Thursday, June 20, 2024

ಸತ್ಯ | ನ್ಯಾಯ |ಧರ್ಮ

ಮಾಧ್ಯಮ ಸ್ವಾತಂತ್ರ್ಯದ ಮೇಲೆ ಫ್ಯಾಸಿಸ್ಟ್ ಪ್ರಭುತ್ವದ ದಮನ

ಮನುಕುಲದ ಇತಿಹಾಸದಲಿ ಅದೆಷ್ಟೋ ಸರ್ವಾಧಿಕಾರಿಗಳು ಬಂದು ಸತ್ಯವನ್ನು ನಾಶಪಡಿಸಲು ಯತ್ನಿಸಿ ಸರ್ವನಾಶವಾಗಿ ಹೋದರು. ಅಂಗೈಯನ್ನು ಅಡ್ಡ ಹಿಡಿದು ಸೂರ್ಯ ಕಿರಣ ತಡೆದೆನೆಂಬ ಭ್ರಮೆಯಲ್ಲಿದ್ದ ಡಿಕ್ಟೇಟರ್ ಗಳು ಕಾಲದ ಪ್ರವಾಹದಲ್ಲಿ ಕೊಚ್ಚಿ ಹೋದರು. ಇದನ್ನು ಅರಿಯದವರು ಮತ್ತೆ ಮತ್ತೆ ಸುಂದರ ಸುಳ್ಳುಗಳ ಮೂಲಕ ಸತ್ಯದ ಕತ್ತನ್ನು ಒತ್ತಿ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದಷ್ಟೂ  ಸತ್ಯ ಮತ್ತೆ ಮತ್ತೆ ಪ್ರಜ್ವಲಿಸುತ್ತಲೇ ಇರುತ್ತದೆಶಶಿಕಾಂತ ಯಡಹಳ್ಳಿ

ದೇಶದ ಆಡಳಿತ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸರ್ವಾಧಿಕಾರದತ್ತ ದಾಪುಗಾಲಿಡುತ್ತಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ “ನ್ಯೂಸ್ ಕ್ಲಿಕ್” ಸುದ್ದಿ ಪೋರ್ಟಲ್ ಮೇಲಿನ ಕೇಂದ್ರ ಸರಕಾರಿ ಕೃಪಾಪೋಷಿತ ತನಿಖಾ ಸಂಸ್ಥೆಗಳ ದಾಳಿ.

ಭಾರತದ ಬಹುತೇಕ ಸುದ್ದಿ ಮಾಧ್ಯಮಗಳು ಕೇಂದ್ರ ಸರಕಾರದ ತುತ್ತೂರಿಯಂತೆ, ಬಿಜೆಪಿ ಪಕ್ಷದ ವಕ್ತಾರರಂತೆ, ಮೋದಿ ಭಜನಾ ಮಂಡಳಿಯ ಸದಸ್ಯರಂತೆ, ಸಂಘ ಪರಿವಾರದ ಅಂಗಗಳಂತೆ ವರ್ತಿಸುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಇಂತಹ ಮಾರಿಕೊಂಡ ಮಾಧ್ಯಮಗಳಿಗೆ ಗೋದಿ ಮೀಡಿಯಾ ಎಂದೇ ಕರೆಯಲಾಗುತ್ತದೆ. ಸಂಘ ಪರಿವಾರ ಹಾಗೂ ಕೇಂದ್ರ ಸರಕಾರದ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಅದಕ್ಕೆ ಪೂರಕವಾಗಿ ತಿರುಚಿದ ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದೇ ಇಂತಹ ಮೀಡಿಯಾಗಳ ಕಾಯಕ. ಮೋದಿ ಪರವಾದ ಅಲೆಯನ್ನು ಸೃಷ್ಟಿಸಿ ಸಂಘ ಪರಿವಾರದ ಆಶಯಗಳನ್ನು ಜನರ ಮನದಲ್ಲಿ ಬಿತ್ತಿ ಮನುವಾದವನ್ನು  ಬೆಂಬಲಿಸುವುದೇ ಈ ಮಾಧ್ಯಮಗಳ ಉದ್ದೇಶ.

ಸರಕಾರದ ತಪ್ಪು ನೀತಿಗಳನ್ನು ಪ್ರಶ್ನಿಸುವ, ಜನವಿರೋಧಿ ನಡೆಯನ್ನು ಪ್ರತಿರೋಧಿಸುವ, ಸಂವಿಧಾನವನ್ನು ತಿರುಚುವ ಪ್ರಯತ್ನಗಳನ್ನು ಖಂಡಿಸುವ ಯಾವುದೇ ಮಾಧ್ಯಮಗಳಿದ್ದರೂ ಅಂತವುಗಳನ್ನು ದಮನಿಸುವ ದುಷ್ಟ ಕೆಲಸಕ್ಕೆ ಫ್ಯಾಸಿಸ್ಟ್ ಪ್ರಭುತ್ವ ಮುಂದಾಗುತ್ತದೆ. ಸಾಮ ದಾನ ಬೇಧ ದಂಡೋಪಾದಿಗಳನ್ನು ಬಳಸಿ ಮಾಧ್ಯಮ ಸ್ವಾತಂತ್ರ್ಯವನ್ನೇ ಹತ್ತಿಕ್ಕುವುದು ಸರ್ವಾಧಿಕಾರಿ ಧೋರಣೆಯ ಗುಣಲಕ್ಷಣಗಳು. 

ಕಳೆದ ಒಂಬತ್ತು ವರ್ಷಗಳಿಂದ ಪ್ರಭುತ್ವವನ್ನು ಪ್ರಶ್ನಿಸಿದ ಹಲವಾರು ಪತ್ರಕರ್ತರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ ಕಿರುಕುಳ ಕೊಡಲಾಗುತ್ತಿದೆ. ಎನ್ ಡಿ ಟಿ ವಿ ಯಂತಹ ಪ್ರಬಲ ಸುದ್ದಿ ಮಾಧ್ಯಮವನ್ನೇ ಆದಾನಿಯ ಮೂಲಕ ಕೊಂಡುಕೊಂಡು ಗೋದಿ ಮಾಧ್ಯಮವನ್ನಾಗಿಸಲಾಗಿದೆ. ಗೋದಿ ಮಾಧ್ಯಮಗಳ ಸುಳ್ಳು ಸುದ್ದಿಗಳಿಗೆ ವಿರುದ್ದವಾಗಿ ಸತ್ಯ ಸಂಗತಿಗಳನ್ನು ನಿರ್ಭಿಡೆಯಿಂದ ಪ್ರಕಟಿಸುತ್ತಿರುವ ಜಾಲತಾಣ ಪೋರ್ಟಲ್ ಸುದ್ದಿ ಮಾಧ್ಯಮಗಳ ಮೇಲೆ ಈಗ ಮೋದಿ ಸರಕಾರದ ಕೆಂಗೆಣ್ಣು ಬಿದ್ದಿದೆ. ಅದರಿಂದಾಗಿಯೇ ‘ನ್ಯೂಸ್ ಕ್ಲಿಕ್’ ಪೋರ್ಟಲ್ ಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಅಕ್ಟೋಬರ್ 3 ನೇ ತಾರೀಖು ಬೆಳಗಿನ ಜಾವ ವ್ಯಾಪಕ ಶೋಧ ಕಾರ್ಯ ನಡೆಸಲಾಗಿದೆ. ಸಂಪಾದಕರಾದ ಪ್ರಬೀರ್ ಪುರಕಾಯಸ್ತರನ್ನು ಬಂಧಿಸಲಾಗಿದೆ. ಪತ್ರಕರ್ತರು ಹಾಗೂ ಸಿಬ್ಬಂದಿಯನ್ನು ವಶದಲ್ಲಿರಿಸಿಕೊಂಡು ಸುದೀರ್ಘ ಅವಧಿಯವರೆಗೆ ವಿಚಾರಣೆ ನಡೆಸಲಾಗಿದೆ. ಕಚೇರಿಯ ಪರಿಕರಗಳನ್ನೆಲ್ಲಾ ಜಪ್ತಿ ಮಾಡಲಾಗಿದೆ. ಮೊಟ್ಟ ಮೊದಲ ಬಾರಿಗೆ ಯುಎಪಿಎ ಕರಾಳ ಕಾಯಿದೆಯನ್ನು ಮಾಧ್ಯಮ ಸಂಸ್ಥೆಯೊಂದರ ಮೇಲೆ ಬಳಸಲಾಗಿದೆ. 

ಯಾಕೆ ಹೀಗೆ? ಕಾರಣ ಸ್ಪಷ್ಟವಾಗಿದೆ. ಈ ನ್ಯೂಸ್ ಕ್ಲಿಕ್ ಸುದ್ದಿ ಮಾಧ್ಯಮವು ರೈತರ ಆಂದೋಲನದಲ್ಲಿ ರೈತರ ಪರ ಹಾಗೂ ಸರಕಾರದ ದಮನದ ವಿರುದ್ದವಾಗಿತ್ತು. ದೆಹಲಿ ಗಲಭೆಯಾದಾಗ ಕೇಂದ್ರ ಸರಕಾರದ ವೈಫಲ್ಯವನ್ನು ಟೀಕಿಸಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಸುದ್ದಿಯನ್ನು ಪ್ರಕಟಿಸಿತ್ತು. ಮೋದಿ ಸರಕಾರದ ಅಪ್ರಜಾಸತ್ತಾತ್ಮಕ ನಡೆಯನ್ನು ವಿರೋಧಿಸುತ್ತಲೇ ಬಂದಿತ್ತು. ಕೆಲವಾರು ಸತ್ಯ ಪ್ರತಿಪಾದಕ ಮಾಧ್ಯಮಗಳಿಗೆ ಇದು ಮಾದರಿಯಾಗಿತ್ತು. ಹೀಗಾಗಿ ಸುಳ್ಳುಗಳ ಸರದಾರರಿಗೆ ಸತ್ಯ ಹೇಳುವವರನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಸತ್ಯ ಪ್ರತಿಪಾದಕರ ಧ್ವನಿಯನ್ನೇ ದಮನಿಸುವ ಸಂಚು ರೂಪಿಸಲಾಯ್ತು. 

“ಈ ‘ನ್ಯೂಸ್ ಕ್ಲಿಕ್’ ಚೀನಾದಿಂದ ಹಣಕಾಸು ನೆರವು ಪಡೆದುಕೊಂಡಿದೆ, ಭಾರತ ವಿರೋಧಿ ಆಂದೋಲನ ನಡೆಸುತ್ತಿದೆ” ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ದಾಳಿಯನ್ನು ಹಮ್ಮಿಕೊಂಡಿವೆ. ಈ ಪೋರ್ಟಲ್ ಸಂಪಾದಕರನ್ನು ಉಗ್ರಗಾಮಿ ಎಂದು ಆರೋಪಿಸಿ ಬಂಧಿಸಲಾಗಿದೆ.  ತನಿಖೆ ಜಾರಿಯಲ್ಲಿದೆ.

ಈ ಸುದ್ದಿ ಮಾಧ್ಯಮದ ವಿರುದ್ಧ ಇದೇನೂ ಮೊದಲ ದಾಳಿ ಏನಲ್ಲ. ಎರಡು ವರ್ಷಗಳ ಹಿಂದೆಯೂ ಇಂತಹುದೇ ಪ್ರಯತ್ನ ಮಾಡಲಾಗಿತ್ತು. ಕಾನೂನು ಉಲ್ಲಂಘಿಸಿ ಅಮೇರಿಕದ ಕಂಪನಿಯಿಂದ ನೇರ ಹೂಡಿಕೆ ಪಡೆಯಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ಆ ಮೂಲಕ ಪ್ರಭುತ್ವದ ವಿರುದ್ದ ದ್ವನಿ ಎತ್ತಿದರೆ ಹುಷಾರ್ ಎನ್ನುವ ಪರೋಕ್ಷ ಎಚ್ಚರಿಕೆಯನ್ನೂ ಮಾಧ್ಯಮಗಳಿಗೆ ಹಾಗೂ ಪತ್ರಕರ್ತರಿಗೆ ನೀಡಲಾಗಿತ್ತು. ಸರಕಾರದ ದಮನವನ್ನೂ ಲೆಕ್ಕಿಸದೇ ಸತ್ಯ ಪ್ರತಿಪಾದನೆಯನ್ನು ಮುಂದುವರೆಸಿದ್ದರ ಪ್ರತಿಫಲವೇ ಈಗಿನ ದ್ವೇಷಪೂರಿತ ದಾಳಿ ಹಾಗೂ ಬಂಧನ.

ಇದು ಕೇವಲ ಒಂದು ಸುದ್ದಿ ಮಾಧ್ಯಮದ ಮೇಲೆ ನಡೆದ ದಾಳಿ ಮಾತ್ರವಲ್ಲ. ಪ್ರಭುತ್ವದ ವಿರುದ್ಧ ಧ್ವನಿ ಎತ್ತುವ, ನಿಷ್ಠುರವಾಗಿ ನಿಜ ಸುದ್ದಿ ಬಿತ್ತರಿಸುವ ಎಲ್ಲಾ ಮಾಧ್ಯಮಗಳಿಗೂ ಇದೇ ಗತಿಯಾಗುತ್ತದೆ ಎಂದು ಕೊಟ್ಟ ಎಚ್ಚರಿಕೆಯಾಗಿದೆ. ಜಾರಿ ನಿರ್ದೇಶನಾಲಯದ  ಈ ಯಾವ  ಮಿಥ್ಯಾರೋಪಗಳೂ ಸಾಬೀತಾಗಲು ಸಾಧ್ಯವಿಲ್ಲವಾದರೂ ಈ ರೀತಿಯ ಕಿರುಕುಳಗಳಿಂದ ನಿಷ್ಟ ಪತ್ರಕರ್ತರನ್ನು ಭ್ರಷ್ಟಗೊಳಿಸಲು ಇಲ್ಲವೇ ನಿರ್ಲಿಪ್ತಗೊಳಿಸಲು ಪ್ರಭುತ್ವ ಪ್ರಯತ್ನಿಸುತ್ತಿದೆ ಹಾಗೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ಸರಕಾರದ ಸರ್ವಾಧಿಕಾರಕ್ಕೆ ಸವಾಲೊಡ್ಡುವ ಯಾವುದೇ ಮಾಧ್ಯಮಗಳಿರಲಿ ಅವುಗಳನ್ನು ಸುಳ್ಳು ಆರೋಪಗಳ ಮೂಲಕ ದಮನಿಸಲಾಗುತ್ತದೆ. ಇದೇ ಸರ್ವಾಧಿಕಾರದ ಪ್ರಮುಖ ಲಕ್ಷಣವಾಗಿದೆ. 

ಹಾಗಂತ ಎಲ್ಲಾ ಪತ್ರಕರ್ತರ ಬಾಯನ್ನು ಮುಚ್ಚಿಸಲಾಗದು, ಸತ್ಯ ಪ್ರತಿಪಾದಕ ಮಾಧ್ಯಮಗಳನ್ನು ಸೆದೆಬಡಿಯಲೂ ಆಗದು. ಕಾನೂನುಗಳ ದುರ್ಬಳಕೆಯ ಮೂಲಕ ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕಲಾಗದು. ಮನುಕುಲದ ಇತಿಹಾಸದಲಿ ಅದೆಷ್ಟೋ ಸರ್ವಾಧಿಕಾರಿಗಳು ಬಂದು ಸತ್ಯವನ್ನು ನಾಶಪಡಿಸಲು ಯತ್ನಿಸಿ ಸರ್ವನಾಶವಾಗಿ ಹೋದರು. ಅಂಗೈಯನ್ನು ಅಡ್ಡ ಹಿಡಿದು ಸೂರ್ಯ ಕಿರಣ ತಡೆದೆನೆಂಬ ಭ್ರಮೆಯಲ್ಲಿದ್ದ ಡಿಕ್ಟೇಟರ್ ಗಳು ಕಾಲದ ಪ್ರವಾಹದಲ್ಲಿ ಕೊಚ್ಚಿ ಹೋದರು. ಇದನ್ನು ಅರಿಯದವರು ಮತ್ತೆ ಮತ್ತೆ ಸುಂದರ ಸುಳ್ಳುಗಳ ಮೂಲಕ ಸತ್ಯದ ಕತ್ತನ್ನು ಒತ್ತಿ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದಷ್ಟೂ  ಸತ್ಯ ಮತ್ತೆ ಮತ್ತೆ ಪ್ರಜ್ವಲಿಸುತ್ತಲೇ ಇರುತ್ತದೆ, ಅಂತಿಮವಾಗಿ ಜನವಿರೋಧಿ ಸರ್ವಾಧಿಕಾರ ಸೋಲುತ್ತಲೇ ಇರುತ್ತದೆ. 

ಕೇಂದ್ರ ಸರಕಾರದ ಈ ಮಾಧ್ಯಮ ವಿರೋಧಿ ನಡೆಯನ್ನು ಪ್ರತಿಯೊಬ್ಬ ಪತ್ರಕರ್ತರು, ಬರಹಗಾರರು, ಪ್ರಜ್ಞಾವಂತ ನಾಗರಿಕರು, ಪ್ರಗತಿಪರರು ಖಂಡಿಸಲೇಬೇಕಿದೆ. ಮಾಧ್ಯಮಗಳ ಮೇಲೆ ಸರ್ವಾಧಿಕಾರಿ ದಮನವನ್ನು ಪ್ರತಿರೋಧಿಸಬೇಕಿದೆ. ಆ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಬೇಕಿದೆ.

ಶಶಿಕಾಂತ ಯಡಹಳ್ಳಿ

ಇದನ್ನೂ ಓದಿ-ನ್ಯೂಸ್ ಕ್ಲಿಕ್ ಮೇಲಣ ದಾಳಿ | ಸ್ವತಂತ್ರ ಮಾಧ್ಯಮಗಳಿಗೆ ಮೋದಿ ಸರಕಾರ ಕಳುಹಿಸಿದ ಸಂದೇಶ

Related Articles

ಇತ್ತೀಚಿನ ಸುದ್ದಿಗಳು