Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಕಾಂತಾರ ಯಶಸ್ಸು; ಗೆಳೆಯ ರಕ್ಷಿತ್ ಶೆಟ್ಟಿ, ರಾಜ್ ಶೆಟ್ಟಿ ಸಂಪೂರ್ಣ ಗೈರು: “ಶೆಟ್ಟಿ ಗ್ಯಾಂಗ್‌”ನಲ್ಲಿ ಮೂಡಿದ...

ಕಾಂತಾರ ಯಶಸ್ಸು; ಗೆಳೆಯ ರಕ್ಷಿತ್ ಶೆಟ್ಟಿ, ರಾಜ್ ಶೆಟ್ಟಿ ಸಂಪೂರ್ಣ ಗೈರು: “ಶೆಟ್ಟಿ ಗ್ಯಾಂಗ್‌”ನಲ್ಲಿ ಮೂಡಿದ ಬಿರುಕು!

0

ಕಾಂತಾರ ಅಧ್ಯಾಯ 1 ಸಿನಿಮಾ ಯಶಸ್ಸಿನ ತುತ್ತ ತುದಿಯಲ್ಲಿ ತೇಲುತ್ತಿದೆ. ನಿರೀಕ್ಷೆಯಂತೆ ನೂರಾರು ಕೋಟಿ ಬಜೆಟ್, ನಿರ್ದೇಶಕ ನಟ ರಿಷಬ್ ಶೆಟ್ಟಿಯ ಅದ್ಭುತ ಪರಿಕಲ್ಪನೆ, ಸಾವಿರಾರು ಜನರ ಶ್ರಮ ಸಿನಿಮಾ ಹೊರಬಂದಂತೆ ಶ್ರಮಕ್ಕೆ ತಕ್ಕ ಪ್ರತಿಫಲದಂತೆ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದೆ. ಈ ನಡುವೆ ಏನೋ ಒಂದು ಕಡಿಮೆ ಆಗಿದೆ ಎನ್ನುವುದಾದರೆ ಅದು ರಿಷಬ್ ಗೆಳೆಯ ರಕ್ಷಿತ್ ಶೆಟ್ಟಿ ಅವರ ಉಪಸ್ಥಿತಿ.

ಹೌದು. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಿನದಿಂದಲೂ ಸೋಲು ಗೆಲುವು ಎರಡನ್ನೂ ಒಟ್ಟಾಗಿಯೇ ಅನುಭವಿಸಿದ, ಇನ್ನೊಬ್ಬರ ಗೆಲುವನ್ನು ತನ್ನದೇ ಗೆಲುವೆಂದು ಸಂಭ್ರಮಿಸುತ್ತಾ, ಸೋಲಿನಲ್ಲೂ ಕೈ ಬಿಡದೇ ನಡೆಸಿಕೊಂಡು ಬಂದ ಅತ್ಯಾಪ್ತ ಗೆಳೆಯರಿಬ್ಬರ ನಡೆ ಈಗ ಚಿತ್ರರಂಗದ ಪಡಸಾಲೆಯಲ್ಲಿ ಈ ಒಂದು ಅನುಮಾನ ಕುಡಿಯೊಡೆದಿದೆ.

ಕಳೆದ ಭಾರಿ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ಬಿಡುಗಡೆಗೂ ಮುನ್ನ ನಡೆದ ಪ್ರೀಮಿಯರ್ ಶೋನಲ್ಲಿ ಗೆಳೆಯ ರಕ್ಷಿತ್ ಶೆಟ್ಟಿ ಸಿನಿಮಾ ನೋಡಿದ್ದರು. ಸಿನಿಮಾ ಮುಗಿಯುತ್ತಿದ್ದಂತೆ, ಥಿಯೇಟರ್‌ನ ಕೊನೆಯ ಸಾಲಿನಿಂದ ಓಡಿ ಬಂದು ರಿಷಭ್ ಶೆಟ್ಟಿಯನ್ನು ತಬ್ಬಿಕೊಂಡು ಭಾವುಕವಾಗಿ ಅಭಿನಂದಿಸಿದ್ದರು. ಈ ಒಂದು ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಗೆಳೆಯನ ಗೆಲುವನ್ನು ಮನಃಪೂರ್ವಕವಾಗಿ ಕಣ್ತುಂಬಿಕೊಂಡ ರಕ್ಷಿತ್ ಶೆಟ್ಟಿ ಈಗೆಲ್ಲಿ?

ಹೀಗೊಂದು ಪ್ರಶ್ನೆ ಕಳೆದ ಮೂರು ದಿನಗಳಿಂದ ಚಿತ್ರರಂಗದ ವಲಯದಲ್ಲಿ ಸಣ್ಣಗೆ ಹೊಗೆಯಾಡುತ್ತಿದೆ. ಈಗಾಗಲೇ ರಕ್ಷಿತ್ ಶೆಟ್ಟಿ ತನ್ನ ಸಿನೆಮಾ ‘ರಿಚರ್ಡ್ ಆಂಟನಿ’ಯಲ್ಲಿ ಸಂಪೂರ್ಣ ಮುಳುಗಿದ್ದಾರೆ ಎಂಬ ಮಾತುಗಳಿವೆ. ಹೀಗಾಗಿಯೇ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಆದರೆ ಗೆಳೆಯನ ನಿರೀಕ್ಷಿತ ಗೆಲುವನ್ನು ತನ್ನ ಸಾಮಾಜಿಕ ಜಾಲತಾಣದ ಮೂಲಕವೂ ಅಭಿನಂಧಿಸದೇ ಇರುವುದು ಮಾತ್ರ ರಕ್ಷಿತ್ ಮತ್ತು ರಿಷಬ್ ನಡುವೆ ಏನೂ ಸರಿಯಿಲ್ಲ ಎಂಬುದನ್ನು ಒತ್ತಿ ಹೇಳುವಂತಿದೆ.

ಈಗಾಗಲೇ ಕಾಂತಾರ ಚಾಪ್ಟರ್ 1 ನೋಡಿದ ಚಿತ್ರರಂಗದ ಹಿರಿ ಕಿರಿಯ ಗಣ್ಯರು ಹಾಡಿ ಹೊಗಳಿದ್ದಾರೆ. ರಾಜ್ಯ ಮಾತ್ರವಲ್ಲದೇ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದ ದಿಗ್ಗಜರು ಶುಭಾಶಯ ಕೋರಿದ್ದಾರೆ.‌ ಗಳಿಕೆಯಲ್ಲೂ ಕಾಂತಾರ ಚಾಪ್ಟರ್ 1 ದಾಖಲೆ ನಿರ್ಮಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇಷ್ಟೆಲ್ಲಾ ಇರುವಾಗ ರಕ್ಷಿತ್ ಶೆಟ್ಟಿ ಪ್ರೀಮೀಯರ್ ಶೋಗೂ ರಕ್ಷಿತ್ ಶೆಟ್ಟಿ ಬಂದಿಲ್ಲ. ಮೊದಲ ದಿನದ ಮೊದಲ ಶೋಗೂ ರಕ್ಷಿತ್ ಶೆಟ್ಟಿ ಬಂದಿಲ್ಲ. ಸೌಜನ್ಯಕ್ಕಾದರೂ ರಿಷಬ್‌ಗೆ ಸಾಮಾಜಿಕ ಜಾಲತಾಣದಲ್ಲೂ ಅಭಿನಂದಿಸಬಹುದಿತ್ತು ಎಂಬುದು ಸಿನಿ ಪ್ರಿಯರ ಅಭಿಪ್ರಾಯ.

ಇನ್ನು ‘ಶೆಟ್ಟಿ ಗ್ಯಾಂಗ್’ ಬಗ್ಗೆ ಖಾಸಗಿ ಮಾಧ್ಯಮವೊಂದರಲ್ಲಿ ಈ ಹಿಂದೆ ಬಹಿರಂಗವಾಗಿಯೇ ತಮ್ಮನ್ನು ಸಮರ್ಥಿಸಿಕೊಂಡಿದ್ದ ರಾಜ್ ಬಿ ಶೆಟ್ಟಿ ಕೂಡಾ ಕಾಂತಾರದ ಎಲ್ಲಾ ಈವೆಂಟ್‌ಗಳಿಂದ ದೂರ ಉಳಿದಿದ್ದು ಶೆಟ್ಟಿ ಗ್ಯಾಂಗ್ ಬಿರುಕನ್ನು ಮತ್ತಷ್ಟು ಪ್ರತಿಬಿಂಬಿಸುತ್ತಿದೆ.

ರಕ್ಷಿತ್ ಈ ಹಿಂದಿನ “ಚಾರ್ಲಿ 777” ಒಂದು ಮಟ್ಟಿಗಿನ ಯಶಸ್ಸು ತಂದಿತ್ತು. ಹಾಗೇ 2021 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೂ ಭಾಜನರಾಗಿದೆ. ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಕ್ಷಿತ್ ಗುರುತಿಸಿಕೊಳ್ಳಲು ಆಗಲಿಲ್ಲ. “ಸಪ್ತ ಸಾಗರದಾಚೆ ಎಲ್ಲೋ ಭಾಗ ಒಂದು ಮತ್ತು ಎರಡು” ಎರಡೂ ಸಹ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲೇ ಇಲ್ಲ. ಆ ಎರಡು ಸಿನಿಮಾ ಮಾತ್ರವಲ್ಲ, ರಕ್ಷಿತ್ ಶೆಟ್ಟಿಯವರ ಕಿರಿಕ್ ಪಾರ್ಟಿ ನಂತರದ ಯಾವ ಸಿನಿಮಾಗಳೂ ಆ ಮಟ್ಟಿಗಿನ ಸಕ್ಸಸ್ ಕಂಡಿದ್ದೇ ಇಲ್ಲ. ಆದರೆ ರಿಷಬ್ ಹಂತ ಹಂತವಾಗಿ ಮೇಲೇರುತ್ತಲೇ ಇರುವುದು ಮತ್ತು ಅವಕಾಶಗಳು ಅವರನ್ನು ಅರಸುತ್ತಲೇ ಬರುತ್ತಿರುವುದು ರಕ್ಷಿತ್ ಒಳಗೊಂದು ಸಣ್ಣ ಅಸಮಾಧಾನ ಅಥವಾ ಅಸೂಯೆ ಕೂಡಾ ಮನೆಮಾಡಿದೆ ಎಂದರೂ ತಪ್ಪಾಗಲಾರದು.

ಅದಷ್ಟೇ ಅಲ್ಲದೇ ರಕ್ಷಿತ್‌ಗೆ ಪ್ರಾರಂಭಿಕ ಹಂತದಿಂದಲೂ ಕಾಂತಾರ ಸಿನೆಮಾದಿಂದ ದೂರ ಇಡಲಾಗಿತ್ತು. ಕಾಂತಾರ ಮೊದಲ ಸಿನೆಮಾ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಸ್ವಲ್ಪ ಮಟ್ಟಿಗಾದರೂ ರಕ್ಷಿತ್ ಶೆಟ್ಟಿ ಸಲಹೆಗಳನ್ನು ತೆಗೆದುಕೊಂಡಿದ್ದರು. ಹೀಗಾಗಿಯೇ ಗೆಳೆಯ ರಿಷಬ್ ಗೆ ಈ ಒಂದು ಸಕ್ಸಸ್ ಬೇಕು ಎಂದೇ ರಕ್ಷಿತ್ ಬಯಸಿದಂತಿತ್ತು. “ಕಾಂತಾರ ಚಾಪ್ಟರ್ 1 ಸಿನೆಮಾಗೆ ರಿಷಬ್ ಶೆಟ್ಟಿ ನನಗೆ ಅವಕಾಶ ಕೊಟ್ಟರೆ ನಟಿಸುವ ಆಸೆ”ಯನ್ನೂ ರಕ್ಷಿತ್ ಶೆಟ್ಟಿ ಹೊರ ‌ಹಾಕಿದ್ದರು.

ಆದರೆ ಕಾಂತಾರ ಚಾಪ್ಟರ್ 1 ಸಿನೆಮಾದ ಯಾವ ಸಂದರ್ಭದಲ್ಲೂ ರಕ್ಷಿತ್ ರನ್ನು ರಿಷಬ್ ಹತ್ತಿರಕ್ಕೂ ಬಿಟ್ಟುಕೊಂಡಿರಲಿಲ್ಲ ಎಂಬುದು ಗಮನಾರ್ಹ. ಕಾಂತಾರದ ಪ್ರೆಸ್ ಮೀಟ್ ನಲ್ಲೂ ಸಹ “ಅವರವರು ಅವರವರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ, ಇದು ಸಂಪೂರ್ಣವಾಗಿ ನನ್ನದೇ ಕುಸುರಿ” ಎಂದು ನೇರವಾಗಿ ರಿಷಬ್ ಹೇಳಿದ್ದರು.

ಹಾಗೇ ಕಾಂತಾರ ಬಗೆಗಿನ ಪ್ರಶ್ನೆಯೊಂದಕ್ಕೆ ರಾಜ್ ಬಿ ಶೆಟ್ಟಿ ಸಹ ನಿರ್ಲಕ್ಷ್ಯದ ಉತ್ತರ ನೀಡಿದ್ದರು. “ಅವರು ತಿಳಿದವರು, ಅವರಿಗೆಲ್ಲಾ ಗೊತ್ತು, ನಮ್ಮ ಅವಶ್ಯಕತೆ ಅಲ್ಲೇನೂ ಇಲ್ಲ” ಎಂಬಂತೆ ಉತ್ತರ ಕೊಟ್ಟಿದ್ದೂ ಸಹ ಶೆಟ್ಟಿ ಗ್ಯಾಂಗ್ ನಡುವಿನ ಬಿರುಕನ್ನು ಎತ್ತಿ ಹಿಡಿದಿದೆ.

You cannot copy content of this page

Exit mobile version