Friday, June 14, 2024

ಸತ್ಯ | ನ್ಯಾಯ |ಧರ್ಮ

ಮಂಗಳಾದೇವಿಯಿಂದ ಮತಾಂಧರಿಗೊಂದು ಸಂದೇಶ

ಯಾವ ಧರ್ಮದ ರಕ್ಷಣೆಗೆ ಹೊರಟಿದ್ದೇವೆ ಎಂದು ಇವರು ಹೇಳಿಕೊಳ್ಳುತ್ತಾರೋ, ಅಂದುಕೊಂಡಿದ್ದಾರೋ, ತಮ್ಮ ಗೂಂಡಾ ನಡೆವಳಿಕೆಗಳಿಂದ ಧರ್ಮಕ್ಕೆ ಗರಿಷ್ಠ ಹಾನಿ ಮಾಡುತ್ತಿರುವುದು ಇದೇ ಮಂದಿ. ಧರ್ಮವನ್ನು ಮತ್ತು ದೇವರನ್ನು ಕಾಪಾಡಬೇಕಾಗಿರುವುದೂ ಇದೇ ಮಂದಿಯಿಂದ. ಯಾಕೆಂದರೆ, ಇವರ ದ್ವೇಷ ಮತ್ತು ಹಿಂಸಾತ್ಮಕ ನಡೆವಳಿಕೆಗಳಿಂದ ಧರ್ಮಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ?- ಶ್ರೀನಿವಾಸ ಕಾರ್ಕಳ (ಶ್ರೀನಿ ಕಾಲಂ)

“ಮಂಗಳಾದೇವಿಯ ಜಾತ್ರೆ ಹೇಗಿತ್ತು?”

ದಶಕಗಳಿಂದ ಮಂಗಳೂರಿನ ಈ ಪ್ರಸಿದ್ಧ ದೇವಸ್ಥಾನದ ಜಾತ್ರೆಗೆ ಹೋಗಿರದಿದ್ದ ಮಹಿಳೆಯೊಬ್ಬರು ನಿನ್ನೆ ಸಂಜೆ ಅಲ್ಲಿಗೆ ಹೋಗಿ ಬಂದಾಗ, ಕುತೂಹಲದಿಂದ ಇಂಥದೊಂದು ಪ್ರಶ್ನೆ ಹಾಕಿದೆ.

“ಅಂಗಡಿಗಳೇನೋ ಇದ್ದವು. ಆದರೆ ಜಾತ್ರೆಯ ಹಿಂದಿನ ಸಂಭ್ರಮ, ಸಡಗರ ಕಾಣಲಿಲ್ಲ, ಬರೇ ಸಪ್ಪೆ ಅನಿಸಿತು…” ಎಂದರು.

ಕಳೆದ ಕೆಲವು ವರ್ಷಗಳಿಂದ ಮುಸ್ಲಿಮರನ್ನು ಆರ್ಥಿಕವಾಗಿ ನಿತ್ರಾಣಗೊಳಿಸಬೇಕು ಎನ್ನುವ ಉದ್ದೇಶದಿಂದ, ಹಿಂದುತ್ವ ಸಂಘಟನೆಗಳು ‘ಹಿಂದೂ ದೇಗುಲಗಳ ಜಾತ್ರೆಯಲ್ಲಿ ಬೇರೆ ಮತೀಯರಿಗೆ ಅವಕಾಶ ಕೊಡಕೂಡದು’ ಎಂಬ ಒಂದು ಅಭಿಯಾನವನ್ನು ಆರಂಭಿಸಿವೆ. ಈ ಅಭಿಯಾನ ಪರಾಕಾಷ್ಠೆಗೆ ತಲಪಿದ್ದು ಬಿಜೆಪಿ ಸರಕಾರ ಇದ್ದ, ಅದರಲ್ಲೂ ಕಳೆದ ಒಂದೆರಡು ವರ್ಷಗಳಲ್ಲಿ. ಅದಕ್ಕೆ ಮುಖ್ಯ ಕಾರಣ- ಈ ಜನಾಂಗದ್ವೇಷಿ ಸಂಘಟನೆಗಳಿಗೆ ಪ್ರಭುತ್ವದಿಂದಲೇ ಸಿಗುತ್ತಿದ್ದ ರಕ್ಷಣೆ ಮತ್ತು ಪ್ರೋತ್ಸಾಹ.

ಜಾತ್ರೆ ಎಂದರೇ

ಹಿಂದಿನಿಂದಲೂ ದೇವಸ್ಥಾನದ ರಥೋತ್ಸವ ಇರಲೀ, ದರ್ಗಾದ ಉರೂಸ್ ಇರಲೀ, ಚರ್ಚ್ ನ ಸಾಂತ್ ಮಾರಿ ಇರಲೀ, ಜಾತ್ರೆ ಎಂದರೆ ಅದು ಮತಾತೀತವಾಗಿ ಎಲ್ಲರ ಮತ್ತು ವಿಶೇಷವಾಗಿ ಊರ ಹಬ್ಬ. ಸಂತೆ ಅಂಗಡಿಗಳೇ ಅಲ್ಲಿನ ವಿಶೇಷ ಆಕರ್ಷಣೆ. ಹಿಂದಿನಂತೆ ದೊಡ್ಡ ಸಂಖ್ಯೆಯ ಅಂಗಡಿಗಳು ಇರದಿದ್ದ ಕಾಲದಲ್ಲಿ ಹಳ್ಳಿಯ ಮಂದಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಇದೊಂದು ಸುವರ್ಣಾವಕಾಶ. ವ್ಯಾಪಾರಿಗಳಿಗೂ ತಮ್ಮ ಸರಕುಗಳನ್ನು ಮಾರಲು, ಆ ಮೂಲಕ ಹೊಟ್ಟೆ ಹೊರೆದುಕೊಳ್ಳಲು ಒಂದು ಒಳ್ಳೆಯ ಅವಕಾಶ. ಅಲ್ಲಿನ ವ್ಯಾಪಾರಿಗಳಲ್ಲಿ ಹಿಂದೂಗಳು, ಮುಸ್ಲಿಮರು ಎಂದಿರಲಿಲ್ಲ. ಎಲ್ಲ ವ್ಯಾಪಾರಿಗಳದೂ ಒಂದೇ ಧರ್ಮ; ಅದುವೇ ವ್ಯಾಪಾರ ಧರ್ಮ. ಮತೀಯ ದ್ವೇಷವೇ ಇರದ ಆ ಕಾಲದಲ್ಲಿ ಹೀಗೆ ಎಲ್ಲ ಮತಧರ್ಮೀಯರ ಅಂಗಡಿಗಳ ಕಾರಣಕ್ಕೇ ಜಾತ್ರೆಗಳಿಗೆ ಒಂದು ವಿಶೇಷ ಆಕರ್ಷಣೆ ಇತ್ತು.

ವ್ಯಾಪಾರ ಧರ್ಮ

ನಾವು ಒಂದು ವಸ್ತುವನ್ನು ಖರೀದಿಸುವಾಗ ಏನನ್ನು ನೋಡುತ್ತೇವೆ? ನಮ್ಮದು ಕಷ್ಟಪಟ್ಟು ಗಳಿಸಿದ ಹಣ. ಹಾಗಾಗಿ ವಸ್ತುವನ್ನು ಖರೀದಿಸುವಾಗ ಹತ್ತಿರದಲ್ಲಿ, ಅಗ್ಗದ ದರದಲ್ಲಿ ದೊರೆಯುವುದು ಮತ್ತು ಉತ್ತಮ ಗುಣಮಟ್ಟದ ವಸ್ತುವಾಗಿರುವುದನ್ನು ಮಾತ್ರ ನೋಡುತ್ತೇವೆಯೇ ಹೊರತು, ಇದು ಪಾಕಿಸ್ತಾನದ್ದೋ, ಚೀನಾದ್ದೋ, ಮುಸ್ಲಿಮರದ್ದೋ, ಹಿಂದೂಗಳದ್ದೋ ಎಂದು ನೋಡುವುದಿಲ್ಲ. ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕರೆಕೊಟ್ಟರೂ ಚೀನಾ ಸರಕುಗಳ ವ್ಯಾಪಾರ ಭಾರತದಲ್ಲಿ ಹೆಚ್ಚುತ್ತಲೇ ಹೋಗುತ್ತಿದೆ. ಊರಿನಲ್ಲಿ ಜನರೂ ಹಾಗೆಯೇ. ಅವರು ದರ ಮತ್ತು ಗುಣಮಟ್ಟದ ಅಂಶಗಳನ್ನು ನೋಡುತ್ತಾರೆಯೇ ಹೊರತು, ಮಾರುವವರ ಧರ್ಮ, ದೇಶ ಇತ್ಯಾದಿಗಳನ್ನಲ್ಲ. ಬಡತನದ ಕಾರಣ ಮಾನವ ಮತಿಯಲ್ಲಿ ಉಂಟಾದ ಈ ಸ್ಥಿತಿಯನ್ನು ಬದಲಾಯಿಸುವುದು ಮತೀಯ ಸಂಘಟನೆಗಳಿಗೆ ಸಾಧ್ಯವೇ? ಬದಲಾಯಿಸಿದರೂ ಎಷ್ಟು ಕಾಲ ಬದಲಾಯಿಸಬಹುದು? ಆದರೂ ‘ಕೆಲಸವಿಲ್ಲದ’ ಸಂಘಟನೆಗಳ ಯತ್ನ ಸಾಗಿಯೇ ಇದೆ.

ಹೊಟ್ಟೆಗೆ ಹೊಡೆಯುವುದು ಯಾವ ಧರ್ಮ?

ಜಾತ್ರೆಗಳಲ್ಲಿ ವ್ಯಾಪಾರ ನಡೆಸುವ ಸಂತೆ ವ್ಯಾಪಾರಿಗಳದ್ದು ವಿಚಿತ್ರ ಬದುಕು. ಒಂದು ರೀತಿಯಲ್ಲಿ ಅಲೆಮಾರಿಗಳಂತೆ ವ್ಯಾಪಾರ ಹೊರಡುವ ಅವರದ್ದು ಅನಿಶ್ಚಿತ ಬದುಕು ಕೂಡಾ. ಹೀಗೆ ಊರಿಂದೂರಿಗೆ ಹೋಗಿ ವ್ಯಾಪಾರ ನಡೆಸುತ್ತಿದ್ದ ಅಶ್ರಫ್ ಎಂಬ ವ್ಯಾಪಾರಿ ತಮ್ಮ ಅನುಭವವನ್ನು ಹೇಳುತ್ತಾ, ‘ಈ ವ್ಯಾಪಾರಿಗಳಿಗೆ ವ್ಯಾಪಾರ ಎನ್ನುವುದು ಒಂದು ಚಟ ಇದ್ದಂತೆ. ಅನೇಕ ಬಾರಿ ಅದರಲ್ಲಿ ಲಾಭಕ್ಕಿಂತ ನಷ್ಟವಾಗುವ ಸಂಭವವೇ ಹೆಚ್ಚು. ಜಾತ್ರೆಗಳಲ್ಲಿ ಅಂಗಡಿ ಹಾಕಲು ಏಲಂ ನಲ್ಲಿ ಭಾಗವಹಿಸಬೇಕು, ದುಬಾರಿ ನೆಲಬಾಡಿಗೆ ತೆರಬೇಕು, ಕೆಲವೊಮ್ಮೆ ಮಳೆ ಇತ್ಯಾದಿಗಳಿಂದ ವ್ಯಾಪಾರ ಕೊಚ್ಚಿ ಹೋದರೆ ನೆಲ ಬಾಡಿಗೆ ಸಹಿತ ಎಲ್ಲವೂ ನಷ್ಟ, ಕೆಲವು ವ್ಯಾಪಾರಿಗಳು ರಾಜ್ಯದೊಳಗೆ ಮಾತ್ರವಲ್ಲ, ಪರ ರಾಜ್ಯಗಳಿಗೂ ಹೋಗುವುದು ಇದೆ, ಅದಕ್ಕೆ ತಗಲುವ ಪ್ರಯಾಣ ವೆಚ್ಚ ನೀವೇ ಲೆಕ್ಕ ಹಾಕಿ. ಆದರೆ ಈ ಎಲ್ಲ ಕಷ್ಟಗಳನ್ನು ಅನುಭವಿಸಿಯೂ ಅವರು ವ್ಯಾಪಾರ ನಿಲ್ಲಿಸುವುದಿಲ್ಲ. ನಾಳೆ ಏನೋ ಒಳ್ಳೆಯ ದಿನಗಳು ಬರಬಹುದು ಎಂಬ ಒಂದು ಆಸೆ, ಭರವಸೆ. ಯಾಕೆಂದರೆ ಬಡತನ, ಮನೆಯಲ್ಲಿ ಹೆಂಡತಿ ಮಕ್ಕಳ ಹೊಟ್ಟೆಗೆ ಬಟ್ಟೆಗೆ, ಆಸ್ಪತ್ರೆ ವೆಚ್ಚಗಳಿಗೆ, ಮಕ್ಕಳ ಓದಿಗೆ ಏನಾದರೂ ಆಗಬೇಕಲ್ಲ…’ ಎನ್ನುತ್ತಾರೆ.

ಮತಧರ್ಮದ  ಹೆಸರಿನಲ್ಲಿ, ಇಂಥ ಬಡವರ ಹೊಟ್ಟೆಗೆ ಹೊಡೆಯುವುದು ಯಾವ ಧರ್ಮ? ಅದನ್ನು ಯಾವ ದೇವರು ಮೆಚ್ಚುತ್ತಾನೆ? ಮಂಗಳಾದೇವಿಯ ಬಳಿ ಹೋಗಿ, ಹಿಂದುತ್ವ ಸಂಘಟನೆಯವರು ಕರೆ ಕೊಟ್ಟದ್ದು ಸರಿಯೇ ಎಂದರೆ, ಆಕೆ ಅದು ಸರಿ ಎಂದಾಳೆ? ಆಕೆ ಎಲ್ಲರನ್ನೂ ಸಮಾನವಾಗಿ ನೋಡುವ ಕಾರಣಕ್ಕೇ ದೇವರಲ್ಲವೇ?

ಬಪ್ಪನಾಡು

ಕಳೆದ ವರ್ಷ ಇತಿಹಾಸ ಪ್ರಸಿದ್ಧ ಬಪ್ಪನಾಡು ದೇವಸ್ಥಾನದಲ್ಲಿ ಮನಕಲಕುವ ಒಂದು ಘಟನೆ ನಡೆಯಿತು. ಎಲ್ಲರಿಗೂ ಗೊತ್ತಿರುವಂತೆ, ಐತಿಹ್ಯಗಳ ಪ್ರಕಾರ, ಬಪ್ಪನಾಡು ದೇವಸ್ಥಾನದ ನಿರ್ಮಾಣಕ್ಕೆ ಕಾರಣವಾದುದೇ ಬಪ್ಪ ಬ್ಯಾರಿ ಎಂಬ ಮುಸಲ್ಮಾನ. ದೇಗುಲದ ಜಾತ್ರಾ ಮಹೋತ್ಸವಗಳಲ್ಲಿ ಅಲ್ಲಿನ ಕೆಲ ಮುಸ್ಲಿಮರಿಗೆ ವಿಶೇಷ ಗೌರವ, ಆದ್ಯತೆ ಇದೆ. ಇಂತಹ ದೇಗುಲದ ಜಾತ್ರೆಯಲ್ಲಿ ನೂರಾರು ವರ್ಷಗಳಿಂದ ಮುಸ್ಲಿಮರೂ ವ್ಯಾಪಾರ ಮಾಡುತ್ತಾರೆ. ಅದು ಸ್ಥಳೀಯ ವ್ಯಾಪಾರಿಗಳಿಗೆ ನಾಲ್ಕು ಕಾಸು ಸಂಪಾದಿಸಲು ಒಂದು ಸುಸಂದರ್ಭ. ಅದೂ ವರ್ಷದಲ್ಲಿ ಒಂದು ಬಾರಿ.

ಇಂತಹ ದೇಗುಲದಲ್ಲಿ ‘ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ಕೊಡಕೂಡದು’ ಎಂದು ಹಿಂದುತ್ವ ಸಂಘಟನೆಗಳು ಆಗ್ರಹಿಸಿದವು. ಆಡಳಿತ ಮಂಡಳಿಗೆ ಇದು ಒಪ್ಪಿತವಿರಲಿಲ್ಲ. ಅದಕ್ಕೆ ಮುಖ್ಯ ಕಾರಣ- ಬಪ್ಪನಾಡು ದೇಗುಲದ ಹಿನ್ನೆಲೆ. ಆದರೂ ಈ ಸಂಘಟನೆಗಳು ಗಲಾಟೆ ಮಾಡಬಹುದು ಎಂಬ ಭಯ ಇದ್ದೇ ಇತ್ತು. ಅಲ್ಲದೆ, ಸರಕಾರವೂ ಹಿಂದುತ್ವ ಸಂಘಟನೆಗಳಿಗೆ ರಕ್ಷಣೆ ನೀಡುವಂಥದ್ದೇ. ಮುಸ್ಲಿಂ ವ್ಯಾಪಾರಿಗಳಿಗೆ ಬೆದರಿಕೆ ಹಾಕುವ ಹೋರ್ಡಿಂಗ್ ಅನ್ನು ಹಿಂದುತ್ವ ಸಂಘಟನೆಗಳನ್ನು ಹಾಕಿದ್ದೇ ತಡ, ಅನೇಕ ಮುಸ್ಲಿಮರು ಭಯ ಪಟ್ಟುಕೊಂಡರು. ದೇಗುಲದ ಆಡಳಿತ ಮಂಡಳಿಯೂ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿಯಿತು. ಹಾಗಾಗಿ ಏಲಂನಲ್ಲಿ ಸ್ಥಳ ಪಡೆದಿದ್ದ ವ್ಯಾಪಾರಿಗಳಿಗೆ ಅವರ ಠೇವಣಿ ಹಣವನ್ನು ಮರಳಿಸಲಾಯಿತು.

ಪತ್ರಿಕಾ ವರದಿಗಳ ಪ್ರಕಾರ, ಸುಮಾರು ನೂರರಷ್ಟು ವ್ಯಾಪಾರಿಗಳು ಏಲಂನಲ್ಲಿ ಸ್ಥಳ ಪಡೆದಿದ್ದರೆ, ಎಪ್ಪತ್ತೈದರಷ್ಟು ವ್ಯಾಪಾರಿಗಳು ತಮ್ಮ ಹಣ ಹಿಂದೆ ಪಡೆದರು. ಅದರಲ್ಲೂ ಒಬ್ಬರು ಆ ಹಣವನ್ನು ಗುಡಿಯ ಹುಂಡಿಗೆ ಹಾಕಿ ಕಣ್ಣಿರು ಒರೆಸಿಕೊಂಡು ಮನೆಗೆ ತೆರಳಿದರು. ಹೀಗೆ ಹಣವನ್ನು ಹುಂಡಿಗೆ ಹಾಕಿ ಹೊರನಡೆದ ವ್ಯಕ್ತಿಯು ದುಃಖದಿಂದ ಕಣ್ಣಿರು ಹಾಕುತ್ತಾ ದೇವಿಯಲ್ಲಿ ಏನು ಹೇಳಿರಬಹುದು? ನನ್ನ ಹೊಟ್ಟೆಗೆ ಹೊಡೆದವರನ್ನುನೀನೇ ನೋಡಿಕೋ ಎಂದಿರಬಹುದೇ? ಹಾಗೆ ಶಾಪ ಕೊಟ್ಟಿದ್ದರೆ ಬಡವನ ಶಾಪ ತಟ್ಟದಿದ್ದೀತೇ?

ದೇವರು ಮತ್ತು ಧರ್ಮದ ವಿರೋಧಿಗಳು

ವಾಸ್ತವದಲ್ಲಿ ಈ ಮತೀಯ ಸಂಘಟನೆಗಳಿಗೆ ಧರ್ಮ ಅಂದರೆ ಏನು ಎಂದು ಗೊತ್ತಿಲ್ಲ, ದೇವರು ಎಂದರೆ ಏನು ಗೊತ್ತಿಲ್ಲ. ಧರ್ಮ, ದೇವರ ಬಗ್ಗೆ ಗೌರವವೂ ಇಲ್ಲ. ಇವರು ಯಾವ ಧರ್ಮದ ರಕ್ಷಣೆಗೆ ಹೊರಟಿದ್ದೇವೆ ಎಂದು ಹೇಳಿಕೊಳ್ಳುತ್ತಾರೋ, ಅಂದುಕೊಂಡಿದ್ದಾರೋ, ತಮ್ಮ ಗೂಂಡಾ ನಡೆವಳಿಕೆಗಳಿಂದ ಧರ್ಮಕ್ಕೆ ಗರಿಷ್ಠ ಹಾನಿ ಮಾಡುತ್ತಿರುವುದು ಇದೇ ಮಂದಿ. ಧರ್ಮವನ್ನು ಮತ್ತು ದೇವರನ್ನು ಕಾಪಾಡಬೇಕಾಗಿರುವುದೂ ಇದೇ ಮಂದಿಯಿಂದ. ಯಾಕೆಂದರೆ, ಇವರ ದ್ವೇಷ ಮತ್ತು ಹಿಂಸಾತ್ಮಕ ನಡೆವಳಿಕೆಗಳಿಂದ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತದೆ. ಹಿಂದೂ ಧರ್ಮದ ಬಗ್ಗೆ ಏನೂ ಗೊತ್ತಿರದ ವಿದೇಶೀಯರು ಇವರ ವರ್ತನೆ ನೋಡಿದರೆ, ಹಿಂದೂ ಧರ್ಮವು ಸದಾ ದ್ವೇಷ ಮತ್ತು ಹಿಂಸೆ ಪ್ರತಿಪಾದಿಸುವ ಅತ್ಯಂತ ಕೆಟ್ಟ ಧರ್ಮ ಎಂದು ಅವರು ಹೇಳಲಾರರೇ?

ಮಂಗಳಾದೇವಿ ಕಲಿಸಿದ ಪಾಠ

ಈಗ ಮತ್ತೆ ವಿಷಯಕ್ಕೆ ಬರೋಣ. ಕರಾವಳಿಯ ಜನ ಶ್ರಮಜೀವಿಗಳು. ಅನೇಕ ಶತಮಾನಗಳಿಂದ ಒಟ್ಟಾಗಿ ಬಾಳುವೆ ನಡೆಸುತ್ತಾ ಬಂದಿರುವ ಈ ಭಾಗದ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಜೈನರು ಮತಾಂಧರಲ್ಲ. ಮತಾಂಧರಾಗಿ ಬದುಕುವುದು ಅವರಿಗೆ ಸಾಧ್ಯವೂ ಇಲ್ಲ. ಅವರು ಹಿಂದಿನಿಂದಲೂ ಪರಸ್ಪರರನ್ನು ಗೌರವಿಸುತ್ತಾ, ಕೂಡು ಬಾಳುವೆಯ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದವರು.

ಅನೇಕ ಹಳ್ಳಿಗಳಲ್ಲಿ, ವ್ಯಾಪಾರ ಕೆಲಸದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ತೊಡಗಿಕೊಂಡವರು ಮುಸ್ಲಿಮರು. ‘ಬ್ಯಾರಿ’ ಎಂಬ ಪದ ಬಂದುದೇ ‘ಬೇರ’, ‘ಬ್ಯಾರ’, ಅಂದರೆ ‘ವ್ಯಾಪಾರ’ ಎಂಬುದರಿಂದ. ಈ ಬ್ಯಾರಿಗಳೊಂದಿಗೆ ಹಿಂದೂಗಳ ಸಹಿತ ಎಲ್ಲ ಮತೀಯರಿಗೆ ಒಳ್ಳೆಯ ಸಂಬಂಧವಿದೆ. ‘ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬೇಡಿ’ ಎಂದು ಹಿಂದುತ್ವ ಸಂಘಟನೆಗಳು ಎಷ್ಟೇ ಕರೆಕೊಟ್ಟರೂ, ಅದು ಜನಸಾಮಾನ್ಯರ ಮನಸ್ಥಿತಿಯನ್ನು ಬದಲಾಯಿಸಲು ಶಕ್ತವಾಗಿಲ್ಲ. ಯಾಕೆಂದರೆ, ಅವರೆಲ್ಲರೂ ಮೂಲತಃ ಒಳ್ಳೆಯವರು, ಸೆಕ್ಯುಲರ್ ಗಳು. ಕೂಡು ಬಾಳುವೆ ಅವರ ಅನಿವಾರ್ಯತೆ.

ಬಿಜೆಪಿ ಸರಕಾರ ಇದ್ದ ಕಾಲಕ್ಕೆ ತಮ್ಮ ಜನಾಂಗ ದ್ವೇಷದ ಅಜೆಂಡಾ ಮುಂದುವರಿಸಲು ಕೆಲ ಹಿಂದುತ್ವ ಸಂಘಟನೆಗಳು ಶಕ್ತವಾಗಿದ್ದವು. ಕರಾವಳಿಯ ಬಹುತೇಕ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಕಾಣಿಸಿಕೊಳ್ಳದಂತೆ ಮಾಡುವಲ್ಲಿ, ಕಾಣಿಸಿಕೊಂಡರೂ ವಿರಳವಾಗಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವಲ್ಲಿ ಅವರು ಶಕ್ತರಾಗಿದ್ದರು. ಆದರೆ ಈಗ ಸರಕಾರ ಬದಲಾಗಿದೆ. ಮಂಗಳೂರಿನ ಮಂಗಳಾದೇವಿ ದೇಗುಲದ ನವರಾತ್ರಿ ಜಾತ್ರೆಯ ಸಂದರ್ಭದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ಕೊಡಕೂಡದು ಎಂದು ಅವರು ಆಗ್ರಹಿಸಿದರು. ಆರಂಭದಲ್ಲಿ ದೇಗುಲವೂ ಈ ಆಗ್ರಹಕ್ಕೆ ಮಣಿಯಿತು. ಆದರೆ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಅವರು ಮಧ‍್ಯ ಪ್ರವೇಶಿಸಿದರು. ಏಲಂನಲ್ಲಿ ಮುಸ್ಲಿಮರೂ ಅಂಗಡಿ ಪಡೆಯುವಂತಾಯಿತು. ಇಷ್ಟಾದ ಮೇಲೂ ಜಾತ್ರೆಯಲ್ಲಿ ಏನಾಗುತ್ತದೋ, ಮುಸ್ಲಿಮರ ಬಹಿಷ್ಕಾರ ಮುಂದುವರಿಯುವುದೋ ಏನೋ ಎಂಬ ಭಯ ಇದ್ದೇ ಇತ್ತು. ಇದೇ ಕಾರಣದಿಂದ, ಜಾತ್ರೆ ಶುರುವಾಗುತ್ತಿದ್ದಂತೆ ಕೆಲವು ಮಾಧ್ಯಮಗಳ ಮಂದಿ ಅಲ್ಲಿಗೆ ಓಡಿಯೇ ಓಡಿದರು. ನೋಡುವುದೇನು? ಅಂಗಡಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಬುರ್ಕಾಧಾರಿ ಮಹಿಳೆಯರು ವ್ಯಾಪಾರಕ್ಕೆ ಬಂದಿದ್ದರು. ಅವರು ಆ ಅಂಗಡಿ, ಈ ಅಂಗಡಿ, ಎನ್ನದೆ ಹಿಂದೂಗಳ ಸಹಿತ ಎಲ್ಲರ ಅಂಗಡಿಗಳಲ್ಲೂ ವ್ಯಾಪಾರ ಮಾಡುತ್ತಿದ್ದರು. ಮುಸ್ಲಿಮರ ಅಂಗಡಿಗಳಲ್ಲೂ ಹಿಂದೂ ಗ್ರಾಹಕರು ಮುಗಿಬಿದ್ದಿದ್ದರು!

ಜನರು ಒಳ್ಳೆಯವರು

ಇದು ಅನೇಕ ವಿಷಯಗಳನ್ನು ಹೇಳುತ್ತಿದೆ. ಮೂಲತಃ ಜನರು ಒಳ್ಳೆಯವರು. ಅವರಿಗೆ ತಮ್ಮ ಹೊಟ್ಟೆಪಾಡಿನ ಚಿಂತೆಗಳ ನಡುವೆ ಮತೀಯ ಆಲೋಚನೆಗಳಿಗೆ ಸಮಯವೂ ಇಲ್ಲ. ಧರ್ಮ, ಸಂಸ್ಕೃತಿ, ಕೋಮುವಾದ ಎಲ್ಲವೂ ಹೊಟ್ಟೆ ತುಂಬಿದ ಜನರ ಟೈಂ ಪಾಸ್ ಕೆಲಸಗಳು.

ಪ್ರಭುತ್ವವು ಕೋಮುವಾದಕ್ಕೆ ಮಣೆ ಹಾಕದಿದ್ದರೆ, ಜನರ ಸಂವಿಧಾನಾತ್ಮಕ ಹಕ್ಕುಗಳನ್ನು ಯಶಸ್ವಿಯಾಗಿ ರಕ್ಷಿಸುವುದು ಸಾಧ್ಯವಿದೆ. ಸದರಿ ಘಟನೆಯಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿದ್ದರಿಂದ ಕೋಮುವಾದಿಗಳು ಬಾಲ ಮಡಚಿ ಕೊಳ್ಳುವಂತಾಯಿತು. ಅಂಗಡಿಗಳಲ್ಲಿ ಭಗವಾಧ‍್ವಜ ಹಾಕಿ ಮತ್ತೆ ತಮ್ಮ ಅಜೆಂಡಾ ಮುಂದುವರಿಸಲು ಕೋಮುವಾದಿಗಳು ಯತ್ನಿಸಿದರೇನೋ ನಿಜ. ಆದರೆ ಅವರ ಉದ್ದೇಶ ಮಾತ್ರ ಪೂರ್ಣವಾಗಿ ಈಡೇರಲಿಲ್ಲ.

ಮತಧರ್ಮದಂತಹ ಭಾವನಾತ್ಮಕ ವಿಷಯಗಳಲ್ಲಿ ಸರಕಾರಗಳು ನಿಷ್ಠುರವಾಗಿ ನಡೆದುಕೊಳ್ಳಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಚುನಾವಣೆಯಲ್ಲಿ ಸೋಲುವ ಭಯ. ಆದರೆ ಇಂತಹ ಮತಾಂಧ ಸಂಘಟನೆಗಳ ಕರೆಯನ್ನು ಸಾರಾಸಗಟಾಗಿ ಧಿಕ್ಕರಿಸುವ ಮೂಲಕ ಅವುಗಳಿಗೆ ಮರೆಯಲಾಗದ ಪಾಠ ಕಲಿಸಲು ಜನಸಾಮಾನ್ಯರಿಗೆ ಸಾಧ್ಯವಿದೆ.

ಜನಾಂಗದ್ವೇಷಿ ಗೂಂಡಾ ಸಂಘಟನೆಗಳಿಗೆ ಮಂಗಳಾದೇವಿಯಲ್ಲಿ ಒಳ್ಳೆಯ ಮಂಗಳಾರತಿಯಾಗಿದೆ. ಮಂಗಳಾದೇವಿ ಶಕ್ತಿಶಾಲಿ ದೇವರು. ಲಿಂಗ, ಜಾತಿ, ಮತಧರ್ಮ ನೆಲೆಯಲ್ಲಿ ಭೇದ ಭಾವ ತೋರದ ದೇವರು. ಆಕೆಯ ಅಂಗಳದಿಂದಲೇ ಮತಾಂಧ ಸಂಘಟನೆಗಳಿಗೆ ಕೋಮುವಾದದ ವಿರುದ್ಧದ ಒಂದು ಸಂದೇಶ ಹೋಗಿರುವುದು ಈ ಸಂದರ್ಭದಲ್ಲಿ ಅರ್ಥಪೂರ್ಣ. ಇನ್ನಾದರೂ ಜನಾಂಗ ದ್ವೇಷವನ್ನೇ ಉಸಿರಾಡುತ್ತಾ ಸಮಾಜವನ್ನು ಒಡೆದು ತಮ್ಮ ರಾಜಕೀಯ ಅಜೆಂಡಾ ಮುಂದುವರಿಸುವ ಸಂಘಟನೆಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸುವಂತಾಗಲಿ. ಕೂಡಿ ಬಾಳಿದರೇ ಸ್ವರ್ಗ ಸುಖ. ದ್ವೇಷದಿಂದ ಯಾರಿಗೂ ಪ್ರಯೋಜನವಿಲ್ಲ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-ಮಂಗಳಾದೇವಿ ಜಾತ್ರೆ | ಸಂಘಪರಿವಾರದ ಬಹಿಷ್ಕಾರಕ್ಕೆ ಕವಡೆ ಕಿಮ್ಮತ್ತು ನೀಡದ ಮಂಗಳೂರಿನ ಗ್ರಾಹಕರು https://peepalmedia.com/mangaladevi-jatre-mangalore/

Related Articles

ಇತ್ತೀಚಿನ ಸುದ್ದಿಗಳು