KPSC ಹಗರಣ ED ದಾಳಿ ವೇಳೆ 1.22 ಕೋಟಿ – ಮೌಲ್ಯದ ಆಸ್ತಿ ಜಪ್ತಿ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದೆ.
ಹಗರಣದ ಆರೋಪಿಗಳಾದ ಕೆಪಿಎಸ್ಸಿಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಮಾಜಿ ಸದಸ್ಯೆ ಗೀತಾ ಬಿ.ವಿ. ಶಿವಮೂರ್ತಿ ಮತ್ತು ಐಎಎಸ್ ಅಧಿಕಾರಿ, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸೇರಿದ 1.22 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ನವೆಂಬರ್ 13ರಂದು ಆಸ್ತಿ ಜಪ್ತಿ ಆದೇಶ ಹೊರಡಿಸಲಾಗಿದೆ ಎಂದು ಇಡಿ ಶನಿವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
10 ಲಕ್ಷ, 20 ಲಕ್ಷ ರೂ. ನಗದು ಸಂಗ್ರಹ
ಒಬ್ಬ ಅಭ್ಯರ್ಥಿಯೊಂದಿಗೆ 20 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದ ಸಾಹುಕಾರ್, ಆತನಿಂದ 10 ಲಕ್ಷ ರೂ. ನಗದು ಪಡೆದಿದ್ದರು. ಮತ್ತೊಬ್ಬ ಅಭ್ಯರ್ಥಿಯಿಂದ 40 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದ ಗೀತಾ, 20 ಲಕ್ಷ ರೂ. ನಗದು ಪಡೆದಿದ್ದರು ಎಂದು ಇಡಿ ಆರೋಪಿಸಿದೆ.
ಲಂಚದ ಹಣವನ್ನು ನಗದು ರೂಪದಲ್ಲಿ ಮಾತ್ರವಲ್ಲದೆ, ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿರುವ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕವೂ ಸಂಗ್ರಹಿಸಲಾಗಿತ್ತು.
ಮೂರನೇ ವ್ಯಕ್ತಿಗಳ ಖಾತೆಗಳನ್ನು ಬಳಸಿಕೊಂಡು ನಕಲಿ ಉಳಿತಾಯ ಖಾತೆಗಳ ವಹಿವಾಟಿನಂತೆ ಹಣವನ್ನು ತೋರಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಲಂಚದ ಹಣದಲ್ಲಿ ಚಿನ್ನಾಭರಣ ಖರೀದಿ, ವಿಮಾನ ಪ್ರಯಾಣ
ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಜ್ಞಾನೇಂದ್ರ ಗಂಗ್ವಾರ್ ಅವರ ಅನುಕೂಲಕ್ಕಾಗಿ ಮೂರನೇ ವ್ಯಕ್ತಿಯ ಹೆಸರಿನಲ್ಲಿ 52.30 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಲಾಗಿತ್ತು ಎಂದು ಇಡಿ ತಿಳಿಸಿದೆ.
ಅಲ್ಲದೆ, ಗಂಗ್ವಾರ್, ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ವಿಮಾನ ಪ್ರಯಾಣಕ್ಕೆ ತಗುಲಿದ 13.31 ಲಕ್ಷ ರೂ. ವೆಚ್ಚವನ್ನು ಬಸವರಾಜ್ ಕನ್ನಾಳೆ ಮೂರನೇ ವ್ಯಕ್ತಿಗಳ ಬ್ಯಾಂಕ್ ಖಾತೆಗಳ ಮೂಲಕ ಪಾವತಿಸಿದ್ದರು ಎಂದು ಇಡಿ ಆರೋಪಿಸಿದೆ. ಈ ಪ್ರಕರಣದಲ್ಲಿ ಅಕ್ರಮ ಹಣದ ಮೂಲ, ವಹಿವಾಟು ಮತ್ತು ಆರೋಪಿಗಳಿಗೆ ಸೇರಿದ ಆಸ್ತಿಗಳ ಕುರಿತು ಇಡಿ ತನಿಖೆ ಮುಂದುವರಿಸಿದೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ