ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬೊಗಸೆಗೆ ದಕ್ಕಿದ್ದು-100 : “ಸತ್ಯ ಮುಖ್ಯವಲ್ಲ; ಗೆಲುವು ಮಾತ್ರ!”ಊರ ಬಯಲಿನ ನಡುವೆ – 1 : ಕಾಲ ಓಡುತ್ತಿದೆ ಎನ್ನುತ್ತಿದ್ದೇವೆ! ಆದರೆ….?SC/ST ಮೀಸಲಾತಿ ಹೋರಾಟ, ಸುಪ್ರೀಂ ಕೋರ್ಟ್‌ನಲ್ಲಿ ಗೆಲುವಿನ ವಿಶ್ವಾಸ –  ಡಿ.ಕೆ ಶಿವಕುಮಾರ್ನವೆಂಬರ್ 15ರಂದು KPSC ಪೂರ್ವಭಾವಿ ಪರೀಕ್ಷೆ: ಚುನಾವಣಾ ಮಾದರಿ ಭದ್ರತೆ – CM ಸೂಚನೆSSLC, PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ –  ನೋಂದಣಿ ದಿನಾಂಕ ವಿಸ್ತರಣೆಅಡುಗೆ ಎಣ್ಣೆ ಮರುಬಳಕೆ ಪತ್ತೆಗೆ, ಆರೋಗ್ಯ ಇಲಾಖೆ ಮಾಸ್ಟರ್‌ ಪ್ಲಾನ್‌ – ಯು.ಟಿ. ಖಾದರ್ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಆನೇಕಲ್‌ನಲ್ಲಿ ಮಾಂಸದಂಗಡಿಗಳ ಬಂದ್‌ಗೆ ಆದೇಶ; ಬಿಎನ್‌ಎಸ್‌ಎಸ್‌ ಸೆಕ್ಷನ್‌ 163 ಜಾರಿಮೋದಿ ಸಂಸತ್ತಿನಲ್ಲಿ ನನ್ನೊಂದಿಗೆ ಸಂಸತ್ತಿನಲ್ಲಿ ನೇರ ಚರ್ಚೆ ನಡೆಸಿದರೆ ಮತ್ತೆ ಪ್ರಧಾನಿಯಾಗಿ ಮುಂದುವರೆಯಲಾರರು: ರಾಹುಲ್‌ ಗಾಂಧಿಶಂಕಿತ ಗೂಢಚಾರಿಣಿಯೊಂದಿಗಿನ ಸಂಬಂಧ: ಎನ್‌ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್‌ಗೆ ಅಮೆರಿಕ ಸಂಸತ್ ಸಮನ್ಸ್‌ಮೈಕ್ರೋಸಾಫ್ಟ್‌ ಸೇವೆಗಳಲ್ಲಿ ಭಾರೀ ವ್ಯತ್ಯಯ: ಸರಿಪಡಿಸುವ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ ಎಂದು ಕೈ ಚೆಲ್ಲಿದ ಕಂಪನಿಇ-ಖಾತಾ ವ್ಯವಸ್ಥೆಯಲ್ಲೇ ಅಕ್ರಮ ಬೆಂಗಳೂರಿನಲ್ಲಿ 98 ಅನರ್ಹ ಆಸ್ತಿಗಳಿಗೆ ಖಾತೆ ಮಂಜೂರು ; 33 ಜನರ ವಿರುದ್ಧ ಪ್ರಕರಣ ದಾಖಲುಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಿಗೆ ಪತ್ರ: ಡಿಕೆ ಶಿವಕುಮಾರ್ಕ್ಷೇತ್ರ ಮರು ವಿಂಗಡಣೆ ಮಸೂದೆ ಮತ್ತೆ ಮುನ್ನೆಲೆಗೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರದ ಸಿದ್ಧತೆಬೆಂಗಳೂರಿನ ವಕೀಲ ಮಂಜುನಾಥ್ ಕೊಲೆ ಪ್ರಕರಣ: ಬಿಹಾರದಲ್ಲಿ ಆರೋಪಿ ಬಂಧನಓಲಾ ಕಂಪನಿಗೆ ₹10 ಲಕ್ಷ ದಂಡ: ಗ್ರಾಹಕರನ್ನು ಹೆಚ್ಚುವರಿ ಪಾವತಿಗೆ ಪ್ರೇರೇಪಿಸುವ ಫೀಚರ್ ಸ್ಥಗಿತಗೊಳಿಸಲು CCPA ಆದೇಶಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ವಿನ್ಯಾಸದ ಸಮವಸ್ತ್ರ: 1,574 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದ ಭರವಸೆಮಾಲಿನ್ಯದ ಪದರ ಸೂರ್ಯ ಕಿರಣ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ: ರೂಬಿಕಾ ಲಿಯಾಕತ್ ಹೇಳಿಕೆ ವೈರಲ್ಒಂದು ಕಾಲದಲ್ಲಿ ಪತ್ರಕರ್ತರಿಗೆ ಕುರ್ಚಿ ಹಾಕುತ್ತಿದ್ದೆ: ಬಿಜೆಪಿಯ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿಬೆಂಗಳೂರು ಪ್ರತೀ ಮೆಟ್ರೋ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯೇ ಬರಬೇಕೇ? ಮೆಟ್ರೋಗೆ ದುಡ್ಡು ಕರ್ನಾಟಕದ್ದು, ಉದ್ಘಾಟನೆಯ ಶೋಕಿ ಕೇಂದ್ರದ್ದು!ಎಸ್‌ಪಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದಾಗ ಅದು ಬಿಜೆಪಿಯ ಬಿ ಟೀಮ್ ಆಗಿತ್ತೆ?: ಒವೈಸಿ ಮೈತ್ರಿ ಕುರಿತ ಟೀಕೆಗಳಿಗೆ ಚಂದ್ರಶೇಖರ್ ಆಜಾದ್ ತಿರುಗೇಟು

ಬೊಗಸೆಗೆ ದಕ್ಕಿದ್ದು-100 : “ಸತ್ಯ ಮುಖ್ಯವಲ್ಲ; ಗೆಲುವು ಮಾತ್ರ!”

PPeepal Media Desk

Peepal Media Desk ಅಂಕಣ

• 5 ನಿಮಿಷದ ಓದು

ಬೊಗಸೆಗೆ ದಕ್ಕಿದ್ದು-100 : “ಸತ್ಯ ಮುಖ್ಯವಲ್ಲ; ಗೆಲುವು ಮಾತ್ರ!”

“..​”ಸತ್ಯ ಮುಖ್ಯವಲ್ಲ; ಗೆಲುವು ಮಾತ್ರ!” ಇದು ಕುಖ್ಯಾತ ನರಹಂತಕ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್ ತನ್ನ ಕಟ್ಟಾ ಬೆಂಬಲಿಗರಿಗೆ ಹೇಳಿದ ಮಾತು. ಇದೇ ಮಾತನ್ನು ಆದರ್ಶದಂತೆ ಪಾಲಿಸುತ್ತಿರುವುದು ಆರೆಸ್ಸೆಸ್-ಬಿಜೆಪಿ..” ಲೇಖಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ

​”ಸತ್ಯ ಮುಖ್ಯವಲ್ಲ; ಗೆಲುವು ಮಾತ್ರ!” ಇದು ಕುಖ್ಯಾತ ನರಹಂತಕ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್ ತನ್ನ ಕಟ್ಟಾ ಬೆಂಬಲಿಗರಿಗೆ ಹೇಳಿದ ಮಾತು. ಆತ ತನ್ನ ಪಕ್ಷದ ನಾಯಕರಿಗೆ ಇನ್ನೊಂದು ಮಾತನ್ನೂ ಹೇಳಿದ್ದ. ಅದೆಂದರೆ, “ಜನರು ಹೇಳಿದಂತೆ ಕೇಳಲು ನಾವಿರುವುದಲ್ಲ; ನಾವು ಹೇಳಿದ್ದನ್ನು ಅವರು ಕೇಳುವಂತೆ ಮಾಡಬೇಕು!” ಇಂತದ್ದೇ ಮಾತನಾಡುತ್ತಾ, ಸಾವಿರಾರು ಸುಳ್ಳುಗಳನ್ನು ಹೇಳುತ್ತಾ, ಕಮ್ಯೂನಿಸ್ಟರು, ಯಹೂದಿಗಳು ಮುಂತಾಗಿ ಬೇರೆ ಬೇರೆ ಜನವಿಭಾಗಗಳನ್ನು “ದೇಶದ್ರೋಹಿಗಳು” ಎಂದು ಬಿಂಬಿಸುತ್ತಾ, ಪೋಲೆಂಡ್, ಫ್ರಾನ್ಸ್ ಮುಂತಾದ ನೆರೆಯ ದೇಶಗಳನ್ನು ಚಿರಶತ್ರುಗಳು ಎಂದು ಕಾಣಿಸುತ್ತಾ, ಬಣ್ಣ ಬಣ್ಣದ ಕನಸುಗಳನ್ನು ಬಿತ್ತುತ್ತಾ, ಮೆಲ್ಲಮೆಲ್ಲನೆ ಅಧಿಕಾರಕ್ಕೇರಿ, ನಂತರ ಒಂದೇ ಏಟಿಗೆ ಎಲ್ಲಾ ಅಧಿಕಾರಗಳನ್ನು ತನ್ನ ಮುಷ್ಟಿಯೊಳಗೆ ಮಾಡಿಕೊಂಡು ಲಕ್ಷಾಂತರ ಜನರ ಯಾತನಾಮಯ ಸಾವಿಗೆ ಕಾರಣನಾದ ಹಿಟ್ಲರನ ಕತೆ ಮೇಲುಮೇಲಿಗೆ ಎಲ್ಲರಿಗೂ ಗೊತ್ತಿರುವಂತದ್ದೇ!

​ಇಲ್ಲಿ ನಮ್ಮದೇ ದೇಶದಲ್ಲಿಯೂ ಇಂತಹ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ಎಚ್ಚರಿಕೆಯಿಂದ ನೋಡಬೇಕಾದ ಅಗತ್ಯವಿದೆ ಎಂದು ನಾನು ಮತ್ತೆ ಮತ್ತೆ ಹೇಳುತ್ತಿರುವುದರಿಂದ ಇದು ಪ್ಯಾರನಾಯ್ಡ್‌ (ಹುಚ್ಚು ಭಯ – Paranoid) ಚಿಂತನೆ ಎಂದು ಹೇಳುವವರು ಅನೇಕರಿರಬಹುದು! ಆದರೆ, ಹಿಟ್ಲರ್ ಮೇಲೇರಿದ ರೀತಿಗೂ, ಇಲ್ಲಿಯೂ ಕಣ್ಣಿಗೆ ರಾಚುವಂತೆ ನಡೆಯುತ್ತಿರುವ ಕೆಲವು ಯೋಜಿತ ವಿದ್ಯಮಾನಗಳಿಗೂ ಇರುವ ಸಾಮ್ಯತೆಗಳನ್ನು ನಾವು ಸ್ವಲ್ಪ ಹೆಚ್ಚು ಸೂಕ್ಷ್ಮವಾಗಿ ಗಮನಿಸಿ ಹೋಲಿಸಿ ನೋಡಿದರೆ, ಇಂತಹ ಭಯ ಸಂಪೂರ್ಣ ಅಕಾರಣವಲ್ಲ ಎಂಬುದು ಗೊತ್ತಾಗುತ್ತದೆ.

​ಮೊದಲಿಗೆ ಹಿಟ್ಲರ್ ಅಧಿಕಾರಕ್ಕೆ ಬಂದ ಮತ್ತು ನಂತರ ಬೆಳೆದ ರೀತಿಯನ್ನು ಗಮನಿಸೋಣ. ಆತ ಒಮ್ಮಲೇ ಅಧಿಕಾರಕ್ಕೆ ಏರಿದವನಲ್ಲ. ಸೇನಾ ಹಿನ್ನೆಲೆ ಇದ್ದರೂ, ಆತ ಯಾವುದೇ ಸೇನಾ ಕ್ಷಿಪ್ರ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದವನೂ ಅಲ್ಲ! ಆತ ಮೊದಲನೆಯ ಜಾಗತಿಕ ಯುದ್ಧದ ಸೋಲಿನ ಬಳಿಕ ಜರ್ಮನಿಯಲ್ಲಿ ಇದ್ದ ವೈಮರ್ ರಿಪಬ್ಲಿಕ್ (Weimar Republic) ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ರೈಕ್‌ಸ್ಟಾಗ್ (Reichstag – ಸಂಸತ್ತು) ಎಂಬ ಸಂಸತ್ತಿನ ವ್ಯವಸ್ಥೆಯನ್ನೇ ಚಾಣಾಕ್ಷತನದಿಂದ ಬಳಸಿಕೊಂಡು ಅಧಿಕಾರದ ಹಜಾರದೊಳಗೆ ಮೀಸೆ ತೂರಿಸಿ, ನಂತರ ಇಡೀ ಹಜಾರವನ್ನೇ ಆಕ್ರಮಿಸಿದವ! ಅದೂ ಜನರ ಮೂಗಿನ ಅಡಿಯಲ್ಲಿಯೇ, ಮತ್ತು ಅವರ ಬೆಂಬಲದ ಜೊತೆಗೆಯೇ!

​ಹಿಟ್ಲರ್ ಸಂದರ್ಶನವೊಂದರಲ್ಲಿ ಆಡಿದ್ದ ಮಾತನ್ನು ನಾವು ಗಮನಿಸಬೇಕು. “ಹತ್ತು ವರ್ಷಗಳ ಹಿಂದೆ ನಾನು ಜರ್ಮನಿಯನ್ನು ಆಳುತ್ತೇನೆ ಎಂದಾಗ ಜನರು ನಕ್ಕಿದ್ದರು. ನಂತರ ನಾನು ಅಧಿಕಾರಕ್ಕೆ ಬಂದಾಗಲೂ ಜನರು ನಕ್ಕಿದ್ದರು. ನಾನು ಮುಂದೆಯೂ ಅಧಿಕಾರದಲ್ಲಿ ಇರಲಿದ್ದೇನೆ ಎಂದಾಗಲೂ ಜನರು ನಗುತ್ತಲೇ ಇದ್ದಾರೆ!” ಅಂದರೆ, ಏನು ಮಾಡಿದರೂ ಮೂರ್ಖ ಜನರು ವಿರೋಧಿಸುವುದಿಲ್ಲ; ಅವರನ್ನು ಮೂರ್ಖರನ್ನಾಗಿಯೇ ಇರಿಸುವ ಕಲೆ ತನಗೆ ಸಿದ್ಧಿಸಿದೆ ಎಂಬ ಅಹಂಕಾರ ಈ ಮಾತಿನಲ್ಲಿ ಕಾಣಿಸುತ್ತಿಲ್ಲವೆ? ಇಂತಹ ಅಹಂಕಾರವನ್ನು ನೀವು ನಮ್ಮ ದೇಶದಲ್ಲಿ ಕಂಡಿದ್ದೀರಾ? ಗಮನಿಸಿದ್ದೀರಾ?! “ಮೋದಿ ನಹೀಂ ಜಾಯೆಂಗೆ” ಎಂಬ ಬಿಜೆಪಿಯ ಅಭಿಯಾನ ಇದೇ ಮಾದರಿಯಲ್ಲಿ ಇರುವುದು ಕಾಕತಾಳೀಯವೇ?

​ಜರ್ಮನಿಯಲ್ಲಿ ಲೆಕ್ಕಕ್ಕೇ ಇಲ್ಲದಿದ್ದ ಪಕ್ಷವೊಂದು ಕೆಲವು ಜನಮರುಳು ಮತ್ತು ಕುತಂತ್ರಿ ಯೋಜನೆಗಳ ಮೂಲಕ ಹೇಗೆ ಪ್ರಬಲ ಪಕ್ಷವಾಗಿ ಬೆಳೆಯಿತು ಎಂಬುದನ್ನು ನೋಡಿದರೆ ಭಾರತದಲ್ಲಿಯೂ ಇದಕ್ಕೆ ಸಮಾನಾಂತರವಾದ ಉದಾಹರಣೆ ಸಿಗುತ್ತದೆ. ತಂತ್ರಗಳಲ್ಲಿಯೂ ನೀವು ಹೋಲಿಕೆ ಕಾಣಬಹುದು. 1919ರ ಜನವರಿಯಲ್ಲಿ ಜರ್ಮನಿಯಲ್ಲಿ ಜರ್ಮನ್ ವರ್ಕರ್ಸ್ ಪಾರ್ಟಿ (German Workers’ Party – DAP) ಎಂಬ ಹೆಸರಿಗೆ ಮಾತ್ರ ಕಾರ್ಮಿಕರ, ಆದರೆ ಅಂತರಂಗದಲ್ಲಿ ತೀರಾ ಬಲಪಂಥೀಯವಾಗಿದ್ದ ಪಕ್ಷವೊಂದು ಅಂಟನ್ ಡ್ರೆಕ್ಸ್ಲರ್ (Anton Drexler) ನೇತೃತ್ವದಲ್ಲಿ ಹುಟ್ಟಿಕೊಂಡಿತು. ಹಿಟ್ಲರ್ ಈ ಪಕ್ಷಕ್ಕೆ ಸೆಪ್ಟೆಂಬರ್ 1919ರಲ್ಲಿ ಸೇರಿದಾಗ ಸದಸ್ಯತ್ವ ಸಂಖ್ಯೆ ಕೇವಲ 555ರಷ್ಟಿತ್ತು. ನಂತರ 1920ರ ಫೆಬ್ರವರಿಯಲ್ಲಿ ಇದು ಹಿಟ್ಲರನ ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ (National Socialist German Workers’ Party – NSDAP / ನಾಝಿ ಪಕ್ಷ) ಎಂದಾಯಿತು. ಕಮ್ಯುನಿಸ್ಟ್ ವಿರೋಧಿಗಳ ಈ ಕೂಟವೂ ಸಮಾಜವಾದಿ ಪದವನ್ನು ರಾಷ್ಟ್ರೀಯತೆಯ ಜೊತೆ ಬೆರೆಸಿತ್ತು! ನಮ್ಮಲ್ಲಿಯೂ ಗಾಂಧೀಜಿಯನ್ನು ಕೊಂದವರ ಬೆಂಬಲಿಗ ಸಂಘಪರಿವಾರದ ರಾಜಕೀಯ ಮುಖವಾದ ಬಿಜೆಪಿಯೂ ವಾಜಪೇಯಿಯವರ ಕಾಲದಲ್ಲಿ ಕೆಲ ಸಮಯ ಗಾಂಧಿಯನ್ ಸಮಾಜವಾದದ (Gandhian Socialism) ಸ್ಲೋಗನ್ ಹಿಡಿದು ನೇತಾಡಿರಲಿಲ್ಲವೆ? ನಂತರ, “ಒಂದು ದೇಶ, ಒಂದು ಜನ, ಏಕೈಕ ನಾಯಕ” (Ein Volk, Ein Reich, Ein Führer) ಎಂಬುದು ನಾಝಿಗಳ ಏಕೈಕ ಘೋಷಣೆಯಾಯಿತು.

​ಇದಕ್ಕಿಂತ ಮುಂಚೆ ಬವೇರಿಯಾದ ಅರಸ ಲುಡ್ವಿಗ್ III ಎಂಬಾತನ ಕಾಲದಲ್ಲಿ ಮೊದಲ ಮಹಾಯುದ್ಧ ಆರಂಭವಾಗಿತ್ತು! ಇದು 1914ರಲ್ಲಿ ಆರಂಭವಾಗಿ ಜರ್ಮನಿಯ ಹೀನಾಯ ಸೋಲಿನೊಂದಿಗೆ ಕೊನೆಗೊಂಡಿತು. ಜರ್ಮನಿಯು 1918ರಲ್ಲಿ ಅವಮಾನಕಾರಿ ಶರತ್ತುಗಳಿದ್ದ ವರ್ಸಾಯ್ಲ್ಸ್ ಶರಣಾಗತಿ ಒಪ್ಪಂದಕ್ಕೆ (Versailles Treaty) ಸಹಿಹಾಕಬೇಕಾಯಿತು. ಇದನ್ನೇ ಮುಂದೆ ಹಿಟ್ಲರ್ ಜರ್ಮನರಲ್ಲಿ ಹುಸಿ ದೇಶಪ್ರೇಮ ಬಡಿದೆಬ್ಬಿಸಲು ಬಳಸಿಕೊಂಡ. ನಮ್ಮಲ್ಲಿ ದೇಶ ವಿಭಜನೆ, ಪಾಕಿಸ್ತಾನ ಮತ್ತು ಚೀನಾ ಜೊತೆಗಿನ ಯುದ್ಧವನ್ನು ಈಗಲೂ ದ್ವೇಷವನ್ನು ಜೀವಂತವಾಗಿಡಲು ಬಳಸಿಕೊಳ್ಳುತ್ತಿರುವ ಮಾದರಿಯೇ ಇದು! ಜರ್ಮನಿಯಲ್ಲಿ ಮೇಲ್ನೋಟಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಎನಿಸಿಕೊಂಡ ವೈಮರ್ ರಿಪಬ್ಲಿಕ್ (Weimar Republic) ಸ್ಥಾಪನೆಯಾಯಿತು.

​ಜರ್ಮನರ ಮೇಲೆ ಸವಾರಿ ಮಾಡಿದ್ದ ಹಿಟ್ಲರ್ ಮೂಲತಃ ಆಸ್ಟ್ರಿಯಾದವನು (Austria). ಆತ ಮೂಲ ಜರ್ಮನ್ ಪ್ರಜೆಯೂ ಆಗಿರಲಿಲ್ಲ. ಆದರೆ, ರಾಜ ಲುಡ್ವಿಗ್‌ನ ಶಿಫಾರಸು ಪಡೆದು ಜರ್ಮನ್ ಸೇನೆಯ ಬವೇರಿಯನ್ ರೆಜಿಮೆಂಟ್ (Bavarian Regiment) ಒಂದಕ್ಕೆ ಸೇರಿದ. ಯುದ್ಧದ ಸಮಯದಲ್ಲಿ ಆತನ ಬೆಂಬಲಿಗರು ಹೇಳಿಕೊಂಡಂತೆ ಆತ ಯಾವುದೇ ಗುಪ್ತಚರ ಅಧಿಕಾರಿಯಾಗಿರಲಿಲ್ಲ, ಬದಲಿಗೆ ಒಬ್ಬ ಸಾಮಾನ್ಯ ‘ಸಂದೇಶ ವಾಹಕ’ನಾಗಿ (Dispatch Runner) ಕಾರ್ಯನಿರ್ವಹಿಸಿದ್ದ. ಯುದ್ಧ ಮುಗಿದ ನಂತರ (1919ರಲ್ಲಿ) ಜರ್ಮನ್ ಮಿಲಿಟರಿಯ ‘ಮಾಹಿತಿ ವಿಭಾಗ’ ಈತನನ್ನು ರಾಜಕೀಯ ಪಕ್ಷಗಳ ಮೇಲಿನ ನಿಗಾ ಇಡಲು ಕಳುಹಿಸಿಕೊಟ್ಟಿತ್ತು. ಅಲ್ಲಿ ಪಡೆದ ಸಂಪರ್ಕಗಳನ್ನು ಆತ ಮುಂದೆ ಚೆನ್ನಾಗಿ ಬಳಸಿಕೊಂಡ. ಇಲ್ಲಿಯೂ ಕೆಲವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಾವು ವೇಷ ಮರೆಸಿ ಪಕ್ಷದ ಗುಪ್ತಚರನಂತೆ ತಿರುಗಾಡುತ್ತಿದ್ದಾಗಿ ಹೇಳಿಕೊಳ್ಳುತ್ತಾರೆ! (ಸಾಮ್ಯ ಅಷ್ಟಕ್ಕೇ ಸೀಮಿತವಲ್ಲ!).

​ಹೀಗೆ ಯುದ್ಧ ಮುಗಿದ ತಕ್ಷಣವೇ ಆತ 1919ರಲ್ಲಿ ಜರ್ಮನ್ ವರ್ಕರ್ಸ್ ಪಾರ್ಟಿ ಸೇರಿ, ಅದು ಎನ್‌ಎಸ್‌ಡಿಎಪಿ (NSDAP) ಆದಾಗ ತನ್ನ ಪ್ರಭಾವ ಬೆಳೆಸಿಕೊಂಡ. 1920ರಲ್ಲಿ ತೀರಾ ಸಣ್ಣದಾಗಿದ್ದ ಪಕ್ಷದ ಸದಸ್ಯ ಬಲವನ್ನು, 1945ರ ಹೊತ್ತಿಗೆ (ಚಾನ್ಸೆಲರ್ ಆದ ಬಳಿಕ ಸರ್ಕಾರಿ ನೌಕರಿ ಮತ್ತು ಅಧಿಕಾರಕ್ಕೆ ಪಕ್ಷದ ಸದಸ್ಯತ್ವ ಕಡ್ಡಾಯಗೊಳಿಸಿದ ಪರಿಣಾಮವಾಗಿ) ಸುಮಾರು 85 ಲಕ್ಷಕ್ಕೆ ಏರಿಸಿದ್ದ. ಜನರನ್ನು ಉದ್ರೇಕಿಸಿ, ಸುಳ್ಳುಹೇಳಿ ರೊಚ್ಚಿಗೆಬ್ಬಿಸುವ ಕಲೆ ಆತನಿಗೆ ಸಿದ್ದಿಸಿತ್ತು. ಆತನ ಭಾಷಣ ನಾಟಕೀಯವಾಗಿರುತ್ತಿತ್ತು. ಕೈಕಾಲು ಆಡಿಸುತ್ತಾ ಭಯಂಕರ ಹಾವಭಾವ, ಅಣಕಗಳೊಂದಿಗೆ ಜನರನ್ನು ಹುಚ್ಚೆಬ್ಬಿಸಿ ಮೈಮರೆಯುವಂತೆ ಮಾಡುತ್ತಿದ್ದ. ಇದರಿಂದ ಅವನ ಜನಪ್ರಿಯತೆ ಹೆಚ್ಚಿತು.

​ಪಕ್ಷವನ್ನು ಬೆಳೆಸಲು ಹಲವು ಕುಟಿಲ ತಂತ್ರಗಳನ್ನು ಬಳಸಿಕೊಂಡ. ಹಿಂದೆ ರಾಜಸತ್ತೆ ಇದ್ದ ಬವೇರಿಯಾದಲ್ಲಿ ಕ್ಯಾಥೊಲಿಕ್ ಕ್ರೈಸ್ತರು ಪ್ರಬಲರಾಗಿದ್ದರು. ಅವರಿಗೆ ಪ್ರೊಟೆಸ್ಟೆಂಟ್ ಪ್ರಾಬಲ್ಯ ಇರುವ ಬರ್ಲಿನ್ ಆಡಳಿತದ ಮೇಲೆ ಅಸಮಾಧಾನವಿತ್ತು. ಅದನ್ನು ಬಳಸಿಕೊಂಡ. ಕಮ್ಯುನಿಸ್ಟ್‌ ಮತ್ತು ಯಹೂದಿ ವಿರೋಧಿ ನಿಲುವನ್ನು ತೀವ್ರಗೊಳಿಸಿದ. ಸಂಘರ್ಷ-ಹೊಡೆದಾಟಗಳೂ ತೀವ್ರಗೊಂಡವು. ಪರಿಣಾಮವಾಗಿ 1930ರಲ್ಲಿ ನಡೆದ ಚುನಾವಣೆಯಲ್ಲಿ ಆತನ ಪಕ್ಷ ರೈಕ್‌ಸ್ಟಾಗ್‌ನಲ್ಲಿ ಬರೋಬ್ಬರಿ 107 ಸ್ಥಾನಗಳನ್ನು (ಶೇ. 18.3ರಷ್ಟು ಮತಗಳನ್ನು) ಗಳಿಸಿತು! ಇದಕ್ಕೆ ಕಾರಣ ಜನರಲ್ಲಿ ಯುದ್ಧದ ಸೋಲಿನ ಅವಮಾನವಿದ್ದು, ದೇಶಪ್ರೇಮದ ಹೆಸರು ಹೇಳಿ ಮತ ಪಡೆಯುವುದು ಸುಲಭವಾಗಿತ್ತು!

​ನಂತರ ಆತನ ಪ್ರಭಾವ ಪಕ್ಷದೊಳಗೆ ಎಷ್ಟು ಹೆಚ್ಚಾಯಿತೆಂದರೆ, ಹಿಟ್ಲರ್ ಅಂದರೆ‌ ಪಕ್ಷ, ಪಕ್ಷ ಎಂದರೆ ಹಿಟ್ಲರ್ ಎಂಬಂತಾಯಿತು. ನಮ್ಮಲ್ಲಿಯೂ ವ್ಯಕ್ತಿಯ ಹೆಸರಿನಲ್ಲಿ ಸೇನೆಗಳು, ಮೋರ್ಚಾಗಳು, ಪರಿಷತ್ತುಗಳು, ಬ್ರಿಗೇಡುಗಳು, ಟೀಮುಗಳು, ಕಿಡಿಗೇಡಿ ಪುಂಡರ ಪಡೆಗಳು ಸ್ಥಾಪನೆ ಆಗಿರುವಂತೆಯೇ ಅಲ್ಲಿಯೂ ಹಿಟ್ಲರ್ ಯೂತ್ ಲೀಗ್ (Hitler Youth), ಮಹಿಳೆಯರ ಲೀಗ್, ಕಾರ್ಮಿಕರ ಲೀಗ್, ಶಿಕ್ಷಕರ ಲೀಗ್ ಇತ್ಯಾದಿ ಸ್ಥಾಪನೆಯಾದವು. ಇಲ್ಲಿ ಆಗಲೇ ಮುಸ್ಲಿಂ ಲೀಗ್ ಇದ್ದುದರಿಂದ ಬಹುಶಃ ಲೀಗ್ ಹೆಸರು ಅನುಕರಿಸಲಿಲ್ಲ.

​1923ರಲ್ಲಿ ಪಕ್ಷದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಂತೆ (Security Guards) ನಿರುದ್ಯೋಗಿ ಯುವಕರ ಗೂಂಡಾ ಪಡೆಯಾದ ಎಸ್‌ಎ (SA – Sturmabteilung) ಸ್ಥಾಪನೆಯಾಯಿತು. ಜೊತೆಗೆ 1925ರಲ್ಲಿ ಸಶಸ್ತ್ರ ಸೇನಾ ವಿಭಾಗವಾಗಿ ಶುಟ್ಝ್ ಸ್ಟಾಫೆಲ್ (Schutzstaffel – SS) ಎಂಬ ಅಂಧ ಭಕ್ತರ ಕ್ರೂರ ವೈಯಕ್ತಿಕ ಭದ್ರತಾ ಪಡೆ ಆರಂಭವಾಯಿತು. ಇದುವೇ ಮುಂದೆ ಎಸ್‌ಎಸ್ (SS) ಎಂದು ಕುಖ್ಯಾತವಾಗಿ, ಮೊದಲಿಗೆ ಯಹೂದಿ ಮತ್ತಿತರ ಅಲ್ಪಸಂಖ್ಯಾತ ಜನಾಂಗಗಳು ಮತ್ತು ಕಮ್ಯುನಿಷ್ಟರ ಮೇಲೆ ಗೂಂಡಾಗಿರಿಗೆ ಬಳಕೆಯಾಯಿತು. ಹಿಂದೆ ಹೇಳಿರುವಂತೆ ಹಿಟ್ಲರ್ ಅಧಿಕಾರಕ್ಕೆ ಬಂದ ಮೇಲೆ ಸೇನೆಯ ಭಾಗವಾಗಿ ವರ್‌ಮ್ಯಾಷ್ (Wehrmacht) – ಅಧಿಕೃತ ಎನ್ನಲಾಗುತ್ತಿದ್ದ ಅಧಿಕೃತ ಜರ್ಮನ್ ಸೇನೆಯ ಅಧಿಕಾರಿಗಳೂ ಹೆದರುತ್ತಿದ್ದಂತ ಕೊಲೆಗಡುಕ ವಿಭಾಗವಾಯಿತು!

​ಇದೇ ಹೊತ್ತಿಗೆ ಯುದ್ದದಲ್ಲಿ ಹಿಟ್ಲರನ ಸಾಹಸಗಳ ಬಗ್ಗೆ ಕಟ್ಟುಕತೆಗಳನ್ನು ಹರಿದುಬಿಡಲಾಯಿತು. ಆತ ಯೌವನದಲ್ಲಿ ಆಸ್ಟ್ರಿಯಾದ ವಿಯೆನ್ನಾದಲ್ಲಿ ‘ಅಕಾಡೆಮಿ ಆಫ್ ಫೈನ್ ಆರ್ಟ್ಸ್’ಗೆ ಪ್ರವೇಶ ಪರೀಕ್ಷೆ ಬರೆದು ತಿರಸ್ಕೃತನಾಗಿದ್ದ. ಆದರೆ ಈ ಸತ್ಯವನ್ನು ಮರೆಮಾಚಿ ಆತ ಮಹಾನ್ ಕಲೆಗಾರ, ಕವಿ ಹೃದಯಿ ಇತ್ಯಾದಿ ಬೊಗಳೆಗಳನ್ನು ಹರಿಯಬಿಡಲಾಯಿತು. ನಮ್ಮಲ್ಲಿಯ ಚಹಾ ಮಾರಾಟ, ಹಿಮಾಲಯದಲ್ಲಿ ತಿರುಗಾಟ, ಮೊಸಳೆಯೊಂದಿಗೆ ಹೋರಾಟ, ಎಂಟೈರ್ ಪೊಲಿಟಿಕಲ್ ಸಾಯನ್ಸ್ (Entire Political Science) ಇತ್ಯಾದಿಗಳು ಓದುಗರಿಗೆ ನೆನಪಿಗೆ ಬಂದರೆ ಅಚ್ಚರಿಯಿಲ್ಲ! “ನಾನು ಬಾಲಕನಾಗಿದ್ದಾಗ ಒಂದು ರೋಬೋಟ್ ತಯಾರಿಸಿದ್ದೆ. ಅದಕ್ಕೆ ಅವರು ನನಗೆ ಬಹುಮಾನ ಕೊಟ್ಟಿದ್ದರು”, “ನಾನು ಪುಸ್ತಕವನ್ನು ಓದುವುದಿಲ್ಲ; ಸ್ಕ್ಯಾನ್ ಮಾಡುತ್ತೇನೆ” ಇತ್ಯಾದಿ ಹಲವಾರು ಪುಂಗಾಣಿ ಮಾತುಗಳನ್ನು ನೀವು ಕೇಳಿಯೇ ಇದ್ದೀರಿ!

​ಇಷ್ಟು ಹೊತ್ತಿಗೆ ಹಿಟ್ಲರ್ ಒಂದು ದುಸ್ಸಾಹಸಕ್ಕೆ ಕೈ ಹಾಕಿದ. 1923ರಲ್ಲಿ ಸಶಸ್ತ್ರವಾಗಿ ಅಧಿಕಾರ ಪಡೆಯುವ ಈ ವಿಫಲ ಯತ್ನವನ್ನು ಬಿಯರ್ ಹಾಲ್ ದಂಗೆ (Beer Hall Putsch) ಎಂದು ಕರೆಯಲಾಗುತ್ತದೆ. ತನ್ನ ವಿರುದ್ದ ನಡೆದ ದೇಶದ್ರೋಹದ ವಿಚಾರಣೆಯನ್ನು ಚೆನ್ನಾಗಿ ಬಳಸಿಕೊಂಡ ಆತ, ತಾನು ಯುದ್ಧದಲ್ಲಿ ಹೋರಾಡಿದ ವೀರನೆಂದೂ, ತನ್ನನ್ನೇ ರಾಷ್ಟ್ರದ್ರೋಹಿ ಎಂದು ಜೈಲಿಗಟ್ಟುವ ಸಂಚು ನಡೆಯುತ್ತಿದೆ ಎಂದೂ ಬಿಂಬಿಸಿದ. ಆದರೂ ಆತನಿಗೆ ಜೈಲಾಯಿತು. ಆದರೆ ಪ್ರಾಸಿಕ್ಯೂಟರ್‌ಗಳ (Prosecutors) ವಿರೋಧದ ನಡುವೆಯೂ ಬೇಗನೆ ಹೊರಬಂದ. ​ಜೈಲಿನಲ್ಲಿ ಇದ್ದ ಅವಧಿಯನ್ನು ಚೆನ್ನಾಗಿ ಬಳಸಿಕೊಂಡು ‘ಮೈನ್ ಕಾಂಫ್’ (Mein Kampf – ನನ್ನ ಹೋರಾಟ, 1925-26ರಲ್ಲಿ ಪ್ರಕಟವಾಯಿತು) ಎಂಬ ಆತ್ಮಚರಿತ್ರೆ ರೀತಿಯ ಪುಸ್ತಕ ಬರೆದು ತನ್ನನ್ನು ಮಹಾಮಾನವನಂತೆ ಚಿತ್ರಿಸಿದ್ದಲ್ಲದೇ, ತನ್ನ ದ್ವೇಷದ ವಿಚಾರಧಾರೆಗೆ ದೇಶಪ್ರೇಮ ಮತ್ತು ರಾಷ್ಟ್ರೀಯತೆಯ ಬಣ್ಣ ಬಳಿದು ಅದಕ್ಕೊಂದು ತತ್ವದ ರೂಪ ನೀಡಿದ. ಅದು ಯುವಜನರಲ್ಲಿ ದ್ವೇಷದ ಬೀಜ ಬಿತ್ತಿತು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸರ್ವಾಧಿಕಾರಿಗಳು ಅಥವಾ ಮಹತ್ವಾಕಾಂಕ್ಷಿ ವ್ಯಕ್ತಿಗಳು ತಮ್ಮ ಮೇಲಿನ ಆತ್ಮರತಿಯಿಂದ ತಮ್ಮದೇ ಕಟ್ಟುಕತೆಗಳನ್ನು ಕಟ್ಟಿಬಿಡುವ ಹಾಗೂ ತಮ್ಮದೇ ವ್ಯಕ್ತಿತ್ವವನ್ನು ವೈಭವೀಕರಿಸಿಕೊಳ್ಳುವ ಮನೋಧರ್ಮ ಎಲ್ಲ ಕಾಲದಲ್ಲೂ ಒಂದೇ ರೀತಿಯಿರುತ್ತದೆ. ಉದಾಹರಣೆಗೆ ಸಾವರ್ಕರ್ ಅವರು ಅದೇ ಕಾಲದಲ್ಲಿ ಅಂದರೆ, 1926ರಲ್ಲಿ “Life of Barrister Savarkar” ಎಂಬ ಪುಸ್ತಕವನ್ನು ‘ಚಿತ್ರಗುಪ್ತ’ ಎಂಬ ಹೆಸರಿನಲ್ಲಿ ಬರೆದು ತನ್ನನ್ನು ತಾನೇ “ವೀರ” ಎಂದು ಕರೆದುಕೊಂಡರು. ನಂತರ 1987ರಲ್ಲಿ ವಿ.ಡಿ. ಮಹಾಜನ್ ಮುನ್ನುಡಿಯಲ್ಲಿ ಇದನ್ನು ಸಾವರ್ಕರ್ ಬರೆದದ್ದು ಎಂದು ಸ್ಪಷ್ಟಪಡಿಸಿದಾಗಲೇ ಈ ಆತ್ಮರತಿ ಬಯಲಾದದ್ದು!

​1932ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂಡೆನ್‌ಬರ್ಗ್ (Paul von Hindenburg) ಎದುರು ಹಿಟ್ಲರ್ ಸೋತಿದ್ದರೂ, ಕೆಲವೇ ತಿಂಗಳುಗಳಲ್ಲಿ ಬಂಡವಾಳಿಗರ ಬೆಂಬಲ ಹಾಗೂ ರಾಜಕೀಯ ಚಾಣಾಕ್ಷತನದಿಂದಾಗಿ ಆತ ಚಾನ್ಸೆಲರ್ (Chancellor) ಹುದ್ದೆಗೇರುವಂತಾಯಿತು. ಐತಿಹಾಸಿಕ ಪರಿಸ್ಥಿತಿ ಹಾಗಿತ್ತು ಎನ್ನೋಣವೆ? ಜರ್ಮನ್‌ ಜನರ ಮೂರ್ಖತನ ಎನ್ನೋಣವೇ? ಆತನ ಚಾಣಾಕ್ಷತನ ಎನ್ನೋಣವೇ? ಅಥವಾ ಬಂಡವಾಳಿಗರ ಸಂಚು ಎನ್ನೋಣವೆ!? ವಿರೋಧಿಗಳ ಅಸಡ್ಡೆ ಅಥವಾ ನಿಷ್ಕ್ರಿಯತೆ ಎನ್ನೋಣವೆ!? ಭಾರತದಲ್ಲಿ ಬಲಪಂಥೀಯ ಜನಸಂಘ ಪಡೆಯುತ್ತಿದ್ದ ದಯನೀಯ ಸ್ಥಾನಗಳು, ನಂತರ ಬಿಜೆಪಿಯಾಗಿ ಹೆಣಗಾಡಿ, ಈಗ ದೇಶವನ್ನೇ ಅಲ್ಲಾಡಿಸುತ್ತಿರುವ ಅದರ ಬೆಳವಣಿಗೆಗೆ ಕಾರಣವೇನು? ಸಾಮ್ಯವೇನು? ಈ ವಿವರಗಳನ್ನು ಮುಂದೆ ನೋಡೋಣ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು