್ ನಕಲಿಸಲಾಗಿದೆ ✓
ಹಾಸನ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್ನ ಮಾರನಹಳ್ಳಿ ಸಮೀಪದ ಕಂದಕಕ್ಕೆ ಎಸೆಯಲಾಗಿದ್ದ ನಳಿನಿ ಹಾಗೂ ಶಂಕರ್ ಅವರ ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದಾರೆ.
ಕೊಲೆ ಪ್ರಕರಣದ ಆರೋಪಿ ಇಂದುಶೇಖರ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಶವಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ, ಶವಗಳನ್ನು ಎಸೆದಿದ್ದ ನಿಖರ ಸ್ಥಳವನ್ನು ತೋರಿಸದೆ ಆರೋಪಿಯು ಪೊಲೀಸರನ್ನು ಹಲವು ಕಡೆ ಅಲೆದಾಡಿಸಿದ್ದಾನೆ. ಐದಾರು ಸ್ಥಳಗಳನ್ನು ತೋರಿಸಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಕೊನೆಗೆ ಶವಗಳನ್ನು ಎಸೆದಿದ್ದ ಸ್ಥಳವನ್ನು ತೋರಿಸಿದ್ದಾನೆ.
ಮಲ್ಲೇಶ್ವರಂ ಎಎಸ್ಪಿ ಪ್ರಭಾವತಿ ಅವರ ನೇತೃತ್ವದಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರನಹಳ್ಳಿ ಸಮೀಪ ಕಾರ್ಯಾಚರಣೆ ನಡೆಯಿತು. ಸುಮಾರು 100 ಅಡಿ ಆಳದ ಕಂದಕಕ್ಕೆ ಹಗ್ಗದ ಸಹಾಯದಿಂದ ಇಳಿದ ಪೊಲೀಸರು ನಳಿನಿ ಮತ್ತು ಶಂಕರ್ ಅವರ ಮೃತದೇಹಗಳನ್ನು ಹೊರತೆಗೆದರು. ನಂತರ ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ಆರೋಪಿ ಇಂದುಶೇಖರ್ನನ್ನು ಪೊಲೀಸರು ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಆರಂಭಕ್ಕೂ ಸುಮಾರು ಒಂದು ಗಂಟೆ ಮುಂಚಿತವಾಗಿಯೇ ಸ್ಥಳದಿಂದ ಕರೆದೊಯ್ದಿದ್ದರು. ಮೃತರ ಕುಟುಂಬಸ್ಥರು ಆಂಬ್ಯುಲೆನ್ಸ್ ಹಿಂಬಾಲಿಸಿ ತೆರಳಿದರು.
ಸ್ಥಳದಲ್ಲಿ ನಳಿನಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ