- ರಘೋತ್ತಮ ಹೊ ಬ
1946 ರಿಂದ 1956 ರ ವರೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕಿನ 10 ವರ್ಷಗಳು ಅದು ಅವರ ಜೀವನದ ಬದುಕಿನ ಸಾಕ್ಷಾತ್ಕಾರದ ಕ್ಷಣಗಳು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಅದು ಹೋರಾಟದ ಬದುಕು. ಯಾವ ಸಾಮಾಜಿಕ ವ್ಯವಸ್ಥೆ ಶತಶತಮಾನಗಳಿಂದ ಜಡ್ಡುಗಟ್ಟಿತ್ತೊ, ಏಣಿ ಮಾದರಿಯ ಜಾತಿ ವ್ಯವಸ್ಥೆ ಎಂಬ ವಿಚಿತ್ರ ಸಾಮಾಜಿಕ ವ್ಯವಸ್ಥೆ ಹೊಂದಿತ್ತೊ, ಅಂತಹ ರಚನೆಯ ವಿರುದ್ಧ ಬರಹಗಳ ಮೂಲಕ ವೈಚಾರಿಕವಾಗಿ, ಮಾತಿನ ಮೂಲಕ ಸಂಸದೀಯವಾಗಿ, ವಿಮೋಚನೆಯ ಹಾದಿ ಹಿಡಿದು ಧಾರ್ಮಿಕವಾಗಿ, ವ್ಯವಸ್ಥೆಯ ಗಮನ ಸೆಳೆಯಲು ಬೀದಿ ಹೋರಾಟದ ಮಾದರಿಯಲ್ಲೂ ಹೋರಾಡಿದ ಅಪ್ರತಿಮ ಬದುಕು ಅದು. ಬಹುಶಃ ಪದಗಳು ಕೂಡ ಅಂಬೇಡ್ಕರರ ಆ ಹೋರಾಟದ ಬದುಕನ್ನು ಹಿಡಿದಿಡಲು ಸೋಲುತ್ತವೆ. ಅಂತಹ ಅನನ್ಯ ಮಾದರಿಯ ಜೀವನ ಅದು.
1946 ಅದು ದೇಶದ ಸ್ವಾತಂತ್ರ್ಯದ ಹೊಸ್ತಿಲ ಘಟ್ಟ. ಆಗ ಬಾಬಾಸಾಹೇಬ್ ಅಂಬೇಡ್ಕರ್ ಆತಂಕಗೊಂಡದ್ದು ಸ್ವತಂತ್ರ ಭಾರತದಲ್ಲಿ ತನ್ನ ಜನರ ಭವಿಷ್ಯ ಏನು ಎಂಬುದರ ಬಗ್ಗೆ. ಯಾಕೆಂದರೆ ಡಾ.ಅಂಬೇಡ್ಕರರು ಆಗಿನ ಕಾಲಕ್ಕೆ ಇಡೀ ಭಾರತದ ಜನಸಂಖ್ಯೆಯನ್ನು ಮೂರು ಗುಂಪಾಗಿ ಪರಿಗಣಿಸಿದ್ದರು. 1.ಹಿಂದುಗಳು 2.ಮುಸ್ಲಿಮರು 3.ಅಸ್ಪೃಶ್ಯ ಸಮುದಾಯಗಳು. ಹಿಂದುಗಳಿಗೆ ಭಾರತ ಸಿಗುತ್ತಿತ್ತು. ಮುಸ್ಲಿಮರಿಗೆ ಅವರ ಬೇಡಿಕೆಯ ಪಾಕಿಸ್ತಾನ ಸಿಗುತ್ತಿತ್ತು. ಆದರೆ ಅಸ್ಪೃಶ್ಯ ಸಮುದಾಯಗಳಿಗೆ ಏನು ಸಿಗುತ್ತಿತ್ತು? ಇದು ಬಾಬಾಸಾಹೇಬ್ ಅಂಬೇಡ್ಕರರ ಪ್ರಶ್ನೆಯಾಗಿತ್ತು. ಆ ಕಾರಣಕ್ಕಾಗಿ ಆಗ ಅಂಬೇಡ್ಕರ್ ರವರು ಬ್ರಿಟಿಷರಿಗೆ ಸರಣಿ ಪತ್ರಗಳನ್ನು ಬರೆದರು. ಸ್ವತಂತ್ರ ಭಾರತದಲ್ಲಿ ತನ್ನ ಜನರ ಭವಿಷ್ಯ ಏನು ಎಂದು ಕೇಳಿದರು. ಹಾಗೆ ಕೇಳುತ್ತ ಅವರು ಸುಮ್ಮನೆ ಕೂರಲಿಲ್ಲ. ಆಗಷ್ಟೇ ರಚನೆಯಾಗಿದ್ದ ಸ್ವತಂತ್ರ ಭಾರತದ ಸಂವಿಧಾನ ರಚಿಸುವ ಸಂವಿಧಾನ ಸಭೆಗೆ ದೂರದ ಬಂಗಾಳದಿಂದ ಆಯ್ಕೆಯಾಗಿದ್ದರು, ಸಂವಿಧಾನ ರಚನೆಯಲ್ಲಿ ತಮಗೆ ತಾವೇ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡಿದ್ದರು. ಈ ನಡುವೆ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವತಂತ್ರ ಬಂದಾಗ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಸಚಿವರಾಗಿಯೂ ನೇಮಕಗೊಂಡಿದ್ದರು. ತತ್ಪರಿಣಾಮವೆಂಬಂತೆ ಕಾನೂನು ರಚನೆಯ ಬಹು ಮಹತ್ವದ ಕೆಲಸವಾದ ಸಂವಿಧಾನದ ಕರಡು ರಚಿಸುವ ಸಮಿತಿಯ ಅಧ್ಯಕ್ಷರಾಗಿ ಸ್ವತಂತ್ರ ಬಂದ ಅದೇ ತಿಂಗಳು ಅಂದರೆ ಆಗಸ್ಟ್ 29ರಂದು ಅವರು ನೇಮಕಗೊಂಡಿದ್ದರು. ಮುಂದೆ ನಡೆದದ್ದು ಇತಿಹಾಸ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ವತಂತ್ರ ಭಾರತಕ್ಕೆ ಸಮಸ್ತ ಭಾರತೀಯರ ಹಿತ ಕಾಯುವ ಅಭೂತಪೂರ್ವ ಸಂವಿಧಾನ ರಚಿಸಿದ್ದರು. ಸಂವಿಧಾನ ಶಿಲ್ಪಿ ಎನಿಸಿಕೊಂಡಿದ್ದರು. ಅಂದಹಾಗೆ ಬಾಡಿಗೆ ಮನೆ ಸಿಗದೆ ಸವರ್ಣಿಯರ ಮನೆಯಿಂದ ಆಚೆ ತಳ್ಳಲ್ಪಟ್ಟ, ಶಾಲೆಯಲ್ಲಿ ಪ್ರತ್ಯೇಕ ಕೂರಿಸಲ್ಪಟ್ಟ, ಕುಡಿಯುವ ನೀರನ್ನೂ ನಿರಾಕರಿಸಲ್ಪಟ್ಟ ಅಂಬೇಡ್ಕರ್ ರವರು ತಮ್ಮ ಬದುಕಿನ ಅಂತಿಮ ವರ್ಷಗಳಲ್ಲಿ ಅದೆಲ್ಲವನ್ನು ಸರಿಪಡಿಸುವ ಜವಾಬ್ದಾರಿ ಪಡೆಯುತ್ತಾರೆಂದರೆ… ಯಶಸ್ವಿಯಾಗುತ್ತಾರೆಂದರೆ…!
ಸಂವಿಧಾನ ರಚಿಸುತ್ತಲೇ ಅಂಬೇಡ್ಕರ್ ರವರ ಜ್ಞಾನ ಬೌದ್ಧ ಧರ್ಮದತ್ತ ಹೊರಳಿತ್ತು. ಅಂಬೇಡ್ಕರ್ ಅವರಿಗೆ ಬೇಕಾಗಿದ್ದು ಜಾತಿ ವ್ಯವಸ್ಥೆಯಿಂದ ಅಸ್ಪೃಶ್ಯತೆಯಿಂದ ವಿಮೋಚನೆ. ಈ ನಿಟ್ಟಿನಲ್ಲಿ ತಮ್ಮ ಹೋರಾಟನ ಬದುಕಿನ ಆರಂಭದಲ್ಲಿಯೇ ಅಂದರೆ 1935 ಅಕ್ಟೋಬರ್ 13ರಂದು ಡಾ.ಅಂಬೇಡ್ಕರ್ ಅವರು “ನಾನು ದುರದೃಷ್ಟವಶಾತ್ ಹಿಂದೂವಾಗಿ ಹುಟ್ಟಿದ್ದೇನೆ. ಅದು ನನ್ನ ಕೈಲಿರಲಿಲ್ಲ. ಆದರೆ ಹಿಂದೂವಾಗಿ ಸಾಯುವುದಿಲ್ಲ” ಎಂದು ಘೋಷಿಸಿದ್ದರು. ಅದರಂತೆ ಧರ್ಮ ಬದಲಿಸುವ ಚಿಂತನೆಯಲ್ಲಿಯೇ ತೊಡಗಿದ್ದ ಅವರು ಸಂವಿಧಾನ ಜಾರಿಯಾದ ಅದೇ ವರ್ಷ 1950 ಸೆಪ್ಟೆಂಬರ್ 29 ಮುಂಬೈನ ವೊರ್ಲಿ ಎಂಬ ಪ್ರದೇಶದ ಬೌದ್ಧ ವಿಹಾರವೊಂದಕ್ಕೆ ಭೇಟಿ ಕೊಟ್ಟಾಗ ಹೇಳಿದ್ದು “ನನ್ನ ಬದುಕಿನ ಮುಂದಿನ ದಿನಗಳನ್ನು ಇಡೀ ಭಾರತದಲ್ಲಿ ಬೌದ್ಧ ಧರ್ಮವನ್ನು ಪುನರುತ್ಥಾನಗೊಳಿಸಲು ವಿನಿಯೋಗಿಸುತ್ತೇನೆ” ಎಂದು.
ಯಾಕೆ ಅಂಬೇಡ್ಕರ್ ಅವರಿಗೆ ಮತಾಂತರದ ಬಗ್ಗೆ ಆ ಪರಿ ಒಲವಿತ್ತು? 1956 ಅಕ್ಟೋಬರ್ 13ರ ಅವರ ಭಾಷಣದ ಇತರ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುವುದಾದರೆ “ನಿಮ್ಮನ್ನು ಮನುಷ್ಯರನ್ನಾಗಿ ಪರಿಗಣಿಸದ ಆ ಧರ್ಮದಲ್ಲಿ ನೀವೇಕೆ ಇರುವಿರಿ? ನಿಮ್ಮನ್ನು ದೇವಸ್ಥಾನಗಳಿಗೆ ಪ್ರವೇಶ ಕೊಡದ ಆ ಧರ್ಮದಲ್ಲಿ ನೀವೇಕೆ ಇರುವಿರಿ? ನಿಮ್ಮನ್ನು ಶಿಕ್ಷಣ ಪಡೆಯಲು ಅವಕಾಶ ಕೊಡದ ಆ ಧರ್ಮದಲ್ಲಿ ನೀವೇಕೆ ಇರುವಿರಿ? ಜೀವನದ ಪ್ರತಿಯೊಂದು ಕ್ಷಣದಲ್ಲು ನಿಮ್ಮನ್ನು ಅಪಮಾನಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ? ಅಂಬೇಡ್ಕರರ ಈ ನುಡಿಗಳನ್ನು ಮತ್ತೆ ಮತ್ತೆ ಮೆಲುಕಿಸಿಕೊಂಡರಾದರೆ ಯಾರು ಕೂಡ ಬೌದ್ಧ ಧರ್ಮದ ಅವರ ಹಾದಿಯನ್ನು ಎಂದಿಗೂ ಪ್ರಶ್ನಿಸಲಾರರು.
ರಾಜಕೀಯ ಅಧಿಕಾರದ ಮಹತ್ವ ಅರಿತಿದ್ದ ಅಂಬೇಡ್ಕರ್ ಅವರು ಸ್ವಾತಂತ್ರ್ಯ ನಂತರ ನಡೆದ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು. 1952 ಜನವರಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ತಮ್ಮ ರಾಜಕೀಯ ಹೋರಾಟದ ಬದುಕಿನ ದುರಂತ ಎಂಬಂತೆ ಸೋಲನ್ನು ಅನುಭವಿಸಿದ್ದರು. ಆದರೆ ಹೇಗಾದರೂ ಮಾಡಿ ಸಂಸತ್ತನ್ನು ಪ್ರವೇಶಿಸಲೇಬೇಕು ಎಂಬ ತುಡಿತ ಹೊಂದಿದ್ದ ಅವರು ಅದೇ ವರ್ಷ ಅಂದರೆ 1952 ಮಾರ್ಚ್ ತಿಂಗಳಲ್ಲೇ ಮುಂಬೈ ಪ್ರಾಂತ್ಯದಿಂದ ರಾಜ್ಯಸಭೆಗೆ ಆಯ್ಕೆಯಾದರು. ಆಶ್ಚರ್ಯವೆಂಬಂತೆ ಲೋಕಸಭೆಗೆ ಆಯ್ಕೆಯಾಗಲೇಬೇಕು ಎಂಬ ಹಠ ಹೊಂದಿದ್ದ ಅವರು 1954ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲು ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ(8000 ಮತಗಳು) ಪರಾಭವಗೊಂಡಿದ್ದರು, ರಾಜ್ಯಸಭಾ ಸದಸ್ಯರಾಗಿಯೇ ಮುಂದುವರಿದಿದ್ದರು.
ಚುನಾವಣೆಗಳಲ್ಲಿ ಸೋಲು ಎಂಬುದು ಅಂಬೇಡ್ಕರರ ಬದುಕಿನ ಲಿಖಿತ ದಾಖಲೆ. ಆದರೆ ಹೋರಾಟದ ಬದುಕಿನಲ್ಲಿ ಗೆಲುವು ಅವರ ಅದೇ ಲಿಖಿತ ಬದುಕಿನ ವಾಸ್ತವದ ದಾಖಲೆ. ಸ್ವಾತಂತ್ರ್ಯಾನಂತರ ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಸಚಿವರಾಗಿ ನೇಮಕಗೊಂಡ ಅವರು ಸಂವಿಧಾನ ರಚನೆಯ ಕಾರ್ಯ ಪೂರ್ಣಗೊಂಡ ನಂತರ ಈ ದೇಶದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಮಹಿಳೆಯರ ವಿಮೋಚನೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ನಿಟ್ಟಿನಲ್ಲಿ ಮಹಿಳೆಯರ ಹಕ್ಕುಗಳನ್ನು ಕುರಿತು “ಹಿಂದೂ ಸಮಿತಿ ಮಸೂದೆ” ಎಂಬ ಟೈಟಲ್ ನಲ್ಲಿ ಮಸೂದೆಯೊಂದನ್ನು ತಯಾರಿಸಿ ಸಂಸತ್ ನಲ್ಲಿ ಅದರ ಅನುಮೋದನೆಗೆ ಮಂಡಿಸಿದ್ದರು. ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು, ಆಸ್ತಿಯ ವಾರಸುಧಾರಿಕೆಯಲ್ಲಿ ಹೆಸರು ದಾಖಲಿಸುವಿಕೆ, ಪತಿಯಿಂದ ಜೀವನಾಂಶ, ಮದುವೆ ಮತ್ತು ವಿಚ್ಛೇದನದ ಹಕ್ಕು, ಹೆಣ್ಣು ಮಕ್ಕಳನ್ನು ದತ್ತು ಸ್ವೀಕರಿಸುವ ಹಕ್ಕು, ಅಪ್ರಾಪ್ತ ವಯಸ್ಸಿನ ಬಾಲಕಿಯರ ವಿವಾಹ ತಡೆ ವಿಚಾರ… ಈ ಎಲ್ಲವುಗಳನ್ನು ಆ ಮಸೂದೆ ಒಳಗೊಂಡಿತ್ತು. ದುರಂತ ಆ ಮಸೂದೆ ಅಂಗೀಕಾರಗೊಳ್ಳಲೇ ಇಲ್ಲ..! ಬೇಸತ್ತ ಅಂಬೇಡ್ಕರರು ತಮ್ಮ ಕಾನೂನು ಮಂತ್ರಿ ಪದವಿಗೂ ರಾಜೀನಾಮೆ ಕೊಡುತ್ತಾರೆ. ವಿಷಾದವೆಂದರೆ ಈಗ ತಮ್ಮ ಈ ಎಲ್ಲಾ ಹಕ್ಕುಗಳನ್ನು ಎಂಜಾಯ್ ಮಾಡುತ್ತಿರುವ ಭಾರತದ ಸಮಸ್ತ ಮಹಿಳೆಯರು ತಮಗೋಸ್ಕರ ಈ ಹಕ್ಕುಗಳನ್ನು ತಯಾರಿಸಿದವರು ಡಾ. ಅಂಬೇಡ್ಕರ್ ಎಂಬುದನ್ನು ಅರಿತುಕೊಳ್ಳಲೋಗುವುದೇ ಇಲ್ಲ, ಸ್ಮರಿಸುವುದೇ ಇಲ್ಲ.
ಬಾಬಾಸಾಹೇಬರ ಬದುಕಿನ ಕೊನೆಯ ಅರ್ಥಪೂರ್ಣ ಘಟ್ಟ ಆಗಲೇ ಹೇಳಿದ ಹಾಗೆ ಬೌದ್ಧ ಧರ್ಮ ಸ್ವೀಕಾರ. 1956 ಅಕ್ಟೋಬರ್ 14ರಂದು ಕೋಟ್ಯಂತರ ಶೋಷಿತರ ಬಿಡುಗಡೆಯ ಹಾದಿ ಎಂಬಂತೆ ಐದು ಲಕ್ಷ ಅನುಯಾಯಿಗಳ ಜೊತೆ ನಾಗಪುರದ ಹಾಲಿ ದೀಕ್ಷಾ ಭೂಮಿಯಲ್ಲಿ ಡಾ.ಅಂಬೇಡ್ಕರರು ಬೌದ್ಧ ಧರ್ಮ ಸ್ವೀಕರಿಸಿದರು. ಭಾರತದ ಇತಿಹಾಸದಲ್ಲಿ ಹೂತು ಹೋಗಿದ್ದ ಬೌದ್ಧ ಧರ್ಮದ ಚಕ್ರವನ್ನು ಮತ್ತೆ ಚಲಿಸುವಂತೆ ಮಾಡಿದ್ದರು. ಈ ನಿಟ್ಟಿನಲ್ಲಿ ಅವರು ಬೌದ್ಧ ಧರ್ಮವನ್ನು ಬರೇ ಸ್ವೀಕರಿಸಿದ್ದಷ್ಟೇ ಅಲ್ಲ ಅದಕ್ಕೊಂದು ಪುನರ್ರೂಪಿತ ರೂಪವನ್ನು ಕೂಡ ಕೊಡಲು ಯತ್ನಿಸಿದ್ದರು. ಬೈಬಲ್ ಮಾದರಿಯಲ್ಲಿ ಅದಕ್ಕೋಸ್ಕರ “ಬುದ್ಧ ಮತ್ತು ಆತನ ಧಮ್ಮ” ಎಂಬ ಧರ್ಮ ಬೋಧನೆಯ ಗ್ರಂಥವನ್ನು ಕೂಡ ರಚಿಸಿದ್ದರು. ಅಂದಹಾಗೆ ಬೌದ್ಧ ಧರ್ಮ ಸ್ವೀಕರಿಸಿದ ಆ ದಿನ ಡಾ.ಅಂಬೇಡ್ಕರರು ಹೇಳುವುದು “ನನಗಿಂದು ನರಕದಿಂದ ಬಿಡುಗಡೆಗೊಂಡ ಅನುಭವವಾಗುತ್ತಿದೆ” ಎಂದು!
ಕೊನೆಯ ಮಾತು:
ಭಾರತದಲ್ಲಿ ಬೌದ್ಧಧರ್ಮವನ್ನು ವ್ಯಾಪಕವಾಗಿ ಪಸರಿಸುವುದು, ತನ್ನ ಅನುಯಾಯಿಗಳನ್ನು ಅತ್ತ ಹೆಚ್ಚು ಹೆಚ್ಚು ಕರೆತರುವುದು ಬಾಬಾಸಾಹೇಬರ ಗುರಿಯಾಗಿತ್ತು. ಆದರೆ ಸಮಯ ಅದಕ್ಕೆ ಅವಕಾಶ ಕೊಡಲಿಲ್ಲ. 1956 ಡಿಸೆಂಬರ್ 5 ರ ರಾತ್ರಿ ಮಲಗಿದವರು ಬೆಳಿಗ್ಗೆ ಏಳಲೇ ಇಲ್ಲ. ಡಿಸೆಂಬರ್ 6 ಬಾಬಾಸಾಹೇಬ್ ಅಂಬೇಡ್ಕರ್ ನಿಧನರಾಗಿದ್ದರು. ಬೌದ್ಧ ಭಾಷೆಯಲ್ಲಿ ಹೇಳುವುದಾದರೆ ಪರಿನಿರ್ವಾಣ ಹೊಂದಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊನೆಯ ಹತ್ತು ವರ್ಷಗಳು ಅಭೂತಪೂರ್ವ ಸಾಧನೆಯ ವರ್ಷಗಳು. ಹೋರಾಟದ ಬದುಕಿನಲ್ಲಿ ತಾವು ಏನೇನು ಅಂದುಕೊಂಡಿದ್ದರೊ ಅದೆಲ್ಲವನ್ನು ಕಾರ್ಯರೂಪಕ್ಕೆ ತಂದ ವರ್ಷಗಳು ಅವು. ಕಾನೂನು ಮಂತ್ರಿಯಾಗಿ, ಸಂವಿಧಾನ ಶಿಲ್ಪಿಯಾಗಿ, ಮಹಿಳೆಯರ ವಿಮೋಚಕನಾಗಿ, ಬೌದ್ಧ ಧರ್ಮದ ಪುನರುತ್ಥಾರಕನಾಗಿ, ಶೋಷಿತ ಸಮುದಾಯಗಳನ್ನು ಜಾತಿ ವ್ಯವಸ್ಥೆಯಿಂದ ವಿಮೋಚನೆಗೊಳಿಸುವ ಮಾರ್ಗದಾತನಾಗಿ ಆ ಹತ್ತು ವರ್ಷಗಳು ಅವರ ಸಾಧನೆಯ ಮುಕುಟವಾಗಿ ಉಳಿಯುತ್ತವೆ, ಕೀರ್ತಿ ಕಳಸವನ್ನು ಮುಗಿಲೆತ್ತರಕ್ಕೆ ಏರಿಸುತ್ತವೆ.
ರಘೋತ್ತಮ ಹೊ ಬ, ಚಿಂತಕರು