Friday, April 26, 2024

ಸತ್ಯ | ನ್ಯಾಯ |ಧರ್ಮ

ಹಕ್ಕುಗಳಿಂದ ವಂಚಿತರಾಗಿರುವ ಮಲೆಕುಡಿಯ ಜನಾಂಗ

ಮಲೆಕುಡಿಯ ಜನಾಂಗವು ಪ್ರಾಚೀನ ಜನಾಂಗಗಳಲ್ಲಿ ಒಂದು. ತುಳುನಾಡಿನ ಮೂಲ ನಿವಾಸಿಗಳು ಮಲೆಕುಡಿಯರು. ಸಮೃದ್ಧ ಅರಣ್ಯದ ನಡುವಿನಲ್ಲಿ ಮಲೆಕುಡಿಯರು ಬದುಕಿದ್ದರೂ ಅವರು ನೆಮ್ಮದಿಯಿಂದಿಲ್ಲ. ಎಲ್ಲ ಬುಡಕಟ್ಟು ಜನಾಂಗಗಳಂತೆ ಇವರು ಆನೇಕ ಸೌಲಭ್ಯಗಳಿಂದ ವಂಚಿತರು; ಬಡವರಲ್ಲಿ ಬಡವರಾಗಿ ಬದುಕುತ್ತಿದ್ದಾರೆ – ಚನ್ನಬಸವ ಬೆಂಗಳೂರು, ಪತ್ರಿಕೋದ್ಯಮ ವಿದ್ಯಾರ್ಥಿ

ಕಣ್ಣನ್ನು ತಂಪುಗೊಳಿಸುವ ಹಸಿರು, ದೂರದಲ್ಲೆಲ್ಲೋ ಧುಮುಕುವ ನೀರು, ಇದರ ಮಧ್ಯೆ ಕಾಡಿನ ಅಲ್ಲೊಂದು ಇಲ್ಲೊಂದು ಮೂಲೆಯಲ್ಲಿ ಅವಿತು ಕುಳಿತಿರುವ ಮಲೆಕುಡಿಯರ ಗುಡಿಸಲುಗಳು, ಅವುಗಳನ್ನು ಸುತ್ತುವರಿದಿರುವ ತೆಂಗು, ಏಲಕ್ಕಿ, ಮೆಣಸು ಮುಂತಾದ ಬಳ್ಳಿಗಳ ಬನದ ಸಿರಿ ಒಂದು ಮನಮೋಹಕ ದೃಶ್ಯವನ್ನು ಸೃಷ್ಟಿಸಿದೆ. ಇಂತಹ ಸಮೃದ್ಧ ಅರಣ್ಯದ ನಡುವಿನಲ್ಲಿ ಮಲೆಕುಡಿಯರು ಬದುಕಿದ್ದರೂ ಅವರು ನೆಮ್ಮದಿಯಿಂದಿಲ್ಲ. ಎಲ್ಲ ಬುಡಕಟ್ಟು ಜನಾಂಗಗಳಂತೆ ಇವರು ಆನೇಕ ಸೌಲಭ್ಯಗಳಿಂದ ವಂಚಿತರು. ಬಡವರಲ್ಲಿ ಬಡವರಾಗಿ ಬದುಕುತ್ತಿದ್ದಾರೆ. ಇವರು ವಾಸಿಸುವ ಮನೆ ಮತ್ತು ಅದರ ಸುತ್ತ ಇರುವ ಹತ್ತಿಪ್ಪತ್ತು ಅಡಿ ಜಾಗ ಮಾತ್ರ ಇವರದು. ಉಳಿದ ಭೂಮಿ ಇವರದಲ್ಲ. ನೂರಾರು ವರ್ಷಗಳಿಂದ ಈ ಬುಡಕಟ್ಟು ಜನಾಂಗ ಅದೇ ಅರಣ್ಯದ ಆವರಣದಲ್ಲಿ ಬದುಕಿ ಬಂದಿದ್ದರೂ ಅಲ್ಲಿಯ ಭೂಮಾಲಿಕತ್ವದ ಒಡೆತನ ಅವರಿಗಿಲ್ಲ.

ಮಲೆಕುಡಿಯರು ಮಡಿಕೇರಿ, ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಮತ್ತು ಪುತ್ತೂರು ಹಾಗೂ ಉಡುಪಿಯ ಕಾರ್ಕಳ ಪ್ರದೇಶದ ಇಳಿಮಲೆ, ಬಂಜೂರು ಮಲೆ ಹಾಗೂ ಅಂಬಟಿ ಮಲೆ ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿ ನೆಲೆಗೊಂಡಿದ್ದಾರೆ. ಇವರಲ್ಲಿ  ಕೆಲವರಷ್ಟೇ ಕೃಷಿಕರಾಗಿದ್ದು ಅಡಿಕೆ, ಬಾಳೆ, ಭತ್ತ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಇದರ ಜೊತೆಗೆ ಜೇನು ಕೀಳುವುದು, ಮರ ಕಡಿಯುವ ಕೆಲಸ, ಹಣ್ಣು ಕೀಳುವ ಕೆಲಸ ಮಾಡುತ್ತಾರೆ. ಧರ್ಮಸ್ಥಳ, ಉಜಿರೆ, ನೆರಿಯ, ಶಿಶಿಲ, ಮುಂಡಾಜೆ, ಕಿಳಿಂಜೆ ಹಾಲಂಗಾಯಿ ಮುಂತಾದವು ಇವರ ಪ್ರಮುಖ ವ್ಯಾಪಾರ ಸ್ಥಳಗಳು.

ಹೆಚ್ಚಿನ ಮಲೆಕುಡಿಯರ ಕುಟುಂಬಗಳು ಭೂಮಿಯನ್ನು ಹೊಂದಿಲ್ಲ. ಕೆಲವೇ ಕೆಲವು ಕುಟುಂಬಗಳು ಸ್ವಂತ ಭೂಮಿಯನ್ನು ಹೊಂದಿವೆ. ಆದರೆ ಅದರ ಪ್ರಮಾಣ ತುಂಬ ಸಣ್ಣದು. ಹೆಚ್ಚಿನ ಕುಟುಂಬಗಳು ಜೀವನೋಪಾಯಕ್ಕಾಗಿ ಕಾಡಿನ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇವರಿಗೆ ಯಾವುದೇ ಹಕ್ಕು ಪತ್ರಗಳು ಸಿಕ್ಕಿಲ್ಲ. ಹೆಚ್ಚಿನ ಕುಟುಂಬಗಳು ಮನೆ ನಿರ್ಮಿಸಿಕೊಂಡಿದ್ದು ಅಂತಹ ಜಾಗಕ್ಕೆ ಮಾತ್ರ ಹಕ್ಕು ಪತ್ರ ಸಿಕ್ಕಿದೆ. 

ಮಲೆಕುಡಿಯ ಸಮುದಾಯಗಳು ಸಾಮಾನ್ಯವಾಗಿ ದಟ್ಟ ಅರಣ್ಯದಲ್ಲಿ ಒಂದು ಕಿಲೋಮೀಟರ್ ಅಂತರದಲ್ಲಿ ಒಂದೊಂದು ಕುಟುಂಬಗಳಾಗಿ ನೆಲೆನಿಂತಿವೆ. ಇವರು ಆಸ್ಪತ್ರೆ, ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಕಾಡು ದಾಟಿ ಕಾಲ್ನಡಿಗೆಯಲ್ಲಿ ಸುಮಾರು 20 ರಿಂದ 25 ಕಿ.ಮೀ ಹೋಗಬೇಕು. ಒಂದು ರಸ್ತೆಯು ಸಹ ಇಲ್ಲ. ಹಾಗಾಗಿ ಕೆಲವೆಡೆ ಕಾಡಿನ ಮಧ್ಯೆ ಅವರೇ ರಸ್ತೆ ಮಾಡಿಕೊಂಡಿದ್ದಾರೆ. ಆದರೆ ಮಳೆಗಾಲದಲ್ಲಿ ಈ ರಸ್ತೆ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಇತ್ತೀಚೆಗೆ ಊರೊಳಗೆ ಗಾಡಿಗಳು ಬರುತ್ತಿದ್ದು, ತಮಗೇನಾದರೂ ಒಂದು ಮಾತ್ರೆ ಬೇಕಾದರೂ 7 ರಿಂದ 8 ನೂರು ಗಾಡಿಗೆ ಖರ್ಚು ಮಾಡಿ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಉತ್ತಮ ರಸ್ತೆ ಇವರ  ಬೇಡಿಕೆಯಾಗಿದೆ. ಇದನ್ನು ಕೇಳಿದರೆ ಸರ್ಕಾರವು ಇದು ಅರಣ್ಯ ಜಾಗ, ಆ ರೀತಿ ರಸ್ತೆ ಮಾಡಲು ಅನುಮತಿ ಇಲ್ಲ, ನೀವೇ ಕಾಡು ಬಿಟ್ಟು ನಗರ ಪ್ರದೇಶಗಳಿಗೆ ಬನ್ನಿ ಎಂದು ಹೇಳುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಮಲೆಕುಡಿಯ ಬುಡಕಟ್ಟು ಸಮುದಾಯದಲ್ಲಿ 15ಕ್ಕೂ  ಹೆಚ್ಚು ಉಪಂಗಡಗಳಿದ್ದು ಕೆಲವು ಗ್ರಾಮಗಳಲ್ಲಿ ಒಂದೊಂದು ಉಪ ಪಂಗಡದ ಜನರು ಪ್ರತ್ಯೇಕವಾಗಿ ವಾಸಿಸುತ್ತಾರೆ. ಇನ್ನೂ ಕೆಲವು ಗ್ರಾಮಗಳಲ್ಲಿ ಎಲ್ಲಾ ಉಪಪಂಗಡದ ಜನರು ಜೊತೆಯಾಗಿ ವಾಸಿಸುತ್ತಾರೆ. ಈ ಉಪಪಂಗಡಗಳ ನಡುವೆ ಮದುವೆ ಮುಂತಾದ ಯಾವುದೇ ಸಂಬಂಧಗಳನ್ನು  ಹೊಂದುವಂತಿಲ್ಲ. ಅವರವರ ಪಂಗಡದಲ್ಲಿ ಅವರು ಸಂಬಂಧ ಬೆಳೆಸಬೇಕು. ಅದರೆ ಇತ್ತೀಚಿಗೆ ಎಲ್ಲಾ ಪಂಗಡದವರು ಪರಸ್ಪರ ಸಂಬಂಧವನ್ನು ಬೆಳೆಸುತ್ತಿದ್ದಾರೆ.

ಇವರ ಮನೆಗಳು ಹೆಚ್ಚಿನವು ಗುಡಿಸಲುಗಳೇ ಆಗಿವೆ, ಆದರೆ ಇತ್ತೀಚೆಗೆ ಸಿಮೆಂಟ್ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.  ಕೆಲವು ಗ್ರಾಮಗಳು ಇಂದಿಗೂ ಕರೆಂಟ್ ಸೌಲಭ್ಯವಿಲ್ಲದೆ ಸೀಮೆಎಣ್ಣೆ ದೀಪಗಳಲ್ಲೇ ಇವರು ವಾಸಮಾಡುತ್ತಿದ್ದಾರೆ.

ಇವರಲ್ಲಿ ಸಸ್ಯಾಹಾರಿಗಳೂ ಮಾಂಸಾಹಾರಿಗಳೂ ಇದ್ದಾರೆ. ಇವರು ಸಸ್ಯಾಹಾರದಲ್ಲಿ ಮರಗೆಣಸು, ಸೋಣಗೆಣಸು, ಆಲೂಗಡ್ಡೆ ಮುಂತಾದವು ಬಳಸುತ್ತಾರೆ. ಇನ್ನೂ ಮಾಂಸಹಾರದಲ್ಲಿ ಹಂದಿ, ಕಡವೆ, ಜಿಂಕೆ, ಮೊಲ, ಕಾಡು ಕುರಿ, ಚಟ್ಟಿ ಮುಂತಾದ ಪ್ರಾಣಿಗಳನ್ನು ಬಳಸುತ್ತಾರೆ.

ಇವರು ಅರಣ್ಯ ಭಾಗದಲ್ಲಿ ವಾಸಿಸುವುದರಿಂದ ಶಿಕ್ಷಣದಿಂದ ಹೆಚ್ಚು ವಂಚಿತರಾಗಿದ್ದಾರೆ. ಇವರು ಶಾಲೆಗೆ ಹೋಗಬೇಕಾದರೆ ಕಾಡಿನಲ್ಲಿ ಪ್ರತಿನಿತ್ಯ 10 ರಿಂದ 15  ಕಿಲೋಮೀಟರ್ ನಡೆಯಬೇಕು. ಹಾಗಾಗಿ ಇಲ್ಲಿ ಹೆಚ್ಚಿನ ಜನರು ಶಿಕ್ಷಣ ಪಡೆಯುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅಲ್ಲಿನ ಜನರು ತಮ್ಮ ಮಕ್ಕಳನ್ನು ಹತ್ತಿರದ ನಗರ ಪ್ರದೇಶದಲ್ಲಿ ಹಾಸ್ಟೆಲ್‌ ಲಿ ಇಟ್ಟು  ಓದಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಇವರ ಶಿಕ್ಷಣದ ಬಗ್ಗೆ ಹೆಚ್ಚಿನ ಕ್ರಮ ಕೈಗೊಂಡಿಲ್ಲ.

ಮಲೆಕುಡಿಯ ಜನಾಂಗದ ಜನರು ಮರಣ ಹೊಂದಿದ ಸಂದರ್ಭಗಳಲ್ಲಿ ಮಣ್ಣಿನಲ್ಲಿ ಹೂಳುವುದು ಹಾಗೂ ಬೆಂಕಿಯಲ್ಲಿ ಸುಡುವ ಎರಡೂ ಪದ್ಧತಿಗಳನ್ನು ಬಳಸುತ್ತಾರೆ. ಹೆಣ್ಣು ಮಕ್ಕಳು ಅಥವಾ ಚಿಕ್ಕ ಮಕ್ಕಳಾದರೆ ಮಣ್ಣು ಮಾಡುತ್ತಾರೆ, ವಯಸ್ಕರಾದರೆ ಬೆಂಕಿಯಲ್ಲಿ ಸುಡುತ್ತಾರೆ. ಹಾಲು, ತುಪ್ಪ, ತಿಥಿ, ಸೂತಕ ಆಚರಣೆ ಮಾಡುತ್ತಾರೆ.

ಈ ಜನಾಂಗದ ಜನರಿಗೆ ಯಾವುದೇ ಪ್ರತ್ಯೇಕವಾದ ಭಾಷೆ ಇರುವುದಿಲ್ಲ ಇವರು ತುಳು ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. 

ಸಂಕ್ರಾಂತಿ, ದೀಪಾವಳಿ ಇವರ ಮುಖ್ಯವಾದ ಹಬ್ಬಗಳು. ಆದರೆ ಈ ಹಬ್ಬಗಳು ಬುಡಕಟ್ಟು ಹಬ್ಬಗಳೇ ಅನ್ನೋದು ಅನುಮಾನ. ಏಕೆಂದರೆ ಬುಡಕಟ್ಟುಗಳಲ್ಲಿ ಸಾಮಾನ್ಯವಾಗಿ ಅವರದ್ದೇ ಜಾತ್ರೆಗಳು ಇರುತ್ತವೆ, ಹಬ್ಬಗಳು ಇರುವುದಿಲ್ಲ. ಕೆಡ್ಡಸ ಎಂಬ ಕೃಷಿ ಸಂಬಂಧದ ಆಚರಣೆಗಳನ್ನು ಇವರು ಆಚರಿಸುತ್ತಾರೆ. ಇದು ವ್ಯವಸಾಯ ಆರಂಭವಾಗುವಾಗ ಭೂಮಿಗೆ ಮಾಡುವ ಪೂಜೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಮಲೆಕುಡಿಯರಲ್ಲಿ ಅಲ್ಲದೆ, ಎಲ್ಲಾ ಕೃಷಿಕರಲ್ಲೂ ಈ ಆಚರಣೆ ಇದೆ. ಈಗ ಕಲ್ಲುರ್ಟಿ, ಪಂಜುರ್ಲಿ, ಅಂಬಾಟಿಮಲೆದೈವ ಭೈರವ ಹಾಗೂ ಧರ್ಮಸ್ಥಳದ ಮಂಜುನಾಥನನ್ನು ಆರಾಧಿಸುತ್ತಾರೆ.

ಚನ್ನಬಸವ,  ಬೆಂಗಳೂರು

ಪತ್ರಿಕೋದ್ಯಮ ವಿದ್ಯಾರ್ಥಿ

ಇದನ್ನೂ ಓದಿ-ಫ್ರೀ ಬಸ್ಸಿನ ಸುತ್ತಾ..

Related Articles

ಇತ್ತೀಚಿನ ಸುದ್ದಿಗಳು