ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ನಮ್ಮ ಕುಟುಂಬದ ಬಗ್ಗೆ ಹರಡಿರುವ ಬಹುತೇಕ ಕಥೆಗಳು ಸತ್ಯಕ್ಕೆ ದೂರ: ಆತ್ಮಕಥೆ ಬರೆಯಲು ಕಾರಣ ತಿಳಿಸಿದ ಸೋನಿಯಾ ಗಾಂಧಿಸ್ಥಳೀಯ ಸಂಸ್ಥೆಗಳ ಚುನಾವಣಾ ಮೀಸಲಾತಿ ಹಂಚಿಕೆ ಹಕ್ಕು ಸರ್ಕಾರದ್ದು, ಜನರದ್ದಲ್ಲ: ಸುಪ್ರೀಂಕೋರ್ಟ್ಮತದಾರರ ಪಟ್ಟಿಯಿಂದ ಹೆಸರು ತೆಗೆದರೆ ದೇಶದಿಂದಲೇ ಗಡಿಪಾರು ಭೀತಿ: ಮುಸ್ಲಿಂ ಕುಟುಂಬಗಳಲ್ಲಿ ಹೆಚ್ಚಿದ ಪೌರತ್ವ ಕಳೆದುಕೊಳ್ಳುವ ಆತಂಕಶಿವಮೊಗ್ಗ ವಿಮಾನ ನಿಲ್ದಾಣ: ಮಲೆನಾಡಿಗೆ ಕಿರೀಟವಾಗಬೇಕಿದ್ದದ್ದು, “ಕಪ್ಪುಚುಕ್ಕೆ” ಆದ ಬಗೆತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು!ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಅಮಾನತುಗೊಂಡ ಅಧ್ಯಕ್ಷರಿಂದ ₹4.17 ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪಕರ್ನಾಟಕ ಸಚಿವ ಸಂಪುಟಕ್ಕೆ ಮಹಿಳಾ ಸಚಿವೆಯ ಸೇರ್ಪಡೆ ಸಾಧ್ಯತೆ: ಹೈಕಮಾಂಡ್ ನಿರ್ಧಾರಕ್ಕೆ ಕಾಯುತ್ತಿರುವ ಕಾಂಗ್ರೆಸ್ಬೆಂಗಳೂರಿನಲ್ಲಿ ಮನೆಮನೆಗೆ ತೆರಳಿ ನಿವಾಸಿಗಳ ಮಾಹಿತಿ ಸಂಗ್ರಹ: ಪೊಲೀಸರಿಗೆ ಜವಾಬ್ದಾರಿ ನೀಡಲು ಸರ್ಕಾರದ ಚಿಂತನೆಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ: ₹30 ಲಕ್ಷ ಸುಪಾರಿ ನೀಡಿದ್ದ ಮಾಜಿ ಸ್ನೇಹಿತ ಸೇರಿ ಐವರ ಬಂಧನಆಂಧ್ರ ಕರಾವಳಿಗೆ ಅಪ್ಪಳಿಸಲಿರುವ ಅಕ್ವಾನ್ ಚಂಡಮಾರುತ: ಗಂಟೆಗೆ 145 ಕಿ.ಮೀ. ವೇಗದಲ್ಲಿ ಬೀಸಲಿದೆ ಗಾಳಿ; ಹಲವು ರಾಜ್ಯಗಳಿಗೆ ಭಾರಿ ಮಳೆ ಎಚ್ಚರಿಕೆಐದು ರಾಜ್ಯಗಳ ವಿಧಾನಸಭಾ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‌ನಿಂದ ಸ್ಕ್ರೀನಿಂಗ್ ಸಮಿತಿಗಳ ರಚನೆಇಂದು ಬೆಂಗಳೂರಿನಲ್ಲಿ ಟೆಕ್ ಸಮಿಟ್ ಆರಂಭ: ಎಐ, ರೋಬೋಟಿಕ್ಸ್ ಮತ್ತು ಡೀಪ್‌ಟೆಕ್ ತಂತ್ರಜ್ಞಾನಕ್ಕೆ ವಿಶೇಷ ಒತ್ತುಓಲಾ, ಉಬರ್ ಸೇರಿದಂತೆ ಎಲ್ಲಾ ಟ್ಯಾಕ್ಸಿಗಳಿಗೂ ಮೀಟರ್ ಕಡ್ಡಾಯಕ್ಕೆ ಸರ್ಕಾರ ಸಿದ್ಧತೆ; ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿ ಎಚ್ಚರಿಕೆ!ವಿಜಯಲಕ್ಷ್ಮೀ–ಧನ್ವೀರ್ ವಿವಾದಕ್ಕೆ ಹೈಕೋರ್ಟ್ ಮಧ್ಯಂತರ ಬ್ರೇಕ್: ಮೂರು ಎಫ್‌ಐಆರ್‌ಗಳ ತನಿಖೆ ಸ್ಥಗಿತಬೇಲೂರಿನಲ್ಲಿ ಮತ್ತೊಂದು ಕಾಡಾನೆ ದಾಳಿ – 2 ದಿನಗಳಲ್ಲಿ ಇಬ್ಬರ ದುರ್ಮರಣಬೇಲೂರು 56 ಕಾಡಾನೆಗಳನ್ನು ತಿಂಗಳೊಳಗೆ ಸ್ಥಳಾಂತರ – ಸಚಿವ ಕೆ. ಎಂ. ಶಿವಲಿಂಗೇಗೌಡ ಭರವಸೆಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಅವಕಾಶ: ಬಿಜೆಪಿ ನಾಯಕರ ಮನವೊಲಿಕೆಗೆ ಕುಮಾರಸ್ವಾಮಿ ಯತ್ನಬೆಂಗಳೂರಿನಿಂದ ಮಧುರೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ; ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತಲೋಕ ಸುತ್ತಾಟ : ಪ್ರಕೃತಿ ವಿಸ್ಮಯದ ಪ್ರವಾಸಿ ತಾಣ : ವಿಯೆಟ್ನಾಂ ಬಾ ನಾ ಹಿಲ್ಸ್‌

ಶಿವಮೊಗ್ಗ ವಿಮಾನ ನಿಲ್ದಾಣ: ಮಲೆನಾಡಿಗೆ ಕಿರೀಟವಾಗಬೇಕಿದ್ದದ್ದು, “ಕಪ್ಪುಚುಕ್ಕೆ” ಆದ ಬಗೆ

PPeepal Media Desk

Peepal Media Desk ಅಂಕಣ

• 7 ನಿಮಿಷದ ಓದು

ಶಿವಮೊಗ್ಗ ವಿಮಾನ ನಿಲ್ದಾಣ: ಮಲೆನಾಡಿಗೆ ಕಿರೀಟವಾಗಬೇಕಿದ್ದದ್ದು, “ಕಪ್ಪುಚುಕ್ಕೆ” ಆದ ಬಗೆ

ಜನರ ತೆರಿಗೆ ಹಣದಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣಕ್ಕೆ ಈಗ ವಿಮಾನಗಳಿಲ್ಲ! 558 ಕೋಟಿ ವೆಚ್ಚ, 774 ಎಕರೆ ಪ್ರದೇಶದಲ್ಲಿನ ನಿಲ್ದಾಣ ಈಗ ಖಾಲಿ ಖಾಲಿ.. ಅಭಿವೃದ್ಧಿಯ ಕನಸು ತೋರಿಸಿದವರು ಈಗ ಉತ್ತರದಾಯಿಗಳಾಗಬೇಕಲ್ಲವೇ?..” ಪತ್ರಕರ್ತ ಪ್ರಗತ್ ಕೆಆರ್ ಅವರ ಬರಹದಲ್ಲಿ

ಶಿವಮೊಗ್ಗ: ಅಭಿವೃದ್ಧಿಯ ಹೆಸರಿನಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುವುದು ಸುಲಭ. ಅವುಗಳಿಗೆ ಶಿಲಾನ್ಯಾಸ ನೆರವೇರಿಸುವುದು, ಉದ್ಘಾಟನೆ ಮಾಡೋದು, ವೇದಿಕೆಗಳಲ್ಲಿ ಭಾಷಣ ಮಾಡೋದು ಮತ್ತು ಅದರ ರಾಜಕೀಯ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳೋದು ನೀರು ಕುಡಿದಷ್ಟು ಸುಲಭ. ಆದರೆ ಆ ಯೋಜನೆಗಳು ಜನರ ಬದುಕಿನಲ್ಲಿ ನಿಜವಾದ ಬದಲಾವಣೆ ತರುತ್ತಿವೆಯೇ? ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾದ ಮೂಲಸೌಕರ್ಯ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆ ಮಾತ್ರ ರಾಜಕೀಯ ವ್ಯವಸ್ಥೆಯಲ್ಲಿ ಕಾಣೆಯಾಗುತ್ತಿರುವುದು ದುರಂತ.

ಇದಕ್ಕೆ ಪ್ರಸ್ತುತ ಉದಾಹರಣೆಯಾಗಿ ನಿಂತಿರುವುದು ಶಿವಮೊಗ್ಗದ ರನ್‌ವೇ.

ನವೆಂಬರ್ 21ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಿಗದಿತ ವಾಣಿಜ್ಯ ವಿಮಾನಗಳ ಹಾರಾಟ ಸ್ಥಗಿತಗೊಳ್ಳುತ್ತಿದೆ. ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದಲ್ಲಿ ನವೆಂಬರ್ 20ರ ನಂತರದ ಟಿಕೆಟ್ ಬುಕಿಂಗ್ ಅನ್ನು ಕೊನೆಯದಾಗಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ ಏರ್ ಲೈನ್ ತೆರೆಯದಿರುವುದು ಈ ಆತಂಕಕ್ಕೆ ಕಾರಣ.

ಅಭಿವೃದ್ಧಿಯ ಕನಸು ಕಂಡಿತ್ತು ಮಲೆನಾಡು
ಶಿವಮೊಗ್ಗದ ಸೋಗಾನೆಯಲ್ಲಿ ಸುಮಾರು 774 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಹಸಿರು ವಲಯದ ವಿಮಾನ ನಿಲ್ದಾಣವನ್ನು 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸುಮಾರು ₹558 ಕೋಟಿ ವೆಚ್ಚವಾಗಿದೆ. ಆರಂಭಿಕ ವರದಿಗಳಲ್ಲಿ ₹449.22 ಕೋಟಿ ಎಂದು ಉಲ್ಲೇಖಿಸಲಾಗಿತ್ತು.

ಈ ವಿಮಾನ ನಿಲ್ದಾಣ ಕೇವಲ ವಿಮಾನಗಳ ಇಳಿಯುವ ಮತ್ತು ಹಾರುವ ತಾಣವಾಗಿರಲಿಲ್ಲ. ಮಲೆನಾಡಿನ ಆರ್ಥಿಕ ಬೆಳವಣಿಗೆಯ ಹೊಸ ಹೆಬ್ಬಾಗಿಲು ಎಂಬ ನಿರೀಕ್ಷೆಯೂ ಶುರುವಿನಲ್ಲಿ ಹೊಂದಿತ್ತು.

ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ಮಲೆನಾಡು ಭಾಗಕ್ಕೆ ಹೆಚ್ಚಿನ ಹೂಡಿಕೆ ಬರಬಹುದು, ಬಹುರಾಷ್ಟ್ರೀಯ ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪಿಸಬಹುದು, ಪ್ರವಾಸೋದ್ಯಮ ಬೆಳೆಯಬಹುದು, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳು ತೆರೆದುಕೊಳ್ಳಬಹುದು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು ಎಂಬ ನಾನಾ ರೀತಿಯ ಆಶಯಗಳನ್ನು ಜನರು ಹೊಂದಿದ್ದರು.

ಉದ್ಘಾಟನಾ ಸಮಾರಂಭದಲ್ಲಿಯೂ ಶಿವಮೊಗ್ಗವನ್ನು ಅಭಿವೃದ್ಧಿಯ ಹೊಸ ಕೇಂದ್ರವಾಗಿ ರೂಪಿಸುವ ನಿರೀಕ್ಷೆ ವ್ಯಕ್ತವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಶಿವಮೊಗ್ಗವನ್ನು ಒಂದು ಔದ್ಯೋಗಿಕ ಹಬ್ ಆಗಿ ಮಾಡುವ ಮಾತನ್ನೂ ಆಡಿ ಹೋಗಿದ್ದರು. ಆದರೆ ಮೂರು ವರ್ಷಗಳ ನಂತರ ಆ ಕನಸುಗಳ ಸ್ಥಿತಿ ಏನು ಎಂಬುದನ್ನು ಈಗ ಪ್ರಶ್ನಿಸಬೇಕಾದ ಸಂದರ್ಭ ಬಂದಿದೆ.

ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಆದರೆ ಅದನ್ನು ಆಧರಿಸಿ ನಿರೀಕ್ಷಿಸಲಾಗಿದ್ದ ಕೈಗಾರಿಕಾ ಬೆಳವಣಿಗೆ ಎಷ್ಟರಮಟ್ಟಿಗೆ ಸಾಧ್ಯವಾಗಿದೆ? ಶಿವಮೊಗ್ಗಕ್ಕೆ ಎಷ್ಟು ಹೊಸ ಸಂಸ್ಥೆಗಳು ಬಂದಿವೆ? ಸ್ಥಳೀಯರಿಗೆ ಎಷ್ಟು ಉದ್ಯೋಗ ಸಿಕ್ಕಿದೆ? ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಎಷ್ಟು ಅನುಕೂಲವಾಗಿದೆ? ಈ ಪ್ರಶ್ನೆಗಳಿಗೆ ಸರ್ಕಾರಗಳು ಅಂಕಿಅಂಶಗಳೊಂದಿಗೆ ಉತ್ತರಿಸಬೇಕಿದೆ.

ವಿಮಾನಯಾನ ಸಂಸ್ಥೆಗಳು ಹಿಂದೆ ಸರಿದಿದ್ದೇಕೆ?
ಶಿವಮೊಗ್ಗ ವಿಮಾನ ನಿಲ್ದಾಣದ ಇಂದಿನ ಸ್ಥಿತಿಗೆ ಒಂದೇ ಒಂದು ಕಾರಣವನ್ನು ಹೊಣೆ ಮಾಡಲಾಗದು. ಹಲವು ಅಂಶಗಳು ಒಟ್ಟಾಗಿ ಈ ಪರಿಸ್ಥಿತಿಯನ್ನು ಸೃಷ್ಟಿಸಿವೆ.

ಮೊದಲನೆಯದಾಗಿ, ಕೇಂದ್ರ ಸರ್ಕಾರದ ಉಡಾನ್ (UDAN) ಯೋಜನೆಯಡಿ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಮೂರು ವರ್ಷಗಳ ಕಾರ್ಯಸಾಧ್ಯತಾ ಅಂತರ ಅನುದಾನ (VGF) ಅವಧಿ ಮುಕ್ತಾಯದ ಹಂತಕ್ಕೆ ಬಂದಿದೆ.

ಎರಡನೆಯದಾಗಿ, ವಿಮಾನಯಾನ ಸಂಸ್ಥೆಗಳು ಒಂದೊಂದಾಗಿ ಸೇವೆ ಹಿಂಪಡೆದಿವೆ.

  • ಇಂಡಿಗೋ ಸಂಸ್ಥೆ ಮೇ 1ರಿಂದ ಶಿವಮೊಗ್ಗ–ಬೆಂಗಳೂರು ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.
  • ಸ್ಪೈಸ್‌ಜೆಟ್ ಜೂನ್ 9ರಿಂದ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ.
  • ಸ್ಟಾರ್ ಏರ್ ಮಾತ್ರ ಕೊನೆಯದಾಗಿ ಸೇವೆ ನೀಡುತ್ತಿದ್ದು, ನವೆಂಬರ್ 20ರ ನಂತರದ ಟಿಕೆಟ್ ಬುಕಿಂಗ್ ಲಭ್ಯವಿಲ್ಲ.

ಹೀಗಾಗಿ ನವೆಂಬರ್ 21ರಿಂದ ವಿಮಾನಗಳ ಹಾರಾಟ ಮುಂದುವರಿಯುವುದರ ಬಗ್ಗೆ ಅನಿಶ್ಚಿತತೆ ಉಂಟಾಗಿದೆ.

ಇದರೊಂದಿಗೆ ಪ್ರಯಾಣಿಕರ ಸಂಖ್ಯೆಯ ನಿರೀಕ್ಷಿತ ಬೆಳವಣಿಗೆ ಕಾಣದಿರುವುದು, ವಿಮಾನಯಾನ ಸಂಸ್ಥೆಗಳಿಗೆ ವಾಣಿಜ್ಯಿಕವಾಗಿ ಸೇವೆ ಮುಂದುವರಿಸುವ ಸವಾಲು, ಹೊಸ ಸಂಸ್ಥೆಗಳು ಕಾರ್ಯಾಚರಣೆಗೆ ಮುಂದೆ ಬರದಿರುವುದು ಕೂಡ ಪ್ರಮುಖ ಕಾರಣಗಳಾಗಿವೆ.

ವಿಮಾನ ನಿಲ್ದಾಣ ನಿರ್ಮಾಣವಾಗಿದೆ ಎಂದ ಮಾತ್ರಕ್ಕೆ ಅದರ ಕಾರ್ಯಾಚರಣೆಯನ್ನು ನಿರಂತರವಾಗಿ ಸರ್ಕಾರವೇ ನಷ್ಟ ಭರಿಸಿ ನಡೆಸಬೇಕು ಎಂಬುದೂ ಸರಿಯಾದ ಆರ್ಥಿಕ ಮಾದರಿಯಲ್ಲ. ಹಾಗಾದರೆ ಯೋಜನೆಯ ಆರಂಭದಲ್ಲೇ ಪ್ರಯಾಣಿಕರ ಬೇಡಿಕೆ, ವಿಮಾನಯಾನ ಸಂಸ್ಥೆಗಳ ಆಸಕ್ತಿ, ಕಾರ್ಯಾಚರಣೆಯ ವೆಚ್ಚ ಮತ್ತು ಭವಿಷ್ಯದ ಆದಾಯದ ಕುರಿತು ಎಷ್ಟು ಸಮಗ್ರ ಅಧ್ಯಯನ ನಡೆಸಲಾಗಿತ್ತು ಎಂಬುದು ಮುಖ್ಯ ಪ್ರಶ್ನೆ.

ಶಿವಮೊಗ್ಗಕ್ಕೆ ಇಷ್ಟು ದೊಡ್ಡ ವಿಮಾನ ನಿಲ್ದಾಣದ ಅಗತ್ಯವಿತ್ತೇ?
ಇದು ಈಗ ಕೇಳಲೇಬೇಕಾದ ಪ್ರಾಥಮಿಕ ಪ್ರಶ್ನೆ. ಶಿವಮೊಗ್ಗ ಮಲೆನಾಡಿನ ಪ್ರಮುಖ ಜಿಲ್ಲಾ ಕೇಂದ್ರ. ಅಡಿಕೆ, ಭತ್ತ, ತೆಂಗು, ಕಾಳುಮೆಣಸು ಕಾಫಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳೇ ಇಲ್ಲಿನ ಆರ್ಥಿಕತೆಯ ಪ್ರಮುಖ ಆಧಾರ. ವ್ಯಾಪಾರ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಬೆಳವಣಿಗೆಯ ಸಾಧ್ಯತೆಗಳಿವೆ. ಆದರೆ ಈ ಆರ್ಥಿಕತೆಯ ಸ್ವರೂಪ ಮತ್ತು ವಿಮಾನ ಪ್ರಯಾಣದ ಬೇಡಿಕೆಯ ನಡುವೆ ಸಮತೋಲನ ಇದೆಯೇ ಎಂಬುದನ್ನು ಯೋಜನೆಯ ಹಂತದಲ್ಲೇ ಅಳೆಯಬೇಕಿತ್ತು. ಹೀಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ಒಂದು ರೀತಿಯಲ್ಲಿ “ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲೆಸಿದಂತೆ” ಎಂಬ ಗಾದೆ ಮಾತಿನಂತಾಗಿದೆ.

ಇನ್ನು ಫ್ಯಾಕ್ಟ್ ವಿಚಾರಕ್ಕೆ ಬರೋಣ. ರಾಜಧಾನಿ ಬೆಂಗಳೂರು ಶಿವಮೊಗ್ಗದಿಂದ ರಸ್ತೆ ಮತ್ತು ರೈಲು ಸಂಪರ್ಕದ ಮೂಲಕ ಆರಾಮಾಗಿ ತಲುಪಬಹುದಾದ ನಗರ. ಅಷ್ಟೇ ಅಲ್ಲದೆ ಬೆಂಗಳೂರ – ಶಿವಮೊಗ್ಗ ಚತುಷ್ಪಥ ರಸ್ತೆ ಇನ್ನೇನು ಕೊನೆಯ ಹಂತಕ್ಕೆ ಬಂದಿದೆ‌. ಹೀಗಿರುವಾಗ ವಿಮಾನ ನಿಲ್ದಾಣಕ್ಕೆ ತೆರಳಿ, ಚೆಕ್‌ಇನ್, ಭದ್ರತಾ ತಪಾಸಣೆ, ಕಾಯುವಿಕೆ ಮತ್ತು ವಿಮಾನ ಪ್ರಯಾಣ ಮುಗಿಸುವಷ್ಟರಲ್ಲಿ ರಸ್ತೆ ಅಥವಾ ರೈಲು ಪ್ರಯಾಣದಲ್ಲೇ ನಿರಾಯಾಸವಾಗಿ ಬೆಂಗಳೂರು ತಲುಪಬಹುದಾಗಿದೆ.

ಇನ್ನು ಬೆಂಗಳೂರು ಬಿಟ್ಟು ದೇಶದ ಬೇರಾವುದೇ ಮೂಲೆಗೆ ಪ್ರಯಾಣ ಮಾಡುವಷ್ಟು ಇಲ್ಲಿ ಪರ ಊರಿನ ಉದ್ಯೋಗಿಗಳ ಸಂಖ್ಯೆ ಇಲ್ಲ. ಇದ್ದರೂ ಅವರ್ಯಾರೂ ವೈಮಾನಿಕ ಪ್ರಯಾಣದ ಉದ್ಯೋಗಿಗಳೂ ಅಲ್ಲ. ಬೆರಳೆಣಿಕೆಯಷ್ಟು ಮಂದಿ ಉದ್ಯಮಿಗಳು, ಎರಡಂಕಿ ದಾಟದಷ್ಟು ರಾಜಕಾರಣಿಗಳು, ವಿದ್ಯಾರ್ಥಿಗಳು, ವೈದ್ಯಕೀಯ ಉದ್ದೇಶಗಳ ಹೊರತಾಗಿ ಬೇರಾರು ವಿಮಾನ ನಿಲ್ದಾಣ ಪ್ರಯಾಣ ಮಾಡುವವರಿದ್ದಾರೆ ಎಂಬುದು ಪ್ರಮುಖ ಪ್ರಶ್ನೆ.

ಇನ್ನು ವಿಮಾನ ಪ್ರಯಾಣದ ಬೆಲೆ, ವಿಮಾನಗಳ ವೇಳಾಪಟ್ಟಿ, ಸಂಪರ್ಕ ವಿಮಾನಗಳ ಲಭ್ಯತೆ, ಪ್ರಯಾಣಿಕರ ನಿಜವಾದ ಅಗತ್ಯ ಇವೆಲ್ಲವೂ ಜನರು ವಿಮಾನವನ್ನು ಆಯ್ಕೆ ಮಾಡುವುದರಲ್ಲಿ ನಿರ್ಣಾಯಕವಾಗುತ್ತವೆ. ಹಾಗೂ ವಿಮಾನ ಪ್ರಯಾಣದ ಬೇಡಿಕೆ ನಿರಂತರ ವಿಮಾನ ಸೇವೆಗಳನ್ನು ಲಾಭದಾಯಕವಾಗಿ ನಡೆಸುವಷ್ಟು ಇದೆಯೇ ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದಾರೆಯೇ? ಖಂಡಿತಾ ಇಲ್ಲ.

ಕೇವಲ ವಿಮಾನ ನಿಲ್ದಾಣ ನಿರ್ಮಿಸುವುದರಿಂದ ಪ್ರಯಾಣಿಕರು ಸೃಷ್ಟಿಯಾಗುವುದಿಲ್ಲ. ಪ್ರಯಾಣಿಕರ ಬೇಡಿಕೆ, ಆರ್ಥಿಕ ಚಟುವಟಿಕೆ ಮತ್ತು ಕೈಗಾರಿಕಾ ಬೆಳವಣಿಗೆಯೂ ಜೊತೆಯಾಗಿ ಬೆಳೆಯಬೇಕು.

ವಿಮಾನ ನಿಲ್ದಾಣಕ್ಕೂ ಮೊದಲು ಕೈಗಾರಿಕಾ ಬೆಳವಣಿಗೆ ಬೇಕಿರಲಿಲ್ಲವೇ?
ಶಿವಮೊಗ್ಗವನ್ನು ಕೈಗಾರಿಕಾ ಕೇಂದ್ರವನ್ನಾಗಿ ರೂಪಿಸುವ ಕನಸು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಆ ಕನಸಿಗೆ ಪೂರಕವಾದ ಹೂಡಿಕೆ ವಾತಾವರಣ ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಇಲ್ಲ. ಐಟಿ-ಬಿಟಿ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ಕೈಗಾರಿಕೆಗಳು, ಸಂಶೋಧನಾ ಕೇಂದ್ರಗಳು ಮತ್ತು ಸೇವಾ ವಲಯದ ಸಂಸ್ಥೆಗಳು ಶಿವಮೊಗ್ಗಕ್ಕೆ ಬಂದಿದ್ದರೆ ವಿಮಾನ ಪ್ರಯಾಣದ ಬೇಡಿಕೆ ಹೆಚ್ಚುವ ಸಾಧ್ಯತೆಯಿತ್ತು.

ಆದರೆ ಕಂಪನಿಗಳು ಒಂದು ಪ್ರದೇಶಕ್ಕೆ ಬರುವುದು ಕೇವಲ ವಿಮಾನ ನಿಲ್ದಾಣವನ್ನು ನೋಡಿ ನಿರ್ಧಾರ ಮಾಡೋದಿಲ್ಲ. ಕೈಗಾರಿಕಾ ಭೂಮಿ, ರಸ್ತೆ ಮತ್ತು ರೈಲು ಸಂಪರ್ಕ, ವಿದ್ಯುತ್, ನೀರು, ಕೌಶಲ್ಯಯುತ ಮಾನವ ಸಂಪನ್ಮೂಲ, ಆಡಳಿತಾತ್ಮಕ ಸರಳತೆ, ಸಾಮಾಜಿಕ ಸ್ಥಿರತೆ ಮತ್ತು ಸುರಕ್ಷತೆಯ ವಾತಾವರಣ ಸೇರಿದಂತೆ ಅನೇಕ ಅಂಶಗಳನ್ನು ಪರಿಶೀಲಿಸುತ್ತವೆ.

ಇವೆಲ್ಲವುಗಳ ಹೊರತಾಗಿಯೂ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಮೂರು ಬಾರಿಯಾದರೂ ಅಲಿಖಿತವಾಗಿ ನಡೆಯುವ ಕೋಮು ಸಂಘರ್ಷಗಳು, ರಾಜಕೀಯ ಸಂಘರ್ಷಗಳು ಮತ್ತು ಕ್ರೈಂ ರೇಟ್ ಕುರಿತ ಆತಂಕಗಳು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತಿವೆ ಎಂಬುದು ಸತ್ಯ. ಉದಾಹರಣೆಗೆ ಪ್ರತೀ ವರ್ಷ ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ಸಮಯದಲ್ಲಿ ನಿರೀಕ್ಷಿತವಾಗಿಯೇ ಆಗುವ ಕೋಮು ಸಂಘರ್ಷ ಇಡೀ ರಾಜ್ಯದಲ್ಲಿ ಕುಖ್ಯಾತಿ ಪಡೆದಿದೆ. ಚಿಕ್ಕಮಗಳೂರು ಸಹ ಕೋಮು ಸಂಬಂಧಿತ ನಿರಂತರ ಸಂಘರ್ಷದ ತಾಣ.

ಇದು ಕೇವಲ ಆರೋಪದ ವಿಚಾರವಲ್ಲ. ಹೂಡಿಕೆದಾರರ ಅಭಿಪ್ರಾಯ, ಕೈಗಾರಿಕಾ ಹೂಡಿಕೆ ಪ್ರಸ್ತಾವನೆಗಳು, ಅನುಮತಿ ಪಡೆದರೂ ಆರಂಭವಾಗದ ಯೋಜನೆಗಳು ಮತ್ತು ಕೈಗಾರಿಕೆಗಳು ಈ ಪ್ರದೇಶದಿಂದ ದೂರ ಉಳಿಯಲು ನೀಡಿರುವ ಕಾರಣಗಳ ಕುರಿತು ಅಧ್ಯಯನ ನಡೆಸಿದಾಗ ಸಿಕ್ಕ ವಾಸ್ತವ ಚಿತ್ರಣ. ಕಂಪನಿಗಳನ್ನು ಆಹ್ವಾನಿಸುವುದಕ್ಕಿಂತ ಮೊದಲು ಅವುಗಳಿಗೆ ಅಗತ್ಯವಾದ ವಿಶ್ವಾಸಾರ್ಹ ವಾತಾವರಣವನ್ನ ಇಲ್ಲಿನ ಆಡಳಿತ ವ್ಯವಸ್ಥೆ ನಿರ್ಮಾಣ ಮಾಡಬೇಕು.

ರಾಜಕೀಯ ಶ್ರೇಯಸ್ಸು ಪಡೆಯಲು ಪೈಪೋಟಿ; ಹೊಣೆಗಾರಿಕೆ ಬಂದಾಗ ಕೆಸರೆರಚಾಟ
ಶಿವಮೊಗ್ಗ ವಿಮಾನ ನಿಲ್ದಾಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸಿನ ಕೂಸು ಎಂದೇ ಫೇಮಸ್. ತಪ್ಪೇನಿಲ್ಲ ಬಿಡಿ. ನಿರ್ಮಾಣದಲ್ಲಿ ಯಡಿಯೂರಪ್ಪ ಸೇರಿದಂತೆ ಸಂಸದ ಬಿ.ವೈ. ರಾಘವೇಂದ್ರ ಜೊತೆಗೆ ಬಿಜೆಪಿ ನಾಯಕರ ಪಾತ್ರ ಹಾಗೂ ರಾಜಕೀಯ ಆಸಕ್ತಿ ಆರಂಭದಿಂದಲೂ ಪ್ರಮುಖವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಯೋಜನೆ ಎಂಬ ಕಾರಣಕ್ಕೂ ಬಿಜೆಪಿ ನಾಯಕರು ಇದನ್ನು ತಮ್ಮ ಅಭಿವೃದ್ಧಿಯ ಮೈಲಿಗಲ್ಲು ಎಂದೇ ಬಿಂಬಿಸಿದ್ದರು. ಆದರೆ ಈಗ ವಿಮಾನ ಹಾರಾಟ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾದಾಗ ರಾಜಕೀಯ ಶ್ರೇಯಸ್ಸು ಪಡೆದುಕೊಂಡವರು ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಕೆಸರೆರಚಾಟ ನಡೆಸುವುದು ಯಾಕೆ? ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರಣರಾದ ಹಿಂದಿನ ಸರ್ಕಾರದ ನಾಯಕರು, ಯೋಜನೆಯನ್ನು ಉದ್ಘಾಟಿಸಿದ ಕೇಂದ್ರ ಸರ್ಕಾರ, ಕಾರ್ಯಾಚರಣೆಗೆ ಜವಾಬ್ದಾರಿಯಾದ ರಾಜ್ಯ ಸರ್ಕಾರ ಹಾಗೂ ಅನುದಾನ ನೀಡುವ ಕೇಂದ್ರ ಸರ್ಕಾರ ಎಲ್ಲರೂ ತಮ್ಮ ತಮ್ಮ ಪಾತ್ರದ ಕುರಿತು ಉತ್ತರಿಸಬೇಕು.

ಇತ್ತೀಚೆಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ವಿಮಾನ ಸೇವೆ ಮುಂದುವರಿಸಲು ರಾಜ್ಯ ಸರ್ಕಾರ ತಕ್ಷಣ ಕಾರ್ಯಸಾಧ್ಯತಾ ಅಂತರ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಕೇಂದ್ರದ ಉಡಾನ್ ಯೋಜನೆಯಲ್ಲಿನ ಮಿತಿಗಳೇ ಸಮಸ್ಯೆಗೆ ಕಾರಣ ಎಂದು ರಾಜ್ಯದ ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೊಣೆಗಾರಿಕೆಯ ಪ್ರಶ್ನೆ ಈಗಾಗಲೇ ರಾಜಕೀಯ ಚರ್ಚೆಯ ಭಾಗವಾಗಿದೆ.

ಆದರೆ ಜನರಿಗೆ ಬೇಕಿರುವುದು ಆರೋಪ-ಪ್ರತ್ಯಾರೋಪಗಳಲ್ಲ. ವಿಮಾನ ನಿಲ್ದಾಣ ಕಾರ್ಯನಿರ್ವಹಿಸಬೇಕಾದರೆ ಯಾರು ಎಷ್ಟು ಹಣ ನೀಡುತ್ತಾರೆ? ಎಷ್ಟು ಅವಧಿಗೆ ನೆರವು ನೀಡುತ್ತಾರೆ? ಹೊಸ ವಿಮಾನಯಾನ ಸಂಸ್ಥೆಗಳನ್ನು ಹೇಗೆ ಕರೆತರುತ್ತಾರೆ? ಎಂಬುದಕ್ಕೆ ಸ್ಪಷ್ಟ ಉತ್ತರ. ಒಳ್ಳೆಯದಾದಾಗ ಶ್ರೇಯಸ್ಸು ಪಡೆಯಲು ಮುಂದೆ ಬರುವವರು, ಸಮಸ್ಯೆ ಎದುರಾದಾಗಲೂ ಪರಿಹಾರಕ್ಕಾಗಿ ಮುಂದೆ ಬರಬೇಕಲ್ಲವೇ?

ಕಮಲದ ಆಕಾರದ ವಿಮಾನ ನಿಲ್ದಾಣ ಮತ್ತು ರಾಷ್ಟ್ರಕವಿ ಕುವೆಂಪು ಹೆಸರಿಗೆ ಕಪ್ಪುಚುಕ್ಕೆ
ಶಿವಮೊಗ್ಗ ವಿಮಾನ ನಿಲ್ದಾಣದ ಮತ್ತೊಂದು ಚರ್ಚೆಯ ವಿಚಾರ ಅದರ ವಿನ್ಯಾಸ ಮತ್ತು ನಾಮಕರಣ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಕಮಲದ ಹೂವಿನ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಉದ್ಘಾಟನಾ ಪ್ರಕಟಣೆಯಲ್ಲಿಯೇ ಉಲ್ಲೇಖಿಸಲಾಗಿದೆ. ಈ ವಿನ್ಯಾಸದ ಕುರಿತು ರಾಜಕೀಯ ಚರ್ಚೆಗಳೂ ನಡೆದಿವೆ.

ಇನ್ನೊಂದೆಡೆ, ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. 2023ರಲ್ಲಿ ಯಡಿಯೂರಪ್ಪ ಅವರೂ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರಿಡಬೇಕೆಂದು ಸಾರ್ವಜನಿಕವಾಗಿ ಹೇಳಿದ್ದರು. ನಂತರ ಬಸವರಾಜ ಬೊಮ್ಮಾಯಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದಕ್ಕೆ ಯಡಿಯೂರಪ್ಪ ಹೆಸರು ಇಡಬೇಕು ಎಂದಿದ್ದರು. ನಂತರ 2023ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರನ್ನು ಶಿಫಾರಸು ಮಾಡುವುದಾಗಿ ವಿಧಾನಸಭೆಯಲ್ಲಿ ಪ್ರಕಟಿಸಿತ್ತು. ಕುವೆಂಪು ಅವರು ವಿಶ್ವಮಾನವ ಸಂದೇಶ ಸಾರಿದವರು. ಗಾಂಧೀಜಿಯವರ ಗ್ರಾಮ ಭಾರತದ ಕನಸನ್ನು ನನಸಾಗಿಸುವತ್ತ ಶ್ರಮಿಸಿದವರು. ಹೀಗಿರುವಾಗ ಅವರ ಹೆಸರು ನಷ್ಟದಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣಕ್ಕೆ ಇಟ್ಟರೆ ಅದು ನೇರವಾಗಿ ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡುವ ಅವಮಾನ.

ಶಿವಮೊಗ್ಗದ ಸಮಸ್ಯೆ ಪ್ರತ್ಯೇಕ ಘಟನೆಯೇನಲ್ಲ. 2026ರ ಮಾರ್ಚ್ 12ರಂದು ಲೋಕಸಭೆಯಲ್ಲಿ ನೀಡಿದ ನಾಗರಿಕ ವಿಮಾನಯಾನ ಸಚಿವಾಲಯದ ಉತ್ತರದ ಪ್ರಕಾರ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯಾಪ್ತಿಯ 22 ವಿಮಾನ ನಿಲ್ದಾಣಗಳು ಆ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಉಡಾನ್ ಯೋಜನೆಯಡಿ ಕಾರ್ಯಾರಂಭ ಮಾಡಿದ್ದ ಉತ್ತರ ಪ್ರದೇಶದ ಆರು ವಿಮಾನ ನಿಲ್ದಾಣಗಳಲ್ಲಿ ಮೂರು ವರ್ಷಗಳ ಅನುದಾನ ಅವಧಿ ಮುಗಿಯುವುದು, ಕಡಿಮೆ ಪ್ರಯಾಣಿಕರ ಸಂಖ್ಯೆ, ವಿಮಾನಗಳ ಕೊರತೆ ಮತ್ತು ಇತರ ಕಾರ್ಯಾಚರಣೆಯ ಸಮಸ್ಯೆಗಳಿಂದ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದು ದೇಶದ ಪ್ರಾದೇಶಿಕ ವಿಮಾನಯಾನ ವ್ಯವಸ್ಥೆ ಎದುರಿಸುತ್ತಿರುವ ಆರ್ಥಿಕ ಸವಾಲನ್ನು ತೋರಿಸುತ್ತದೆ.

ಸರ್ಕಾರಗಳ ಹೊಣೆ ಏನು?
ವಿಮಾನ ನಿಲ್ದಾಣದ ವಿಮಾನ ಹಾರಾಟ ಸ್ಥಗಿತವಾಗುವ ಪರಿಸ್ಥಿತಿಯನ್ನು ಬದಲಾಯಿಸಲು ಕೇವಲ ತಾತ್ಕಾಲಿಕ ಅನುದಾನ ನೀಡುವುದಷ್ಟೇ ಸಾಕಾಗುವುದಿಲ್ಲ. ಮೊದಲನೆಯದಾಗಿ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಒಟ್ಟು ವೆಚ್ಚ, ಭೂಸ್ವಾಧೀನ, ನಿರ್ಮಾಣ, ಹೆಚ್ಚುವರಿ ಕಾಮಗಾರಿಗಳು, ನಿರ್ವಹಣೆ ಮತ್ತು ಕಾರ್ಯಾಚರಣೆಯ ವೆಚ್ಚಗಳ ಸಂಪೂರ್ಣ ಲೆಕ್ಕವನ್ನು ಸಾರ್ವಜನಿಕಗೊಳಿಸಬೇಕು.

ಎರಡನೆಯದಾಗಿ, ಕಳೆದ ಮೂರು ವರ್ಷಗಳ ಪ್ರಯಾಣಿಕರ ಸಂಖ್ಯೆ, ವಿಮಾನಗಳ ಹಾರಾಟ, ಮಾರ್ಗವಾರು ಆದಾಯ, ವಿಮಾನಯಾನ ಸಂಸ್ಥೆಗಳಿಗೆ ನೀಡಿದ ಅನುದಾನ ಮತ್ತು ನಷ್ಟದ ವಿವರಗಳನ್ನು ಬಹಿರಂಗಪಡಿಸಬೇಕು.

ಮೂರನೆಯದಾಗಿ, ಶಿವಮೊಗ್ಗದಿಂದ ಬೆಂಗಳೂರು ಮಾತ್ರವಲ್ಲದೆ ಹೈದರಾಬಾದ್, ಗೋವಾ, ಚೆನ್ನೈ, ತಿರುಪತಿ ಸೇರಿದಂತೆ ಬೇಡಿಕೆಯಿರುವ ಮಾರ್ಗಗಳಲ್ಲಿ ಸೇವೆ ಆರಂಭಿಸಲು ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಬೇಕು.

ನಾಲ್ಕನೆಯದಾಗಿ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸರಕು ಸಾಗಣೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಮಗ್ರ ಯೋಜನೆ ರೂಪಿಸಬೇಕು.

ಐದನೆಯದಾಗಿ, ಕೇಂದ್ರದ ಉಡಾನ್ ಯೋಜನೆಯ ಅನುದಾನ ಮುಗಿದ ನಂತರವೂ ವಿಮಾನ ಸೇವೆ ಮುಂದುವರಿಯಲು ಸಾಧ್ಯವಾಗುವಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಆರ್ಥಿಕ ಮಾದರಿಯನ್ನು ರೂಪಿಸಬೇಕು.

ರಾಜ್ಯ ಸರ್ಕಾರ ಇತ್ತೀಚೆಗೆ ಶಿವಮೊಗ್ಗ ಸೇರಿದಂತೆ ಕೆಲವು ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಕುರಿತು ಹೊಸ ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸುತ್ತಿರುವುದಾಗಿ ತಿಳಿಸಿದೆ.

ಇದು ಯಾರ ವೈಯಕ್ತಿಕ ಆಸ್ತಿಯೂ ಅಲ್ಲ; ಜನರ ತೆರಿಗೆ ಹಣದ ಆಸ್ತಿ
ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಕೊನೆಗೆ ಉಳಿಯುವ ಪ್ರಶ್ನೆ ಒಂದೇ. ಇದು ಯಡಿಯೂರಪ್ಪ ಅವರ ವೈಯಕ್ತಿಕ ಆಸ್ತಿಯಲ್ಲ. ಬಿ.ವೈ. ರಾಘವೇಂದ್ರ ಅವರ ವೈಯಕ್ತಿಕ ಯೋಜನೆಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಸಾಧನೆಯ ಸಂಕೇತವೂ ಅಲ್ಲ. ಅದೇ ರೀತಿ ಇಂದಿನ ಕಾಂಗ್ರೆಸ್ ಸರ್ಕಾರದ ಹೊಣೆಗಾರಿಕೆಯಿಂದ ಹೊರತಾದ ಯೋಜನೆಯೂ ಅಲ್ಲ.

ಇದು ಸಾರ್ವಜನಿಕರ ಹಣದಲ್ಲಿ ನಿರ್ಮಾಣವಾದ ಮೂಲಸೌಕರ್ಯ. ಇದರ ನಿರ್ಮಾಣಕ್ಕೆ ಹಣ ನೀಡಿದ್ದು ಜನರ ತೆರಿಗೆ. ಇದರ ನಿರ್ವಹಣೆಯ ಹೊಣೆಗಾರಿಕೆಯೂ ಸಾರ್ವಜನಿಕ ಆಡಳಿತ ವ್ಯವಸ್ಥೆಯದ್ದೇ.

ರಾಜಕೀಯ ನಾಯಕರು ತಮ್ಮ ಅಧಿಕಾರಾವಧಿಯಲ್ಲಿ ಯೋಜನೆಗಳನ್ನು ಘೋಷಿಸುವಾಗ ಅದರ ಭವಿಷ್ಯದ ಆರ್ಥಿಕ ಪರಿಣಾಮಗಳನ್ನೂ ಅಂದಾಜಿಸಬೇಕು. ಕೇವಲ ಉದ್ಘಾಟನಾ ಸಮಾರಂಭದ ಯಶಸ್ಸು ಅಭಿವೃದ್ಧಿಯ ಯಶಸ್ಸಾಗುವುದಿಲ್ಲ.

ಮೂರು ವರ್ಷಗಳಲ್ಲೇ ವಿಮಾನ ಹಾರಾಟ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಿರುವುದು ಯೋಜನೆಯ ಅನುಷ್ಠಾನ, ಬೇಡಿಕೆಯ ಅಂದಾಜು ಮತ್ತು ನಿರ್ವಹಣಾ ಮಾದರಿಯ ಕುರಿತು ಗಂಭೀರ ಆತ್ಮಾವಲೋಕನಕ್ಕೆ ಅವಕಾಶ ನೀಡಿದೆ. ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಬೇಕಿತ್ತೇ ಎಂಬ ಪ್ರಶ್ನೆಗಿಂತಲೂ ಈಗ ಹೆಚ್ಚು ಮುಖ್ಯವಾದ ಪ್ರಶ್ನೆ ಎಂದರೆ, ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಜನರ ಉಪಯೋಗಕ್ಕೆ ನಿರಂತರವಾಗಿ ಹೇಗೆ ಬಳಸಿಕೊಳ್ಳಬೇಕು.. ಹದಗೆಟ್ಟ ಇಲ್ಲಿನ ಆಡಳಿತ ವ್ಯವಸ್ಥೆ ಹೇಗೆ ಸರಿಪಡಿಸಬೇಕು ಎಂಬುದು.

ಅಭಿವೃದ್ಧಿ ಎಂದರೆ ಕಟ್ಟಡ ನಿರ್ಮಿಸುವುದಲ್ಲ; ಅದನ್ನು ಜನರ ಬದುಕಿಗೆ ಉಪಯುಕ್ತವಾಗಿಸುವುದು. ವಿಮಾನ ನಿಲ್ದಾಣ ನಿರ್ಮಿಸಿ ವಿಮಾನಗಳಿಲ್ಲದ ಸ್ಥಿತಿ ನಿರ್ಮಾಣವಾದರೆ ಅದು ಕೇವಲ ಸಾರಿಗೆ ವ್ಯವಸ್ಥೆಯ ಸಮಸ್ಯೆಯಲ್ಲ, ಸಾರ್ವಜನಿಕ ಯೋಜನೆಗಳ ಯೋಜನೆ ಮತ್ತು ನಿರ್ವಹಣೆಯಲ್ಲಿನ ಲೋಪಗಳ ಕುರಿತ ಎಚ್ಚರಿಕೆಯೂ ಹೌದು.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು