ರಾಜ್ಯ ವಿಧಾನಸಭಾ ಚುನಾವಣೆ ನಂತರ ಬಿಜೆಪಿ ನಾಯಕರ ವಿರುದ್ಧವೇ ಅಸಮಾಧಾನ ಹೊರ ಹಾಕುತ್ತಾ ಬಂದಿರುವ ಮಾಜಿ ಸಚಿವ ವಿ.ಸೋಮಣ್ಣರ ಮುಂದಿನ ರಾಜಕೀಯ ನಡೆ ಬಗ್ಗೆ ಕುತೂಹಲ ಮೂಡಿದೆ. ಡಿಸೆಂಬರ್ 6 ಕ್ಕೆ ನನ್ನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟಪಡಿಸುತ್ತೇನೆ ಎಂದು ಹೇಳುತ್ತಿದ್ದ ಸೋಮಣ್ಣರ ಇಂದು ಯಾವ ನಿರ್ಧಾರದ ಬಗ್ಗೆ ಸ್ಪಷ್ಟಪಡಿಸಬಹುದು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದೆ.
ಇಂದು ತುಮಕೂರಿನ ಕ್ಯಾತ್ಸಂದ್ರ ಬಳಿ ಇರುವ ಸಿದ್ದಗಂಗಾ ಮಠದಲ್ಲಿ ನೂತನವಾಗಿ ನಿರ್ಮಿಸುವ ಗುರುಭವನ ವನ್ನು ಉದ್ಘಾಟಿಸಲಿರುವ ವಿ.ಸೋಮಣ್ಣ, ಮಠದ ಕಾರ್ಯಕ್ರಮಕ್ಕೂ ರಾಜಕೀಯಕ್ಕೂ ತಳುಕು ಹಾಕುವ ಅಗತ್ಯವಿಲ್ಲ. ಅದರಂತೆ ಈ ದಿನ ನನ್ನ ರಾಜಕೀಯ ಭವಿಷ್ಯದ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ತಿಳಿಸುತ್ತೇನೆ.. ಆದರೆ ಈ ಸಂದರ್ಭಕ್ಕೆ ಹೆಚ್ಚಿನ ಮಾತು ಬೇಡ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸಿದ್ದಗಂಗಾ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಗುರುಭವನ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ತುಮಕೂರಿನ ಕ್ಯಾತ್ಸಂದ್ರ ಬಳಿ ಇರುವ ಸಿದ್ದಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಆಗಮಿಸಿದ್ದು, ಈ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಹಕಾರ ಸಚಿವ ರಾಜಣ್ಣ, ಸಂಸದ ಜಿ ಎಸ್ ಬಸವರಾಜು ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆ.
ಇನ್ನೊಂದು ಕಡೆಯಿಂದ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆಗೆ ಒಲವು ಹೊಂದಿದ್ದಾರೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ. ಆದರೆ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ಪಕ್ಷದ ವಿಜಯನಗರ ವಿಧಾನಸಭಾ ಕ್ಷೇತ್ರದ ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅವರ ವಿರೋಧವಿದ್ದು, ಸೋಮಣ್ಣರ ಹಿಂದಿನ ಕ್ಷೇತ್ರ ಗೋವಿಂದರಾಜನಗರ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಸದಿದ್ದರೆ ಅಥವಾ ಪರ್ಯಾಯ ವ್ಯವಸ್ಥೆಗೆ ಕೈ ಹಾಕದಿದ್ದರೆ ನಮ್ಮ ಅಭ್ಯಂತರವಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆಗೆ ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರದಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಬೇಡಿಕೆ ಕೂಡಾ ಕಾಂಗ್ರೆಸ್ ಪಕ್ಷದ ಮುಂದಿದೆ ಎಂಬ ಮಾತು ಕೇಳಿ ಬಂದಿದೆ. ಹಾಗಾಗಿ ತುಮಕೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಮುಗಿದ ಬಳಿಕ ರಾಜಕೀಯ ವಿಚಾರ ಮಾತನಾಡುತ್ತೇನೆ. ರಾಜಕೀಯಕ್ಕೂ ಗುರುಭವನ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ವಿರುದ್ಧ ಅಸಮಾಧಾನ ಹೊಂದಿದ್ದ ಸೋಮಣ್ಣರ ಕೋಪ ಶಮನ ಮಾಡಲು ಈ ವರೆಗೆ ಯಾವುದೇ ಬಿಜೆಪಿ ನಾಯಕರು ಬಂದಿಲ್ಲ ಎಂಬುದೂ ಸಹ ಸೋಮಣ್ಣ ಬಿಜೆಪಿ ಪಕ್ಷದ ಮೇಲಿನ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಯಾವ ನಾಯಕರೂ ಸೋಮಣ್ಣ ಜೊತೆ ಮಾತುಕತೆ ನಡೆಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಅಸಮಾಧಾನ ಹೆಚ್ಚಲು ಕಾರಣ ಎನ್ನಲಾಗಿದೆ
ಒಟ್ಟಾರೆ ಇಂದು ಬಿಜೆಪಿ ಪಕ್ಷದ ಲಿಂಗಾಯತ ಪ್ರಮುಖ ನಾಯಕರೊಬ್ಬರ ನಡೆಯ ಬಗ್ಗೆ ಕುತೂಹಲ ಮೂಡಿದ್ದು ಈಗಾಗಲೇ ಬಿಜೆಪಿಯಿಂದ ಸೋಮಣ್ಣ ಒಂದು ಹೆಜ್ಜೆ ಹೊರಗಿಟ್ಟಿದ್ದು ಮಾತ್ರ ಸತ್ಯ.