ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಇ-ಖಾತಾ ವ್ಯವಸ್ಥೆಯಲ್ಲೇ ಅಕ್ರಮ ಬೆಂಗಳೂರಿನಲ್ಲಿ 98 ಅನರ್ಹ ಆಸ್ತಿಗಳಿಗೆ ಖಾತೆ ಮಂಜೂರು ; 33 ಜನರ ವಿರುದ್ಧ ಪ್ರಕರಣ ದಾಖಲುಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಿಗೆ ಪತ್ರ: ಡಿಕೆ ಶಿವಕುಮಾರ್ಕ್ಷೇತ್ರ ಮರು ವಿಂಗಡಣೆ ಮಸೂದೆ ಮತ್ತೆ ಮುನ್ನೆಲೆಗೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರದ ಸಿದ್ಧತೆಬೆಂಗಳೂರಿನ ವಕೀಲ ಮಂಜುನಾಥ್ ಕೊಲೆ ಪ್ರಕರಣ: ಬಿಹಾರದಲ್ಲಿ ಆರೋಪಿ ಬಂಧನಓಲಾ ಕಂಪನಿಗೆ ₹10 ಲಕ್ಷ ದಂಡ: ಗ್ರಾಹಕರನ್ನು ಹೆಚ್ಚುವರಿ ಪಾವತಿಗೆ ಪ್ರೇರೇಪಿಸುವ ಫೀಚರ್ ಸ್ಥಗಿತಗೊಳಿಸಲು CCPA ಆದೇಶಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ವಿನ್ಯಾಸದ ಸಮವಸ್ತ್ರ: 1,574 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದ ಭರವಸೆಮಾಲಿನ್ಯದ ಪದರ ಸೂರ್ಯ ಕಿರಣ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ: ರೂಬಿಕಾ ಲಿಯಾಕತ್ ಹೇಳಿಕೆ ವೈರಲ್ಒಂದು ಕಾಲದಲ್ಲಿ ಪತ್ರಕರ್ತರಿಗೆ ಕುರ್ಚಿ ಹಾಕುತ್ತಿದ್ದೆ: ಬಿಜೆಪಿಯ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿಬೆಂಗಳೂರು ಪ್ರತೀ ಮೆಟ್ರೋ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯೇ ಬರಬೇಕೇ? ಮೆಟ್ರೋಗೆ ದುಡ್ಡು ಕರ್ನಾಟಕದ್ದು, ಉದ್ಘಾಟನೆಯ ಶೋಕಿ ಕೇಂದ್ರದ್ದು!ಎಸ್‌ಪಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದಾಗ ಅದು ಬಿಜೆಪಿಯ ಬಿ ಟೀಮ್ ಆಗಿತ್ತೆ?: ಒವೈಸಿ ಮೈತ್ರಿ ಕುರಿತ ಟೀಕೆಗಳಿಗೆ ಚಂದ್ರಶೇಖರ್ ಆಜಾದ್ ತಿರುಗೇಟುಬುಲ್ಡೋಜರ್‌ ಈಗ ಉತ್ತರ ಪ್ರದೇಶದ ಬ್ರ್ಯಾಂಡ್: ಯೋಗಿ ಆದಿತ್ಯನಾಥ್ಮೇಕ್ ಇನ್ ಇಂಡಿಯಾ ಯೋಜನೆಗೆ ಹಿನ್ನಡೆ? ಚೀನಾದಿಂದ ಭಾರತದ ಆಮದು ಮುಂದುವರಿಕೆ; ವಾಣಿಜ್ಯ ಕೊರತೆ 112 ಬಿಲಿಯನ್ ಡಾಲರ್‌ಗೆ ಏರಿಕೆವಿಶೇಷ ಸಂಸತ್ ಅಧಿವೇಶನ ನಡೆಸಿ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆಗೆ ಸಿದ್ಧತೆ; ಕಾಂಗ್ರೆಸ್‌ ಟೀಕೆಹಾಸನಾಂಬ – 2026, 30 ಲಕ್ಷಕ್ಕೂ ಅಧಿಕ ಭಕ್ತರು; ₹29.55 ಕೋಟಿ ಆದಾಯ ಸಂಗ್ರಹಲಂಚ ಪಡೆಯುತ್ತಿದ್ದಾಗ ರಾಮನಗರ ಉಪ ತಹಶೀಲ್ದಾರ್‌ ಅಂದರ್‌ – ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿ2022ರ ಮತಾಂತರ ನಿಷೇಧ ಕಾಯ್ದೆಯನ್ನೇ ಮರುಜಾರಿಗೆ ಕಾಂಗ್ರೆಸ್ ಬದ್ಧ: ಬಿ.ಕೆ. ಹರಿಪ್ರಸಾದ್ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ, ತಪ್ಪು ಮಾಡಿದರೆ ಶಿಕ್ಷೆಯಾಗಲಿ, ತನಿಖೆ ನಡೆಯಬೇಕು- ಡಿಸಿ ಲತಾಕುಮಾರಿE-ಖಾತಾ ಕಾನೂನು ಉಲ್ಲಂಘನೆ, GBA ಆಯುಕ್ತ ಮಾಗಿ ಹಾಗೂ 31 ಜನರ – ವಿರುದ್ಧ FIR ದಾಖಲುಎಥೆನಾಲ್ ವಿವಾದಕ್ಕೆ ಅಶೋಕ್ ತಿರುಗೇಟು; ಮೈಲೇಜ್ ಇಳಿಕೆಗೆ ರಸ್ತೆ ಗುಂಡಿಗಳೇ ಕಾರಣವೆಂದು ವ್ಯಂಗ್ಯಮಕ್ಕಳಾಗದ ನೋವು ದಾಂಪತ್ಯ ಕಲಹಕ್ಕೆ ಕಾರಣ: ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ!

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಿಗೆ ಪತ್ರ: ಡಿಕೆ ಶಿವಕುಮಾರ್

PPeepal Media

Peepal Media ರಾಜ್ಯ

• 2 ನಿಮಿಷದ ಓದು

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಿಗೆ ಪತ್ರ: ಡಿಕೆ ಶಿವಕುಮಾರ್

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಪ್ರಧಾನಮಂತ್ರಿಗಳ ಭೇಟಿಗೆ ಅವಕಾಶ ದೊರೆತರೆ ಈ ವಿಚಾರವಾಗಿ ನೇರವಾಗಿ ಚರ್ಚೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಎಸ್‌ಸಿ, ಎಸ್‌ಟಿ ಸಮುದಾಯಗಳ ಶಾಸಕರು, ಸಚಿವರು ಹಾಗೂ ವಿವಿಧ ನಿಗಮಗಳ ಅಧ್ಯಕ್ಷರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ವಿಚಾರಗಳ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಚಿವ ಸಂಪುಟ ತೀರ್ಮಾನಿಸಿದ್ದು, ಸರ್ಕಾರದ ಅರ್ಜಿ ಸ್ವೀಕೃತವಾಗಿದೆ ಎಂದು ತಿಳಿಸಿದರು. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ಯಾರು ವಾದ ಮಂಡಿಸಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕಾನೂನು ಹೋರಾಟದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ವಹಿಸಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸರ್ಕಾರದ ಪ್ರಯತ್ನ

ಮೀಸಲಾತಿ ವಿಚಾರದಲ್ಲಿ ಹಿಂದಿನ ಸರ್ಕಾರಗಳನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು. ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಈಗಿರುವ ಶೇ.50ರ ಮಿತಿಗಿಂತ ಕೇವಲ ಶೇ.6ರಷ್ಟು ಹೆಚ್ಚುವರಿ ಮೀಸಲಾತಿಗೆ ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಒಳಮೀಸಲಾತಿ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಸಮುದಾಯಗಳ ನಾಯಕರೊಂದಿಗೆ ಚರ್ಚಿಸಲಾಗಿದೆ. ಈ ಉದ್ದೇಶಕ್ಕಾಗಿ ವಿಷನ್ ಗ್ರೂಪ್ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕೆ ವಿಷನ್ ಗ್ರೂಪ್

ಈ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲು ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದರು.

2001ರಿಂದ 2025ರವರೆಗೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಾದ ಬ್ಯಾಕ್‌ಲಾಗ್ ಹುದ್ದೆಗಳ ಪೈಕಿ 19,115 ಹುದ್ದೆಗಳು ಖಾಲಿ ಇದ್ದವು. ಈ ಪೈಕಿ 17,793 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಇನ್ನೂ 1,574 ಹುದ್ದೆಗಳು ಬಾಕಿ ಉಳಿದಿವೆ. ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿ ₹44,631 ಕೋಟಿ ಅನುದಾನ

ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಅಡಿಯಲ್ಲಿ 2025-26ನೇ ಸಾಲಿಗೆ ₹42,503 ಕೋಟಿ ಹಾಗೂ ಪ್ರಸಕ್ತ ಸಾಲಿಗೆ ₹44,631 ಕೋಟಿ ಅನುದಾನವನ್ನು 34 ಇಲಾಖೆಗಳ 451 ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಈ ಅನುದಾನ ಸಮುದಾಯಗಳ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಈವರೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳ ಮೂಲಕ ನೀಡಿರುವ ಅನುದಾನದಿಂದ ಎಷ್ಟು ಪರಿಣಾಮ ಉಂಟಾಗಿದೆ ಎಂಬುದನ್ನು ಪರಿಶೀಲಿಸಲು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಸಾಮಾಜಿಕ ಲೆಕ್ಕಪರಿಶೋಧನೆ (ಸೋಷಿಯಲ್ ಆಡಿಟ್) ನಡೆಸಲು ನಿರ್ಧರಿಸಲಾಗಿದೆ.

ಹೊಸ ಯೋಜನೆಗಳು ಹಾಗೂ ಈಗಿರುವ ಕಾರ್ಯಕ್ರಮಗಳಲ್ಲಿ ಅಗತ್ಯ ಬದಲಾವಣೆಗಳ ಕುರಿತು ಎಸ್‌ಸಿ, ಎಸ್‌ಟಿ ಸಮುದಾಯಗಳ ಶಾಸಕರು ಮತ್ತು ಸಚಿವರು ಸಲಹೆ ನೀಡುತ್ತಿದ್ದಾರೆ. ಈ ಸಲಹೆಗಳನ್ನು ಪರಿಶೀಲಿಸಿ, ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಂಪುಟ ಉಪಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.

ಕೇಂದ್ರದಿಂದ ಬಾಕಿ ಇರುವ ₹1,937 ಕೋಟಿ ಬಿಡುಗಡೆಗೆ ಮನವಿ

ಕೇಂದ್ರ ಪುರಸ್ಕೃತ ಯೋಜನೆಗಳ ಅಡಿಯಲ್ಲಿ 2025-26ನೇ ಸಾಲಿನಲ್ಲಿ ಬಿಡುಗಡೆಯಾಗದೆ ಬಾಕಿ ಉಳಿದಿರುವ ₹1,937 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಶಿವಕುಮಾರ್ ಹೇಳಿದರು.

2025-26ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಒಟ್ಟು ₹10,011 ಕೋಟಿ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಕೇಂದ್ರದ ಪಾಲು ₹3,497 ಕೋಟಿ ಹಾಗೂ ರಾಜ್ಯದ ಪಾಲು ₹6,514 ಕೋಟಿ ಆಗಿದೆ. ಕೇಂದ್ರದ ಪಾಲಿನಲ್ಲಿ ₹1,560 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ₹1,937 ಕೋಟಿ ಇನ್ನೂ ಬಾಕಿ ಇದೆ ಎಂದು ವಿವರಿಸಿದರು.

ಕೇಂದ್ರದಿಂದ ಬಿಡುಗಡೆಯಾದ ₹1,560 ಕೋಟಿಯಲ್ಲಿ ₹1,541 ಕೋಟಿ ವೆಚ್ಚ ಮಾಡಲಾಗಿದೆ. ರಾಜ್ಯದ ಪಾಲಿನಲ್ಲಿ ₹5,628 ಕೋಟಿ ಬಿಡುಗಡೆ ಮಾಡಲಾಗಿದ್ದು, ₹5,611 ಕೋಟಿ ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರದ ಅನುದಾನ ಬಿಡುಗಡೆಯಾಗದ ಕಾರಣ ಕೆಲವು ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಆದರೂ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಎಸ್‌ಸಿ, ಎಸ್‌ಟಿ ಸಮುದಾಯಗಳ ಐಕ್ಯತಾ ಸಮಾವೇಶ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶ ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ಸಮಾವೇಶ ನಡೆಯುವ ಸ್ಥಳವನ್ನು ಸಮುದಾಯಗಳ ನಾಯಕರು ನಿರ್ಧರಿಸಲಿದ್ದಾರೆ. ಇದು ಐಕ್ಯತಾ ಸಮಾವೇಶವಾಗಿದ್ದು, ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳು ಮತ್ತು ಈಡೇರಿಸಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಇದರ ಉದ್ದೇಶವಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ:

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು