Friday, April 26, 2024

ಸತ್ಯ | ನ್ಯಾಯ |ಧರ್ಮ

ಹೊಸ ಸರ್ಕಾರ ಹೊಸ ನಿರೀಕ್ಷೆ : ಕನ್ನಡದಲ್ಲಿ UPSC ಪೂರ್ವಭಾವಿ ಪರೀಕ್ಷೆ

ಯು ಪಿ ಎಸ್ ಸಿ ಯ ಪೂರ್ವಭಾವಿ ಪರೀಕ್ಷೆಯು ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮಗಳಲ್ಲಿ ಮಾತ್ರ ನಡೆಯುತ್ತದೆ. ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಬಹುದು. ಮೊದಲ ಹಂತದ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿದ್ದ ಮೇಲೆ ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಕೊಟ್ಟರೆ ಏನು ಪ್ರಯೋಜನ?- ಗಿರೀಶ್‌ ಮತ್ತೇರ, ಲೇಖಕರು

ಶ್ರೀಯುತ ಸಿದ್ದರಾಮಯ್ಯನವರ ನೇತೃತ್ವದ ಹೊಸ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅವರ ಕನ್ನಡಪರ ಕಾಳಜಿಗೆ ಅವರನ್ನು ಕನ್ನಡ ರಾಮಯ್ಯ ಎಂದೂ ಕೆಲವರು ಕರೆಯುವುದುಂಟು. ಇಂದು( 28-05-2023 ಭಾನುವಾರ) UPSC (IAS/IPS ಮೊದಲಾದ) ಪೂರ್ವಭಾವಿ Preliminary ಪರೀಕ್ಷೆ ಒಕ್ಕೂಟ ಭಾರತದಾದ್ಯಂತ ನಡೆಯುತ್ತಿದೆ. ಅದೂ ಸಹ ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೂ ಕೊಡುವಂತೆ ಶ್ರೀಯುತ ಸಿದ್ದರಾಮಯ್ಯನವರು ಒಕ್ಕೂಟ ಭಾರತ ಸರ್ಕಾರಕ್ಕೆ ಆಗ್ರಹಿಸಬೇಕಿದೆ. ಈ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯನವರು ಹಾಗೂ ಡಿ ಕೆ ಶಿವಕುಮಾರ್ ಅವರು ಧ್ವನಿ ಎತ್ತಿದ್ದನ್ನು ನೆನಪಿಸಿಕೊಳ್ಳಬಹುದು.‌

ಭಾರತ ಸರ್ಕಾರ ಪ್ರತಿವರ್ಷ ಯು ಪಿ ಎಸ್  ಸಿ ಪರೀಕ್ಷೆಗಳ ಮೂಲಕ ಐ ಎ ಎಸ್/ಐ ಪಿ ಎಸ್ ಮೊದಲಾದ ಪ್ರಥಮ ಶ್ರೇಣಿಯ ಸಾವಿರಾರು ಹುದ್ದೆಗಳನ್ನು ತುಂಬಿಕೊಳ್ಳುವುದು ಸರಿಯಷ್ಟೆ. ಯು ಪಿ ಎಸ್ ಸಿ ಪರೀಕ್ಷೆ ಪಾಸು ಮಾಡುವುದು ಭಾರತದಲ್ಲಿ ಹುಟ್ಟಿದ ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳ ಕನಸು. ಆದರೆ ಈ ಪರೀಕ್ಷೆಗಳನ್ನು ಪಾಸು ಮಾಡಲು ಪರೀಕ್ಷಾ ಮಾಧ್ಯಮವೇ ತೊಡಕಾಗಿದೆ. ಭಾರತ ಒಂದು ಒಕ್ಕೂಟ ವ್ಯವಸ್ಥೆ. ಇಲ್ಲಿ ಹಲವಾರು ಭಾಷೆಗಳು- ಸಂಸ್ಕೃತಿಗಳು ಸಾವಿರಾರು ವರ್ಷಗಳಿಂದ ತಮ್ಮತನವನ್ನು ಜತನದಿಂದ ಕಾಯ್ದುಕೊಂಡು ಬಂದಿವೆ. ಕನ್ನಡವೂ ಒಳಗೊಂಡಂತೆ ತಮಿಳು, ತೆಲುಗು, ಮಲಯಾಳಂ ಅಂತೆಯೇ ಭಾರತದ ಕೆಲವು ಭಾಷೆಗಳಂತೂ ಪ್ರಪಂಚದ ಶ್ರೇಷ್ಠ ಭಾಷೆಗಳ ರೇಸ್ ನಲ್ಲಿ ಇರುವಂತವು. ಆದರೆ ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಬಂದ ಭಾರತದ ಒಕ್ಕೂಟ ಸರ್ಕಾರಗಳು ಇದು ಒಂದು ಒಕ್ಕೂಟ ಎಂಬುದನ್ನು ಜಾಣತನದಿಂದ ಮರೆತವು. ಹಲವು ಭಾಷಾ ಸಂಸ್ಕೃತಿಗಳ ಭಾರತದಲ್ಲಿ ಹಿಂದಿಗೆ ಮಾತ್ರ ವಿಶೇಷ ಪ್ರಾಶಸ್ತ್ಯ ನೀಡುತ್ತಾ ಬಂದವು. ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಮಾನ್ಯ ಮಾಡಿರುವ ಭಾಷೆಗಳು ನೋಟಿನ ಮೇಲೆ ಮುದ್ರಣ ಮಾಡಲು ಮಾತ್ರ ಸೀಮಿತವಾದವು. ಹಿಂದಿಯೇತರ ಭಾಷೆಗಳು ಸೊರಗಲು ಪ್ರಾರಂಭಿಸಿದವು. ಅದರಲ್ಲೂ ದಕ್ಷಿಣ ಭಾರತದ ದ್ರಾವಿಡ ಭಾಷೆಗಳು ಅನಾಥವಾದವು.

ಯು ಪಿ ಎಸ್ ಸಿ ಪರೀಕ್ಷೆಗಳು ನಮಗೆಲ್ಲರಿಗೂ ತಿಳಿದಿರುವಂತೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಗಳೆಂಬ ಮೂರು ಹಂತಗಳಲ್ಲಿ ನಡೆಯುತ್ತದೆ. ಪೂರ್ವಭಾವಿ ಪರೀಕ್ಷೆಯು ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮಗಳಲ್ಲಿ ಮಾತ್ರ ನಡೆಯುತ್ತದೆ. ಮುಖ್ಯ ಪರೀಕ್ಷೆಯನ್ನು ಸಂವಿಧಾನ ಮಾನ್ಯ ಮಾಡಿರುವ ಎಲ್ಲಾ ಇಪ್ಪತ್ತೆರಡು ಭಾಷೆಗಳಲ್ಲಿಯೂ ಬರೆಯಬಹುದು. ಈ ಸೌಲಭ್ಯ ಸಹಜವಾಗಿಯೇ ಕನ್ನಡ ಭಾಷೆಗೂ ಇದೆ. ಪ್ರತಿವರ್ಷ ಯು ಪಿ ಎಸ್ ಸಿ ಫಲಿತಾಂಶ ಪ್ರಕಟವಾಗುತ್ತದೆ. ಅದರಲ್ಲಿ ಒಬ್ಬರೋ ಇಬ್ಬರೋ ಕರ್ನಾಟಕದಿಂದ ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ಪಾಸಾಗಿರುತ್ತಾರೆ. ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆಂದರೆ ಅವರು ಪರೀಕ್ಷೆಯ ಎಲ್ಲಾ ಹಂತಗಳನ್ನೂ ಕನ್ನಡ ಮಾಧ್ಯಮದಲ್ಲಿಯೇ ಪಾಸು ಮಾಡಿದ್ದಾರೇನೋ ಎಂಬಂತೆ ಸಂಭ್ರಮಿಸುತ್ತೇವೆ. ಮೊದಲನೆಯದಾಗಿ ಅದಕ್ಕೆ ಅವಕಾಶವೇ ಇಲ್ಲ. ಪೂರ್ವಭಾವಿ ಪರೀಕ್ಷೆಯಲ್ಲಿ ಇಂಗ್ಲೀಷ್ ಹಿಂದಿ ಎಂಬ ದೊಡ್ಡ ಉಕ್ಕಿನ ಬೇಲಿಯೇ ಇರುತ್ತದೆ. ಅದನ್ನು ದಾಟಲು ದೇಸೀಯ ಭಾಷೆಗಳಲ್ಲಿ ಪಡೆದ ಜ್ಞಾನಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ವಾಸ್ತವ ಹೀಗಿರುವಾಗ ಕನ್ನಡದಲ್ಲಿ ಐ ಎ ಎಸ್ ಪಾಸು ಮಾಡಿದ್ದಾರೆ ಎಂದು ಸಂಭ್ರಮಿಸುವುದು ಆತ್ಮವಂಚನೆ ಆಗುತ್ತದೆ.

ಯು ಪಿ ಎಸ್ ಸಿ ಪೂರ್ವಭಾವಿ ಪರೀಕ್ಷೆಯ ಈ ಬಹುದೊಡ್ಡ ತೊಡಕು ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಡಿದು ಇಂದಿನವರೆಗೂ ಇದೆ. ಇದು ಭಾಷೆಗಳ ಆಧಾರದ ಮೇಲೆ ರಚನೆಯಾಗಿರುವ ಭಾರತದ ಒಕ್ಕೂಟ ವ್ಯವಸ್ಥೆಗೆ ಬಗೆಗಿರುವ ಅನ್ಯಾಯವೇ ಸರಿ. ಮೊದಲ ಹಂತದ ಈ ಪರೀಕ್ಷೆಯನ್ನೇ  ಕೊಡದಿದ್ದ ಮೇಲೆ ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಕೊಟ್ಟರೆ ಏನು ಪ್ರಯೋಜನ? ದೇವಾಲಯದ ಗೇಟನ್ನು ಉಕ್ಕಿನ ಬಾಗಿಲಿನಿಂದ ಭದ್ರಗೊಳಿಸಿ ಗರ್ಭಗುಡಿಗೆ ಮುಕ್ತ ಪ್ರವೇಶ ಎಂದಂತಾಯಿತು! ಇದು ಇಂಗ್ಲಿಷ್ ಹಿಂದಿ ಬರದವರನ್ನು ಹೊರಗಿಡುವ ಉಪಾಯವಲ್ಲದೇ ಬೇರೇನೂ ಅಲ್ಲ.‌

 ಕೆ ಎ ಎಸ್ ಹಾಗೂ ಐ ಎ ಎಸ್ ಪೂರ್ವಭಾವಿ ಪರೀಕ್ಷೆಗಳು ಬಹುತೇಕ ಒಂದೇ ಪಠ್ಯಕ್ರಮ ಹೊಂದಿರುತ್ತವೆ. ಕರ್ನಾಟಕ ಸರ್ಕಾರ ನಡೆಸುವ ಕೆ ಎ ಎಸ್ ಪರೀಕ್ಷೆ ತೆಗೆದುಕೊಳ್ಳುವ ನೂರು ಅಭ್ಯರ್ಥಿಗಳಲ್ಲಿ ಸರಾಸರಿ ತೊಂಭತ್ತೈದು ಜನ ಐ ಎ ಎಸ್ ಪರೀಕ್ಷೆ ತೆಗೆದುಕೊಳ್ಳುವುದಿಲ್ಲ. ಕಾರಣ ಒಂದೇ- ಭಾಷೆಯ ತೊಡಕು. ಇದರ ಬಲಿಪಶುಗಳು ಬಹುತೇಕ ಶೋಷಿತ ಜಾತಿಸಮುದಾಯಗಳೇ ಎಂಬುದು ಗಮನಿಸಬೇಕಾದ ಸಂಗತಿ. ಈ ಸಮುದಾಯಗಳು ಸ್ವಾತಂತ್ರ್ಯಾನಂತರ ದೇಸಿ ಭಾಷೆಗಳ ಶಿಕ್ಷಣ ಮಾಧ್ಯಮದಲ್ಲಿ ಅಂಬೆಗಾಲಿಡುತ್ತಿವೆ. ಅವು ಬಹುತೇಕ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ತಾಯ್ನುಡಿಯಲ್ಲಿಯೇ ಶಿಕ್ಷಣ ಪಡೆದಿವೆ. ಇಂದಿಗೂ ಅವರಲ್ಲಿ ಶಿಕ್ಷಣ ಪಡೆದವರಲ್ಲಿ ಬಹುಪಾಲು ಮೊದಲನೇ ತಲೆಮಾರಿನವರು. ಈ ಮೊದಲು ಅವರು ಶಿಕ್ಷಣವಿಲ್ಲದೇ ಎಲ್ಲಾ ಅವಕಾಶಗಳಿಂದ ವಂಚಿತರಾಗಿದ್ದರು. ಈಗ ಹಿಂದಿ ಇಂಗ್ಲಿಷ್ ಬರುವುದಿಲ್ಲ ಎನ್ನುವ  ಕಾರಣಕ್ಕೆ ಅವಕಾಶ ವಂಚಿತರಾಗಿದ್ದಾರೆ. ಇದು ವರ್ತಮಾನದ ಅಸ್ಪ್ರಶ್ಯತೆಯೇ ಸರಿ. ಹಿಂದಿನಿಂದಲೂ ಹಿಂದಿ ಇಂಗ್ಲಿಷ್ ಬರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಉಳಿದ ಭಾಷಿಕರನ್ನು ಭಾರತದ ಒಕ್ಕೂಟದಲ್ಲಿ ದಡ್ಡರನ್ನಾಗಿ ಮಾಡಿದ್ದಾರೆ. ಅವರು ಬರೀ ಗುಮಾಸ್ತರಾಗಿ ಇರಬೇಕೆ? ಬ್ರಿಟಿಷರು ಮಾಡಿದ್ದು ಅದೇ ಅಲ್ಲವೇ.

ಯಾವುದೇ ಭಾಷಾ ಮಾಧ್ಯಮಗಳು ಬೆಳೆಯಲು ಅವು ನಿತ್ಯನೂತನವಾಗಿರಬೇಕು. ಖ್ಯಾತ ಸಾಹಿತಿ ಪಿ ಲಂಕೇಶ್ ಅವರು ಹೇಳಿರುವ “ಭಾಷೆಯೊಂದು ಮೌಲ್ಯಯುತ ವಾಗುವುದು ಅದು ಸತ್ಯಕ್ಕೆ ಹತ್ತಿರ ಹತ್ತಿರ ಹೋದಾಗ. ಸತ್ಯದಿಂದ ದೂರ ದೂರ ಹೋಗಿ ತೀರಾ ಸುಂದರವೂ ಪರಿಷ್ಕೃತವೂ ಆದಾಗ ಅಲ್ಲ. ಈ ಕಾರಣದಿಂದಲೇ ಕೆಲವರ ಭಾಷೆಯಾಗಿ ಉಳಿದ ಸಂಸ್ಕೃತವು ಭಾರತೀಯರಿಗೆ ಬೇಡವಾಯಿತು. ನಮ್ಮ ಆಧುನಿಕ ಸಮಸ್ಯೆಗಳನ್ನು, ಪ್ರಜ್ಞೆಯನ್ನು ಹೇಳಲಾಗದಿದ್ದರೆ ಕನ್ನಡವೂ ಬೇಡವಾಗುತ್ತದೆ” ಎಂಬ ಮಾತುಗಳನ್ನು ನೆನಪಿಟ್ಟುಕೊಂಡು ಸಮಸ್ಯೆಗಳ ಸಿಕ್ಕುಗಳನ್ನು ಬಿಡಿಸಬೇಕಾಗಿದೆ. ಅದರಲ್ಲಿಯೂ ಮುಖ್ಯವಾಗಿ ಉದ್ಯೋಗ, ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಮೊದಲಾದವುಗಳ ಇಂದಿನ ಸಮಸ್ಯೆಗಳ ಒಳನೋಟಗಳನ್ನು ಅರಿತು ಮುಂದಡಿ ಇಡಬೇಕಾಗಿದೆ.

ನಮಗೆ ಇಂದಿಗೂ ಕನ್ನಡ ಎಂದರೆ ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ ಹಾಗೂ ಸಂಶೋಧನೆ. ಇಲ್ಲಿಗೆ ಬಹುತೇಕ ಮುಗಿಯುತ್ತದೆ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಸದೃಢವಾಗಿ ಕಟ್ಟುವ ಬಗ್ಗೆಯಾಗಲಿ ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆದವರಿಗೆ ಬದುಕನ್ನು ಕಟ್ಟುವ ಬಗೆಯಾಗಲೀ ಗಂಭೀರ ಚರ್ಚೆಗಳೇ ನಡೆದಿಲ್ಲ. ಎಲ್ಲರೂ ಬಾಯಿ ಬಿಟ್ಟರೆ ಬಹುತ್ವ ಎನ್ನುತ್ತಾರೆ. ಆದರೆ ಹಿಂದಿ ಹೇರಿಕೆಯ ವಿರುದ್ಧ ಪರಿಣಾಮಕಾರಿಯಾಗಿ ಧ್ವನಿಯನ್ನೇ ಎತ್ತುವುದಿಲ್ಲ. ಬಹುತ್ವದ ಮೊದಲ ಪಾಠ ಬೇರೆ ಬೇರೆ ಭಾಷೆಗಳು ಸಂಸ್ಕೃತಿಗಳು ಅಲ್ಲವೇ. ಈ ವೈರುಧ್ಯವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು.

ಯು ಪಿ ಎಸ್ ಸಿ ಪರೀಕ್ಷೆಗಳಲ್ಲಿ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಹಿನ್ನೆಲೆಯವರು ಹೆಚ್ಚು ಆಯ್ಕೆ ಆಗುತ್ತಾರೆ. ಕಲಾ ವಿಭಾಗದವರ ಆಯ್ಕೆ ನಗಣ್ಯವಾಗಿದೆ. ಅದಕ್ಕೆ ಅವರು ಉನ್ನತ ಶಿಕ್ಷಣದಲ್ಲಿ ಕಲಿತ ಮಾಧ್ಯಮಗಳೇ ನೇರವಾದ ಕಾರಣವಾಗಿದೆ. ಹಿಂದಿಯೂ ಭಾರತದ ಒಂದು ಪ್ರಮುಖ ಭಾಷೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದೊಂದೇ ಭಾರತ ಒಕ್ಕೂಟದ ಪ್ರಮುಖ ಭಾಷೆ ಎಂದು ಬಿಂಬಿಸುವುದು ಸರಿಯಲ್ಲ ಬದಲಾಗಿ ಕ್ರೌರ್ಯ.

ಗಿರೀಶ್‌ ಮತ್ತೇರ, ಯರಗಟ್ಟಿ ಹಳ್ಳಿ, ಚನ್ನಗಿರಿ

ಲೇಖಕರು.

ಇದನ್ನೂ ಓದಿ-https://peepalmedia.com/new-education-policy-and-indian-languages/<strong>ಹೊಸ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳು| <a>ತ್ರಿಭಾಷಾ ಸೂತ್ರದ ಸಮಸ್ಯೆ</a></strong>

Related Articles

ಇತ್ತೀಚಿನ ಸುದ್ದಿಗಳು