Saturday, June 15, 2024

ಸತ್ಯ | ನ್ಯಾಯ |ಧರ್ಮ

ಮಂಗಳೂರಿನಲ್ಲಿ ಲೈಂಗಿಕ ಕಿರುಕುಳ ಪ್ರಕರಣ| ಆರೋಪಿಗಳಿಗೆ ರಾಜಕಾರಣಿ, ಪೊಲೀಸ್‌ ಆಧಿಕಾರಿಗಳ ಬೆಂಬಲ- ಸಂತ್ರಸ್ತೆಯ ಅಳಲು

ಮಂಗಳೂರು : ಮಂಗಳೂರಿನ CSI- KSD. (ಚರ್ಚ್ ಆಫ್ ಸೌತ್ ಇಂಡಿಯಾ–ಕರ್ನಾಟಕ ಸದರ್ನ್ ಡಯೊಸಿಸ್) ಬಿಷಪ್‌ ಹೌಸ್‌ ಕಛೇರಿಯಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ಸಂಸ್ಥೆಯ ಖಜಾಂಜಿಯಾಗಿರುವ ವಿನ್ಸೆಂಟ್ ಪಾಲನ್ನ ಮತ್ತು ಕಾನೂನು ಸಲಹೆಗಾರರಾಗಿರುವ ರೆವೆ. ನೋಯೆಲ್ ಕರ್ಕಡ ಅವರು ತನ್ನ ಮೇಲೆ ಲೈಂಗಿಕ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವುದಾಗಿ ಕಳೆದ ಮಾರ್ಚ್‌ ತಿಂಗಳಲ್ಲಿ ಆರೋಪಿಸಿದ್ದಾರೆ. ಸಿಎಸ್‌ಐ-ಕೆಎಸ್‌ಡಿಯ ಇತರ ನಾಲ್ವರು ಸಿಬ್ಬಂದಿಗಳು ಸಹ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಸಂತ್ರಸ್ತೆಯು ಮೈಸೂರಿನ ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿದ್ದು, ಅವರ ಬೆಂಬಲದೊಂದಿಗೆ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 354 (ಎ), 354 (ಡಿ), 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೀಪಲ್‌ ಮೀಡಿಯಾದೊಂದಿಗೆ ಸಂತ್ರಸ್ತೆಯ ಅಳಲು  

ಕಳೆದ ಸುಮಾರು 10 ತಿಂಗಳುಗಳಿಂದ ಸಂಸ್ಥೆಯ ಖಜಾಂಜಿಯಾಗಿರುವ ವಿನ್ಸೆಂಟ್ ಪಾಲನ್ನ ಮತ್ತು ಕಾನೂನು ಸಲಹೆಗಾರರಾಗಿರುವ ರೆವೆ. ನೋಯೆಲ್ ಕರ್ಕಡ ಮತ್ತು ಅವರೊಂದಿಗೆ ಇತರರು ನನಗೆ ದೈಹಿಕ, ಮಾನಸಿಕ ಕಿರುಕುಳ ನೀಡಿ ನನ್ನನ್ನು ಉದ್ಯೋಗದಿಂದ ತೆಗೆದುಹಾಕಲು ಇನ್ನಿಲ್ಲದ ಪ್ರಯತ್ನ ಮಾಡಿರುತ್ತಾರೆ. ವಿನ್ಸೆಂಟ್ ಪಾಲನ್ನ ಈ ಹಿಂದೆಯೂ ನನಗೆ ಲೈಂಗಿಕ, ದೈಹಿಕ ಮತ್ತು ಮಾನಸಿಕ ಕಿರುಕುಳಗಳನ್ನು ಕೊಟ್ಟಿರುತ್ತಾರೆ. ನನ್ನ ನಡತೆಯ ಬಗ್ಗೆ ಬಹಳ ಕೆಟ್ಟದಾಗಿ ಹೇಳಿಕೆಗಳನ್ನು ನೀಡಿ, ನನ್ನ ಮೇಲೆ ಅನಾಮಧೇಯ ಪತ್ರಗಳನ್ನು ಬರೆಯಿಸಿ, ನನ್ನ ಬಗ್ಗೆ ನಮ್ಮ ಸಮುದಾಯದಲ್ಲಿ ಅಸಹ್ಯ ಭಾವನೆ ಬರುವಂತೆ ಮಾಡಿರುತ್ತಾರೆ. ಕೆಲಸದ ನೆಪದಲ್ಲಿ ನನ್ನನ್ನು ತನ್ನ ಕೊಠಡಿಗೆ ಕರೆಸಿಕೊಂಡು ಅಶ್ಲೀಲವಾಗಿ ನಡಕೊಳ್ಳುತ್ತಿದ್ದರು. ತನ್ನೊಂದಿಗೆ ದೈಹಿಕ ಸಂಪರ್ಕ ಮಾಡುವಂತೆ ಒತ್ತಾಯಿಸಿ ಬೇರೆ ಬೇರೆ ವ್ಯಕ್ತಿಗಳ ಮೂಲಕ ಹೇಳಿ ಕಳುಹಿಸಿರುತ್ತಾರೆ. ನಾನು ಇದಕ್ಕೆ ಒಪ್ಪದಾಗ ಎಲ್ಲವೂ ತನ್ನ ನಿಯಂತ್ರಣದಲ್ಲಿರಬೇಕು ಎಂಬ ಹಟದಿಂದ ಎಷ್ಟೋ ವೇಳೆ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ನನ್ನನ್ನು ಉದ್ಯೋಗದಿಂದ ತೆಗೆದು ಹಾಕಲು ಇನ್ನಿಲ್ಲದ ಪ್ರಯತ್ನ ಪಟ್ಟಿರುತ್ತಾರೆ. ಇವರೊಂದಿಗೆ ನಮ್ಮ ಡಯೊಸಿಸ್‍ನ ಕಾನೂನು ಸಲಹೆಗಾರರಾಗಿರುವ ರೆವೆ. ನೋಯೆಲ್ ಕರ್ಕಡ ಎಂಬ ಪಾದ್ರಿ ಸಹ ನನಗೆ ಕಿರುಕುಳ ನೀಡಿರುತ್ತಾರೆ. ಕೆಲಸದ ಸಮಯದಲ್ಲಿ ಮೊಬೈಲ್‍ನಲ್ಲಿ ಅಶ್ಲೀಲ ವೀಡಿಯೋಗಳನ್ನು ತೋರಿಸಿ, ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸಲು ಒತ್ತಾಯಿಸುತ್ತಿದ್ದ. ಜೊತೆಗೆ ತಾನು ವಾಸವಾಗಿದ್ದ ಕ್ವಾರ್ಟರ್ಸ್‍ಗೆ ಸಹ ಬರುವಂತೆ ಒತ್ತಡ ಹೇರುತ್ತಿದ್ದ. ಈ ಬಗ್ಗೆ ಹಿಂದಿನ ಬಿಷಪ್‌ ರ ಗಮನಕ್ಕೆ  ನಾನು ತಂದಿದ್ದು, ಅವರು ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದರು. ಆದರೆ ನವೆಂಬರ್ 2021ರಿಂದ ಹಿಂದಿನ ಬಿಷಪರು ನಿವೃತ್ತರಾದ ಆನಂತರ ಇವರಿಬ್ಬರ ಕಿರುಕುಳ ಜಾಸ್ತಿಯಾಗುತ್ತಾ, ನನ್ನನ್ನು ಕೆಲಸದಿಂದ ವಜಾ ಮಾಡಲು ಸಂಚು ಮಾಡಿರುತ್ತಾರೆ. ಇವರು ಅಂದಿನ ಅಧಿಕಾರಿಗಳಾದ ವಿಲಿಯಂ ಕೇರಿ ಮತ್ತು ಸಿಸ್ಟರ್ ಸುಜಾತ ಎಂಬವರಿಗೂ ಸುಳ್ಳು ಮಾಹಿತಿ ನೀಡಿ ಎಲ್ಲರೂ ಸೇರಿಕೊಂಡು ಜೂನ್ 2022ರಿಂದ ನನ್ನ ವೇತನವನ್ನು ತಡೆಹಿಡಿದರು. ಜೊತೆಗೆ ನನಗೆ ವಿದ್ಯಾರ್ಹತೆ ಇಲ್ಲವೆಂದು ತಾವೇ ಸೃಷ್ಟಿಸಿ ಕೆಲವು ಕಾನೂನು ಬಾಹಿರ ಪತ್ರಗಳನ್ನು ನೀಡಲು ಪ್ರಾರಂಭಿಸಿದರು. ರೂ. 3,18,870/- ಹೆಚ್ಚುವರಿ ವೇತನ ಡಯೊಸಿಸ್‍ಗೆ ಹಿಂದಿರುಗಿಸಬೇಕು ಎಂದು ಒತ್ತಡ ಹೇರಿದರು. ಅಲ್ಲದೆ ಬಿಷಪರ ಅನುಪಸ್ಥಿತಿಯಲ್ಲಿ ವಿನ್ಸೆಂಟ್ ಪಾಲನ್ನ ಮತ್ತು ನೋಯೆಲ್ ಕರ್ಕಡ ಮೋಡರೇಟರ್ ಅವರನ್ನು ಭೇಟಿಯಾಗಿ ನನ್ನನ್ನು ಹುದ್ದೆಯಿಂದ ಪದಚ್ಯುತಿಗೊಳಿಸಿ, ವರ್ಗಾವಣೆ ಆದೇಶಗಳನ್ನು ತಂದಿರುತ್ತಾರೆ. ಇದನ್ನು ನನ್ನಿಂದ ಮುಚ್ಚಿಟ್ಟು, ಆಫೀಸಿನಲ್ಲಿ ನನ್ನ ಕೆಲಸವನ್ನು ಒಂದೊಂದಾಗಿ ತಡೆಹಿಡಿಯಲು ಪ್ರಾರಂಭಿಸಿದರು. ಬೇರೆ ದಾರಿ ಕಾಣದೆ ನಾನು ಸಹಾಯಕ ಕಾರ್ಮಿಕ ಆಯುಕ್ತರನ್ನು (Assistant Labour Commissioner) ¸ಸಂಪರ್ಕಿಸಿದ್ದು, ನನ್ನ ಪ್ರಕರಣವು ವಿಚಾರಣೆಯಲ್ಲಿರುತ್ತದೆ. ಆದರೆ ವಿನ್ಸೆಂಟ್ ಪಾಲನ್ನ ಮತ್ತು ನೋಯೆಲ್ ಕರ್ಕಡ ನನ್ನ ಮೇಲೆ ಮತ್ತಷ್ಟು ಸಿಟ್ಟುಗೊಂಡು, ಪುನಹ ಕಿರುಕುಳ ನೀಡಿ, ಬೆದರಿಕೆ ಹಾಕಿ, 20 ಆಗಸ್ಟ್ 2022ರಂದು ಯಾವುದೇ ಮಾಹಿತಿ ನೀಡದೆ ಏಕಾಏಕಿ ನಾನು ಕೆಲಸ ಮಾಡುತ್ತಿದ್ದ ಕೊಠಡಿಗೆ ಬೀಗ ಹಾಕಿ ನನ್ನನ್ನು ಹೊರ ಹಾಕಿರುತ್ತಾರೆ.

ವಿನ್ಸೆಂಟ್ ಪಾಲನ್ನ ಮತ್ತು ನೋಯೆಲ್ ಕರ್ಕಡ

ಅಂದಿನಿಂದ ಸುಮಾರು 7 ತಿಂಗಳುಗಳ ಕಾಲ (200 ದಿನಗಳು) ನಾನು ದಿನಾಲೂ ಮುಚ್ಚಿದ ಬಾಗಲಿನ ಹೊರಗೆ ಕುಳಿತು, ಕಾದು, ನಿರಾಶೆಯಿಂದ ಬರುತ್ತಿದ್ದೇನೆ. ಈ ಬಗ್ಗೆ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲು ನಾನು ಸಂಬಂಧಪಟ್ಟ ಅಧಿಕಾರಿಗಳು, ಕಾರ್ಯಕಾರಿ ಸಮಿತಿ, ಮೋಡರೇಟರ್ಸ್ ಕಮಿಸರಿ, ಮೋಡರೇಟರ್ ಹಾಗೂ ಬಿಷಪರ ಬಳಿಯಲ್ಲಿಯೂ ಮನವಿ ಮಾಡಿದ್ದು, ಸಭಾಪ್ರಾಂತದ ಘಟನಾವಳಿಯ (Diocesan Constitution & Bye-Law) ಅನ್ವಯ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಉಪಯೋಗಿಸಿರುತ್ತೇನೆ. ಆದರೆ ಅಧಿಕಾರಿಗಳು ಯಾವುದೇ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ನನಗೆ ನಿರಂತರವಾಗಿ ಕಿರುಕುಳ ನೀಡಿ ಅವಮಾನ ಮಾಡಿರುತ್ತಾರೆ. ಪ್ರಕರಣವು ಈಗಾಗಲೇ ಸಹಾಯಕ ಕಾರ್ಮಿಕ ಆಯುಕ್ತರ (Assistant Labour Commissioner) ಬಳಿಯಲ್ಲಿಯೂ ದಾಖಲಾಗಿದ್ದು, ಕೈಗಾರಿಕಾ ಕಾಯ್ದೆಯಡಿಯಲ್ಲಿ (Industrial Dispute) ವಿಚಾರಣೆಯಲ್ಲಿದೆ. ಆದರೆ ವಿನ್ಸೆಂಟ್ ಪಾಲನ್ನನ ಪ್ರಭಾವದಿಂದ ಆಡಳಿತ ವರ್ಗದವರು ಯಾವುದೇ ರೀತಿಯ ಸಹಕಾರ ನೀಡದೆ ಇದ್ದುದರಿಂದ ನನ್ನ ಸಮಸ್ಯೆಗೆ ಏನೂ ಪರಿಹಾರ ಸಿಗದೆ ನಾನು ಉದ್ಯೋಗವಿಲ್ಲದೆ ಕೇವಲ ಕಾಯುವಂತಾಯಿತು.

ಪ್ರಸ್ತುತ ಈ ಹಂತದಲ್ಲಿಯೇ ಡಯೊಸಿಸ್‍ನ ಅಧಿಕಾರಿಗಳು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಸೃಷ್ಟಿಸಿ, ಯಾವುದೇ ವಿಚಾರಣೆ ಮಾಡದೆ ನನ್ನನ್ನು ಕೆಲಸದಿಂದ ಅಮಾನತು ಮಾಡಿ ಆದೇಶ (Suspension Order) ನೀಡಿರುತ್ತಾರೆ ಹಾಗೂ ಆಫೀಸಿನ ಆವರಣದೊಳಗೆ ಬಾರದಂತೆ ನನ್ನನ್ನು ನಿರ್ಬಂಧಿಸಿರುತ್ತಾರೆ. ಹಾಗೂ ಕಳೆದ ವರ್ಷ ನಿವೃತ್ತರಾಗಿ ಪಿಂಚಣಿ ಹಾಗೂ ಗೌರವ ಧನ ಪಡೆಯುತ್ತಿರುವ ಒಬ್ಬ ಸಿಬ್ಬಂದಿಗೆ ನನ್ನ ಹುದ್ದೆಯನ್ನು ವಹಿಸಿ, ವೇತನ ನೀಡಿರುತ್ತಾರೆ. ಆನಂತರ ಒಂದು ವಿಚಾರಣಾ ಸಮಿತಿಯನ್ನು ತಾವೇ ರಚಿಸಿ, 31 ಮಾರ್ಚ್ ಒಳಗೆ ಅದರ ರಿಪೋರ್ಟ್ ನೀಡುವಂತೆ ಸೂಚಿಸಿರುತ್ತಾರೆ. ಆದರೆ ವಿಚಾರಣಾ ಸಮಿತಿಯವರು ಸರಿಯಾಗಿ ವಿಚಾರಣೆ ಮಾಡದೆ ಅರ್ಧದಲ್ಲೇ ಸ್ಥಗಿತಗೊಳಿಸಿರುತ್ತಾರೆ. ಈ ಎಲ್ಲಾ ದೌರ್ಜನ್ಯದಿಂದ ಮನನೊಂದಿರುವ ನಾನು ನ್ಯಾಯ ಪಡೆಯಲು ಬೇರೆ ದಾರಿ ಕಾಣದೆ ಡಯೊಸಿಸ್ ಆಫೀಸಿನ ಗೇಟಿನ ಹೊರಗೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದೇನೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಈಗಾಗಲೇ ಪೊಲೀಸ್‌ ಆಯುಕ್ತರಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಇಲಾಖೆಯಿಂದ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ.

ನೋಯೆಲ್ ಕರ್ಕಡ ಹಲವಾರು ಹೆಣ್ಣುಮಕ್ಕಳನ್ನು ತನ್ನ ಕಾಮತೃಷೆಗೆ ಉಪಯೋಗಿಸಿ ಕೈ ಬಿಟ್ಟಿರುತ್ತಾನೆ. ಅವನಿಂದ ಲೈಂಗಿಕ ದೌರ್ಜನ್ಯ ಹೊಂದಿ ಅನ್ಯಾಯಕ್ಕೆ ಒಳಗಾದ ಮುಸ್ಲಿಮ್ ಸಮುದಾಯದ ಮಹಿಳೆಯೊಬ್ಬರು ದೂರು ದಾಖಲಿಸಿ ಸುಮಾರು 60 ದಿನಗಳು ಕಳೆದರೂ ಆರೋಪಿಯ ಬಂಧನವಾಗಿಲ್ಲ. ಈ ಪ್ರಕರಣದಲ್ಲಿ ನೋಯೆಲ್ ಕರ್ಕಡನ ಜಾಮೀನು ಅರ್ಜಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿರುತ್ತದೆ. ಸಿ.ಸಿ.ಬಿ. ಪೊಲೀಸ್ ಅಧಿಕಾರಿಗಳು ಆತ ತಲೆಮರೆಸಿಕೊಂಡಿದ್ದಾನೆ ಎಂಬ  ಸಬೂಬು ನೀಡಿ ಆತನನ್ನು ರಕ್ಷಿಸುತ್ತಿದ್ದಾರೆ!

ಪ್ರಕರಣದ ಮುಖ್ಯಾಂಶಗಳು

  • ಪೊಲೀಸ್ ದೂರು ನೀಡಿರುವುದಕ್ಕೆ ಆಡಳಿತ ಮಂಡಳಿಯು ದಿನಾಂಕ 25-03-2023ರಂದು ಸಂತ್ರಸ್ತೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಿರುತ್ತದೆ.
  • ವಿಚಾರಣಾ ಸಮಿತಿಯು ಅರ್ಧಕ್ಕೆ ನಿಂತು, ಮುಂದುವರೆಸಿರುವುದಿಲ್ಲ.
  • ನಿಗದಿತ ವೇತನ, ತುಟ್ಟಿಭತ್ಯೆ, ಇತ್ಯಾದಿ ನೀಡಿರುವುದಿಲ್ಲ.
  • ಆಗಸ್ಟ್ 2022 ರಿಂದ ಪಿ.ಎಫ್. ಸ್ಥಗಿತಗೊಳಿಸಲಾಗಿರುತ್ತದೆ.
  • ಯಾವುದೇ ವಿನಂತಿಗೂ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ.
  • ಆಗಸ್ಟ್ 20, 2022ರಂದು ಏಕಾಏಕಿ ಆಕೆ ಕೆಲಸ ಮಾಡುತ್ತಿದ್ದ ಕೊಠಡಿಗೆ ಬೀಗ ಜಡಿಯಲಾಯ್ತು. ಕೊಠಡಿಯೊಳಗಿದ್ದ ಆಕೆಯ ವಸ್ತುಗಳನ್ನು ಮರಳಿಸಿರುವುದಿಲ್ಲ.
  • ಮೇ ಪ್ರಥಮ ವಾರದಲ್ಲಿ ಕೊಠಡಿಯನ್ನು ತೆರೆದಿದ್ದರೂ ಆಕೆಯ ವಸ್ತುಗಳನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಿರುವುದಿಲ್ಲ.
  • ದಿನಾಂಕ 26 ಏಪ್ರಿಲ್ 2023ರಂದು ಸಹಾಯಕ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಕೊನೆಯ ಸಂಧಾನ ಪ್ರಕ್ರಿಯೆಗೆ ಸಹಮತ ನೀಡಿರುವುದಿಲ್ಲ.
  • ಪ್ರಸ್ತುತ ಒಂದು ತಿಂಗಳು ಕಳೆದರೂ ಸಹಾಯಕ ಕಾರ್ಮಿಕ ಆಯುಕ್ತರು ಲೇಬರ್ ಆಫೀಸರ್ ಗೆ ವರದಿ ಕಳುಹಿಸಿರುವುದಿಲ್ಲ.
  • ದ.ಕ. ಜಿಲ್ಲಾಧಿಕಾರಿಗಳು ಒಡನಾಡಿ ನಿರ್ದೇಶಕರ ಪತ್ರಕ್ಕೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಉಪ ಆಯುಕ್ತರಿಗೆ ಸೂಚನೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
  • ಮಾರ್ಚ್ 07, 2023ರಂದೇ ದೂರು ದಾಖಲಿಸಿದ್ದರೂ ಪೊಲೀಸರು ವಿಚಾರಣೆಗೆ ವಿಳಂಬಿಸಿದರು.
  • ಸ್ಥಳೀಯ ಶಾಸಕರು ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ!
  • ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಕೊಠಡಿಯ ಮಹಜರು ಮಾಡದೆ ಬಾಕಿಯಾಗಿದೆ.
  • ವಿನ್ಸೆಂಟ್ ಪಾಲನ್ನ ಹೈ ಕೋರ್ಟ್‍ನಿಂದ ಪೊಲೀಸ್ ವಿಚಾರಣೆಗೆ ತಡೆಯಾಜ್ಞೆ ತಂದಿರುತ್ತಾರೆ.
  • ಸ್ಥಳೀಯ ಮಹಿಳಾ ಸಂಘಟನೆಗಳ ಸದಸ್ಯೆಯರು ಪೊಲೀಸ್‌ ಕಮಿಷನರ್‌ ಅವರನ್ನು ಭೇಟಿಯಾದಾಗ ಕಮಿಷನರ್‌ ಒರಟಾಗಿ ನಡೆದುಕೊಂಡಿದ್ದಲ್ಲದೆ ಇಷ್ಟು ತಡವಾಗಿ ಆಕೆ ದೂರು ನೀಡಿದ್ದೇಕೆ ಎಂದು ಗದರಿಸಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾನೂನಿಗೆ ವಿರುದ್ಧವಾಗಿ ವರ್ತಿಸಿದ್ದಾರೆ. ಮಹಿಳೆಯರು ನೀಡಿದ ಪತ್ರಕ್ಕೆ ಈ ವರೆಗೂ ಉತ್ತರಿಸಿರುವುದಿಲ್ಲ.

ನ್ಯಾಯಕ್ಕಾಗಿ ಪ್ರತಿಭಟನೆ

ಕರ್ನಾಟಕದಾದ್ಯಂತದ ಎಲ್ಲಾ ಪ್ರಜಾಸತ್ತಾತ್ಮಕ ಸಮಾನ ಮನಸ್ಕರು, ಸಂಘ-ಸಂಸ್ಥೆಗಳು, ಮಹಿಳಾ ದೌರ್ಜನ್ಯ ವಿರೋಧಿ ಕಾರ್ಯಕರ್ತರು ಒಟ್ಟು ಸೇರಿ ದಿನಾಂಕ 31-5-2023 ರಂದು 10 ರಿಂದ 5 ಗಂಟೆಯವರೆಗೆ) ಮಂಗಳೂರಿನ ಬಲ್ಮಠದಲ್ಲಿರುವ ಸಿ ಎಸ್‌ ಐ ಬಿಷಪ್‌ ಹೌಸಿನ ಮುಂದೆ ಪ್ರತಿಭಟಿಸುವುದರೊಂದಿಗೆ ಸಂತ್ರಸ್ತರ ಪರವಾಗಿ ಹಾಗೂ ಆರೋಪಿಗಳನ್ನು ಕಾನೂನಿನ ಚೌಕಟ್ಟಿಗೆ ತರುವ ಸಲುವಾಗಿ ನ್ಯಾಯಬದ್ಧ ಬೇಡಿಕೆಯನ್ನು ಇರಿಸುತ್ತಿದ್ದಾರೆ. ಎಲ್ಲ ಮಹಿಳಾಪರ ಚಿಂತಕರ, ಹೋರಾಟಗಾರರ ಸಹಭಾಗಿತ್ವವನ್ನು ಕೋರಲಾಗಿದೆ ಎಂದು ಪೀಪಲ್‌ ಮೀಡಿಯಾಕ್ಕೆ ಸಂಘಟಕರು ತಿಳಿಸಿದ್ದಾರೆ.

ಇದನ್ನೂ ಓದಿ-ಮನದಿಚ್ಛೆಯಂತೆ ಇದ್ದೆ, ಉಟ್ಟೆ, ತೊಟ್ಟೆ-ನಜ್ಮಾ ಬಾಂಗಿ

Related Articles

ಇತ್ತೀಚಿನ ಸುದ್ದಿಗಳು